ಸೋಮವಾರ, ಸೆಪ್ಟೆಂಬರ್ 20, 2021
20 °C

ಸಂಪಾದಕೀಯ | ಆರೋಗ್ಯ, ಆರ್ಥಿಕತೆಯ ಕಾಳಜಿ ಪ್ರಧಾನಿ ಮಾತು ಸ್ಫೂರ್ತಿದಾಯಕ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಪಿಡುಗಿನಿಂದಾಗಿ ಜೀವನ ಮತ್ತು ಜೀವನೋಪಾಯ ಜರ್ಜರಿತವಾಗಿರುವ ಈ ಹೊತ್ತು ಯಾವುದೇ ದೇಶಕ್ಕೆ ಅತ್ಯಂತ ಸವಾಲಿನದು. ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಕೆಂಪು ಕೋಟೆಯಿಂದ ಮಾಡಿದ 74ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದೆ.

ಕೋವಿಡ್‌ನ ಜತೆಗೆ, ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ತೋರಿದ ದುರ್ವರ್ತನೆಯಿಂದಾಗಿ ದೇಶದ ಮುಂದೆ ಇನ್ನೊಂದು ಬಿಕ್ಕಟ್ಟು ಎದುರಾಗಿದೆ. ಈ ಎರಡು ಅಂಶಗಳು ಪ್ರಧಾನಿ ಭಾಷಣದ ಕೇಂದ್ರ ಭಾಗದಲ್ಲಿದ್ದವು. ಮೋದಿಯವರು ತಮ್ಮ ಭಾಷಣದಲ್ಲಿ ನೆಚ್ಚಿನ ‘ಆತ್ಮನಿರ್ಭರ ಭಾರತ’ ಅಥವಾ ಸ್ವಾವಲಂಬಿ ಭಾರತ ನಿರ್ಮಾಣದ ಆಶಯಕ್ಕೆ ಇನ್ನಷ್ಟು ಬಲ ತುಂಬಲು ಯತ್ನಿಸಿದ್ದಾರೆ. ಸ್ವಾವಲಂಬಿಯಾಗುವ ಚಿಂತನೆಗೆ ಪುನಶ್ಚೇತನ ಕೊಟ್ಟದ್ದೇ ಕೋವಿಡ್‌ ಮತ್ತು ಚೀನಾ ತೋರಿದ ವಿವೇಕಹೀನ ವರ್ತನೆ.

ಹತ್ತಾರು ಸರಕುಗಳನ್ನು ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಚೀನಾದ ಹಲವು ಆ್ಯಪ್‌ಗಳು ಭಾರತದಲ್ಲಿ ಜನಪ್ರಿಯವಾಗಿದ್ದವು. ಈಗ ಕೆಲವು ಆ್ಯಪ್‌ಗಳನ್ನು ಭಾರತ ಸರ್ಕಾರವು ನಿಷೇಧಿಸಿದೆ. ‘ಚೀನಾದಿಂದ ಸರಕುಗಳನ್ನು ತರಿಸುವುದು ಬೇಡ’ ಎಂಬ ಅಭಿಯಾನವೇ ನಡೆಯುತ್ತಿದೆ. ಕೋವಿಡ್‌ ಮತ್ತು ಇತರ ಕಾರಣಗಳಿಂದಾಗಿ ದೇಶದ ಆರ್ಥಿಕ ಸ್ಥಿತಿಯು ಅಪಾರ ಒತ್ತಡ ಎದುರಿಸುತ್ತಿರುವ ಸಮಯದಲ್ಲಿ ‘ಭಾರತದಲ್ಲಿ ತಯಾರಿಸಿ’ ಮತ್ತು ‘ಜಗತ್ತಿಗಾಗಿ ತಯಾರಿಸಿ’ ಎಂದು ಪ್ರಧಾನಿ ಕರೆ ಕೊಟ್ಟಿದ್ದಾರೆ.

ನಿರುದ್ಯೋಗ ತೀವ್ರವಾಗಿ ಕಾಡುತ್ತಿರುವ ಮತ್ತು ಉದ್ಯಮಗಳು ಆರ್ಥಿಕ ಹಿಂಜರಿತದಿಂದ ಏದುಸಿರು ಬಿಡುತ್ತಿರುವ ಹೊತ್ತಿನಲ್ಲಿ ದೇಶೀಯ ಉತ್ಪಾದನೆ ಮತ್ತು ಸಾಧನಗಳ ರಫ್ತು ಹೆಚ್ಚಳವು ಪರಿಸ್ಥಿತಿಯನ್ನು ಉತ್ತಮಪಡಿಸಬಲ್ಲದು. ಗಡಿಯ ವಿಚಾರದಲ್ಲಿ ರಾಜಿಯೇ ಇಲ್ಲ ಎಂಬುದನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ. ‘ವಾಸ್ತವ ನಿಯಂತ್ರಣ ರೇಖೆ ಇರಲಿ, ನಿಯಂತ್ರಣ ರೇಖೆ ಇರಲಿ, ನಮ್ಮ ಸಾರ್ವಭೌಮತ್ವಕ್ಕೆ ಸವಾಲು ಒಡ್ಡಿದವರಿಗೆ ಅವರದೇ ಭಾಷೆಯಲ್ಲಿ ತಕ್ಕ ಉತ್ತರ ನೀಡಿದ್ದೇವೆ’ ಎಂದು ಚೀನಾ ಮತ್ತು ಪಾಕಿಸ್ತಾನವನ್ನು ಉಲ್ಲೇಖಿಸದೆಯೇ ಹೇಳಿದ್ದಾರೆ. ಆದರೆ, ಪ್ರಭಾವಿ ಚೀನಾದ ಜತೆಗಿನ ಬಿಕ್ಕಟ್ಟನ್ನು ‘ಸಾಧಾರಣ’ ರೀತಿಯಲ್ಲಿ ನಿಭಾಯಿಸಲಾಗದು. ಈ ವಿಚಾರದಲ್ಲಿ ಹೆಚ್ಚಿನ ಎಚ್ಚರ ಬೇಕು. 

ಆರೋಗ್ಯ ರಕ್ಷಣೆ ಈಗಿನ ಸನ್ನಿವೇಶದ ಬಹುಮುಖ್ಯ ಅಗತ್ಯ ಎಂಬುದು ಸರ್ಕಾರಕ್ಕೆ ಅರಿವಾಗಿದೆ. ಎರಡು ವರ್ಷಗಳ ಹಿಂದೆ ‘ಆಯುಷ್ಮಾನ್‌ ಭಾರತ’ ಯೋಜನೆಯನ್ನು ಸ್ವಾತಂತ್ರ್ಯ ದಿನದ ಭಾಷಣದಲ್ಲಿಯೇ ಮೋದಿ ಘೋಷಿಸಿದ್ದರು. ಈ ಬಾರಿ, ರಾಷ್ಟ್ರೀಯ ಡಿಜಿಟಲ್‌ ಆರೋಗ್ಯ ಮಿಷನ್‌ ಪ್ರಕಟವಾಗಿದೆ. ‘ಪ್ರಬಲ ಆರೋಗ್ಯ ರಕ್ಷಣಾ ವ್ಯವಸ್ಥೆಯ ಅಗತ್ಯವನ್ನು ಕೋವಿಡ್‌ ಸಾಂಕ್ರಾಮಿಕವು ಮನದಟ್ಟು ಮಾಡಿದೆ. ಈ ಅಗತ್ಯವನ್ನು ಪೂರೈಸುವುದಕ್ಕಾಗಿ ಡಿಜಿಟಲ್‌ ಆರೋಗ್ಯ ಮಿಷನ್‌ ಯೋಜನೆ ಜಾರಿಗೆ ಬರಲಿದೆ’ ಎಂದು ಮೋದಿ ಹೇಳಿದ್ದಾರೆ. ಪ್ರತೀ ಭಾರತೀಯನಿಗೂ ‘ಡಿಜಿಟಲ್‌ ಹೆಲ್ತ್‌ ಕಾರ್ಡ್‌’ ನೀಡಲಾಗುವುದು. ವ್ಯಕ್ತಿಯ ಆರೋಗ್ಯದ ಎಲ್ಲ ಮಾಹಿತಿಯೂ ಈ ಕಾರ್ಡ್‌ನಲ್ಲಿ ಅಡಕವಾಗಿರಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಎಷ್ಟು ಗಮನ ಮತ್ತು ಹಣ ಕೊಡಬೇಕೋ ಅಷ್ಟನ್ನು ಕೊಡುತ್ತಿಲ್ಲ ಎಂಬುದು ಹಿಂದಿನಿಂದಲೂ ಇರುವ ಕೊರಗು. ಈಗ, ಆರೋಗ್ಯದ ಬಗೆಗಿನ ಕಾಳಜಿ ಮುನ್ನೆಲೆಗೆ ಬಂದಿರುವುದು ಸ್ವಾಗತಾರ್ಹ. ಆದರೆ, ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿ ಇರಿಸಲಾಗುವ ಮಾಹಿತಿಯು ಸೋರಿಕೆ ಆಗದಂತೆ, ದುರ್ಬಳಕೆ ಆಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಡಿಜಿಟಲ್‌ ಕಾರ್ಡ್‌ ಯೋಜನೆ ಜಾರಿಗೆ ಮುನ್ನ ಪರಿಣತರ ಜತೆ, ಪ್ರಜೆಗಳ ಜತೆ ಆಮೂಲಾಗ್ರವಾದ ಚರ್ಚೆ, ಸಮಾಲೋಚನೆ, ಸಂವಾದ ಅಗತ್ಯ ಎಂಬುದನ್ನು ಸರ್ಕಾರವು ಮರೆಯಬಾರದು. ಹೆಣ್ಣು ಮಕ್ಕಳ ಆರೋಗ್ಯದ ವಿಚಾರದಲ್ಲಿ ಸರ್ಕಾರವು ಹೆಚ್ಚು ಕಾಳಜಿ ಹೊಂದಿದೆ ಎಂಬುದು ಈ ಬಾರಿಯ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕಾಣಿಸಿದ ಅಂಶ. ಹೆಣ್ಣು ಮಕ್ಕಳ ಅಪೌಷ್ಟಿಕತೆ ನಿವಾರಣೆಯ ದಿಸೆಯಲ್ಲಿ ಸರ್ಕಾರದ ಯೋಚನೆ ಸಾಗಿದೆ.

ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸು ಏರಿಕೆಯಾಗುವ ಸಾಧ್ಯತೆಯ ಸುಳಿವನ್ನೂ ಪ್ರಧಾನಿ ನೀಡಿದ್ದಾರೆ. ಋತುಸ್ರಾವದ ಆರೋಗ್ಯದ ವಿಚಾರವು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಇದೇ ಮೊದಲ ಬಾರಿ ಪ್ರಸ್ತಾಪವಾಗಿದೆ. ಮುಟ್ಟಿನ ವಿಚಾರದಲ್ಲಿ ಇರುವ ಮೌಢ್ಯ, ನಿರ್ಲಕ್ಷ್ಯ ಮತ್ತು ಕಳಂಕದ ಭಾವನೆ ಹೋಗಲಾಡಿಸಲು ಪ್ರಧಾನಿಯ ಮಾತು ನೆರವಾಗುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ. ಹಲವು ಬಿಕ್ಕಟ್ಟುಗಳ ಈ ಸಂದರ್ಭದಲ್ಲಿ ಸಾಧಾರಣವಾಗಿರುವುದು ಸಾಧ್ಯವಿಲ್ಲ, ನಾವು ಅತ್ಯುತ್ತಮವೇ ಆಗಬೇಕಾಗುತ್ತದೆ ಎಂಬ ಹೇಳಿಕೆಯು ಇಡೀ ದೇಶಕ್ಕೆ ಸ್ಫೂರ್ತಿದಾಯಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು