ಶನಿವಾರ, ಮೇ 28, 2022
30 °C

ಸಂಪಾದಕೀಯ: ಹುಬ್ಬಳ್ಳಿ ಗಲಭೆ– ಸೌಹಾರ್ದಕ್ಕೆಕೊಳ್ಳಿ ಇಡುವ ಪ್ರವೃತ್ತಿ ಹತ್ತಿಕ್ಕಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬಹುತ್ವದಿಂದ ಕೂಡಿದ ನಮ್ಮ ಸಮಾಜವನ್ನು ಒಂದಾಗಿ ಬೆಸೆದಿರುವ ಸಾಮರಸ್ಯದ ತಂತುಗಳು ಇತ್ತೀಚಿನ ದಿನಗಳಲ್ಲಿ ಹೇಗೆ ಛಿದ್ರಗೊಳ್ಳುತ್ತಿವೆ ಎನ್ನುವುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಸಾಕ್ಷಿ. ಸಮುದಾಯದ ನಡುವೆ ಸುಳಿದಾಡುವ ಗಾಳಿಯನ್ನೇ ಕೋಮು ರಾಜಕೀಯವು ಈಗ ವಿಷಮಯಗೊಳಿಸುತ್ತಿರುವುದುದುರಂತ. ಕೋಮು ದ್ವೇಷವನ್ನು ಅದು ಕಾಳ್ಗಿಚ್ಚಿನಂತೆ ಹಬ್ಬಿಸುತ್ತಿದೆ ಕೂಡ.

ನಾಡಿನ ಪಾಲಿನ ಆಸ್ತಿಯಾಗಿ, ಜವಾಬ್ದಾರಿಯುತ ನಾಗರಿಕ ಸಮುದಾಯವಾಗಿ ಬೆಳೆಯಬೇಕಿದ್ದ ಯುವಪೀಳಿಗೆ ಹೇಗೆ ದಿಕ್ಕು ತಪ್ಪುತ್ತಿದೆ ಎಂಬುದಕ್ಕೂ ಈ ಪ್ರಕರಣ ನಿದರ್ಶನ. ವಿದ್ಯಾರ್ಥಿಯೊಬ್ಬ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡ ವಿವಾದಾತ್ಮಕ ವಿಡಿಯೊ ಎಲ್ಲ ರಾದ್ಧಾಂತಕ್ಕೂ ಮೂಲವಾಗಿದೆ.

ಸಾಮರಸ್ಯವನ್ನು ಕದಡುವಂಥ ಇಂತಹ ಕುಕೃತ್ಯಗಳಿಗೆ ಕೈಹಾಕಬಾರದು ಎಂಬ ನೈತಿಕ ಪಾಠವನ್ನೂ ಕಲಿಸದಷ್ಟು, ಕಲಿಯಲಾಗದಷ್ಟು ನಮ್ಮ ಶಿಕ್ಷಣ ವ್ಯವಸ್ಥೆ ಶಿಥಿಲಗೊಂಡಿದೆಯೇ ಅಥವಾ ಧರ್ಮದ ಅಫೀಮನ್ನು ಯುವಪೀಳಿಗೆಗೆ ಈ ಪರಿ ತಲೆಗೇರಿಸಲಾಗುತ್ತಿದೆಯೇ? ಇತ್ತೀಚಿನ ದಿನಗಳಲ್ಲಿ ಪದೇ ಪದೇ ನಡೆಯುತ್ತಿರುವ ಸೌಹಾರ್ದ ಕದಡುವ ಘಟನಾವಳಿಗಳು ಇಂತಹ ಕುಚೋದ್ಯದ ಕೃತ್ಯಕ್ಕೆ ಕುಮ್ಮಕ್ಕು ನೀಡಿರುವುದರಲ್ಲಿ ಯಾವ ಅನುಮಾನವೂ ಇಲ್ಲ.

ವಿವಾದಾತ್ಮಕ ವಿಡಿಯೊದಿಂದ ಪ್ರಚೋದನೆಗೆ ಒಳಗಾದ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿ ಪುಂಡಾಟಿಕೆಯಲ್ಲಿ ತೊಡಗಿದ್ದು ಕೂಡ ಖಂಡನೀಯ. ಯಾರೇ ಆಗಲಿ, ನೆಲದ ಕಾನೂನನ್ನು ಮೊದಲು ಗೌರವಿಸಬೇಕು. ಯಾರಿಂದಾದರೂ ತಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಪೊಲೀಸರಿಗೆ ದೂರು ನೀಡಬೇಕು. ನ್ಯಾಯವನ್ನು ಪಡೆಯಲು ಇರುವ ಸರಿಯಾದ ಹಾದಿಯೂ ಇದೇ ಆಗಿದೆ. ಕಲ್ಲು ತೂರುವ ಇಲ್ಲವೆ ಬೀದಿಯಲ್ಲಿ ತಲವಾರು ಝಳಪಿಸುವ ಮೂಲಕ ನಡೆಸುವ ದುರ್ವರ್ತನೆಯನ್ನು ಯಾವ ನಾಗರಿಕ ಸಮಾಜವೂ ಸಹಿಸದು.

ಹಿಂದೊಮ್ಮೆ ಕೋಮು ದಳ್ಳುರಿಯಲ್ಲಿ ಹೊತ್ತಿ ಉರಿದಿದ್ದ ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಸಿ ಎರಡೂವರೆ ದಶಕಗಳೇ ಕಳೆದಿದ್ದವು. ಈಗ ಮತ್ತೆ ಶಾಂತಿ ಕದಡಿದೆ. ಈ ಹಿಂದೆ ಈದ್ಗಾ ಮೈದಾನದ ವಿವಾದ ಜೀವಂತವಾಗಿದ್ದಷ್ಟು ಕಾಲ ಎಲ್ಲ ಸಮುದಾಯದವರು ಅನುಭವಿಸಿದ ನೋವು, ಸಂಕಟ ಸಣ್ಣದಲ್ಲ. ಉತ್ತರ ಕರ್ನಾಟಕದ ದೊಡ್ಡ ಮಾರುಕಟ್ಟೆ ಎಂದು ಹೆಸರಾಗಿದ್ದ ಹುಬ್ಬಳ್ಳಿಯಿಂದ ಹಲವು ವಾಣಿಜ್ಯ ಚಟುವಟಿಕೆಗಳು ಸುತ್ತಲಿನ ನಗರಗಳಿಗೆ ಸ್ಥಳಾಂತರಗೊಂಡಿದ್ದು ಈದ್ಗಾ ವಿವಾದದ ಬಿಸಿ ಹೆಚ್ಚಾಗಿದ್ದ ಸಂದರ್ಭದಲ್ಲೇ.

ನಿರಂತರವಾಗಿ ಬಿದ್ದ ಆರ್ಥಿಕ ಹೊಡೆತದಿಂದ ಪಾಠ ಕಲಿತಿದ್ದ ಇಲ್ಲಿನ ಜನ, ರಾಜಕೀಯ ಪಿತೂರಿಯಿಂದ ಉದ್ರೇಕಗೊಳ್ಳದೆ ಸಾಮರಸ್ಯದ ಬದುಕಿಗೆ ಮತ್ತೆ ಹೊರಳಿಕೊಂಡಿದ್ದರು. ಆದರೆ, ಸೌಹಾರ್ದದ ತಿಳಿನೀರಿನಲ್ಲಿ ಕಲ್ಲು ಎಸೆಯುವ ಯತ್ನಗಳು ಈಗ ಪುನಃ ನಡೆದಿವೆ. ಇಂತಹ ಯತ್ನಗಳನ್ನು ಆರಂಭದಲ್ಲೇ ಚಿವುಟಿಹಾಕುವ ಕೆಲಸವನ್ನು ಪೊಲೀಸರು ಮಾಡಬೇಕು. ಎರಡೂ ಕಡೆಗಿನ ಅನಾಗರಿಕ ವರ್ತನೆಯನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಬೇಕು.

ರಾಜಕೀಯ ಮುಖಂಡರು ಸಮಾಜದಲ್ಲಿ ಶಾಂತಿ ಕದಡಲು ಅವಕಾಶವಾಗದಂತೆ ತಮ್ಮ ಮಾತು–ಕೃತಿಯಲ್ಲಿ ಎಚ್ಚರಿಕೆ ವಹಿಸಬೇಕು. ಆದರೆ, ‘ಮುಸ್ಲಿಂ ಗೂಂಡಾಗಳಿಂದ ದಾಳಿ ನಡೆದಿದೆ’ ಎನ್ನುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಯಾಗಲೀ, ‘ಒಂದು ಸ್ಟೇಟಸ್‌ ಹಾಕಿದ್ದಕ್ಕೆ ಇಷ್ಟೊಂದು ಕೆರಳಬೇಕೇ’ ಎನ್ನುವ ಸಿ.ಟಿ. ರವಿ ಅವರ ಪ್ರಶ್ನೆಯಾಗಲೀ ಸಮರ್ಥನೀಯವಲ್ಲ. ಮಾತ್ರವಲ್ಲ, ತುಂಬಾ ಅಸೂಕ್ಷ್ಮವಾದುವು. ಇಂತಹ ರಾಜಕೀಯ ಮುಖಂಡರನ್ನು ಹೊಣೆಗಾರಿಕೆಯನ್ನೇ ಮರೆತವರು ಎಂದು ಕರೆಯದೆ ವಿಧಿಯಿಲ್ಲ. ಸಮಾಜಘಾತುಕ ವ್ಯಕ್ತಿಗಳನ್ನು ಜಾತಿ, ಸಮುದಾಯದ ಹೆಸರಿನಲ್ಲಿ ಗುರುತಿಸುವ ಪ್ರವೃತ್ತಿಯೂ ಸರಿಯಲ್ಲ.

ಇಂತಹ ಪ್ರಕರಣಗಳನ್ನು ಯಾವ ಪಕ್ಷವೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು. ವಿರೋಧ ಪಕ್ಷಗಳ ಮುಖಂಡರು ಕೂಡ ಸಂಯಮ ಕಾಯ್ದುಕೊಳ್ಳಬೇಕಾದ ಸನ್ನಿವೇಶ ಇದು. ಸೂಕ್ಷ್ಮ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುವ ರಾಕ್ಷಸಿ ಶಕ್ತಿಗಳು ವಿಜೃಂಭಿಸಲು ಒಂದು ಒಡಕು ಮಾತು ಸಾಕಾಗುತ್ತದೆ. ಸರ್ಕಾರದ ಭಾಗವಾದ ಜನಪ್ರತಿನಿಧಿಗಳ ಬದ್ಧತೆ ಇರಬೇಕಾದುದು ಸಂವಿಧಾನಕ್ಕೇ ಹೊರತು ಸಮುದಾಯಗಳಿಗಲ್ಲ ಎಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಬೇಕಾಗಿದೆ. ಹುಬ್ಬಳ್ಳಿ ಹೇಳಿಕೇಳಿ ಭಾವೈಕ್ಯದ ರಾಯಭಾರಿಗಳಾದ ಸಿದ್ಧಾರೂಢರು, ಶಿಶುನಾಳ ಷರೀಫರಂತಹ ಸಂತರು ಓಡಾಡಿದ ನೆಲ. ಅವರ ಕರ್ಮಭೂಮಿ ಅದು. ಹೀಗಾಗಿ ಸೌಹಾರ್ದ ಎನ್ನುವುದು ನೂರಾರು ವರ್ಷಗಳಿಂದ ಅದರ ಹೃದಯದಲ್ಲೇ ಅರಳಿ ಬೆಳೆದಿದೆ. ಅಂತಹ ಸೌಹಾರ್ದಕ್ಕೆ ಕೊಳ್ಳಿ ಇಡುವ ಕೆಲಸವನ್ನು ಹತ್ತಿಕ್ಕುವುದು ಸದ್ಯದ ಜರೂರು. ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದವರನ್ನು ಎರಡೂ ಕೋಮಿನವರು ದೂರ ಇಟ್ಟು, ತಮ್ಮ ಬದುಕು ಅಂತಹ ಬೆಂಕಿಯಲ್ಲಿ ಬೇಯದಂತೆ ಎಚ್ಚರ ವಹಿಸಬೇಕಾದ ಕಾಲವೂ ಇದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು