ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ‌ | ಜನಪ್ರತಿನಿಧಿಗಳ ಬಾಯಿತುರಿಕೆ ಮಾತು ಇಷ್ಟು ಲಘುವಾದರೆ ಹೇಗೆ?

Last Updated 18 ಜನವರಿ 2023, 21:13 IST
ಅಕ್ಷರ ಗಾತ್ರ

ರಾಜಕೀಯ ಎದುರಾಳಿಗಳನ್ನು ಹಳಿಯಲು ರಾಜಕಾರಣಿಗಳು ಬಳಸುತ್ತಿರುವ ಭಾಷೆ ಕೀಳು ಮಟ್ಟದ್ದಾಗಿದ್ದು, ರಾಜ್ಯದ ಸಂಸದೀಯ ವ್ಯವಸ್ಥೆಯ ನೈತಿಕ ಪತನದ ಸಂಕೇತದಂತಿದೆ. ಜನಪ್ರತಿನಿಧಿಯ ಮಾತುಗಳು ಸಾರ್ವಜನಿಕ ಸಭ್ಯತೆಯಿಂದ ಕೂಡಿರಬೇಕು ಹಾಗೂ ನಾಗರಿಕರಿಗೆ ಮಾದರಿಯಾಗಿರಬೇಕು. ಆದರೆ, ರಾಜ್ಯದ ರಾಜಕಾರಣಿಗಳು ಬೈದಾಡಿಕೊಳ್ಳಲು ಬಳಸುತ್ತಿರುವ ಭಾಷೆ ಕೊಳಕು ಅಭಿರುಚಿ ಯದ್ದಾಗಿದೆ ಹಾಗೂ ಅವರು ಪ್ರತಿನಿಧಿಸುವ ಸ್ಥಾನಗಳ ಮರ್ಯಾದೆ ಕಳೆಯುವಂತಿದೆ. ‘ಹೊಟ್ಟೆಪಾಡಿಗೆ ಮೈಮಾರಿಕೊಂಡ ಮಹಿಳೆಗೆ ವೇಶ್ಯೆ ಎಂದು ಕರೆಯುತ್ತೇವೆ.

ತಮ್ಮನ್ನು ತಾವು ಮಾರಿಕೊಂಡು ಪಕ್ಷಾಂತರ ಮಾಡಿದ ಶಾಸಕರನ್ನು ಏನೆಂದು ಕರೆಯುತ್ತೀರಿ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಸಾರ್ವಜನಿಕ ಸಮಾರಂಭವೊಂದರಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಚಿವರಾದ ಬಿ.ಸಿ. ಪಾಟೀಲ ಹಾಗೂ ಮುನಿರತ್ನ ಅವರೂ ಹಗುರ ಮಾತುಗಳನ್ನು ಆಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ‘ಕ್ರಿಯೆ ಮತ್ತು ಪ್ರತಿಕ್ರಿಯೆ’ಯ ಪರಿಕಲ್ಪನೆಯ ರೂಪದಲ್ಲಿ ನೋಡಬಹುದಾದ ಈ ಬೈಗುಳದ ಪೈಪೋಟಿಯಲ್ಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮೂವರೂ ನಾಲಗೆಯನ್ನು ಸಡಿಲಬಿಟ್ಟಿದ್ದಾರೆ. ಸಾರ್ವಜನಿಕವಾಗಿ ತಮ್ಮ ವ್ಯಕ್ತಿತ್ವವನ್ನು ಬೆತ್ತಲು ಮಾಡಿಕೊಳ್ಳುವುದರ ಜೊತೆಗೆ, ವೇಶ್ಯಾವೃತ್ತಿಯಲ್ಲಿ ಇರುವವರಿಗೂ ಅವಮಾನ ಎಸಗಿದ್ದಾರೆ.

ಬಾಯಿತುರಿಕೆಯ ಈ ಭಾಷೆ ನಮ್ಮ ರಾಜಕಾರಣಿಗಳ ಲಿಂಗಸಂವೇದನೆ ಜಡ್ಡು ಗಟ್ಟಿರುವುದನ್ನು ಸೂಚಿಸುವಂತಿದೆ. ವೇಶ್ಯಾವೃತ್ತಿಯ ಹಿನ್ನೆಲೆಯಲ್ಲಿ ಇರಬಹುದಾದ ಬಡತನ, ಹಸಿವು, ಅಸಹಾಯಕತೆ ಹಾಗೂ ದೇಹಶೋಷಣೆಯ ಸಾಧ್ಯತೆಗಳ ಅರಿವು ಈ ನಾಯಕರಿಗೆ ಇದ್ದಂತಿಲ್ಲ. ಹೆಣ್ಣನ್ನು ಭೋಗದ ಸರಕನ್ನಾಗಿ ನೋಡುವ ಅಧಿಕಾರ ರಾಜಕಾರಣದ ನಿರ್ಲಜ್ಜೆಯನ್ನು ಇಂಥ ಮಾತುಗಳ ಹಿಂದೆ ಗುರುತಿಸಬಹುದು. ಹರಿಪ್ರಸಾದ್‌ ಅವರು ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವುದರ ಬಗ್ಗೆ ಹೀನಾಯವಾಗಿ ಮಾತನಾಡಿರುವ ಬಿ.ಸಿ. ಪಾಟೀಲ, ‘ಹಿಂಬಾಗಿಲಿನಿಂದ ಬಂದ ಇವರನ್ನು ಪಿಂಪ್ ಎನ್ನಬಹುದೇ’ ಎಂದು ಪ್ರಶ್ನಿಸಿದ್ದಾರೆ. ಅವರ ಮಾತು ಅಸೂಕ್ಷ್ಮವಾದುದು ಹಾಗೂ ವಿಧಾನ ಪರಿಷತ್ತಿನ ಘನತೆಯನ್ನು ಅವಮಾನಿಸುವಂತಹದ್ದು. ಸಚಿವರೇ ಹೀಗೆ ಲಘುವಾಗಿ ಮಾತನಾಡುವುದಾದರೆ, ಜನ ಸಾಮಾನ್ಯರಿಗೆ ಸದನದ ಬಗ್ಗೆ, ಸದನದ ಸದಸ್ಯರ ಬಗ್ಗೆ ಗೌರವ ಉಳಿಯುವುದು ಹೇಗೆ ಸಾಧ್ಯ? ಮತದಾರರು ತಮ್ಮ ಬಗ್ಗೆ ಏನೆಂದುಕೊಳ್ಳಬಹುದು ಎಂಬ ಕನಿಷ್ಠ ಅಳುಕು ಕೂಡ ಜನಪ್ರತಿನಿಧಿಗಳನ್ನು ಕಾಡುವುದಿಲ್ಲವೇ?

ಸಚಿವ ಮುರುಗೇಶ ನಿರಾಣಿ ಹಾಗೂ ಆಡಳಿತ ಪಕ್ಷಕ್ಕೇ ಸೇರಿದವರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಜಗಳ ಬೈಗುಳದ ಹಂತ ದಾಟಿ, ತಾಕತ್ತು ಪ್ರದರ್ಶಿಸುವ ಹಾಗೂ ಪರಸ್ಪರ ಬೆದರಿಸುವ ಮಟ್ಟಕ್ಕೆ ಹೋಗಿದೆ. ನಾಲಗೆ ಕತ್ತರಿಸುವುದಾಗಿ ಸಚಿವರೊಬ್ಬರು ಹೇಳುವುದಾದರೆ, ಅವರಿಗೆ ಈ ನೆಲದ ಕಾನೂನಿನ ಬಗ್ಗೆ ಇರುವ ಬದ್ಧತೆ–ಗೌರವವನ್ನು ಸಂದೇಹಿಸಬೇಕಾಗುತ್ತದೆ. ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯ ಹೆಸರನ್ನು ಬೈಗುಳದ ರೂಪದಲ್ಲಿ ಬಳಸುವುದಕ್ಕೂ ಜನಪ್ರತಿನಿಧಿಗಳು ಹೇಸುತ್ತಿಲ್ಲ. ರಾಜಕಾರಣಿಗಳು ದುಡುಕಿ ಮಾತನಾಡುವುದು ಹೊಸತೇನೂ ಅಲ್ಲ. ಆದರೆ, ಸಾರ್ವಜನಿಕ ಸಭ್ಯತೆಯನ್ನು ಲೆಕ್ಕಿಸದಂತೆ ಮಾತನಾಡುವ ಚಾಳಿ ಹೆಚ್ಚಾಗುತ್ತಿರುವುದು ಕಳವಳದ ಸಂಗತಿ. ‘ಮಹಾತ್ಮ ಗಾಂಧಿ ಅವರ ಪಾದದ ದೂಳಿಗೆ ಜವಾಹರಲಾಲ್‌ ನೆಹರೂ ಅವರು ಸಮಾನರಾ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಪ್ರಶ್ನಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾದದ ದೂಳಿಗೂ ಸಿದ್ದರಾಮಯ್ಯ ಸಮಾನರಲ್ಲ ಎಂದು ಹೇಳಿದ್ದ ಬಿ.ಎಸ್‌. ಯಡಿಯೂರಪ್ಪ, ರಾಹುಲ್‌ ಗಾಂಧಿ ಅವರನ್ನು ಬಚ್ಚಾ ಎಂದೂ ಕರೆದಿದ್ದರು. ರಾಷ್ಟ್ರನಾಯಕರನ್ನೇ ಪಾದದ ದೂಳು ಹಾಗೂ ಬಚ್ಚಾ ರೂಪದಲ್ಲಿ ನೋಡುವವರ ಕಣ್ಣಿಗೆ ಜನಸಾಮಾನ್ಯರು ಹೇಗೆ ಕಾಣಿಸಬಹುದು? ಕೊರೊನಾ ಬಾಧೆಯ ಸಂದರ್ಭದಲ್ಲಿ, ಪಡಿತರ ಅಕ್ಕಿ ಕಡಿತಗೊಳಿಸಿರುವ ಸರ್ಕಾರದ ನಿರ್ಧಾರದಿಂದ ಆತಂಕಗೊಂಡು ದೂರವಾಣಿ ಕರೆ ಮಾಡಿದ್ದ ರೈತರೊಬ್ಬರು, ‘ನಾವು ಉಪವಾಸ ಇರೋದಾ ಅಥವಾ ಸತ್ತುಹೋಗೋದಾ’ ಎಂದು ಕೇಳಿದಾಗ, ‘ಸತ್ತುಹೋದರೆ ಒಳ್ಳೆಯದು’ ಎಂದು, ಆಹಾರ ಸಚಿವರಾಗಿದ್ದ ಉಮೇಶ ಕತ್ತಿ ಅವರು ಪ್ರತಿಕ್ರಿಯಿಸಿದ್ದು ವರದಿಯಾಗಿತ್ತು.

ಇಂಥ ನಡವಳಿಕೆಗಳ ಮೂಲಕ ಜನರೆದುರು ನಗೆಪಾಟಲಿಗೀಡಾಗುತ್ತಿದ್ದೇವೆ ಎನ್ನುವ ಪ್ರಜ್ಞೆ ಯಾರಿಗೂ ಇದ್ದಂತಿಲ್ಲ. ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪ ಅಸಹಜವೇನಲ್ಲ. ಆದರೆ, ಈ ಮಾತುಕತೆ ಮತ್ತು ವಿರೋಧವು ತಾತ್ವಿಕ ನೆಲೆಗಟ್ಟಿನಲ್ಲಿರಬೇಕೇ ವಿನಾ ಗಂಟಲಬಲ ಅಥವಾ ದೇಹಬಲವನ್ನು ಅವಲಂಬಿಸಬಾರದು. ಸಚಿವರು, ಶಾಸಕರೇ ಕೊಳಕು ಮಾತುಗಳನ್ನಾಡಲು ನಿಂತರೆ, ಅವರ ಹಿಂಬಾಲಕರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಲಗಾಮು ಇಲ್ಲದಂತಾಗುತ್ತದೆ. ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ರಾಜಕಾರಣಿಗಳ ಮಾತಿನ ವೀರಾವೇಶ ಹಾಗೂ ಕೆಸರೆರಚಾಟ ಏರುಮುಖ ದಲ್ಲಿದೆ. ನಾಲಗೆ ಹರಿಯಬಿಟ್ಟು ಮಾತನಾಡುವ ಮೂಲಕ ತಮ್ಮ ರಾಜಕೀಯ ಅಸ್ತಿತ್ವ ತೋರಿಸಲು ಯತ್ನಿಸುತ್ತಿರುವ ರಾಜಕಾರಣಿಗಳೂ ಇದ್ದಾರೆ. ನಾಲಗೆಯ ಮೇಲೆ ನಿಯಂತ್ರಣವಿಲ್ಲದ ಹಾಗೂ ಮಾತಿನ ಸೂಕ್ಷ್ಮ ಅರಿಯದ ಈ ಜನ, ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣದ ಪಠ್ಯ ಗೊತ್ತುಪಡಿಸಲು ವಿಪರೀತ ಉತ್ಸಾಹ ವ್ಯಕ್ತಪಡಿಸುತ್ತಿರುವುದು ತಮಾಷೆಯಾಗಿದೆ. ನೈತಿಕ ಶಿಕ್ಷಣದ ತುರ್ತು ಇರುವುದು ಯಾರಿಗೆ ಎನ್ನುವ ಆತ್ಮಾವಲೋಕನ ಈಗ ಎಲ್ಲ ರಾಜಕೀಯ ಪಕ್ಷಗಳಿಗೂ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT