ಮಳೆಗಾಲ ಮುಗಿಯುವ ಮೊದಲೇ ರಾಜ್ಯದ ಬಹುಭಾಗವನ್ನು ಬರ ವ್ಯಾಪಿಸಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದೆಡೆ ಡೆಂಗಿ ಜ್ವರದ ಪ್ರಕರಣಗಳು ಏರುತ್ತಲೇ ಇವೆ. ವಿದ್ಯುತ್ ಕೊರತೆ ತೀವ್ರವಾಗುತ್ತಿದೆ. ಆಹಾರಧಾನ್ಯಗಳ ಬೆಲೆ ಗಗನಮುಖಿಯಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ನೂರು ದಿನ ತುಂಬುವಷ್ಟರಲ್ಲೇ ಪರಿತಾಪಗಳ ಸರಮಾಲೆ ಆಳುವವರ ಕೊರಳಿಗೆ ಸುತ್ತಿಕೊಂಡಿದೆ. ಇಂತಹ ಸಂಕಷ್ಟದ ಹೊತ್ತಿನಲ್ಲಿ ಆಡಳಿತಯಂತ್ರ ಎಚ್ಚರಗೆಡದೆ, ಜನಪರವಾಗಿ ಆಲೋಚಿಸಿ ಕಾರ್ಯಪ್ರವೃತ್ತವಾದರಷ್ಟೇ ಜನರು ನೆಮ್ಮದಿ ಕಾಣಲು ಸಾಧ್ಯ. ವಿಧಾನಸಭೆ ಚುನಾವಣೆಗೆ ಮೊದಲು ಸಲ್ಲದ ವಿವಾದಗಳೇ ಆಡಳಿತ ಹಳಿ ತಪ್ಪುವಂತೆ ಮಾಡಿದ್ದವು. ಈಗ ಆಡಳಿತವನ್ನು ಸರಿದಾರಿಗೆ ತಂದು, ಜನರ ಬವಣೆಗಳ ನಿವಾರಣೆಗೆ ಸರ್ಕಾರ ಸ್ಪಂದಿಸುತ್ತದೆ ಎಂಬ ಭರವಸೆ ಮೂಡಿಸುವ ಕೆಲಸ ಆಗಬೇಕಿದೆ. ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಆಡಳಿತಗಳ ಜತೆ ಸತತವಾಗಿ ಸಭೆ ನಡೆಸುತ್ತಿದ್ದಾರೆ. ನೌಕರಶಾಹಿಯ ತಪ್ಪುಗಳನ್ನು ಗುರುತಿಸಿ, ಸರಿಪಡಿಸಿಕೊಳ್ಳುವಂತೆ ಕಾಲಕಾಲಕ್ಕೆ ನಿರ್ದೇಶನ ನೀಡುವುದು ಅಗತ್ಯ. ಆಡಳಿತಯಂತ್ರ ಜಡ್ಡುಗಟ್ಟಿದ್ದರೆ ಅದಕ್ಕೆ ಅಧಿಕಾರಿಗಳಷ್ಟೇ ಕಾರಣರಲ್ಲ; ಅದರಲ್ಲಿ ಜನಪ್ರತಿನಿಧಿಗಳ ಪಾತ್ರವೂ ಇರುತ್ತದೆ. ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಬಾರದು. ನಿಮ್ಮ ನಿರ್ಲಕ್ಷ್ಯ ಮತ್ತು ಉಡಾಫೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ಸುಮ್ಮನೆ ಕೂರುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗೆಯ ಎಚ್ಚರಿಕೆಯ ಮಾತುಗಳು ಈಗ ಸವಕಲಾಗಿವೆ. ಆಡಳಿತವನ್ನು ಬರೀ ಮಾತು ಚುರುಕುಗೊಳಿಸಲಾರದು. ನಿರಂತರ ನಿಗಾ ಮತ್ತು ಕಟ್ಟುನಿಟ್ಟಿನ ಕ್ರಮಗಳು ಬೇಕು. ಉಡಾಫೆ ಧೋರಣೆಯನ್ನು ಎಳ್ಳಷ್ಟೂ ಸಹಿಸುವುದಿಲ್ಲ ಎಂಬ ಗಟ್ಟಿ ಸಂದೇಶ ರವಾನೆಯಾಗಬೇಕು.
ರಾಜ್ಯದ 195 ತಾಲ್ಲೂಕುಗಳು ಬರದ ದವಡೆಗೆ ಸಿಲುಕಿವೆ. ಕೆಲವೆಡೆ ಬಿತ್ತನೆಯೇ ಆಗಿಲ್ಲ. ಇನ್ನು ಹಲವೆಡೆ ಮೊಳಕೆಯೊಡೆದ ಸಸಿ ಮುರುಟಿದೆ. ಸಾಲ ಮಾಡಿ ತಂದಿದ್ದ ಬಿತ್ತನೆ ಬೀಜ, ಗೊಬ್ಬರ ಮಣ್ಣುಪಾಲಾಗಿವೆ. ಕೃಷಿಕರು ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಎದುರಾಗುವ ಸ್ಥಿತಿ ತಲೆದೋರುವ ಅಪಾಯ ಗೋಚರಿಸುತ್ತಿದೆ. ಅಣೆಕಟ್ಟುಗಳು ಇನ್ನಾದರೂ ತುಂಬದಿದ್ದರೆ ವಿದ್ಯುತ್ ಕೊರತೆ ಉಲ್ಬಣಿಸಲಿದೆ. ಇವೆಲ್ಲವನ್ನೂ ನಿಭಾಯಿಸಬೇಕಾದರೆ ಅಧಿಕಾರಿಗಳು ಸದಾ ಜಾಗೃತ ಸ್ಥಿತಿಯಲ್ಲಿರುವುದು ಅಗತ್ಯ. ಅವರು ಹಾಗೆ ಇರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸಚಿವ ಸಂಪುಟದ ಮೇಲಿದೆ. ಜಿಲ್ಲಾ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮಲೆಕ್ಕಿಗರಿಂದ ಜಿಲ್ಲಾಧಿಕಾರಿವರೆಗೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿವರೆಗೆ ನಾನಾ ಹಂತಗಳ ಅಧಿಕಾರಿಗಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೂ ಹೊಣೆ ವಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ನಿಯಮಿತವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಕೆಲವು ಜಿಲ್ಲೆಗಳಲ್ಲಿ ನಿಯಮಿತವಾಗಿ ಸಭೆ ನಡೆದಿಲ್ಲ ಎಂಬ ದೂರುಗಳಿವೆ. ಈ ಲೋಪಕ್ಕೆ ಸಂಬಂಧಿಸಿದ ಉಸ್ತುವಾರಿ ಸಚಿವರೇ ಹೊಣೆ. ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳೀಯ ಹಂತದಲ್ಲೇ ಕಾಲಮಿತಿಯಲ್ಲಿ ಪರಿಹಾರ ದೊರೆಯಬೇಕು. ಜನರು ಅಂತಹ ಸಮಸ್ಯೆಗಳನ್ನು ಹೊತ್ತು ಮುಖ್ಯಮಂತ್ರಿ ಬಳಿ ಬರುವುದು ಏನನ್ನು ಸೂಚಿಸುತ್ತದೆ? ಕರ್ನಾಟಕವು ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ಎಲ್ಲ ಮಾಹಿತಿಗಳೂ ಬೆರಳತುದಿಯಲ್ಲೇ ಸಿಗುವಂತಹ ಕಾಲವಿದು. ಆದರೆ ಅದರ ಸದ್ಬಳಕೆ ಆಗುತ್ತಿಲ್ಲ. ಇ–ಆಡಳಿತದ ಅನುಷ್ಠಾನ ಕಡತದಲ್ಲೇ ಉಳಿದರೆ ಸಾಲದು. ಪಡಿತರ ಚೀಟಿ, ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದ ಮನವಿಗಳು ಮಂತ್ರಿ, ಮುಖ್ಯಮಂತ್ರಿವರೆಗೂ ಬರುವುದು ಜಿಲ್ಲಾ ಆಡಳಿತಗಳ ನಿಷ್ಕ್ರಿಯತೆಯನ್ನು ಎತ್ತಿತೋರಿಸುತ್ತದೆ. ನೌಕರಶಾಹಿಯ ಕಾರ್ಯನಿರ್ವಹಣೆ ಮೇಲೆ ತೀವ್ರ ನಿಗಾ ಇಟ್ಟು, ಆಡಳಿತವನ್ನು ಜನಸ್ನೇಹಿಯಾಗಿಸಬೇಕಿದೆ. ಜನರ ಅಹವಾಲುಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿದರೆ ಆಡಳಿತ ತಾನಾಗಿಯೇ ಸರಿದಾರಿಗೆ ಬರುತ್ತದೆ. ಸಚಿವರು, ಮುಖ್ಯಮಂತ್ರಿ ಈ ದಿಸೆಯಲ್ಲಿ ದೃಢವಾದ ನಿಲುವು ತಳೆಯಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.