ಸೋಮವಾರ, ಮೇ 17, 2021
30 °C

ಜೋಪಡಿ ನೆಲಸಮ ಅಮಾನವೀಯ ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಬೆಳ್ಳಂದೂರು ಹಾಗೂ ಕರಿಯಮ್ಮನ ಅಗ್ರಹಾರ ಪ್ರದೇಶಗಳಲ್ಲಿ ಬಡವರು ಕಟ್ಟಿಕೊಂಡಿದ್ದ ಜೋಪಡಿಗಳನ್ನು ಬಾಂಗ್ಲಾ ವಲಸಿಗರ ವಿರುದ್ಧದ ಕಾರ್ಯಾಚರಣೆ ನೆಪದಲ್ಲಿ ನೆಲಸಮಗೊಳಿಸಲಾಗಿದೆ. ಸಾಕ್ಷ್ಯಾಧಾರಗಳಿಲ್ಲದೆ, ವಲಸಿಗರ ಕುರಿತ ದೂರುಗಳಿಗೆ ಸಂಬಂಧಿಸಿದಂತೆ ಯಾವ ತನಿಖೆಯನ್ನೂ ನಡೆಸದೆ, ವಾಟ್ಸ್‌ಆ್ಯಪ್‌ನಲ್ಲಿ ಹರಿಯಬಿಟ್ಟ ಒಂದು ವಿಡಿಯೊ ಆಧರಿಸಿ ಸೂರು ಕೆಡವಿದ ಅಧಿಕಾರಿಗಳ ಕ್ರಮ ಅಕ್ಷಮ್ಯ.

ಕಾರ್ಯಾಚರಣೆ ಬಳಿಕ ಆಗಿದ್ದೇನು? ಒಬ್ಬನೇ ಒಬ್ಬ ಬಾಂಗ್ಲಾ ಅಕ್ರಮ ವಲಸಿಗನೂ ಅಲ್ಲಿ ಅಂದು ಬಂಧನಕ್ಕೆ ಒಳಗಾಗಲಿಲ್ಲ. ಅದರ ಬದಲು ಸಾವಿರಾರು ಬಡವರು ಬೀದಿಪಾಲಾದರು. ಅವರೆಲ್ಲ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ, ಈಶಾನ್ಯ ರಾಜ್ಯಗಳಿಂದ ಅನ್ನ ಅರಸಿ ಬಂದವರು. ಪ್ರವಾಹದಂತಹ ವಿಕೋಪದಿಂದ ಕೊಚ್ಚಿ ಹೋಗಿದ್ದ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಬಂದವರ ಮೇಲೆ ನಡೆಸಿದ ಗದಾಪ್ರಹಾರ ಇದು.

ದುಡಿಯಲು ಬಂದ ಈ ಜನ, ಸರ್ಕಾರಿ ಭೂಮಿಯಲ್ಲಿ ಗುಡಿಸಲು ಕಟ್ಟಿಕೊಂಡಿರಲಿಲ್ಲ. ಅವರ ಸೂರು ಇದ್ದುದು ಖಾಸಗಿ ನಿವೇಶನಗಳಲ್ಲಿ. ದಿಢೀರ್‌ ಕಾರ್ಯಾಚರಣೆ ನಡೆಸುವ ಮುನ್ನ ಅಲ್ಲಿನ ನಿವಾಸಿಗಳಿಗೆ ಒಕ್ಕಲೆಬ್ಬಿಸುವ ಅಥವಾ ಜೋಪಡಿಗಳನ್ನು ತೆರವುಗೊಳಿಸುವ ಕುರಿತು ಒಂದು ನೋಟಿಸ್‌ ಸಹ ನೀಡಿರಲಿಲ್ಲ. ತೆರವು ಕಾರ್ಯಾಚರಣೆಗೆ ಮೇಲಧಿಕಾರಿಗಳಿಂದ ಯಾವುದೇ ಆದೇಶ ಸಹ ಇರಲಿಲ್ಲ ಎಂದು ವರದಿಯಾಗಿದೆ.

ಬಡವರನ್ನು ಒಕ್ಕಲೆಬ್ಬಿಸಲು ಅತಿ ಉತ್ಸಾಹ ತೋರಿದ ಬಿಬಿಎಂಪಿ ಅಧಿಕಾರಿಗಳೇ ಇಲ್ಲಿ ಮೊದಲ ತಪ್ಪಿತಸ್ಥರು. ಒಂದುವೇಳೆ ಅಲ್ಲಿ ಅಕ್ರಮ ವಲಸಿಗರು ಇದ್ದಿದ್ದರೂ ಅವರನ್ನು ತೆರವುಗೊಳಿಸುವ ಪ್ರಕ್ರಿಯೆಯು ಕಾನೂನಿಗೆ ಅನುಗುಣವಾಗಿ ನಡೆಯಬೇಕೇ ವಿನಾ ಅಧಿಕಾರಿಗಳ ಇಚ್ಛೆಗೆ ಅನುಸಾರವಾಗಿ ಅಲ್ಲ. ವಿನಾಕಾರಣ ಗುಡಿಸಲು ನೆಲಸಮಗೊಳಿಸಿದ್ದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ.

ಬೆಳ್ಳಂದೂರು ಪ್ರದೇಶವು ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಅಲ್ಲಿನ ಶಾಸಕ ಅರವಿಂದ ಲಿಂಬಾವಳಿ ಅವರು ಒಂದು ವಿಡಿಯೊವನ್ನು ಟ್ವೀಟ್‌ ಮಾಡಿದ್ದಲ್ಲದೆ ‘ವಲಸಿಗರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ’ ಎಂದು ದೂರಿದ್ದೇ ಅಧಿಕಾರಿಗಳು ತರಾತುರಿಯಲ್ಲಿ ಕ್ರಮ ಜರುಗಿಸಲು ಕಾರಣ ಎನ್ನಲಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೂ ಅಕ್ರಮ ವಲಸಿಗರು ಪತ್ತೆ ಆಗಿಲ್ಲ. ಅಲ್ಲಿನ ನಿವಾಸಿಗಳೆಲ್ಲ ಆಧಾರ್‌ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದರು. ಸೂಕ್ತ ದಾಖಲೆಗಳನ್ನು ತೋರಿಸಿದ ನಂತರವೂ ಯಾರದ್ದೋ ‘ಮೌಖಿಕ ಆದೇಶ’ಕ್ಕೆ ಅನುಗುಣವಾಗಿ ಅಧಿಕಾರಿಗಳು ನಡೆದುಕೊಂಡರು ಎಂಬ ವರದಿ ಇದೆ. ಅವರ ಈ ನಡೆ ಅತ್ಯಂತ ಅಮಾನವೀಯ. ಅಲ್ಲಿನ ನಿವಾಸಿಗಳು ಅಕ್ರಮ ವಲಸಿಗರೇ ಆಗಿದ್ದರೆ ಅವರನ್ನು ಗಡಿಪಾರು ಮಾಡಲು ಕ್ರಮ ಜರುಗಿಸಬಹುದಿತ್ತು, ಅಲ್ಲವೇ? ಜೋಪಡಿಗಳನ್ನಷ್ಟೇ ಕೆಡವಿಹೋಗಿದ್ದು ಏಕೆ? ನೆಲಸಮಗೊಳಿಸುವ ಈ ಕ್ರಮದ ಕುರಿತು ಬಿಬಿಎಂಪಿ ಆಯುಕ್ತರಿಗೆ ಯಾವುದೇ ಮಾಹಿತಿ ನೀಡದೆ ಅವರನ್ನು ಕತ್ತಲಲ್ಲಿ ಇರಿಸಿದ್ದು ವಿಚಿತ್ರ ಮತ್ತು ಪ್ರಶ್ನಾರ್ಹ ಕೂಡ.

ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಿರುವುದು ರುಜುವಾತು ಆಗಿದ್ದರೂ ಆ ಅಕ್ರಮ ಎಸಗಿದವರು ಪ್ರಭಾವಿಗಳು ಎನ್ನುವ ಕಾರಣಕ್ಕೆ ಕ್ರಮ ಕೈಗೊಳ್ಳಲು ಹಿಂಜರಿಯುವ ಇದೇ ಅಧಿಕಾರಿಗಳು, ಬಡವರ ಮೇಲೆ ಮಾತ್ರ ಅಟಾಟೋಪ ತೋರಿಸುತ್ತಾರೆ. ಜೋಪಡಿಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ತಪ್ಪು ಎಸಗಿರುವುದು ಗೋಡೆ ಮೇಲಿನ ಬರಹದಷ್ಟೇ ಸ್ಪಷ್ಟ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸರ್ಕಾರ ಮುಂದಾಗಬೇಕು.

ಯಾರದ್ದೋ ಹಿತಾಸಕ್ತಿ ಕಾಪಾಡುವ ಧಾವಂತದಲ್ಲಿ ಕಾನೂನು–ಕಟ್ಟಲೆಗಳನ್ನು ಗಾಳಿಗೆ ತೂರುವ ಪ್ರವೃತ್ತಿಯನ್ನು ಚಿವುಟಿಹಾಕಬೇಕು. ಇಲ್ಲದಿದ್ದರೆ ಯಾರು, ಏನು ಬೇಕಾದರೂ ಮಾಡಬಹುದು ಎಂಬ ಅರಾಜಕ ಸ್ಥಿತಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಇನ್ನಷ್ಟು... 

ಬಾಂಗ್ಲಾ ನೆವ: ಅನ್ನ ಅರಸಿ ಬಂದವರ ಸೂರು ನೆಲಸಮ

ಅವಶೇಷಗಳ ಎದುರು ಕಾರ್ಮಿಕರ ಕಣ್ಣೀರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು