ಜೆಎನ್‌ಯು ಪ್ರಕರಣದ ಆರೋಪಪಟ್ಟಿ ಸಹಜ ಪ್ರಕ್ರಿಯೆ ಎಂದು ಭಾವಿಸಲಾದೀತೇ?

ಶುಕ್ರವಾರ, ಮಾರ್ಚ್ 22, 2019
21 °C

ಜೆಎನ್‌ಯು ಪ್ರಕರಣದ ಆರೋಪಪಟ್ಟಿ ಸಹಜ ಪ್ರಕ್ರಿಯೆ ಎಂದು ಭಾವಿಸಲಾದೀತೇ?

Published:
Updated:
Prajavani

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ದೇಶದ್ರೋಹ ಆರೋಪದ ಪ್ರಕರಣದಲ್ಲಿ ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಮೂರು ವರ್ಷಗಳ ನಿಗೂಢ ಮೌನದ ನಂತರ ಆರೋಪಪಟ್ಟಿ ಸಲ್ಲಿಸಿರುವುದಕ್ಕೆ ಅನೇಕ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿ ನಾಯಕರಾಗಿದ್ದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ಹತ್ತು ಮಂದಿಯನ್ನು ಮುಖ್ಯ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಈ ಪ್ರಕರಣದ ತನಿಖೆ ನಡೆಸಿರುವ ದೆಹಲಿ ಪೊಲೀಸರ ವಿಶೇಷ ತಂಡದ ಈವರೆಗಿನ ತನಿಖಾ ಇತಿಹಾಸವನ್ನು ಗಮನಿಸಿದರೆ ಈ ಆರೋಪಪಟ್ಟಿಯ ಹಿಂದಿನ ಉದ್ದೇಶಗಳ ಬಗ್ಗೆ ಸಂಶಯ ಮೂಡುವುದು ಸಹಜ. ಇದೊಂದು ಸರಳವಾದ ಪ್ರಕರಣ. ಸಾರ್ವಜನಿಕ ಸಮಾರಂಭವೊಂದರಲ್ಲಿ ಕೆಲವು ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆಗಳನ್ನು ಕೂಗಿದರು ಎಂಬುದು ಆರೋಪದ ಒಟ್ಟು ಸಾರ. ಇಂಥದ್ದೊಂದು ಆರೋಪಕ್ಕೆ ಸಂಬಂಧಿಸಿದ ಆರೋಪಪಟ್ಟಿ ಸಲ್ಲಿಸುವುದಕ್ಕೆ ಮೂರು ವರ್ಷಗಳಷ್ಟು ಕಾಲಾವಧಿ ಬೇಕಾಯಿತು ಎಂಬುದೇ ತನಿಖಾ ತಂಡದ ಅದಕ್ಷತೆಗೆ ನಿದರ್ಶನ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ಆರೋಪಪಟ್ಟಿಯನ್ನು ಸಲ್ಲಿಸಿರುವುದು ಪ್ರಕರಣದ ಹಿಂದಿರುವ ರಾಜಕೀಯ ಒತ್ತಡಗಳ ಸೂಚನೆಯನ್ನು ನೀಡುತ್ತಿದೆ. ದೆಹಲಿ ಪೊಲೀಸರ ವಿಶೇಷ ತನಿಖಾ ತಂಡಕ್ಕೆ ಈಗಾಗಲೇ ಸಾಕಷ್ಟು ಕೆಟ್ಟ ಹೆಸರಿದೆ. ಸುಳ್ಳು ಸುಳ್ಳೇ ಭಯೋತ್ಪಾದನೆಯ ಆರೋಪಗಳನ್ನು ಹೊರಿಸಿ, ಕೇಸನ್ನು ದಾಖಲಿಸಿ, ಅವುಗಳನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡುವಲ್ಲಿ ಸೋಲುವುದೇ ಈ ತಂಡದ ಬಹುಮುಖ್ಯ ‘ಗುಣ’. 2016ರಲ್ಲಿ ‘ದೇಶದ್ರೋಹಿ ಘೋಷಣೆಗಳನ್ನು ಕೂಗಿದ’ ವಿಡಿಯೊಗಳು ಹೊರಬಂದು ಅವುಗಳು ನಕಲಿ ಎಂದೂ ಸಾಬೀತಾಗಿತ್ತು. ಮೂರು ವರ್ಷಗಳ ನಂತರ ಪೊಲೀಸರು ಮತ್ತೆ ಈ ಘೋಷಣೆಗಳನ್ನು ಕೂಗಿರುವುದಕ್ಕೆ ವಿಡಿಯೊ ಸಾಕ್ಷ್ಯಗಳಿವೆ, ಅವುಗಳಿಗೆ ಸಂಬಂಧಿಸಿದ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿವೆ ಎಂದು ಹೇಳುತ್ತಿದ್ದಾರೆ. ಒಂದು ನ್ಯಾಯಾಂಗ ತನಿಖೆಯಲ್ಲಿ ವಿಡಿಯೊಗಳು ನಕಲಿಯೆಂದು ಸಾಬೀತಾಗಿತ್ತು. ಆಗಲೇ ಹೊಸ ಸಾಕ್ಷ್ಯಗಳನ್ನು ಪೊಲೀಸರೇಕೆ ಮಂಡಿಸಲಿಲ್ಲ ಎಂಬ ತಾಂತ್ರಿಕ ಪ್ರಶ್ನೆಯೂ ಇಲ್ಲಿದೆ.

ಪ್ರಭುತ್ವದ ಹಿಂಸೆಗೆ ಸಂಬಂಧಿಸಿದ ಹಲವು ಹಳೆಯ ಪ್ರಶ್ನೆಗಳನ್ನು ಈ ಪ್ರಕರಣ ಮತ್ತೆ ಪ್ರಸ್ತುತವಾಗುವಂತೆ ಮಾಡುತ್ತಿದೆ. ಮೊದಲನೆಯದಾಗಿ, ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ‘ದೇಶದ್ರೋಹ’ ಎಂಬುದರ ವ್ಯಾಖ್ಯಾನವೇನು? ಆಡಳಿತಾರೂಢ ಸರ್ಕಾರದ ನೀತಿ ಅಥವಾ ಅದರ ನಿಲುವನ್ನು ಖಂಡಿಸುವುದು ದೇಶದ್ರೋಹವೇ? ಭಾರತೀಯ ದಂಡ ಸಂಹಿತೆಯ ‘ಸೆಕ್ಷನ್‌ 124ಎ’ ಎಷ್ಟು ಅಸ್ಪಷ್ಟವೆಂದರೆ, ಸರ್ಕಾರದ ವಿರುದ್ಧ ಘೋಷಣೆ ಕೂಗುವುದನ್ನೂ ಅದರ ವಿರುದ್ಧ ಬರೆಯುವುದನ್ನೂ ಇದರಡಿಯಲ್ಲಿ ತರಲು ಸಾಧ್ಯ. ಇತ್ತೀಚೆಗೆ ಅಸ್ಸಾಮಿನ ವಿದ್ವಾಂಸ ಹಿರೇನ್ ಗೊಹೈನ್, ರೈತ ಹೋರಾಟಗಾರ ಅಖಿಲ್ ಗೊಗೊಯ್ ಮತ್ತು ಪತ್ರಕರ್ತ ಮಂಜಿತ್ ಮಹಂತ ಅವರ ಮೇಲೂ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಲೋಕಸಭೆ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದೇ ಇವರು ಮಾಡಿದ ‘ಅಪರಾಧ’. ಜೆಎನ್‌ಯು ಪ್ರಕರಣದಲ್ಲಿಯೂ ಇದು ಸಂಭವಿಸುತ್ತಿದೆ. ಆರೋಪಪಟ್ಟಿಯಲ್ಲಿ ಹೆಸರಿರುವ ಕೆಲವರು ಆ ಕಾರ್ಯಕ್ರಮ ನಡೆಯುವಾಗ ಅಲ್ಲಿದ್ದರು ಎಂಬುದಕ್ಕೇ ಸರಿಯಾದ ಸಾಕ್ಷ್ಯಗಳಿಲ್ಲ. ಇನ್ನು ಅನುಮತಿಯಿಲ್ಲದೆ ಸಭೆ ಸೇರುವುದು ಒಂದು ಬಗೆಯ ಪ್ರತಿಭಟನೆ. ಈ ಪ್ರತಿಭಟನೆಯಲ್ಲಿ ಯಾರಾದರೂ ಪ್ರಚೋದನಾತ್ಮಕವಾಗಿ ಮಾತನಾಡಿದರೆ ಅವರ ವಿರುದ್ಧ ಕೇಸು ದಾಖಲಿಸುವುದು ಬೇರೆ, ದೇಶದ್ರೋಹದ ಆರೋಪ ಹೊರಿಸುವುದೇ ಬೇರೆ. ಜೆಎನ್‌ಯು ಪ್ರಕರಣದಲ್ಲಿ ಮೂರು ವರ್ಷಗಳಷ್ಟು ತಡವಾಗಿ, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಆರೋಪಪಟ್ಟಿ ಸಲ್ಲಿಸಿರುವುದನ್ನು ಸಹಜವೆಂದು ಭಾವಿಸಲು ಸಾಧ್ಯವಾಗುವುದಿಲ್ಲ. ತನ್ನ ವಿರುದ್ಧ ಮಾತನಾಡುವ ಎಲ್ಲರಿಗೂ ಆಡಳಿತಾರೂಢರು ‘ದೇಶದ್ರೋಹಿ’ಗಳೆಂಬ ಹಣೆಪಟ್ಟಿ ಹಚ್ಚಿದರೆ ಅದು ಏಕಾಧಿಪತ್ಯವೇ ಹೊರತು ಪ್ರಜಾಪ್ರಭುತ್ವವಲ್ಲ. ಕನ್ಹಯ್ಯ, ಉಮರ್ ಮುಂತಾದವರು ಈಗಾಗಲೇ ತಮ್ಮ ಪದವಿಗಳನ್ನು ಮುಗಿಸಿ ಹೊರಬಂದು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅಷ್ಟೇ ಅಲ್ಲ, ಅವರು ಆಡಳಿತಾರೂಢರ ಕಟು ಟೀಕಾಕಾರರೂ ಆಗಿದ್ದಾರೆ. ಕನ್ಹಯ್ಯ, ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಸಾಧ್ಯತೆಯೂ ಇದೆ. ಈ ಸಂದರ್ಭದಲ್ಲಿ ಹಳೆಯ ಪ್ರಕರಣವೊಂದಕ್ಕೆ ಅಸಾಧಾರಣವಾಗಿ ಜೀವ ನೀಡುತ್ತಿರುವುದರಲ್ಲಿ ರಾಜಕೀಯವಿಲ್ಲ ಎಂಬುದನ್ನು ನಂಬುವುದು ಕಷ್ಟವಾಗುತ್ತದೆ. ಪ್ರಕರಣ ಈಗ ನ್ಯಾಯಾಲಯ ತಲುಪಿರುವುದರಿಂದ ಅದಕ್ಕೆ ಪರಿಹಾರವೂ ಅಲ್ಲಿಂದಲೇ ದೊರೆಯಬೇಕಿದೆ.

ಬರಹ ಇಷ್ಟವಾಯಿತೆ?

 • 9

  Happy
 • 5

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !