ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿ ಮಾತಿನ ಕಾಳಜಿ ಕೊನೆಗೊಳಿಸಿ ಸರ್ಕಾರಿ ಶಾಲೆಗಳಿಗೆ ಸೌಕರ್ಯ ಕಲ್ಪಿಸಿ

Last Updated 17 ಜನವರಿ 2021, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಕೊರತೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಹದಿನಾರು ಜಿಲ್ಲೆಗಳ ಉಪನಿರ್ದೇಶಕರು ನೀಡಿರುವ ಮಾಹಿತಿಯು ಪ್ರಾಥಮಿಕ ಶಿಕ್ಷಣದ ಕುರಿತಂತೆ ಸರ್ಕಾರಕ್ಕೆ ಇರುವ ಪೊಳ್ಳು ಕಾಳಜಿಗೆ ದೊರೆತಿರುವ ಪ್ರಮಾಣಪತ್ರದಂತಿದೆ. ಸುಮಾರು 6 ಸಾವಿರ ಶಾಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇರುವುದು ಹಾಗೂ 9 ಸಾವಿರ ಶಾಲೆಗಳಲ್ಲಿ ಶೌಚಾಲಯ ಇಲ್ಲದಿರುವುದು ಸರ್ಕಾರಿ ಪ್ರಾಥಮಿಕ ಶಾಲೆಗಳ ದುಃಸ್ಥಿತಿಯನ್ನು ಸೂಚಿಸುವಂತಿದೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ಒಯ್ಯುತ್ತಿದ್ದರೆ, ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ದೇಹಬಾಧೆ ನಿವಾರಿಸಿಕೊಳ್ಳಲು ಶಾಲೆಗಳ ಸಮೀಪದ ಮನೆಗಳನ್ನು ಅವಲಂಬಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ನೆರವಿನೊಂದಿಗೆ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಎರಡೂವರೆ ತಿಂಗಳಲ್ಲಿ ‘ಜಲಜೀವನ್‌’ ಯೋಜನೆಯಡಿ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗುವುದು ಹಾಗೂ ‘ಸ್ವಚ್ಛಭಾರತ’ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಈ ಹಿಂದೆಯೂ ಇಂಥ ಭರವಸೆಗಳು ಸರ್ಕಾರದ ವತಿಯಿಂದ ದೊರೆತಿವೆ. ಸುಮಾರು 4 ಸಾವಿರ ಶಾಲೆಗಳಲ್ಲಿ ಶೌಚಾಲಯಗಳಿಲ್ಲ ಎನ್ನುವ ಮಾಧ್ಯಮ ವರದಿಯನ್ನು ಪರಿಗಣಿಸಿ, ರಾಜ್ಯದ ಎಲ್ಲ ಶಾಲೆಗಳಲ್ಲಿ 2019ರ ಅಕ್ಟೋಬರ್‌ 1ರೊಳಗೆ ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಿಸಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಆ ಗಡುವಿನ ನಂತರವೂ ಶಾಲೆಗಳಲ್ಲಿ ಶೌಚಾಲಯಗಳಿಲ್ಲದ ದೂರುಗಳು ಬಂದಲ್ಲಿ ಕರ್ತವ್ಯಲೋಪ ಎಂದು ಪರಿಗಣಿಸಿ, ಜಿಲ್ಲಾ ಉಪನಿರ್ದೇಶಕರ (ಆಡಳಿತ) ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು 2019ರ ಜುಲೈನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಸದ್ಯದ ಪರಿಸ್ಥಿತಿ ನೋಡಿದರೆ, ಶಿಕ್ಷಣ ಇಲಾಖೆಯ ಆದೇಶಕ್ಕೆ ಚಿಕ್ಕಾಸಿನ ಬೆಲೆಯೂ ದೊರೆತಂತಿಲ್ಲ. ಪರಿಸ್ಥಿತಿ ಸುಧಾರಿಸುವ ಬದಲು ಮತ್ತಷ್ಟು ಬಿಗಡಾಯಿಸಿದೆ.

‘ಸ್ವಚ್ಛ ಭಾರತ’ ಆಂದೋಲನದ ನಂತರವೂ ರಾಜ್ಯದಲ್ಲಿ ಸಾವಿರಾರು ಶಾಲೆಗಳು ಶೌಚಾಲಯಗಳಿಂದ ವಂಚಿತವಾಗಿವೆ ಎನ್ನುವುದು ಸರ್ಕಾರಿ ಯೋಜನೆಗಳು ಅನುಷ್ಠಾನಗೊಳ್ಳುವ ರೀತಿಗೆ ಉದಾಹರಣೆಯಂತಿವೆ. ಶೌಚಾಲಯಗಳು ಇಲ್ಲದಿರುವ ಶಾಲೆಗಳ ಜೊತೆಗೆ, ಶೌಚಾಲಯಗಳಿದ್ದರೂ ಅವುಗಳು ಬಳಸುವ ಸ್ಥಿತಿಯಲ್ಲಿ ಇಲ್ಲದಿರುವ ಶಾಲೆಗಳೂ ಇವೆ. ನಿರ್ವಹಣೆಯ ಕೊರತೆಯಿಂದಾಗಿ ಬಾಗಿಲಿಗೆ ಬೀಗ ಜಡಿಸಿಕೊಂಡಿರುವ ಶೌಚಾಲಯಗಳು ಬಹಳಷ್ಟಿವೆ. ಪರಿಸ್ಥಿತಿ ಹೀಗಿದ್ದರೂ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು ಒದಗಿಸಲು ಹಾಗೂ ಶೌಚಾಲಯಗಳ ನಿರ್ವಹಣೆಗಾಗಿ ಪ್ರತಿವರ್ಷ ಅನುದಾನ ಒದಗಿಸಲಾಗುತ್ತಿದೆ. ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ಇನ್ನು ಮುಂದಾದರೂ ಭಾವುಕವಾಗಿ ಮಾತನಾಡುವುದನ್ನು ಬಿಟ್ಟು ಪ್ರಾಯೋಗಿಕ ನೆಲೆಗಟ್ಟಿನಲ್ಲಿ ಯೋಜನೆಗಳನ್ನು ಕೈಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಶಾಲೆಗಳ ಅಭಿವೃದ್ಧಿಯನ್ನು ದಾನಿಗಳು ಹಾಗೂ ಕಾರ್ಪೊರೇಟ್‌ ಸಂಸ್ಥೆಗಳ ಸುಪರ್ದಿಗೆ ಬಿಟ್ಟು ಸರ್ಕಾರ ಕೈತೊಳೆದುಕೊಳ್ಳಲು ಬಯಸುತ್ತಿರುವಂತಿದೆ. ಶಾಲೆಗಳಲ್ಲಿ ಮೂಲಭೂತ ಅಗತ್ಯಗಳನ್ನು ಕಲ್ಪಿಸುವುದು ಸರ್ಕಾರದ ಹೊಣೆಗಾರಿಕೆ. ಶಾಲೆಗಳಲ್ಲಿನ ಮೂಲ ಸೌಕರ್ಯಗಳನ್ನು ಸುಧಾರಿಸುವುದಕ್ಕೆ ಲಾಕ್‌ಡೌನ್‌ ನಂತರದ ರಜೆ ಸಮಯದಲ್ಲಿ ಸರ್ಕಾರಕ್ಕೆ ಅವಕಾಶವಿತ್ತು. ಮಕ್ಕಳು ಶಾಲೆಗಳಿಂದ ದೂರವಿದ್ದ ಸಮಯದಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಶಾಲೆಗಳಿಗೆ ಹೊಸ ರೂಪ ನೀಡುವುದರ ಜೊತೆಗೆ, ಸ್ಥಳೀಯ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಸಾಧ್ಯವಿತ್ತು. ಇದಾವುದನ್ನೂ ಮಾಡದ ಸರ್ಕಾರ, ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದಾಗಷ್ಟೇಎಚ್ಚರಗೊಂಡು ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ ಮಾತನಾಡುತ್ತದೆ. ಮತ್ತೆ ಸ್ವಲ್ಪ ಸಮಯದ ನಂತರ ಹೊಸ ಸಮೀಕ್ಷೆ ಪ್ರಕಟವಾಗಿ, ಮೂಲ ಸೌಕರ್ಯಗಳಿಲ್ಲದ ಶಾಲೆಗಳ ಹೊಸ ಸಂಖ್ಯೆ ಪ್ರಕಟಗೊಳ್ಳುತ್ತದೆ. ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಬೇಕು. ಕೊರೊನಾ ಸೋಂಕಿನ ಸಂದರ್ಭದಲ್ಲಿ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿರುವ ಸಂದರ್ಭದಲ್ಲಿ ಶಾಲಾಮಕ್ಕಳು ಬಯಲುಶೌಚಕ್ಕೆ ಹೋಗುವ ಅನಿವಾರ್ಯವನ್ನು ಸರ್ಕಾರ ಸೃಷ್ಟಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT