ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ದೇಶ, ಒಂದೇ ಪಡಿತರ ಚೀಟಿ’ ಲೋಪಗಳಿಲ್ಲದೆ ಜಾರಿಗೆ ಬರಲಿ

Last Updated 10 ಜುಲೈ 2019, 19:45 IST
ಅಕ್ಷರ ಗಾತ್ರ

‘ಒಂದು ದೇಶ, ಒಂದೇ ಪಡಿತರ ಚೀಟಿ’ ಎಂಬ ಕೇಂದ್ರ ಸರ್ಕಾರದ ಹೊಸ ಯೋಜನೆಯು ಪರಿಣಾಮಕಾರಿಯಾಗಿ ಜಾರಿಗೆ ಬಂದರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಆಶಯ ಕೈಗೂಡಿದಂತೆ ಆಗುತ್ತದೆ. ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಅವರು ಇತ್ತೀಚೆಗೆ ಈ ಯೋಜನೆಯನ್ನು ಪ್ರಕಟಿಸಿದ್ದು, ‘ಪಡಿತರ ಚೀಟಿ ಹೊಂದಿರುವವರು ದೇಶದ ಯಾವ ಪ್ರದೇಶಕ್ಕೆ ವಲಸೆ ಹೋದರೂ, ಅಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ ಅದೇ ಚೀಟಿಯನ್ನು ಬಳಸಿ ಪಡಿತರ ಸಾಮಗ್ರಿ ಖರೀದಿಸಬಹುದು. ಮುಂದಿನ ಒಂದು ವರ್ಷದಲ್ಲಿ ಈ ಯೋಜನೆ ಜಾರಿಗೆ ಬರಲಿದೆ’ ಎಂದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ 100 ದಿನಗಳ ಕಾರ್ಯಸೂಚಿಯ ಅನ್ವಯ ಜಾರಿಗೆ ಬರಲಿರುವ ಈ ಯೋಜನೆ, ರಾಜ್ಯದಿಂದ ರಾಜ್ಯಕ್ಕೆ ಕೆಲಸದ ಮೇಲೆ ವಲಸೆ ಹೋಗುವವರಿಗೆ ಹೆಚ್ಚು ಅನುಕೂಲ ಮಾಡಿಕೊಡಲಿದೆ. ‘ಸದ್ಯ, ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದಾದ ಸಮಗ್ರ ವ್ಯವಸ್ಥೆಯು ಕೆಲವು ರಾಜ್ಯಗಳಲ್ಲಿದ್ದು, ಇತರರಾಜ್ಯಗಳೂ ಯೋಜನೆಯ ಜಾರಿಗೆ ಶೀಘ್ರ ಸಿದ್ಧವಾಗಲಿವೆ’ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಸಂಘಟಿತ ವಲಯ ಮಾತ್ರವಲ್ಲ, ಸಂಘಟಿತ ವಲಯದಲ್ಲೂ ರಾಜ್ಯಗಳ ನಡುವೆ ಈಗ ಉದ್ಯೋಗದ ವಲಸೆ ಸಾಮಾನ್ಯವಾಗಿದೆ. ಹೀಗೆ ಅನ್ಯ ರಾಜ್ಯಕ್ಕೆ ವಲಸೆ ಹೋದಾಗ ಅಥವಾ ವರ್ಗಾವಣೆ ಆದಾಗ ಅಲ್ಲಿ ಹೊಸ ಪಡಿತರ ಚೀಟಿಯನ್ನು ಪಡೆಯುವುದು ಶ್ರಮದಾಯಕ ಕೆಲಸವೇ. ಹೀಗಾಗಿ ಬಹುತೇಕರು, ಅದರಲ್ಲೂ ನಿರ್ಮಾಣ ಕ್ಷೇತ್ರದಲ್ಲಿರುವ ವಲಸೆ ಕಾರ್ಮಿಕರು ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಸಾಮಗ್ರಿ ಪಡೆಯುವ ತಮ್ಮ ಹಕ್ಕಿನಿಂದ ವಂಚಿತರಾಗುವುದೇ ಹೆಚ್ಚು. ಇದನ್ನು ತಪ್ಪಿಸಲು, ದೇಶದಾದ್ಯಂತ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನೂ ಒಳಗೊಳ್ಳುವಂತಹ ಪಡಿತರ ಚೀಟಿ ರೂಪಿಸುವುದು ಸ್ವಾಗತಾರ್ಹ ಸಂಗತಿ. ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಈಗ ಏಕರೂಪದ ರಸೀದಿ ವ್ಯವಸ್ಥೆಯಿದ್ದು, ಹೆಚ್ಚಿನ ಪಡಿತರ ಚೀಟಿಗಳಿಗೆ ಆಧಾರ್‌ ಕಾರ್ಡ್‌ ಸಂಪರ್ಕ ಕಲ್ಪಿಸಲಾಗಿದೆ. ಪಡಿತರ ಸಂಗ್ರಹ ಸೌಲಭ್ಯದಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲು ಒತ್ತು ನೀಡಲಾಗಿದೆ.

ಇಂತಹ ಎಲ್ಲ ಕ್ರಮಗಳ ನಡುವೆಯೂ ಉದ್ದೇಶಿತ ಯೋಜನೆಯನ್ನು ಜಾರಿಗೆ ತರುವಲ್ಲಿ ಕೆಲವು ಪ್ರಾಯೋಗಿಕ ಸಮಸ್ಯೆಗಳಿವೆ ಎನ್ನುವುದನ್ನು ಅಲ್ಲಗಳೆಯಲಾಗದು. ಮುಖ್ಯವಾಗಿ, ದೇಶದ ವಿವಿಧ ರಾಜ್ಯಗಳ ಸಾರ್ವಜನಿಕ ವಿತರಣೆ ಯೋಜನೆಯ ಆಹಾರ ಸಾಮಗ್ರಿ ಪ್ರಮಾಣದಲ್ಲಿ ವ್ಯತ್ಯಾಸ ಇರುವುದು ಗಮನಾರ್ಹ. ಕೆಲವು ರಾಜ್ಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕೆಲವೇ ಬಗೆಯ ಆಹಾರ ಧಾನ್ಯಗಳು ಸಿಗುತ್ತಿದ್ದರೆ, ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈವಿಧ್ಯಮಯ ಆಹಾರ ಧಾನ್ಯಗಳು ಸಿಗುತ್ತಿವೆ. ಇದು, ಆಯಾ ರಾಜ್ಯ ಸರ್ಕಾರಗಳು ಮಾಡಿಕೊಂಡಿರುವ ವ್ಯವಸ್ಥೆಯಾದ್ದರಿಂದ ಇಡೀ ದೇಶಕ್ಕೆ ಏಕಪ್ರಮಾಣದಲ್ಲಿ ಪಡಿತರ ವಿತರಣೆಯನ್ನು ಸಾಧ್ಯವಾಗಿಸುವುದು ಕಷ್ಟ. ಜೊತೆಗೆ, ವಲಸೆದಾರ ಪಡಿತರ ಚೀಟಿದಾರರಿಗೆ ಆಹಾರ ಭದ್ರತಾ ಕಾಯ್ದೆಯಡಿ ನಿಗದಿಯಾದ ಸಬ್ಸಿಡಿ ದರದ ಆಹಾರ ಸಾಮಗ್ರಿ ಮಾತ್ರ ದೊರೆಯಲಿದೆ. ರಾಜ್ಯಗಳು ತಮ್ಮ ನಾಗರಿಕರಿಗೆ ಕೊಡಮಾಡುವ ಇತರ ಪಡಿತರ ಸೌಲಭ್ಯಗಳು ಅವರಿಗೆ ಸಿಗುವುದಿಲ್ಲ. ವಿವಿಧ ರಾಜ್ಯಗಳಲ್ಲಿ ಜನರು ಬಳಸುವ ಆಹಾರಧಾನ್ಯಗಳಲ್ಲಿ ವೈವಿಧ್ಯ ಇರುವುದನ್ನೂ ಗಮನಿಸಬೇಕಾಗುತ್ತದೆ. ತಮಿಳುನಾಡಿನಲ್ಲಿ ವಿರೋಧ ಪಕ್ಷ ಡಿಎಂಕೆ ಹೊಸ ಯೋಜನೆಯನ್ನು ವಿರೋಧಿಸಿರುವುದು ವರದಿಯಾಗಿದೆ. ‘ಸಾರ್ವಜನಿಕ ವಿತರಣೆ ವ್ಯವಸ್ಥೆಯು (ಪಿಡಿಎಸ್‌) ರಾಜ್ಯ ಸರ್ಕಾರಗಳ ಮೂಲಭೂತ ಹಕ್ಕಾಗಿದ್ದು, ಇದರಲ್ಲಿ ಕೇಂದ್ರದ ಹಸ್ತಕ್ಷೇಪ ಸರಿಯಲ್ಲ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆ’ ಎಂದು ಅಲ್ಲಿನ ಸಚಿವರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉದ್ದೇಶಿತ ಯೋಜನೆ ಕಾರ್ಯರೂಪಕ್ಕೆ ಬಂದರೆ, ಅನ್ಯ ರಾಜ್ಯಗಳಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣದ ರಾಜ್ಯಗಳಿಗೆ ವಲಸೆ ಬಂದು ತಳವೂರುವ ಸಂಭವವಿದೆ, ಏಕರೂಪದ ಆಹಾರ ಪದ್ಧತಿಯನ್ನು ಹೇರುವ ಹುನ್ನಾರವೂ ಈ ಯೋಜನೆಯ ಹಿಂದೆ ಇದೆ ಎನ್ನುವ ಆಕ್ಷೇಪಗಳೂ ಕೇಳಿಬಂದಿವೆ. ಇಂತಹ ವಾದಗಳು ಒಪ್ಪುವಂತಹವಲ್ಲ. ಆದರೆ, ವಿವಿಧ ರಾಜ್ಯಗಳ ಆಹಾರ ಪದ್ಧತಿಯನ್ನು ಗಮನದಲ್ಲಿ ಇಟ್ಟುಕೊಂಡು, ಪಡಿತರ ಆಹಾರ ಧಾನ್ಯಗಳ ವಿತರಣಾ ಕ್ರಮವನ್ನು ರೂಪಿಸುವುದು ಒಳ್ಳೆಯದು. ಹಲವು ರಾಜ್ಯಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಭ್ರಷ್ಟಾಚಾರ ಮತ್ತು ಆಹಾರ ಸಾಮಗ್ರಿಗಳ ವ್ಯಾಪಕ ದುರುಪಯೋಗ ಎದ್ದು ಕಾಣುವ ಅಂಶ. ಹೀಗಾಗಿ, ಅನುಕೂಲಕರ ಸೌಲಭ್ಯವುಳ್ಳ ಪಡಿತರ ಚೀಟಿ ಯೋಜನೆಯನ್ನು ‘ಫಲಾನುಭವಿ ಸ್ನೇಹಿ’ಯಾಗಿಸುವ ರೀತಿಯಲ್ಲಿ ಅನುಷ್ಠಾನಗೊಳಿಸಬೇಕಾಗಿರುವುದೂ ಅಷ್ಟೇ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT