ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಭಾರತ– ನೇಪಾಳ: ಕಂದಕಮುಚ್ಚಲು ಮಾತುಕತೆಯೇ ಮಾರ್ಗ

Last Updated 14 ಜೂನ್ 2020, 21:54 IST
ಅಕ್ಷರ ಗಾತ್ರ

ಭಾರತ, ನೇಪಾಳ ನಡುವಣ ಸಂಬಂಧದಲ್ಲಿ ಬಿರುಕು ಹೆಚ್ಚತೊಡಗಿದೆ. ಇದು ತೀವ್ರ ಸ್ವರೂಪದ ತಿಕ್ಕಾಟಕ್ಕೆ ಎಡೆಮಾಡಿಕೊಡುವ ಸನ್ನಿವೇಶ ನಿರ್ಮಾಣ ಆಗದಂತೆ ಎರಡೂ ದೇಶಗಳು ನೋಡಿಕೊಳ್ಳಬೇಕು. ಭಾರತದ ಭೌಗೋಳಿಕ ಪ್ರದೇಶಗಳನ್ನೂ ಸೇರಿಸಿಕೊಂಡು ನೇಪಾಳ ವಾರಗಳ ಹಿಂದೆಯೇ ಹೊಸ ಭೂಪಟ ಸಿದ್ಧಪಡಿಸಿತ್ತು. ಆಗಿನಿಂದಲೂ ವಿವಾದ ಹೊಗೆಯಾಡುತ್ತಲೇ ಇದೆ. ಈಗ ಭೂಪಟಕ್ಕೆ ನೇಪಾಳ ಸಂಸತ್‌ನ ಕೆಳಮನೆಯಾದ ಪ್ರಜಾಪ್ರತಿನಿಧಿ ಸಭೆಯಲ್ಲಿ ಅನುಮೋದನೆ ದೊರೆತಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಕಳೆದ ಶುಕ್ರವಾರ ನೇಪಾಳದ ಗಡಿಯಲ್ಲಿ ಭಾರತೀಯರ ಮೇಲೆ ಉದ್ದೇಶಪೂರ್ವಕವಾಗಿ ನಡೆಯಿತು ಎನ್ನಲಾದ ಗುಂಡಿನ ದಾಳಿಯಲ್ಲಿ ರೈತರೊಬ್ಬರು ಮೃತಪಟ್ಟರು, ನಾಲ್ವರು ಗಾಯಗೊಂಡರು. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದಲ್ಲಿನ ಬಿರುಕು ದಟ್ಟವಾಗು ತ್ತಿರುವುದಕ್ಕೆ ಇವೆರಡೂ ಪ್ರಕರಣಗಳು ಮೇಲ್ನೋಟಕ್ಕೆ ಕಾಣುತ್ತಿರುವ ಪುರಾವೆಗಳಷ್ಟೆ. ಲಿಪುಲೇಖ್ ಪಾಸ್‌ವರೆಗೆ ಭಾರತವು ರಸ್ತೆ ನಿರ್ಮಿಸಿದ ನಂತರ, ಅದು ತನ್ನ ಗಡಿಯೊಳಗೆ ನಡೆದ ಅಕ್ರಮ ಕಾಮಗಾರಿ ಎಂದು ನೇಪಾಳ ತಗಾದೆ ತೆಗೆದಿತ್ತು. ವಿವಾದಿತ ‍ಪ್ರದೇಶಗಳಾದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ತನ್ನವೆಂದು ನೇಪಾಳವು ಆಗಲೇ ಪ್ರತಿಪಾದಿಸಿತ್ತು.

ಇವನ್ನು ಒಳಗೊಂಡ ಹೊಸ ಭೂಪಟ ಸಿದ್ಧಗೊಂಡಿದ್ದೂ ಆಗಲೇ. ಮಾರ್ಪಡಿಸಿರುವ ಈ ಭೂಪಟವನ್ನು ಒಳಗೊಂಡ ರಾಷ್ಟ್ರೀಯ ಲಾಂಛನ ಮರುವಿನ್ಯಾಸಗೊಳಿಸುವ ಉದ್ದೇಶವನ್ನೂ ನೇಪಾಳದ ಈ ಸಂವಿಧಾನ ತಿದ್ದುಪಡಿ ಮಸೂದೆ ಹೊಂದಿದೆ. ಮೇಲ್ಮನೆಯಲ್ಲೂ ಹೊಸ ಭೂಪಟಕ್ಕೆ ಅನುಮೋದನೆ ದೊರೆತು, ರಾಷ್ಟ್ರಪತಿಯ ಅಂಕಿತ ಬಿದ್ದಲ್ಲಿ ಅದು ನೇಪಾಳದ ಮಟ್ಟಿಗೆ ಅಧಿಕೃತವಾಗಲಿದೆ. ರಸ್ತೆ ನಿರ್ಮಾಣವನ್ನು ಈ ಪರಿಯ ವಿವಾದವನ್ನಾಗಿ ನೇಪಾಳ ಬಿಂಬಿಸುತ್ತಿರುವುದಕ್ಕೆ ಚೀನಾದ ಕುಮ್ಮಕ್ಕೂ ಇದೆ ಎಂಬ ವಾದ ಕೂಡ ಕೇಳಿಬರುತ್ತಿದೆ. ಹೀಗಾಗಿ ಇದು ಕ್ಷಿಪ್ರವಾಗಿ ಬಗೆಹರಿಸಿಕೊಳ್ಳಲೇಬೇಕಾದ ಬಿಕ್ಕಟ್ಟು.

ಉಭಯ ದೇಶಗಳು ಇಷ್ಟುಹೊತ್ತಿಗಾಗಲೇ ರಾಜತಾಂತ್ರಿಕ ಸಂವಾದಕ್ಕೆ ಮುಂದಾಗಬೇಕಿತ್ತು. ಎರಡೂ ದೇಶಗಳು ಬಿಗುಮಾನ ಬಿಟ್ಟು ರಾಜತಾಂತ್ರಿಕ ಮಾತುಕತೆಯನ್ನು ತಕ್ಷಣವೇ ಆರಂಭಿಸುವುದು ಅಗತ್ಯ.

ದ್ವಿಪಕ್ಷೀಯ ಮಾತುಕತೆಯಿಂದ ಗಡಿ ವಿವಾದ ಗಳನ್ನು ಬಗೆಹರಿಸಿಕೊಳ್ಳುವ ಯಾವ ಸೂಚನೆಯನ್ನೂ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ನೀಡಿಲ್ಲ. ಅಂತೆಯೇ, ಈ ವಿವಾದ ಭುಗಿಲೇಳುವ ಮೊದಲೇ ಶಮನಗೊಳಿಸಲು ಭಾರತದ ಕಡೆಯಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನ ನಡೆದಂತಿಲ್ಲ. ‘ಐತಿಹಾಸಿಕ ಪುರಾವೆಗಳ ಆಧಾರದಲ್ಲಿ ಹೊಸ ಭೂಪಟ ರಚನೆ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ’ ಎಂದುವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರಾ ದರೂ, ಉಭಯ ದೇಶಗಳ ನಡುವೆ ಸಕಾರಾತ್ಮಕ ಮಾತುಕತೆಗೆ ಆಹ್ವಾನ ನೀಡುವ ಧ್ವನಿ ಅದರಲ್ಲಿ ಇರಲಿಲ್ಲ.

ದಶಕಗಳಿಂದ ಭಾರತದ ಭಾಗವಾಗಿರುವ ಸುಮಾರು 400 ಚದರ ಕಿ.ಮೀ. ಭೂಪ್ರದೇಶ ವನ್ನು ಈಗ ತನ್ನದೆಂದು ನೇಪಾಳ ಬಿಂಬಿಸುತ್ತಿರುವುದರ ಹಿಂದೆ ರಾಜತಾಂತ್ರಿಕ ಹುನ್ನಾರವೂ ಇರಬಹುದೆಂದು ಕೆಲವು ರಾಜಕೀಯ ಪರಿಣತರು ಹೇಳಿದ್ದಾರೆ. ನೇಪಾಳದಲ್ಲಿ ಭಾರತ ವಿರೋಧಿ ಭಾವನೆಯನ್ನು ಉದ್ದೀಪಿಸಲು ಒಲಿ ಈ ರೀತಿ ಮಾಡುತ್ತಿದ್ದಾರೆ ಎಂಬ ಇನ್ನೊಂದು ವಾದವೂ ಇದೆ. ಉಗ್ರ ರಾಷ್ಟ್ರೀಯವಾದಿ ಎಂದು ತಮ್ಮನ್ನು ಕರೆದುಕೊಳ್ಳುವ ಅವರು, ಇಂತಹ ನಡೆಗಳಿಂದ ಜನಪ್ರಿಯರಾಗಲು ಹೊರಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಭಾರತದ ವಿಷಯದಲ್ಲಿ ಅವರ ಧೋರಣೆ ಬೇಜವಾಬ್ದಾರಿಯಿಂದ ಕೂಡಿದೆ.

ಉಭಯ ದೇಶಗಳ ಸಂಬಂಧದಲ್ಲಿ ಸಮಸ್ಯೆ ಕಾಣಿಸಿ ಕೊಳ್ಳುವಲ್ಲಿ ಅವರ ಹೊಣೆಗೇಡಿತನದ್ದೇ ಸಿಂಹಪಾಲು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಸಿಕ್ಕನ್ನು ಬಿಡಿಸಲು ಇದುವರೆಗೆ ಏನನ್ನೂ ಮಾಡಿಲ್ಲ ಏಕೆ ಎಂಬ ಪ್ರಶ್ನೆಯೂ ಇಲ್ಲಿ ಇದೆ. ಕಠ್ಮಂಡುವಿಗೆ ರಾಜತಾಂತ್ರಿಕ ನಿಪುಣರನ್ನು ಕಳುಹಿಸಿ, ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಮಾತುಕತೆ ಆರಂಭಿಸಬಹುದಿತ್ತು. ಕೋವಿಡ್–19 ಪಿಡುಗಿನ ವಿರುದ್ಧದ ಹೋರಾಟವನ್ನು ನೆಪ ಮಾಡಿ ರಾಜತಾಂತ್ರಿಕ ಸಂಧಾನವು ವಿಳಂಬವಾಗಲು ಕೇಂದ್ರ ಸರ್ಕಾರವೂ ಕಾರಣ ಎಂದು ಇಲ್ಲಿ ಹೇಳಲೇಬೇಕಾಗುತ್ತದೆ. ವಿಡಿಯೊ ಕಾನ್ಫರೆನ್ಸ್‌ನಂತಹ ಆಧುನಿಕ ಸಂವಾದ ಮಾರ್ಗಗಳು ಇರುವಾಗ ಕೋವಿಡ್–19 ಪಿಡುಗಿನಿಂದಾಗಿ ಮಾತುಕತೆ ಸಾಧ್ಯವಾಗಿಲ್ಲ ಎನ್ನುವುದು ಕುಂಟುನೆಪದಂತೆ ಕಾಣುತ್ತಿದೆ.

ಚೀನಾದವರ ಜತೆಗೆ ಭಾರತೀಯ ಸೇನಾ ಅಧಿಕಾರಿಗಳು ಮುಖಾಮುಖಿ ಮಾತುಕತೆ ನಡೆಸಿ, ಬಿಕ್ಕಟ್ಟು ಶಮನಕ್ಕೆ ಒಂದೆಡೆ ಯತ್ನಿಸುತ್ತಿದ್ದಾರೆ. ಇದು ನೇಪಾಳದ ವಿಷಯದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ? ಹಿಮಾಲಯ ಪ್ರದೇಶದಲ್ಲಿ ಭಾರತದ ಹಿತಕ್ಕೆ ಪೂರಕವಾದ ವಾತಾವರಣವನ್ನು ಕಾಯ್ದುಕೊಳ್ಳು ವುದು ದೇಶದ ರಕ್ಷಣೆಯ ದೃಷ್ಟಿಯಿಂದ ಬಹಳ ಮುಖ್ಯ. ಚೀನಾದ ಜತೆಗೆ ಆಗಾಗ ತಿಕ್ಕಾಟ ಉಂಟಾ ಗುತ್ತಿರುವ ಈ ಸಂದರ್ಭದಲ್ಲಿ ನೆರೆಯ ದೇಶಗಳ ಜತೆಗೆ ಬಾಂಧವ್ಯ ಕೆಡಿಸಿಕೊಳ್ಳುವುದರಿಂದ ಅಪಾಯವೇ ಹೆಚ್ಚು. ನೇಪಾಳವನ್ನು ತನ್ನ ಜತೆಗೆ ಇರಿಸಿಕೊಳ್ಳುವುದೇ ಭಾರತದ ಬುದ್ಧಿವಂತಿಕೆಯ ನಡೆ. ಹಾಗಾಗಿ, ಮಾತುಕತೆಯ ವಿಚಾರದಲ್ಲಿ ಉದಾಸೀನ ತೋರಲೇಬಾರದು. ಇಲ್ಲವಾದರೆ ಬೆಂಕಿಯಾಗುತ್ತಿರುವ ಹೊಗೆ ಶಾಂತಿಯನ್ನು ಸುಟ್ಟೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT