ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಐಐಎಂ ತಿದ್ದುಪಡಿ ಮಸೂದೆ- ಸ್ವಾಯತ್ತೆಗೆ ಧಕ್ಕೆಯಾಗುವ ಅಪಾಯ

Published 21 ಆಗಸ್ಟ್ 2023, 19:53 IST
Last Updated 21 ಆಗಸ್ಟ್ 2023, 19:53 IST
ಅಕ್ಷರ ಗಾತ್ರ

ಸಂಸತ್ತಿನ ಎರಡೂ ಸದನಗಳ ಅನುಮೋದನೆ ಪಡೆದುಕೊಂಡಿರುವ ‘ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ತಿದ್ದುಪಡಿ) ಮಸೂದೆ– 2023’ ಆಡಳಿತ ನಿರ್ವಹಣೆಯ ಕೌಶಲಗಳನ್ನು ಬೋಧಿಸುವ ದೇಶದ ಅತ್ಯುನ್ನತ ವಿದ್ಯಾಸಂಸ್ಥೆಗಳ ಸ್ವಾಯತ್ತೆ, ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ತಾನು ಬಯಸಿದವರನ್ನು ಈ ಸಂಸ್ಥೆಗಳಿಗೆ ನಿರ್ದೇಶಕರನ್ನಾಗಿ ನೇಮಕ ಮಾಡುವ ಅಧಿಕಾರವನ್ನು ಇದು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಸಂಸ್ಥೆಗಳ ಕಾರ್ಯಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ನೀಡುತ್ತದೆ. ಈಗಿರುವ ನಿಯಮಗಳ ಪ್ರಕಾರ, ಸಂಸ್ಥೆಯ ಆಡಳಿತ ಮಂಡಳಿಯು ಶೋಧ ಹಾಗೂ ಆಯ್ಕೆ ಸಮಿತಿಯ ಶಿಫಾರಸು ಆಧರಿಸಿ ಸಂಸ್ಥೆಯ ನಿರ್ದೇಶಕರನ್ನು ನೇಮಕ ಮಾಡುತ್ತದೆ. ಆದರೆ ಹೊಸ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ನಂತರದಲ್ಲಿ ಸಂಸ್ಥೆಗಳ ‘ಸಂದರ್ಶಕ ಮುಖ್ಯಸ್ಥ’ ಆಗಿರುವ ರಾಷ್ಟ್ರಪತಿಯವರ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಆಯ್ಕೆ ಸಮಿತಿಯಲ್ಲಿ ರಾಷ್ಟ್ರಪತಿಯವರು ನೇಮಕ ಮಾಡುವ ಅಧ್ಯಕ್ಷ ಇರುತ್ತಾರೆ. ಇದರ ಅರ್ಥ, ರಾಷ್ಟ್ರಪತಿಯವರ ಮೂಲಕ ಕೇಂದ್ರ ಸರ್ಕಾರವು ನಿರ್ದೇಶಕರ ನೇಮಕದಲ್ಲಿ ನಿರ್ಣಾಯಕ ಪಾತ್ರ ಹೊಂದಿರುತ್ತದೆ. ಇಂತಹ ನೇಮಕಾತಿ ವ್ಯವಸ್ಥೆಗಳು ದೇಶದಲ್ಲಿ ಈಗ ಕೆಲಸ ಮಾಡುತ್ತಿರುವ ಪರಿಯನ್ನು ಗಮನಿಸಿದರೆ, ನೇಮಕಾತಿಗಳಲ್ಲಿ ಬೇರೆ ಯಾರಿಗೂ ಯಾವ ದನಿಯೂ ಇರುವುದಿಲ್ಲ ಎಂಬುದು ಗೊತ್ತಾಗುತ್ತದೆ. ಅಂದರೆ, ಶೋಧ ಸಮಿತಿಯು ಒಂದು ಪ್ರಕ್ರಿಯೆಯನ್ನು ಪೂರೈಸುವ ವ್ಯವಸ್ಥೆ ಮಾತ್ರವೇ ಆಗಿ ಉಳಿಯುತ್ತದೆ.

ಐಐಎಂಗಳ ಆಡಳಿತ ಮಂಡಳಿಯನ್ನು ಅಮಾನತಿನಲ್ಲಿ ಇರಿಸುವುದಕ್ಕೆ ಅಥವಾ ಅದನ್ನು ವಿಸರ್ಜಿಸುವುದಕ್ಕೆ ನಿಯಮಗಳನ್ನು ರೂಪಿಸುವ ಅಧಿಕಾರ ಕೂಡ ಸರ್ಕಾರದ ಬಳಿ ಇರಲಿದೆ. ‘ಸಂದರ್ಶಕ ಮುಖ್ಯಸ್ಥ’ರಿಗೆ ಹೆಚ್ಚಿನ ಅಧಿಕಾರವನ್ನು ಈ ಮಸೂದೆ ನೀಡುತ್ತದೆ. ಲೆಕ್ಕಪತ್ರ ಪರಿಶೋಧನೆ ನಡೆಸುವ, ವಿಚಾರಣೆಗೆ ಮುಂದಡಿ ಇಡುವ, ಐಐಎಂ ಆಡಳಿತ ಮಂಡಳಿ ಪಾಲಿಸಲೇಬೇಕಾದ ರೀತಿಯ ನಿರ್ದೇಶನಗಳನ್ನು ನೀಡುವ ಅಧಿಕಾರವು ‘ಸಂದರ್ಶಕ ಮುಖ್ಯಸ್ಥ’ರಿಗೆ ದಕ್ಕುತ್ತದೆ. 2017ರ ಐಐಎಂ ಕಾಯ್ದೆಯ ಅನ್ವಯ, ಐಐಎಂಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸ್ವಾಯತ್ತೆ ಇತ್ತು. ‘ರಾಷ್ಟ್ರೀಯ ಮಹತ್ವದ ಸಂಸ್ಥೆಗಳು’ ಎಂದು ಅವುಗಳನ್ನು ಗುರುತಿಸಲಾಗಿದೆ. ಈ ಸಂಸ್ಥೆಗಳು ಮಹತ್ವ ಹೊಂದಿವೆ, ಇವು ಬೇರೆ ಬೇರೆ ಕ್ಷೇತ್ರಗಳ ನಾಯಕರನ್ನು ಸೃಷ್ಟಿಸುತ್ತಿವೆ. ಹೀಗಾಗಿ, ಇವುಗಳ ಮೇಲೆ ನಿಯಂತ್ರಣ ಸಾಧಿಸುವ ಬಯಕೆ ಸರ್ಕಾರಕ್ಕೆ ಮೂಡಿದೆ. ಐಐಎಂಗಳ ಕಾರ್ಯಗಳಲ್ಲಿ ಸರ್ಕಾರವು ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ‌ಪ್ರಧಾನ್ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ. ಆದರೆ, ಈ ಸಂಸ್ಥೆಗಳ ನಾಯಕತ್ವದ ಹುದ್ದೆಗಳ ನೇಮಕಾತಿಯ ಮೇಲೆ ನಿಯಂತ್ರಣ ಹೊಂದಲು ಸರ್ಕಾರ ಬಯಸುತ್ತಿರುವಾಗ, ಈ ಭರವಸೆಯನ್ನು ಗಂಭೀರವಾಗಿ ಪರಿಗಣಿಸಲು ಆಗದು. ಹೊಸ ಕಾನೂನೊಂದನ್ನು ಜಾರಿಗೆ ತರಬೇಕು ಎಂಬ ಆಲೋಚನೆ ಸರ್ಕಾರಕ್ಕೆ ಮೂಡಿರುವುದೇ, ಅದು ಈ ಸಂಸ್ಥೆಗಳಲ್ಲಿ ಬದಲಾವಣೆ ತರಲು ಬಯಸಿದೆ ಎಂಬ ಸಂದೇಶವನ್ನು ರವಾನಿಸುತ್ತದೆ. ಶಾಲೆ, ಕಾಲೇಜು ಶಿಕ್ಷಣದಿಂದ ಆರಂಭಿಸಿ ವಿಶ್ವವಿದ್ಯಾಲಯ ಹಾಗೂ ಅತ್ಯುನ್ನತ ಶಿಕ್ಷಣ ಸಂಸ್ಥೆಗಳವರೆಗೆ ನಿಯಂತ್ರಣ ಸಾಧಿಸುವುದು ಸರ್ಕಾರದ ಆದ್ಯತೆಯ ಕೆಲಸವಾಗಿರುವಾಗ, ಹೊಸ ಮಸೂದೆಯೂ ಈ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶವನ್ನೇ ಹೊಂದಿದೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಐಐಎಂಗಳ ಮೇಲೆ ತಮ್ಮ ಪ್ರಭಾವವನ್ನು ವಿಸ್ತರಿಸಲು ಹಾಗೂ ಅವುಗಳ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರಗಳು ಈ ಹಿಂದೆಯೂ ಯತ್ನಿಸಿವೆ. 2004ರಲ್ಲಿ ಕೇಂದ್ರ ಸರ್ಕಾರವು ಐಐಎಂ ಶುಲ್ಕದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿತ್ತು. ಈಗಿನ ಮಸೂದೆಯಲ್ಲಿ ಇರುವ ಕೆಲವು ಅಂಶಗಳನ್ನು ಕೇಂದ್ರ ಸರ್ಕಾರವು 2015ರಲ್ಲಿಯೂ ಪರಿಶೀಲನೆಗೆ ಎತ್ತಿಕೊಂಡಿತ್ತು. ಆದರೆ ಟೀಕೆಗಳು ಬಂದ ಕಾರಣ ಅವುಗಳ ವಿಚಾರದಲ್ಲಿ ಮುಂದಡಿ ಇರಿಸಲಿಲ್ಲ. ಸರ್ಕಾರಗಳು ತಮ್ಮ ಪ್ರಯತ್ನದಿಂದ ಹಿಂದೆ ಸರಿಯುವುದಿಲ್ಲ. ಡಾಕ್ಟರೇಟ್‌ಗೆ ಸಲ್ಲಿಸಿದ್ದ ಪ್ರಬಂಧವೊಂದು ಬಿಜೆಪಿಯನ್ನು ‘ಹಿಂದೂ ಪರ, ಮೇಲ್ಜಾತಿಗಳ ಪಕ್ಷ’ ಎಂದು ಬಣ್ಣಿಸಿತ್ತು. ಈ ಪ್ರಬಂಧವನ್ನು ಪುನರ್‌ಪರಿಶೀಲಿಸಬೇಕು ಎಂದು 2016ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿತ್ತು. ಆದರೆ ಸ್ವಾಯತ್ತೆಯ ಕಾರಣದಿಂದಾಗಿ, ಐಐಎಂ ಅಹಮದಾಬಾದ್‌ಗೆ ಈ ನಿರ್ದೇಶನವನ್ನೇ ತಿರಸ್ಕರಿಸಲು ಸಾಧ್ಯವಾಗಿತ್ತು. ಈಗ ಈ ಬಗೆಯ ಸ್ವಾಯತ್ತೆ ಅಪಾಯದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT