ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡವನ್ನು ಸಶಕ್ತಗೊಳಿಸುವ ಸಂಕಲ್ಪ: ಸರ್ಕಾರ ಇಚ್ಛಾಶಕ್ತಿ ತೋರಲಿ

Last Updated 2 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಕನ್ನಡ ಭಾಷೆಯನ್ನು ಮತ್ತಷ್ಟು ಸಶಕ್ತಗೊಳಿಸುವ ಉದ್ದೇಶದಿಂದ ಈ ವರ್ಷದ ನವೆಂಬರ್‌ 1ರಿಂದ 2021ರ ಅಕ್ಟೋಬರ್‌ 31ರವರೆಗಿನ ಅವಧಿಯನ್ನು ‘ಕನ್ನಡ ಕಾಯಕ ವರ್ಷ’ವನ್ನಾಗಿಆಚರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. 65ನೇ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡದ ನಾಳೆಗಳ ಬಗ್ಗೆ ಹುಮ್ಮಸ್ಸಿನಿಂದ ಮಾತನಾಡಿರುವ ಅವರು, ತಂತ್ರಜ್ಞಾನ ಯುಗದಲ್ಲಿ ಕನ್ನಡದ ಬಳಕೆ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ‘ಕನ್ನಡ ಕಾಯಕ ವರ್ಷ’ದಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ. ‘ಕನ್ನಡ ಕಾಯಕ ವರ್ಷ’ದ ಈ ಘೋಷಣೆ ಆಕರ್ಷಕವಾಗಿದೆ. ಆದರೆ, ಇಂಥ ಘೋಷಣೆಗಳು ಕ್ರಿಯಾಯೋಜನೆಯ ರೂಪ ತಾಳಿ, ನವೆಂಬರ್‌ ನಂತರವೂ ಎಷ್ಟರಮಟ್ಟಿಗೆ ಮುಂದುವರಿಯುತ್ತವೆ ಎನ್ನುವುದು ಅವುಗಳ ಯಶಸ್ಸನ್ನು ನಿರ್ಧರಿಸುತ್ತದೆ. ಪ್ರತೀ ರಾಜ್ಯೋತ್ಸವದ ಸಂದರ್ಭದಲ್ಲೂ ಸರ್ಕಾರದ ವತಿಯಿಂದ ‘ಕನ್ನಡ ಕಟ್ಟುವ’ ಸಲುವಾಗಿ ಭಾವಾವೇಶದ ಮಾತುಗಳು ಹೊರಬೀಳುವುದು ಸಂಪ್ರದಾಯವೇ ಆಗಿದೆ. ಆ ಮಾತುಗಳೆಲ್ಲ ಕಾರ್ಯರೂಪಕ್ಕೆ ಬಂದಿದ್ದರೆ, ಈಗ ‘ಕನ್ನಡ ಕಾಯಕ ವರ್ಷ’ದ ಘೋಷಣೆಯ ಅಗತ್ಯವೇ ಇರುತ್ತಿರಲಿಲ್ಲ. ಈ ವಿರೋಧಾಭಾಸವು ಯಡಿಯೂರಪ್ಪನವರಿಗೂ ತಿಳಿದಿದೆ. ಆ ಕಾರಣದಿಂದಲೇ ಅವರು, ಕನ್ನಡದ ಕೆಲಸ ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷಪೂರ್ತಿ ಸಾಗುವಂತೆ ಸ್ಪಷ್ಟವಾದ ಕಾರ್ಯಸೂಚಿ ಇರುವುದು ಅಗತ್ಯ ಎಂದು ಹೇಳಿದ್ದಾರೆ. ‘ನಾಡು, ನುಡಿ, ಜಲದ ವಿಷಯದಲ್ಲಿ ಭಾವನಾತ್ಮಕತೆ ಮತ್ತು ಅಪರಿಮಿತ ಪ್ರೀತಿ ಅಗತ್ಯವಾದರೂ ಅವೆಲ್ಲವೂ ನೀರಿನಂತೆ ವ್ಯರ್ಥವಾಗಿ ಹರಿದುಹೋಗಬಾರದು. ನಮ್ಮ ಬದುಕನ್ನು ಆವರಿಸಿಕೊಂಡಿರುವ ತಂತ್ರ ಜ್ಞಾನಕ್ಕೆ ತಕ್ಕಂತೆ ನಮ್ಮ ಭಾಷೆಯನ್ನು ಅಭಿವೃದ್ಧಿ ಪಡಿಸುವುದು ಅನಿವಾರ್ಯ’ ಎನ್ನುವ ಅವರ ಮಾತುಗಳನ್ನು ಸರ್ಕಾರದ ಆತ್ಮವಿಮರ್ಶೆಯ ರೂಪದಲ್ಲೂ ನೋಡಬಹುದು.

ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್‌ಡೌನ್‌ ಅವಧಿಯಲ್ಲಿ ಸರ್ಕಾರಿ ಶಾಲೆಗಳು ಮತ್ತೆ ಜನರ ಗಮನಸೆಳೆದಿವೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ಭರಿಸಲಾಗದ ಹಲವು ಪೋಷಕರು ಸರ್ಕಾರಿ ವ್ಯವಸ್ಥೆಯತ್ತ ಮುಖ ಮಾಡಿರುವುದು ಸಹಜ. ಈ ಸಂದರ್ಭವನ್ನು ಸರ್ಕಾರಿ ಶಾಲೆಗಳನ್ನು ಬಲಪಡಿಸುವುದಕ್ಕೆ ಸರ್ಕಾರ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳ ಕೊರತೆಯೊಡ್ಡಿ ಸರ್ಕಾರಿ ಶಾಲಾ ವ್ಯವಸ್ಥೆಯು ಸ್ವಯಂ ದುರ್ಬಲಗೊಳ್ಳಲು ನಮ್ಮ ಸರ್ಕಾರವೇ ಇತ್ತೀಚಿನ ವರ್ಷಗಳಲ್ಲಿ ಅವಕಾಶ ಮಾಡಿಕೊಟ್ಟಿದೆ. ಈ ಮನೋಭಾವದಿಂದ ಹೊರಬಂದು ಕನ್ನಡ ಶಾಲೆಗಳಿಗೆ ಅಗತ್ಯವಾದ ಎಲ್ಲ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕು. ಶಿಕ್ಷಕರ ಹೆಗಲ ಮೇಲಿನ ಜವಾಬ್ದಾರಿಗಳನ್ನು ಹಗುರಗೊಳಿಸಿ ಅವರನ್ನು ಪೂರ್ಣ ಪ್ರಮಾಣದಲ್ಲಿ ಪಾಠ ಹೇಳಲಿಕ್ಕೆ ಬಿಡಬೇಕು. ಕನ್ನಡ ಶಾಲೆಗಳನ್ನು ಅವುಗಳ ಪಾಡಿಗೆ ಬಿಟ್ಟು ಕನ್ನಡವನ್ನು ಸಶಕ್ತಗೊಳಿಸುವುದು ಕಷ್ಟಸಾಧ್ಯವಾದುದರಿಂದ, ‘ಕನ್ನಡ ಕಾಯಕ ವರ್ಷ’ದಲ್ಲಿ ಸರ್ಕಾರಿ ಶಾಲೆಗಳಿಗೆ ಆದ್ಯತೆ ದೊರೆಯಬೇಕು. ‘ಸಾಂಸ್ಕೃತಿಕ ನೀತಿ’ ಜಾರಿಯತ್ತಲೂ ಗಮನಹರಿಸಬೇಕು. ಬರಗೂರು ರಾಮಚಂದ್ರಪ್ಪನವರು ಸಿದ್ಧಪಡಿಸಿದ್ದ ಸಾಂಸ್ಕೃತಿಕ ನೀತಿ ವರದಿಯನ್ನು ಜಾರಿಗೊಳಿಸುವಂತೆ 2017ರ ಅಕ್ಟೋಬರ್‌ನಲ್ಲೇ ಸರ್ಕಾರ ಸೂಚಿಸಿದ್ದರೂ ಇದುವರೆಗೂ ಅದು ಜಾರಿಗೊಂಡಿಲ್ಲ. ಮತ್ತಷ್ಟು ವಿಳಂಬ ಮಾಡದೆ ಸಾಂಸ್ಕೃತಿಕ ನೀತಿಯನ್ನು ಸರ್ಕಾರ ಕಾರ್ಯರೂಪಕ್ಕೆ ತರಬೇಕು. ಇದರಿಂದಾಗಿ, ಸರ್ಕಾರ ಬದಲಾದಂತೆ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಪದಾಧಿಕಾರಿಗಳು ಬದಲಾಗುವುದು ತಪ್ಪುತ್ತದೆ. ಅಕಾಡೆಮಿ-ಪ್ರಾಧಿಕಾರಗಳಿಗೆ ನೀಡುವ ಅನುದಾನವನ್ನು 2020–21ನೇ ಸಾಲಿನಲ್ಲಿ ಸರ್ಕಾರ ಕಡಿತಗೊಳಿಸಿದೆ. ಅನುದಾನದ ಕೊರತೆಯಿಂದಾಗಿ ಕೆಲವು ಪ್ರಶಸ್ತಿಗಳನ್ನು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ನಿಲ್ಲಿಸುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ಹೇಳಿತ್ತು. ಕನ್ನಡದ ಹಿತಾಸಕ್ತಿಗೆ ಅಪಾಯಕಾರಿಯಾದ ಇಂಥ ಚೌಕಾಸಿ ಮತ್ತು ರಾಜಿಗಳಿಂದ ಸರ್ಕಾರ ಹೊರಬರಬೇಕು. ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಸೇರಿದಂತೆ, ಹೆಚ್ಚಿನ ಉದ್ಯೋಗಾವಕಾಶಗಳು ಕನ್ನಡಿಗರಿಗೆ ದೊರೆಯುವ ದಿಸೆಯಲ್ಲಿ ಕ್ರಿಯಾಯೋಜನೆಯೊಂದನ್ನು ರೂಪಿಸಬೇಕಾಗಿದೆ. ಕರ್ನಾಟಕ–ಕನ್ನಡ ಕಟ್ಟುವ ಕೆಲಸದಲ್ಲಿ ಸ್ವಯಂಪ್ರೇರಣೆಯಿಂದ ತೊಡಗಿಕೊಂಡಿರುವ ಉದ್ಯಮ‌ ಸಂಸ್ಥೆಗಳ ನೆರವನ್ನು ಪಡೆಯುವುದು ಸಾಧ್ಯವಾದಲ್ಲಿ ‘ಕನ್ನಡ ಕಾಯಕ ವರ್ಷ’ ಮತ್ತಷ್ಟು ಪರಿಣಾಮಕಾರಿ ಆಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT