ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಸ್ಟ್ಯಾನ್ ಸ್ವಾಮಿ ಸಾವು ಒಂದು ಅಮಾನವೀಯ ಅಧ್ಯಾಯ

ಫಾಲೋ ಮಾಡಿ
Comments

ಎಲ್ಗಾರ್ ಪರಿಷತ್ ಸಭೆ, ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದ್ದ, 84 ವರ್ಷ ವಯಸ್ಸಿನ ಸ್ಟ್ಯಾನ್ ಸ್ವಾಮಿ ಅವರು ಸಾವನ್ನಪ್ಪಿರುವ ಪ್ರಸಂಗವು ಪ್ರಭುತ್ವ ಮತ್ತು ಅದರ ತನಿಖಾ ಸಂಸ್ಥೆಗಳು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಬೇಕು. ಮಾನವ ಹಕ್ಕುಗಳ ಪರವಾಗಿ ಕೆಲಸ ಮಾಡುತ್ತಿದ್ದ, ಅದರಲ್ಲೂ ಮುಖ್ಯವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಆದಿವಾಸಿಗಳ ಪರವಾಗಿ ಕೆಲಸ ಮಾಡಿದ್ದ ಸ್ವಾಮಿ ಅವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು. ತಮಗೆ ವೈದ್ಯಕೀಯ ನೆಲೆಯಲ್ಲಿ ಜಾಮೀನು ಕೊಡಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದ್ದರು.

ಈ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸ್ವಾಮಿ ಪರ ವಕೀಲರು, ಅವರು ಮೃತಪಟ್ಟಿರುವ ವಿಷಯವನ್ನು ನ್ಯಾಯಾಲಯಕ್ಕೆ ತಿಳಿಸಿದರು. ಸ್ವಾಮಿ ಅವರು ಪಾರ್ಕಿನ್ಸನ್ಸ್‌ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ನೀರಿನ ಲೋಟವನ್ನು ಕೈಯಲ್ಲಿ ಹಿಡಿದುಕೊಂಡು ಕುಡಿಯಲು ಆಗುತ್ತಿರಲಿಲ್ಲ. ಕೈಗಳು ಅಷ್ಟು ನಡುಗುತ್ತಿದ್ದವು. ಹಾಗಾಗಿ, ಜೈಲಿನಲ್ಲಿ ತಮಗೆ ನೀರು ಕುಡಿಯಲು ಸ್ಟ್ರಾ (ಹೀರುಕೊಳವೆ) ಬೇಕು ಎಂದು ಈ ಹಿಂದೆ ನ್ಯಾಯಾಲಯವನ್ನು ಕೋರಿದ್ದರು.

ಈ ಕೋರಿಕೆಗೆ ‍ಪ್ರತಿಕ್ರಿಯೆ ಸಲ್ಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯು ಇಪ್ಪತ್ತು ದಿನಗಳ ಸಮಯ ತೆಗೆದುಕೊಂಡಿತು! ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಗೆ ಸ್ಟ್ರಾ ಕೊಡುವ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ಅಷ್ಟು ದಿನ ಬೇಕಾಗುತ್ತದೆಯೇ? ಸ್ವಾಮಿ ಅವರು ಕೋರಿಕೆ ಸಲ್ಲಿಸಿದ ಒಂದು ತಿಂಗಳ ನಂತರ, ನೀರು ಕುಡಿಯಲು ಅವರಿಗೆ ಸ್ಟ್ರಾ ನೀಡಲಾಯಿತು. ಈ ಮಧ್ಯೆ, ಅವರು ವೈದ್ಯಕೀಯ ಆಧಾರದಲ್ಲಿ ತಮಗೆ ಜಾಮೀನು ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಈಗ ಸ್ವಾಮಿ ಅವರು ಸೆರೆಯಲ್ಲೇ ಸಾವನ್ನಪ್ಪಿದ್ದಾರೆ.

ಇದು ಯಾವುದಾದರೂ ಪ್ರಜಾತಂತ್ರ ವ್ಯವಸ್ಥೆಗೆ ಭೂಷಣ ತರುವ ಪ್ರಸಂಗವೇ? ವಯೋವೃದ್ಧನಿಗೆ ನೀರು ಕುಡಿಯಲು ಒಂದು ಅನುಕೂಲ ಕಲ್ಪಿಸುವು ದಕ್ಕೆ ನಮ್ಮ ಜೈಲು ಆಡಳಿತಕ್ಕೆ ಒಂದು ತಿಂಗಳ ಸಮಯ ಬೇಕೇ? ವೈದ್ಯಕೀಯ ಕಾರಣಗಳನ್ನು ನೋಡಿಯಾದರೂ ಜಾಮೀನು ಕೊಡಿ ಎಂದು ಕೇಳಿದ್ದ ವ್ಯಕ್ತಿ ಸೆರೆಯಲ್ಲಿ ಇದ್ದಾಗಲೇ ಮೃತಪಟ್ಟಿರುವುದು ಪ್ರಜಾಪ್ರಭುತ್ವ ದೇಶಗಳ ಸಾಲಿನಲ್ಲಿ ಭಾರತಕ್ಕೆ ಯಾವ ಬಗೆಯ ಹೆಸರು ತಂದುಕೊಡಬಹುದು? ಸ್ವಾಮಿ ಅವರು ತಪ್ಪು ಮಾಡಿದ್ದೇ ಆದಲ್ಲಿ ಅವರಿಗೆ ದೇಶದ ಕಾನೂನಿಗೆ ಅನುಗುಣವಾಗಿ ಶಿಕ್ಷೆ ಆಗಬೇಕಿತ್ತು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಆದರೆ, ಆರೋಪ ಸಾಬೀತಾಗುವ ಮೊದಲೇ ಅವರನ್ನು ಈ ಪರಿ ‘ಶಿಕ್ಷೆ’ಗೆ ಒಳಪಡಿಸಬಾರದಿತ್ತು. ತನಿಖಾ ಸಂಸ್ಥೆಗಳು ಇವರ ವಿಚಾರದಲ್ಲಿ ಕನಿಷ್ಠ ಸಂವೇದನೆಯನ್ನೂ ತೋರಿದಂತೆ ಕಾಣುತ್ತಿಲ್ಲ.

ವ್ಯಕ್ತಿಯೊಬ್ಬನಿಗೆ ಕಾಯಿಲೆಗಳು ಇವೆ, ಆತನಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ಅಪರಾಧಕ್ಕೆ ಶಿಕ್ಷೆಯಿಂದ ವಿನಾಯಿತಿ ಕೊಡಬೇಕಿಲ್ಲ ಎಂಬುದು ನಿಜ. ಆದರೆ, ಸ್ವಾಮಿ ಅವರ ಪ್ರಕರಣದಲ್ಲಿ ಅವರಿಗೆ ವೈದ್ಯಕೀಯ ಕಾರಣಗಳ ಆಧಾರದಲ್ಲಿ ಜಾಮೀನನ್ನಾದರೂ ಕೊಡಬಹುದಿತ್ತು. ಸ್ವಾಮಿ ಅವರಿಗೆ ಕ್ರಿಮಿನಲ್ ಅಪರಾಧಗಳ ಹಿನ್ನೆಲೆ ಇಲ್ಲವಾಗಿತ್ತು ಎಂಬುದನ್ನು ಕೂಡ ಪರಿಗಣನೆಗೆ ತೆಗೆದು ಕೊಳ್ಳಬಹುದಿತ್ತು. ಸ್ವಾಮಿ ಅವರು ಜಾಮೀನು ಕೋರಿ ಒಂದಕ್ಕಿಂತ ಹೆಚ್ಚು ಬಾರಿ ಅರ್ಜಿ ಸಲ್ಲಿಸಿದ್ದರು.

ಜೈಲಿನಲ್ಲಿ ಇದ್ದಾಗ ಅವರ ಆರೋಗ್ಯ ಹದಗೆಟ್ಟಿತ್ತು. ಅಲ್ಲದೆ, ಜೈಲಿನಲ್ಲಿ ಇದ್ದಾಗಲೇ ಅವರು ಕೋವಿಡ್‌–19 ಸಾಂಕ್ರಾಮಿಕಕ್ಕೆ ಒಳಗಾಗಿದ್ದರು, ನಂತರ ಅದರಿಂದ ಚೇತರಿಸಿಕೊಂಡಿದ್ದರು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಅವರಿಗೆ ಜೈಲಿನಲ್ಲಿ ಸರಿಯಾದ ಚಿಕಿತ್ಸೆ ದೊರೆಯಲಿಲ್ಲ ಎಂಬ ಆರೋಪ ಇದೆ. ವಿಚಾರಣಾಧೀನ ಕೈದಿಯಾಗಿ ಜೈಲು ಸೇರುವಾಗ ಆರೋಗ್ಯವಾಗಿ ಇದ್ದ ಸ್ವಾಮಿ ಅವರು ಜೈಲಿನಲ್ಲಿ ದೈಹಿಕವಾಗಿ ಕುಗ್ಗಿದ್ದರು ಎಂಬ ವರದಿಗಳು ಇವೆ. ‘ಜಾಮೀನಿನ ಮೇಲೆ ನನ್ನನ್ನು ಬಿಡುಗಡೆ ಮಾಡದಿದ್ದರೆ, ನಾನು ಯಾವ ಆಸ್ಪತ್ರೆಗೂ ಸೇರಿಕೊಳ್ಳಲು ಬಯಸುವುದಿಲ್ಲ. ಅದರ ಬದಲಿಗೆ ಜೈಲಿನಲ್ಲೇ ಸಾಯಲು ಇಚ್ಛಿಸುತ್ತೇನೆ’ ಎಂದು ಸ್ವಾಮಿ ಅವರು ಈಚೆಗೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಈಗ ಅವರು ವಿಚಾರಣಾಧೀನ ಕೈದಿಯಾಗಿಯೇ
ಸಾವನ್ನಪ್ಪಿದ್ದಾರೆ. ಅವರು ಹೃದಯ ಬಡಿತ ನಿಂತುಹೋದ ಕಾರಣದಿಂದಾಗಿ ಜೀವ ಕಳೆದುಕೊಂಡರು ಎಂಬುದಕ್ಕಿಂತಲೂ ಪ್ರಭುತ್ವದ ಹೃದಯಹೀನತೆಯ ಪರಿಣಾಮವಾಗಿ ಮೃತಪಟ್ಟರು ಎಂದು ವಿಷಾದದಿಂದ ಹೇಳಬೇಕಾಗುತ್ತದೆ.

ಸಾವು ಎಲ್ಲರನ್ನೂ ತಟ್ಟುತ್ತದೆ, ಸಾವನ್ನು ಗೆದ್ದವರು ಯಾರೂ ಇಲ್ಲ. ಆದರೆ, ಆರೋಗ್ಯ ಹದಗೆಟ್ಟಿರುವ ವ್ಯಕ್ತಿಯನ್ನು ಅಂತಃಕರಣದಿಂದ ನೋಡಬೇಕಾದ ಕೆಲಸ ಈ ಪ್ರಕರಣದಲ್ಲಿ ಪ್ರಭುತ್ವದ ಕಡೆಯಿಂದ ಆಗಲಿಲ್ಲ. ಪ್ರಭುತ್ವದ ನಡೆ, ನುಡಿಗಳು ಇಂದಿನ ಹಾಗೂ ಮುಂದಿನ ಪೀಳಿಗೆಗಳಿಗೆ ಮೇಲ್ಪಂಕ್ತಿಯಂತೆ ಇರಬೇಕು. ಆದರೆ, ಸ್ಟ್ಯಾನ್ ಸ್ವಾಮಿ ಪ್ರಕರಣದಲ್ಲಿ ಅಂತಹ ನಡೆ ಕಾಣಲಿಲ್ಲ. ಉದಾರವಾದಿ ಮೌಲ್ಯಗಳಲ್ಲಿ, ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆ ಇರುವವರ ಅಂತಃಸಾಕ್ಷಿಯನ್ನು ಈ ಪ್ರಕರಣ ಕಲಕುತ್ತದೆ. ಬಹುಕಾಲ ಸ್ಮೃತಿಪಟಲದಲ್ಲಿ ಉಳಿದುಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT