ಸೋಮವಾರ, ಜೂನ್ 21, 2021
30 °C

ಸಂಪಾದಕೀಯ | ಯುಗಾದಿ ಆಚರಣೆ ಸರಳವಾಗಿರಲಿ ಸಂಭ್ರಮದಲ್ಲಿ ಸರ್ವರಿಗೂ ಪಾಲಿರಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

‘ಶ್ರೀ ವಿಕಾರಿ’ ನಾಮ ಸಂವತ್ಸರಕ್ಕೆ ತೆರೆ ಬೀಳುವುದರೊಂದಿಗೆ ‘ಶಾರ್ವರಿ’ ಸಂವತ್ಸರ ಆರಂಭವಾಗಿದೆ. ಹೊಸ ಸಂವತ್ಸರದ ಆದಿಯಾದ ಯುಗಾದಿ, ನಾಡಿನ ಪಾಲಿಗೆ ಬಹುದೊಡ್ಡ ಸಂಭ್ರಮವಾಗಬೇಕಾಗಿತ್ತು. ಪ್ರತಿವರ್ಷ ಯುಗಾದಿ ಸಂದರ್ಭದಲ್ಲಿ ನಾಡಿಗೆ ನಾಡೇ ತೋರಣ ಕಟ್ಟಿಕೊಂಡಂತೆ ಸಂಭ್ರಮಿಸು ತ್ತಿತ್ತು. ಆದರೆ, ಈ ಸಲ ಹಬ್ಬದ ಸಂಭ್ರಮವನ್ನು ಕೊರೊನಾ ಸೋಂಕಿನ ಭಯ ನುಂಗಿಹಾಕಿದೆ.

ರಾಜ್ಯದಲ್ಲಿರುವ ‘ಕರ್ಫ್ಯೂ’ ಪರಿಸ್ಥಿತಿಯಲ್ಲಿ ಜನರು ಮನೆಯೊಳಗೇ ಉಳಿಯುವುದು ಅನಿವಾರ್ಯವಾಗಿದೆ. ಸೋಂಕಿಗೀಡಾದವರ ಸಂಖ್ಯೆ ಪ್ರತಿದಿನವೂ ಹೆಚ್ಚುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಸಾವು–ನೋವುಗಳು ಘಟಿಸುತ್ತಿರುವಾಗ ಹಬ್ಬದ ಸಂಭ್ರಮಕ್ಕೆ ಅವಕಾಶವಾದರೂ ಎಲ್ಲಿ? ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಂತೂ ಯಾರೋ ಕತ್ತು ಹಿಡಿದಂತೆ ಉಬ್ಬಸಕ್ಕೀಡಾಗಿವೆ. ಸೋಂಕನ್ನು ತಹಬಂದಿಗೆ ತರಲು ಸರ್ಕಾರಗಳು ಹರಸಾಹಸ ಪಡುತ್ತಿವೆ. ಜನರು ಮನೆಗಳಲ್ಲಿಯೇ ಉಳಿಯುವ ಮೂಲಕ ಸೋಂಕನ್ನು ತಡೆಗಟ್ಟುವುದೊಂದೇ ಈಗ ಉಳಿದಿರುವ ಪ್ರಯತ್ನ. ಆದರೆ, ಸರ್ಕಾರದ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ಜನರು ರಸ್ತೆಗಳಲ್ಲಿ, ಪೇಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಪಾಯದ ಅರಿವಿದ್ದರೂ ದೂರದ ಊರುಗಳಿಗೆ ಖಾಸಗಿ ವಾಹನಗಳಲ್ಲಿ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಈ ನಿರ್ಲಕ್ಷ್ಯ ಆತಂಕ ಉಂಟುಮಾಡುವಂತ ಹದ್ದು. ಇಂಥ ಹೊಣೆಗೇಡಿತನ ವೈಯಕ್ತಿಕವಾಗಿ ಮಾತ್ರವಲ್ಲದೆ, ಸಾಮೂಹಿಕವಾಗಿಯೂ ಅಪಾಯ ಉಂಟುಮಾಡಬಲ್ಲದು. ರಸ್ತೆಗಳಲ್ಲಿ ಕಾಣಿಸಿಕೊಳ್ಳು ವವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಆದರೆ, ಇಂಥ ನಿಯಂತ್ರಣವು ಕಾನೂನಿನ ಮೂಲಕ ಸಾಧ್ಯವಾಗ ಬೇಕು ಎಂದು ಬಯಸುವುದೇ ನಾಗರಿಕ ವ್ಯವಸ್ಥೆ ತಲೆತಗ್ಗಿಸುವಂತಹದ್ದು. ಸರ್ಕಾರದ ಸೂಚನೆಗಳನ್ನು ಜನರೇ ಸ್ವಯಂಪ್ರೇರಣೆಯಿಂದ ಪಾಲಿಸುವ ಮೂಲಕ ವೈಯಕ್ತಿಕ ಹಾಗೂ ಸಮೂಹದ ಹಿತರಕ್ಷಣೆಗೆ ಸಹಕರಿಸಬೇಕು.

ಯುಗಾದಿಯು ಬೇವು– ಬೆಲ್ಲದ ರೂಪಕದ ಹಬ್ಬ. ಬದುಕಿನಲ್ಲಿ ಸಿಹಿ ಮತ್ತು ಕಹಿ ಎರಡಕ್ಕೂ ಅವಕಾಶವಿದೆ ಎನ್ನುವುದನ್ನು ಮನದಟ್ಟು ಮಾಡುವ ಹಬ್ಬ. ಈ ಸಲದ ಯುಗಾದಿಯಂತೂ ಕಹಿಯ ಬಟ್ಟಲನ್ನೇ ನಮ್ಮ ಮುಂದಿಟ್ಟಿದೆ. ಬೇರೆ ದಾರಿಯಿಲ್ಲ. ಈ ಸವಾಲನ್ನು ನಾವು ಎದುರಿಸಲೇಬೇಕು. ಭವಿಷ್ಯದ ಸಿಹಿಯ ನಿರೀಕ್ಷೆಯಲ್ಲಿ ಈ ಹೊತ್ತಿನ ಕಹಿಯನ್ನು ಒಪ್ಪಿಕೊಳ್ಳಲೇಬೇಕು. ಕೊರೊನಾ ಕಾರಣದಿಂದಾಗಿ ಆತಂಕ ಉಂಟಾಗಿದ್ದರೂ ಅದರಿಂದಾಗಿ ಹಬ್ಬದ ಆಚರಣೆ ನಿಲ್ಲಬೇಕಿಲ್ಲ. ಕುಟುಂಬದ ಸದಸ್ಯರೆಲ್ಲ ಮನೆಯಲ್ಲಿಯೇ ಉಳಿದಿರುವುದು ಹಬ್ಬದ ನಿಜವಾದ ಸಂಭ್ರಮ. ಹಾಗೆಂದು, ಹೊಸ ಸಂವತ್ಸರದ ಸ್ವಾಗತ ವಿಜೃಂಭಣೆಯಿಂದ ಕೂಡಿರಬೇಕು ಎಂದು ಬಯಸುವುದು ಸರಿಯಲ್ಲ. ಈ ಯುಗಾದಿಯು ಅದ್ಧೂರಿಯಾಗಿರುವ ಬದಲು ಅರ್ಥಪೂರ್ಣವಾಗಿರಬೇಕು, ಮಾನವೀಯವಾಗಿರಬೇಕು. ಆಯಾ ದಿನದ ದುಡಿಮೆಯನ್ನೇ ನೆಚ್ಚಿಕೊಂಡ ಲಕ್ಷಾಂತರ ಮಂದಿ ನಮ್ಮ ಸುತ್ತಮುತ್ತಲಿದ್ದಾರೆ. ಅಂಥವರಿಗೆ ನೆರವನ್ನು ನೀಡುವುದು ಹಬ್ಬವನ್ನು ಅರ್ಥಪೂರ್ಣವಾಗಿಸುವ ದಾರಿಗಳಲ್ಲೊಂದು.

ಹಬ್ಬವನ್ನು ಹೇಗೆ ಆಚರಿಸುತ್ತೇವೆ ಎನ್ನುವುದಕ್ಕಿಂತಲೂ ಹಬ್ಬದ ಮೂಲಕ ಏನನ್ನು ಪಡೆಯುತ್ತೇವೆ ಎನ್ನುವುದೇ ಮುಖ್ಯ. ಈ ಯುಗಾದಿ ನಮಗೆ ಹಂಚಿಕೊಂಡು ಬಾಳುವ ಸುಖಕ್ಕೆ ನಾಂದಿ ಹಾಡಬೇಕು. ‘ಯುಗಾದಿಗಳ ಹಾದಿಯಲ್ಲಿ, ಇದ್ದ ಮರವನ್ನೆಲ್ಲ ಯಾರೊ ಕಡಿದಿದ್ದಾರೆ; ನೆರಳಿಲ್ಲ, ಹಕ್ಕಿಗಳ ದನಿಯಿಲ್ಲ, ಬೆಟ್ಟ-ಘಟ್ಟಗಳ ಮೈಯಲ್ಲಿ ಹಸುರೇ ಇಲ್ಲ, ಬಿಸಿಲು, ಬಿಸಿಲೋ ಬಿಸಿಲು, ಸುಡುವ ಬಿಸಿಲು’ ಎನ್ನುವುದು ಯುಗಾದಿಯೊಂದರ ಕುರಿತು ಕವಿ ಜಿ.ಎಸ್. ಶಿವರುದ್ರಪ್ಪನವರ ಬಣ್ಣನೆ. ಕವಿ ಕಂಡ ಮರಗಳ ಹನನ ಹಾಗೂ ಬಿಸಿಲಿನ ತಾಂಡವ ಈ ಬಾರಿಯೂ ಇದೆ; ಜೊತೆಗೆ ಕೊರೊನಾ ಭೀತಿಯೂ ಸೇರಿಕೊಂಡಿದೆ. ಆದರೆ, ಇದಾವುದೂ ಸಮಾಜದಲ್ಲಿನ ಅಂತಃಕರಣ ಕಡಿಮೆ ಯಾಗುವುದಕ್ಕೆ ಕಾರಣವಾಗಬಾರದು.

ಕೊರೊನಾ ಕಾರಣದಿಂದಾಗಿ ಜಗತ್ತು ಏನೆಲ್ಲ ಕಷ್ಟ-ನಷ್ಟ ಅನುಭವಿಸುತ್ತದೆ ಎನ್ನುವುದನ್ನು ಸದ್ಯಕ್ಕೆ ಊಹಿಸುವುದೂ ಕಷ್ಟ. ಆದರೆ, ಈ ಬಿಕ್ಕಟ್ಟಿನ ಕಾಲದಲ್ಲಿ ನಾವು ಪಡೆವುದೇನು, ಕಳೆದುಕೊಳ್ಳುವುದೇನು ಎನ್ನುವುದನ್ನು ನಮ್ಮ ವರ್ತನೆಯೇ ನಿರ್ಣಯಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು