ಶನಿವಾರ, ಜುಲೈ 24, 2021
21 °C

ಸಂಪಾದಕೀಯ| ನಾಯಕತ್ವ ಬದಲಾವಣೆ ವಿಚಾರದಲ್ಲಿ ಮಠಾಧೀಶರಿಗೆ ಪಕ್ಷ ರಾಜಕೀಯ ಸಲ್ಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಇಳಿಸಬಾರದು ಎಂದು ನಾಡಿನ ವಿವಿಧ ಸಮುದಾಯಗಳ ಮಠಾಧೀಶರು ಒತ್ತಾಯಿಸುತ್ತಿರುವುದು ರಾಜಕಾರಣ ಮತ್ತು ಧರ್ಮದ ನಡುವಣ ಗೆರೆ ತೆಳುವಾಗುತ್ತಿರುವುದಕ್ಕೆ ನಿದರ್ಶನದಂತಿದೆ. ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಅಥವಾ ಆ ಮುಖ್ಯಮಂತ್ರಿ ಯಾವ ಸಮುದಾಯಕ್ಕೆ ಸೇರಿದವನಾಗಿರಬೇಕು ಎಂದು ನಿರ್ಧರಿಸುವುದು ಧರ್ಮವನ್ನು ಪ್ರತಿನಿಧಿಸುವ ಮಠಾಧೀಶರ ಕೆಲಸವಲ್ಲ. ಅದು ಮತದಾರರಿಂದ ಆಯ್ಕೆಯಾದ ಶಾಸಕರು ನಿರ್ಧರಿಸ ಬೇಕಾದ ಸಂಗತಿ. ಮುಖ್ಯಮಂತ್ರಿಯ ಆಯ್ಕೆಯ ವಿವೇಚನೆಯು ಶಾಸಕರು ಹಾಗೂ ಅವರು ಪ್ರತಿನಿಧಿಸುವ ಪಕ್ಷಕ್ಕೆ ಸಂಬಂಧಿಸಿದ್ದೇ ಹೊರತು ಮಠಾಧೀಶರಿಗೆ ಸಂಬಂಧಿಸಿದ್ದಲ್ಲ. ಪ್ರಜಾಪ್ರತಿನಿಧಿಗಳಿಗೆ ಸಂಬಂಧಿಸಿದ ವಿಷಯದಲ್ಲಿ ಮಠಾಧೀಶರು ಮೂಗು ತೂರಿಸಲು ಪ್ರಯತ್ನಿಸುವುದು ಅಸಾಂವಿಧಾನಿಕ ನಡವಳಿಕೆ ಆಗಿರುವಂತೆಯೇ, ಧರ್ಮಪೀಠಗಳಿಗೆ ಶೋಭೆ ತರುವ ಕೆಲಸವೂ ಅಲ್ಲ. ಪಕ್ಷವೊಂದರ ಆಂತರಿಕ ಸಂಗತಿಯನ್ನು ನಾಡಿನ ಬಿಕ್ಕಟ್ಟಿನಂತೆ ಬಿಂಬಿಸಲು ಹೊರಟಿರುವ ಕೆಲವು ಸ್ವಾಮೀಜಿಗಳ ವರ್ತನೆಗೆ ಯಾವ ಸಮರ್ಥನೆಯೂ ಇಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಯನ್ನು ಬದಲಿಸಲು ಆ ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಮೂವತ್ತಕ್ಕೂ ಹೆಚ್ಚು ಮಠಾಧೀಶರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಬೆಂಬಲ ಪ್ರಕಟಿಸಿ ದ್ದಾರೆ. ಯಡಿಯೂರಪ್ಪನವರನ್ನು ಪದಚ್ಯುತ ಗೊಳಿಸಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಕೆಲವು ಸ್ವಾಮೀಜಿಗಳು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನೂರಾರು ಮಠಾಧೀಶರ ಸಭೆ ನಡೆಸಿ ಸಾಮೂಹಿಕ ಹೋರಾಟಕ್ಕೆ ಮುಂದಾಗುವುದಾಗಿ ಹೇಳಿದ್ದಾರೆ. ಅವಧಿಗೂ ಮುನ್ನ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ನಷ್ಟವಾಗುವುದಾಗಿಯೂ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗುವುದಾಗಿಯೂ ಭವಿಷ್ಯ ನುಡಿದಿದ್ದಾರೆ. ಅವಧಿ ಪೂರ್ಣಗೊಳಿಸುವ ಮೊದಲು ಮುಖ್ಯಮಂತ್ರಿಗಳ ಬದಲಾವಣೆಯ ರಾಜಕಾರಣ ಕರ್ನಾಟಕಕ್ಕೆ ಹೊಸತೇನಲ್ಲ. ಮಠ ಮತ್ತು ರಾಜಕಾರಣಿಗಳ ನಂಟೂ ರಾಜ್ಯಕ್ಕೆ ಹೊಸತಲ್ಲ ಆದರೆ, ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಬಾರದೆಂದು ಮಠಾಧೀಶರು ಹೀಗೆ ಗುಂಪು ಕಟ್ಟಿಕೊಂಡು ರಾಜಕಾರಣ ಮಾಡುತ್ತಿರುವುದು, ಬೆದರಿಕೆಯ ಮಾತುಗಳನ್ನು ಆಡುತ್ತಿರು ವುದನ್ನು ಯಡಿಯೂರಪ್ಪನವರ ಸಂದರ್ಭದಲ್ಲಷ್ಟೇ ನೋಡುತ್ತಿದ್ದೇವೆ. ರಾಜಕೀಯ ಪಕ್ಷ ಹಾಗೂ ರಾಜಕಾರಣಿಯೊಬ್ಬರ ವಕ್ತಾರರಂತೆ ಮಠಾಧೀಶರು ಬಹಿರಂಗವಾಗಿ ನಡೆದುಕೊಳ್ಳುತ್ತಿರುವುದು ನಾಡಿಗೆ ಹೊಸತು.

ತಾವು ಪ್ರತಿನಿಧಿಸುವ ಜಾತಿಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಬೇಕೆಂದು ಕೆಲವು ಸ್ವಾಮೀಜಿಗಳು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ತಂತಮ್ಮ ಸಮುದಾಯಗಳನ್ನು ಸಂಘಟಿಸಿ ಶಕ್ತಿ ಪ್ರದರ್ಶನವನ್ನೂ ನಡೆಸಿದ್ದಾರೆ. ನಿರ್ದಿಷ್ಟ ಜಾತಿಗಳ ಪಟ್ಟಿಗೆ ತಮ್ಮ ಜಾತಿಯ ಬಾಂಧವರನ್ನೂ ಸೇರಿಸಿ, ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪಾದಯಾತ್ರೆಗಳನ್ನು ನಡೆಸಿದ್ದಾರೆ. ಸ್ವಾಮೀಜಿಗಳ ಇಂಥ ನಡವಳಿಕೆಗಳು ಜಾತೀಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳೇ ಹೊರತು, ಜಾತ್ಯತೀತ ಸಮಾಜದ ಪರಿಕಲ್ಪನೆಗೆ ಪೂರಕವಾಗಿಲ್ಲ. ಜಾತಿಗಳ ಹೆಸರಿನಲ್ಲಿ ನಿಗಮಗಳನ್ನು ರಚಿಸುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಕಿವಿಮಾತು ಹೇಳುವ ಬದಲು, ತಾವೇ ಮುಂದೆ ನಿಂತು ಜಾತಿ ಹೆಸರಿನಲ್ಲಿ ನಿಗಮಗಳ ರಚನೆಗೆ ಕುಮ್ಮಕ್ಕು ನೀಡಿದ್ದಾರೆ. ಸಮಾಜದಲ್ಲಿನ ಒಡಕುಗಳ ನಿವಾರಣೆಗೆ ಪೂರಕವಾಗಿ ಕೆಲಸ ಮಾಡಬೇಕಾದವರು, ಜಾತಿಗಳ ಹೆಸರಿನಲ್ಲಿ ಸಮಾಜದಲ್ಲಿರುವ ಒಡಕುಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಪ್ರಯತ್ನಗಳಲ್ಲಿ ತೊಡಗಿದ್ದಾರೆ.

ಮಠ ಮಂದಿರಗಳು ಸಕ್ರಿಯ ರಾಜಕಾರಣದಿಂದ ಅಂತರ ಕಾಯ್ದುಕೊಂಡು ಸಮುದಾಯ ಮತ್ತು ನಾಡಿನ ಹಿತಕ್ಕಾಗಿ ಧಾರ್ಮಿಕ ಮಾರ್ಗದಲ್ಲಿ ಚಿಂತಿಸುವುದು ಅಪೇಕ್ಷಣೀಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸ್ವಾಮೀಜಿಗಳು ರಾಜಕೀಯ ನಾಯಕರಂತೆ ವರ್ತಿಸುವ ಉದಾಹರಣೆಗಳು ಹೆಚ್ಚುತ್ತಿವೆ. ಸಕ್ರಿಯ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಗೌರವ
ತರುವಂತಹದ್ದಲ್ಲ. ಸ್ವಾಮೀಜಿಗಳ ಕೆಲಸ ಸಮಾಜಕ್ಕೆ ಅಗತ್ಯವಾದ ಧಾರ್ಮಿಕ ಮಾರ್ಗದರ್ಶನ ಮಾಡುವುದು, ನೈತಿಕ ಮಾದರಿಗಳನ್ನು ರೂಪಿಸಿಕೊಡುವುದು. ಎಲ್ಲಕ್ಕಿಂತ ಮುಖ್ಯವಾಗಿ ಜಾತ್ಯತೀತ ಸಮಾಜ ನಿರ್ಮಾಣದ ಪ್ರಯೋಗಶಾಲೆಗಳನ್ನಾಗಿ ತಾವು ಪ್ರತಿನಿಧಿಸುವ ಮಠಗಳನ್ನು ಬದಲಾಯಿ ಸುವುದು. ಈ ಹಿಂದೆ ಕೆಲವು ಮಠಾಧೀಶರು ಪರಿಸರ ಚಳವಳಿಗಳಲ್ಲಿ ತೊಡಗಿಕೊಳ್ಳುವ ಮೂಲಕ ವರ್ತಮಾನದ ತವಕತಲ್ಲಣಗಳಿಗೆ ಸ್ಪಂದಿಸಿರುವ ಉದಾಹರಣೆಗಳು ಕರ್ನಾಟಕದಲ್ಲೇ ಇವೆ. ಈ ಮೇಲ್ಪಂಕ್ತಿಯನ್ನು ಅನುಸರಿಸಿ ಧರ್ಮಪೀಠಗಳ ವರ್ಚಸ್ಸು ಹೆಚ್ಚಿಸುವುದರ ಬದಲಾಗಿ, ಪಕ್ಷ ಮತ್ತು ಜಾತಿ ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಜನರನ್ನು ದಿಕ್ಕುತಪ್ಪಿಸುವ ರಾಜಕೀಯ ಚಟುವಟಿಕೆಗಳಿಂದ ಮಠಾಧೀಶರು ದೂರವಿರಬೇಕು. ಮಠಕ್ಕೆ ಬರುವ ರಾಜಕಾರಣಿ
ಗಳಿಗೆ ಮಾರ್ಗದರ್ಶನ ಮಾಡುವುದು ಅಥವಾ ವ್ಯವಸ್ಥೆಯ ಲೋಪಗಳ ಬಗ್ಗೆ ಸಮಾಜದ ದನಿಯಾಗಿ ಸ್ವಾಮೀಜಿಗಳು ಕಾರ್ಯ ನಿರ್ವಹಿಸುವ ಬಗ್ಗೆ ಯಾರದೂ ಆಕ್ಷೇಪವಿಲ್ಲ. ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗುವ ತುಡಿತ ಸ್ವಾಮೀಜಿಗಳಿಗೆ ಇದ್ದಲ್ಲಿ, ಆ ಸ್ವಾತಂತ್ರ್ಯ ಅವರಿಗಿದ್ದೇ ಇದೆ. ಆದರೆ, ಮಠ ಮತ್ತು ಅಧಿಕಾರ ರಾಜಕಾರಣ ಎರಡರಲ್ಲೂ ಗುರುತಿಸಿಕೊಳ್ಳುವುದು ಗುರುಪೀಠದ ಪರಿ ಕಲ್ಪನೆಗೆ ಹೊಂದುವುದಿಲ್ಲ. ಹಾಗಾಗಿ ಪ್ರಸಕ್ತ ಮುಖ್ಯಮಂತ್ರಿ ಬದಲಾವಣೆ ಪ್ರಹಸನದಿಂದ ಮಠಾಧೀಶರು ದೂರವಿರುವುದು ಮಠಗಳು ಹಾಗೂ ನಾಡಿನ ಹಿತಾಸಕ್ತಿಯಿಂದ ಒಳ್ಳೆಯದು. ಮುಖ್ಯಮಂತ್ರಿ ಯಾರಿರ ಬೇಕು ಅಥವಾ ಯಾರಾಗಬೇಕು ಎನ್ನುವುದನ್ನು ಜನಪ್ರತಿನಿಧಿಗಳೇ ನಿರ್ಣಯಿಸಬೇಕು. ಅವರು ತಪ್ಪು ಮಾಡಿದಾಗ ಕಿವಿ ಹಿಂಡಲು ಮತದಾರರು ಇದ್ದೇ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು