ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಒ ಪಾರೇಖ್ ವಿರುದ್ಧ ದೂರು: ಇನ್ಫೊಸಿಸ್‌ಗೊಂದು ಸತ್ವಪರೀಕ್ಷೆ

Last Updated 24 ಅಕ್ಟೋಬರ್ 2019, 2:46 IST
ಅಕ್ಷರ ಗಾತ್ರ

ಭಾರತವು ಮುಕ್ತ ಆರ್ಥಿಕ ವ್ಯವಸ್ಥೆಗೆ, ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡಿದ್ದು 90ರ ದಶಕದ ಆರಂಭದಲ್ಲಿ. ಶ್ರೀಮಂತರು ಅಂದರೆ ಜಮೀನ್ದಾರರು, ಉದ್ಯಮಿಗಳು ಮಾತ್ರ ಎಂಬ ನಂಬಿಕೆ ಕಳಚಿ, ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ವ್ಯಕ್ತಿ ಕೂಡ ಶ್ರೀಮಂತ ಆಗಲು ಸಾಧ್ಯ ಎಂಬುದು ತುಸು ವ್ಯಾಪಕ ನೆಲೆಯಲ್ಲಿ ಕಂಡುಬಂದಿದ್ದು ಆ ಅವಧಿಯ ನಂತರ. ಎನ್.ಆರ್. ನಾರಾಯಣಮೂರ್ತಿ, ನಂದನ್ ನಿಲೇಕಣಿ, ಎಸ್. ಗೋಪಾಲಕೃಷ್ಣನ್‌, ಎಸ್.ಡಿ. ಶಿಬುಲಾಲ್‌ ಅವರಂತಹ ಸಾಹಸಿಗಳು ಸ್ಥಾಪಿಸಿದ ಇನ್ಫೊಸಿಸ್‌ ಎನ್ನುವ ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿಯು ಷೇರು ಮಾರುಕಟ್ಟೆ ಪ್ರವೇಶಿಸಿ, ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿದ್ದು 1992– 93ರಲ್ಲಿ. ಅಂದರೆ ಭಾರತವು ಮುಕ್ತ ಆರ್ಥಿಕ ವ್ಯವಸ್ಥೆಗೆ ತೆರೆದುಕೊಂಡ ಕಾಲಘಟ್ಟದಲ್ಲಿ. ಅದಾದ ನಂತರದ ಅವಧಿಯಲ್ಲಿ ಇನ್ಫೊಸಿಸ್‌ ಕಂಪನಿ ತನಗೆ ತಾನೇ ಸಾಟಿ ಎಂಬ ಬಗೆಯಲ್ಲಿ ಬೆಳೆದು ನಿಂತಿದೆ. ಅಷ್ಟೇ ಅಲ್ಲ, ಷೇರುದಾರರಿಗೆ ಸಂಪತ್ತು ಸೃಷ್ಟಿಸಿಕೊಡುವ ವಿಚಾರದಲ್ಲಿ ಇನ್ಫೊಸಿಸ್‌ ಮಟ್ಟಕ್ಕೆ ನಿಲ್ಲಲು ಎಲ್ಲ ಕಂಪನಿಗಳಿಂದ ಸಾಧ್ಯವಿಲ್ಲ. ‘ತಾನು ಮಾತ್ರ ಬೆಳೆಯುವುದಲ್ಲ, ತನ್ನ ಜೊತೆಯಲ್ಲಿ ಭಾಗೀದಾರರನ್ನೂ (ಷೇರುದಾರರು) ಬೆಳೆಸಬೇಕು’ ಎನ್ನುವ ಮುಕ್ತ ಮಾರುಕಟ್ಟೆಯ ತಾತ್ವಿಕತೆಯ ಕ್ರಿಯಾರೂಪವಾಗಿಯೂ ಇನ್ಫೊಸಿಸ್‌ನ ಬೆಳವಣಿಗೆ ಹಾಗೂ ಅದರ ಷೇರುದಾರರ ಸಂಪತ್ತು ವೃದ್ಧಿಯಾಗಿದ್ದನ್ನು ಕಾಣಬಹುದು. ಹಾಗಾಗಿಯೇ, ಷೇರುದಾರರು ಮತ್ತು ನೌಕರರ ಪಾಲಿಗೆ ಸಂಪತ್ತು ಸೃಷ್ಟಿಸಿದ ಈ ಕಂಪನಿಯಲ್ಲಿ ಅಹಿತಕರವಾದ ಯಾವುದೇ ವಿದ್ಯಮಾನ ನಡೆದರೂ ಕಸಿವಿಸಿ ಉಂಟಾಗುವುದು ಸಹಜ. ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸಲೀಲ್ ಪಾರೇಖ್ ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ನೀಲಾಂಜನ ರಾಯ್ ಅವರ ವಿರುದ್ಧ ಈಗ ದಾಖಲಾಗಿರುವ ಆರೋಪವು ಷೇರುದಾರರಲ್ಲಿ ತಳಮಳ ಸೃಷ್ಟಿಸಿದೆ. ಆ ತಳಮಳವು ಕಂಪನಿಯ ಷೇರುಗಳ ಮೌಲ್ಯ ಕುಸಿತದಲ್ಲಿ ಪ್ರತಿಫಲಿಸಿದೆ.

ಪಾರೇಖ್ ಅವರು ಈಚಿನ ತ್ರೈಮಾಸಿಕಗಳಲ್ಲಿ ಕಂಪನಿಯ ಲಾಭವನ್ನು ಹೆಚ್ಚಿನ ಪ್ರಮಾಣದಲ್ಲಿ ತೋರಿಸಿದ್ದಾರೆ, ಕಂಪನಿಯ ಹಣಕಾಸಿನ ಕೆಲವು ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ. ಕಂಪನಿಯ ಸ್ವತಂತ್ರ ನಿರ್ದೇಶಕರ ಪೈಕಿ ಕೆಲವರ ಬಗ್ಗೆ ಜನಾಂಗೀಯ ನಿಂದನೆಯ ಹಾಗೂ ಮಹಿಳೆಯೊಬ್ಬರ ಬಗ್ಗೆ ಪೂರ್ವಗ್ರಹಪೀಡಿತವಾದ ಮಾತುಗಳನ್ನು ಆಡಿದ್ದಾರೆ ಎಂಬ ಅಂಶಗಳೂ ದೂರಿನಲ್ಲಿ ಇವೆ ಎಂದು ವರದಿಯಾಗಿದೆ. ಸಿಎಫ್‌ಒ ರಾಯ್ ಅವರು ಹಣಕಾಸಿನ ಅಂಕಿ–ಅಂಶಗಳನ್ನು ಮುಚ್ಚಿಡುವಲ್ಲಿ ಪಾರೇಖ್ ಅವರ ಜೊತೆ ಕೈಜೋಡಿಸಿದ್ದಾರೆ ಎಂಬ ಆರೋಪ ಕೂಡ ದೂರಿನಲ್ಲಿ ಇದೆ. ದೂರು ನೀಡಿರುವವರು ತಾವು ‘ಇನ್ಫೊಸಿಸ್ ಕಂಪನಿಯ ನೌಕರರು’ ಎಂದೂ ಹೇಳಿಕೊಂಡಿದ್ದಾರೆ. ಉತ್ತಮ ಕಾರ್ಪೊರೇಟ್‌ ಆಡಳಿತ ಮಾದರಿಗೆ ಹೆಸರಾದ ಕಂಪನಿ ಇನ್ಫೊಸಿಸ್. ಅಷ್ಟೇ ಅಲ್ಲ, ಅತ್ಯಂತ ಪಾರದರ್ಶಕ ಆಡಳಿತ ಹೊಂದಿರುವ ಕಂಪನಿ ಎಂಬ ಹೆಗ್ಗಳಿಕೆ ಕೂಡ ಇದಕ್ಕೆ ಇದೆ. ಈ ಅನಾಮಧೇಯ ದೂರಿನ ವಿಚಾರವು ಕಂಪನಿಯ ನಿರ್ದೇಶಕರ ಮಂಡಳಿಗೆ ಎರಡು ವಾರಗಳ ಹಿಂದೆಯೇ ಗೊತ್ತಿತ್ತು. ಆ ಕುರಿತು ಅಕ್ಟೋಬರ್ 11ರಂದು ನಡೆದ ಮಂಡಳಿಯ ಸಭೆಯಲ್ಲಿ ಪ್ರಸ್ತಾಪ ಆಗಿತ್ತು. ಹೀಗಿದ್ದರೂ, ಷೇರು ಮಾರುಕಟ್ಟೆಗೆ ಈ ಬಗ್ಗೆ ಮಾಹಿತಿ ನೀಡದಿದ್ದುದು ವಿಷಾದಕರ ವಿದ್ಯಮಾನ. ದೂರಿನ ಬಗ್ಗೆ ಮಾಹಿತಿ ಇದ್ದರೂ, ಅದನ್ನು ತಿಳಿಸದೆ ಇದ್ದಿದ್ದಕ್ಕೆ ಕಾರಣ ನೀಡಿ ಎಂದು ಮುಂಬೈ ಷೇರುಪೇಟೆಯು ಇನ್ಫೊಸಿಸ್‌ಗೆ ಈಗ ಸೂಚಿಸಿದೆ. ದೂರು ಅನಾಮಧೇಯವೇ ಆಗಿದ್ದರೂ, ಅದನ್ನು ಷೇರುದಾರರಿಗೆ ತಿಳಿಸದೇ ಇದ್ದ ಕ್ರಮವು ವಿಶ್ವಾಸದ ಕೊರತೆಗೆ ನಾಂದಿ ಹಾಡುತ್ತದೆ. ಕಂಪನಿಯ ಹಿಂದಿನ ಸಿಇಒ ವಿಶಾಲ್ ಸಿಕ್ಕಾ ಅವರ ವಿರುದ್ಧವೂ ಕೆಲವು ಆರೋಪಗಳು ದಾಖಲಾಗಿದ್ದವು. ನಂತರ, ಕಂಪನಿಯ ನಿರ್ದೇಶಕರ ಮಂಡಳಿಯು ಸಿಕ್ಕಾ ಅವರನ್ನು ದೋಷಮುಕ್ತಗೊಳಿಸಿತು. ಆದರೆ, ಆಗ ಕೂಡ ಕಂಪನಿಯ ಕಾರ್ಪೊರೇಟ್‌ ಆಡಳಿತದ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಈಗಿನ ದೂರುಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆಗೆ ಕಂಪನಿ ಆದೇಶಿಸಿರುವುದು ಸ್ವಾಗತಾರ್ಹ. ತನಿಖೆಯನ್ನು ಪಾರದರ್ಶಕವಾಗಿ, ತ್ವರಿತವಾಗಿ ಪೂರ್ಣಗೊಳಿಸಬೇಕು. ದೂರಿನಲ್ಲಿ ಹೇಳಿರುವುದು ನಿಜವಾದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಿರುವುದು ಕಂಪನಿಯ ಮೇಲೆ ಷೇರುದಾರರು ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಜರೂರಾಗಿ ಆಗಬೇಕಿರುವ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT