ಶುಕ್ರವಾರ, ಆಗಸ್ಟ್ 12, 2022
20 °C

ಸಂಪುಟದಲ್ಲಿ ಸಮನ್ವಯದ ಕೊರತೆಆಡಳಿತದ ಮೇಲೆ ಪ್ರತಿಕೂಲ ಪರಿಣಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕೆಲವು ನಿರ್ಧಾರಗಳ ಬಗೆಗಿನ ಅಸಮಾಧಾನವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ‘ಮುಖ್ಯಮಂತ್ರಿಯವರು ನನ್ನ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಗ್ರಾಮೀಣ ಸುಮಾರ್ಗ ಯೋಜನೆ ಸ್ಥಗಿತಗೊಳ್ಳುವಂತೆ ಮಾಡಿದ್ದಾರೆ. ಇಲಾಖೆಯ ಸಚಿವನಾದ ನನ್ನ ಗಮನಕ್ಕೆ ತಾರದೆ 81 ವಿಧಾನಸಭಾ ಕ್ಷೇತ್ರಗಳಿಗೆ ₹775 ಕೋಟಿ ಅನುದಾನ ನೀಡಿದ್ದಾರೆ. ಬಜೆಟ್‌ನಲ್ಲಿ ಪ್ರಕಟಿಸಿದ ಕೆಲವು ಯೋಜನೆಗಳಿಗೂ ಅನುದಾನ ಬಿಡುಗಡೆ ಮಾಡಿಲ್ಲ’ ಎಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡಿದ್ದಾರೆ. ಈ ಕುರಿತು ರಾಜ್ಯಪಾಲರಿಗೂ ಅವರು ಲಿಖಿತ ದೂರು ನೀಡಿದ್ದಾರೆ ಎಂಬ ವಿದ್ಯಮಾನವು ರಾಜ್ಯ ಸರ್ಕಾರವು ಸುಲಲಿತವಾಗಿ ನಡೆಯುತ್ತಿಲ್ಲ ಎಂಬುದರ ಸೂಚನೆ ಎಂದೇ ಭಾವಿಸಬೇಕಾಗುತ್ತದೆ. ಬಿಜೆಪಿ ವರಿಷ್ಠರಿಗೂ ದೂರು ನೀಡಿದ್ದಾಗಿ ಈಶ್ವರಪ್ಪ ಹೇಳಿದ್ದಾರೆ. ಇಂತಹ ಬೆಳವಣಿಗೆಯು ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಬೇರೆಯದೇ ಸಂದೇಶ ರವಾನಿಸುತ್ತದೆ ಎಂಬುದನ್ನು ಅನುಭವಿ ರಾಜಕಾರಣಿಗಳಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ಅರ್ಥ ಮಾಡಿಕೊಂಡಿಲ್ಲ ಎಂದು ಭಾವಿಸಲಾಗದು. ‘ಶಿಸ್ತಿನ ಪಕ್ಷ’ ಎಂದು ಬಿಂಬಿಸಿ
ಕೊಳ್ಳುತ್ತಿರುವ ಬಿಜೆಪಿಯಲ್ಲಿ ಈ ರೀತಿಯ ಬೆಳವಣಿಗೆಗೆ ಬೇರೇನೊ ಕಾರಣ ಇದೆ ಎಂಬ ಅನು ಮಾನ ಮೂಡಿದರೆ ಅದನ್ನು ತಪ್ಪು ಎನ್ನಲಾಗದು. ಏಕೆಂದರೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಹಳ ಸಮಯದಿಂದ ಯಡಿಯೂರಪ್ಪ ಅವರ ಮೇಲೆ ಹರಿಹಾಯುತ್ತಲೇ ಇದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂಬ ಹೇಳಿಕೆಯು ಪಕ್ಷದಿಂದ ಬಂದಿದೆಯೇ ಹೊರತು ಯಾವುದೇ ಕ್ರಮ ಈವರೆಗೆ ಆಗಿಲ್ಲ. ಈಶ್ವರಪ್ಪನವರ ಪ್ರಕರಣದಲ್ಲಿಯೂ ಯತ್ನಾಳ ಅವರು ಯಡಿಯೂರಪ್ಪ ವಿರುದ್ಧ ನಿಂತಿದ್ದಾರೆ. ‘ಈಶ್ವರಪ್ಪ ನಡೆ ಸರಿಯಲ್ಲ’ ಎಂದು ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಕೆಲವು ಸಚಿವರು ಹೇಳಿದ್ದಾರೆ. ರಾಜ್ಯಪಾಲರಿಗೆ ಈಶ್ವರಪ್ಪ ಬಹಿರಂಗ ಪತ್ರ ಬರೆಯಬಾರದಿತ್ತು ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯಪಾಲರಿಗೆ ದೂರು ಸಲ್ಲಿಸಿದಾಕ್ಷಣ ಪವಾಡವೇನೂ ಆಗದು ಎಂಬುದು ಈಶ್ವರಪ್ಪನವರಿಗೆ ಗೊತ್ತಿಲ್ಲದ್ದಲ್ಲ. ಇವನ್ನೆಲ್ಲ ಗಮನಿಸಿದರೆ, ವಿಷಯವು ಹೊರಗೆ ಕಾಣುವಷ್ಟು ಸರಳವಾಗಿ ಇರಲಿಕ್ಕಿಲ್ಲ ಎಂದು ಅರ್ಥವಾಗುತ್ತದೆ. ಇಡೀ ಪ್ರಸಂಗದ ಹಿಂದೆ ರಾಜಕೀಯದ ಹತ್ತು ಹಲವು ಒಳಸುಳಿಗಳು ಇದ್ದಿರಬಹುದು.

ಮುಖ್ಯಮಂತ್ರಿ ಮತ್ತು ಸಚಿವರ ನಡುವೆ ತಾಳಮೇಳ ಇಲ್ಲ ಎಂಬುದು ಸರ್ಕಾರವನ್ನು ದುರ್ಬಲ ಗೊಳಿಸುತ್ತದೆ. ಇದು ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸಚಿವ ಸಂಪುಟದ ಸದಸ್ಯರು ಪರಸ್ಪರ ಕಚ್ಚಾಡುತ್ತಿದ್ದರೆ ಆಡಳಿತ ಯಂತ್ರವು ಹಳಿ ತಪ್ಪುತ್ತದೆ, ಅಧಿಕಾರಿಗಳು ಯಾರ ಮಾತನ್ನೂ ಕೇಳದ ಸ್ಥಿತಿ ನಿರ್ಮಾಣ ಆಗುತ್ತದೆ. ಇದರ ಪ್ರತ್ಯಕ್ಷ ಪರಿಣಾಮವನ್ನು ಜನರು ಅನುಭವಿಸಬೇಕಾಗುತ್ತದೆ. ಕೋವಿಡ್‌–19ರ ಎರಡನೇ ಅಲೆಯು ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ಹೊತ್ತಿನಲ್ಲಿ ಮುಖ್ಯಮಂತ್ರಿ ಮತ್ತು ಸಚಿವರು ಗುದ್ದಾಟಕ್ಕೆ ಇಳಿದರೆ ಅದಕ್ಕೆ ಜನರು ತೆರಬೇಕಾದ ಬೆಲೆಯು ಬಹಳ ದುಬಾರಿ ಆದೀತು ಎಂಬ ಎಚ್ಚರ ಅಧಿಕಾರಸ್ಥರಲ್ಲಿ ಇರಬೇಕು. ಸಚಿವ ಸಂಪುಟದ ಸಾಮೂಹಿಕ ಹೊಣೆಗಾರಿಕೆಗೆ ಭಂಗ ಬಂದಿದೆ. ಇದಕ್ಕೆ ಹೊಣೆಗಾರರು ಯಾರು, ಯಾರ ಪಾತ್ರ ಎಷ್ಟು ಎಂಬುದನ್ನು ಪಕ್ಷದ ವರಿಷ್ಠರು ಪತ್ತೆ ಮಾಡಬೇಕು ಅಥವಾ ಸಂಪುಟವೇ ಸಾಮೂಹಿಕವಾಗಿ ಆ ಕೆಲಸ ನಿಭಾಯಿಸಬೇಕು. ಆಡಳಿತ ವ್ಯವಸ್ಥೆಗೆ ಮುಖ್ಯಮಂತ್ರಿಯೇ ಮುಖ್ಯಸ್ಥ, ಅವರಿಗೆ ಪರಮಾಧಿಕಾರವೂ ಇದೆ ಎಂಬುದು ಒಂದು ಆಯಾಮ ಮಾತ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಅಥವಾ ಪ್ರಧಾನಿಯು ಸಚಿವ ಸಂಪುಟದಲ್ಲಿರುವ ಸಮಾನರಲ್ಲಿ ಮೊದಲಿಗ ಎಂಬುದು ಇನ್ನೊಂದು ಆಯಾಮ. ಅನುಭವಿ ಸಚಿವ ಈಶ್ವರಪ್ಪನವರ ಖಾತೆಯಲ್ಲಿ ಮುಖ್ಯಮಂತ್ರಿ ‘ಹಸ್ತಕ್ಷೇಪ’ ಮಾಡುವುದು ನೈತಿಕವಾಗಿ ಸರಿಯೇ ಎಂಬ ಪ್ರಶ್ನೆ ಮೂಡಬಹುದು. ಸಚಿವರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಕೊಡಬೇಕು. ಈ ಹಿಂದೆಯೂ ಸಚಿವರಿಗೆ ಮುಕ್ತ ಅವಕಾಶ ಇದ್ದಾಗ ಆಡಳಿತ ಹೆಚ್ಚು ಪರಿಣಾಮ ಕಾರಿಯಾಗಿದ್ದ ನಿದರ್ಶನಗಳು ಇವೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಎಲ್ಲರನ್ನೂ ಜತೆಗೆ ಒಯ್ಯುವ ಅವಕಾಶ ಇರುವಾಗ ಅದನ್ನು ಕೈಚೆಲ್ಲಿ ವಿವಾದ ಮೈಮೇಲೆ ಎಳೆದುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಸಚಿವ ಸ್ಥಾನದ ಹೊಣೆಗಾರಿಕೆಯನ್ನು ಮುಕ್ತವಾಗಿ, ಸಮರ್ಥವಾಗಿ ನಿಭಾಯಿಸಲು ಆಗುತ್ತಿಲ್ಲ ಎಂದು ಯಾರಿಗಾದರೂ ಅನಿಸಿದರೆ ಅಂಥವರು ಸಂಪುಟದಿಂದ ಹೊರನಡೆಯಲು ಅವಕಾಶ ಇದ್ದೇ ಇದೆ. ಸಂಪುಟದ ಸದಸ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅನಿಸಿದರೆ ಅವರನ್ನು ಸಂಪುಟದಿಂದ ಕೈಬಿಡುವ ಪರಮಾಧಿಕಾರವೂ ಮುಖ್ಯಮಂತ್ರಿಗೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು