ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ, ಕೇಂದ್ರದ ಕ್ರಮ ಸ್ವಾಗತಾರ್ಹ

Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಅಕ್ಷರ ಗಾತ್ರ

ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ (ಎನ್‌ಆರ್‌ಎಫ್‌) ಸ್ಥಾಪನೆಗೆ ಅನುಮೋದನೆ ನೀಡಿದೆ. ಈ ಪ್ರತಿಷ್ಠಾನಕ್ಕಾಗಿ ₹50 ಸಾವಿರ ಕೋಟಿ ಮೊತ್ತದ ನಿಧಿಯನ್ನು ಒದಗಿಸಲಾಗುತ್ತದೆ. ಇದು ಜ್ಞಾನ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಇರಿಸಿರುವ ಬಹಳ ದೊಡ್ಡ ಹೆಜ್ಜೆ. ಹಾಗೆ ನೋಡಿದರೆ ಈ ತೀರ್ಮಾನ ಕೈಗೊಂಡಿದ್ದು ಬಹಳ ತಡವಾಯಿತು ಎಂದು ಹೇಳಬೇಕಾಗುತ್ತದೆ.

ದೇಶದಾದ್ಯಂತ ಇರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವೈಜ್ಞಾನಿಕ ಸಂಶೋಧನೆಯನ್ನು ಉತ್ತೇಜಿಸಲು, ಅದಕ್ಕೆ ಹಣಕಾಸಿನ ನೆರವು ಒದಗಿಸಲು ಹಾಗೂ ಸಂಶೋಧನೆಗಳಿಗೆ ಮಾರ್ಗದರ್ಶನ ನೀಡಲು ಎನ್‌ಆರ್‌ಎಫ್‌ ಸ್ಥಾಪಿಸುವ ಆಲೋಚನೆ ಹುಟ್ಟಿಕೊಂಡಿತು. ಎಲ್ಲ ಕ್ಷೇತ್ರಗಳಲ್ಲಿ, ಅದರಲ್ಲೂ ಮುಖ್ಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಂಶೋಧನಾ ಸಾಮರ್ಥ್ಯವು ಬಹಳ ಕೆಳಮಟ್ಟದಲ್ಲಿ ಇದೆ.

ಭಾರತವು ಹೊಂದಿರುವ ಪ್ರತಿಭಾ ಸಂಪನ್ಮೂಲ, ಇಲ್ಲಿನ ಜನಸಂಖ್ಯೆ, ದೇಶದ ಆರ್ಥಿಕ ಸ್ಥಾನಮಾನ ಮತ್ತು ದೇಶವು ಹೊಂದಿರುವ ಮಹತ್ವಾಕಾಂಕ್ಷೆಗಳನ್ನು ಗಮನಿಸಿದರೆ ಸಂಶೋಧನೆಯ ವಿಚಾರದಲ್ಲಿ ದೇಶವು ಗಳಿಸಿರುವ ಸಾಮರ್ಥ್ಯವು ತೀರಾ ಕಡಿಮೆ. ವಿಶ್ವದರ್ಜೆಯ ಸಂಸ್ಥೆಗಳ ಜೊತೆ ಹೋಲಿಕೆ ಮಾಡಿದರೆ, ದೇಶದ ಬಹುತೇಕ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಕಳಪೆಯಾಗಿದೆ. ಅದರಲ್ಲೂ ಮುಖ್ಯವಾಗಿ, ಇಲ್ಲಿ ನಡೆಯುವ ಸಂಶೋಧನೆಗಳ ಪ್ರಮಾಣ ಕಡಿಮೆ ಹಾಗೂ ಗುಣಮಟ್ಟವು ಇನ್ನಷ್ಟು ಕಳಪೆ. ಹೊಸ ಸಂಶೋಧನೆಗಳು ಮತ್ತು ಅವುಗಳಿಗೆ ಹಕ್ಕುಸ್ವಾಮ್ಯ ಪಡೆಯುವಲ್ಲಿ ನಾವು ಇತರ ದೇಶಗಳಿಗಿಂತ ಬಹಳ ಹಿಂದೆ ಉಳಿದಿದ್ದೇವೆ. ನಮ್ಮಲ್ಲಿ ಸಂಶೋಧನೆಗೆ ಮಾಡುವ ವೆಚ್ಚ ಬಹಳ ಕಡಿಮೆ ಇರುವುದು ಇದಕ್ಕೆ ಒಂದು ಕಾರಣ. ಚೀನಾ ದೇಶವು ತನ್ನ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇ 2.6ರಷ್ಟು ಮೊತ್ತವನ್ನು ಸಂಶೋಧನೆಗಳಿಗೆ ವಿನಿಯೋಗಿಸುತ್ತದೆ. ಈಗ ತೊಡಗಿಸುತ್ತಿರುವ ಮೊತ್ತವನ್ನು ಪ್ರತಿವರ್ಷ ಶೇ 7ರಷ್ಟು ಹೆಚ್ಚಿಸುವ ಉದ್ದೇಶ ಹೊಂದಿದೆ. ಆದರೆ ಭಾರತವು ಸಂಶೋಧನೆಗಳಿಗೆ ಮಾಡುವ ವೆಚ್ಚವು ದೇಶದ ಒಟ್ಟು ಜಿಡಿಪಿಯ ಶೇ 0.66ರಷ್ಟು ಮಾತ್ರ. ನಾವು ಒಂದು ರಾಷ್ಟ್ರವಾಗಿ ಮಾಡುವ ವೆಚ್ಚಕ್ಕಿಂತಲೂ ವಿದೇಶಗಳಲ್ಲಿನ ಕೆಲವು ಕಂಪನಿಗಳು ಹೆಚ್ಚು ಮೊತ್ತವನ್ನು ಸಂಶೋಧನೆಗಳಿಗೆ ವಿನಿಯೋಗ ಮಾಡುತ್ತಿವೆ.

ಹೀಗಾಗಿ ಐದು ವರ್ಷಗಳ ಮುನ್ನೋಟವೊಂದನ್ನು ಹೊಂದಿರುವ ಎನ್‌ಆರ್‌ಎಫ್‌ ಸ್ಥಾಪನೆಯ ತೀರ್ಮಾನವು ಬಹಳ ಒಳ್ಳೆಯದು. ಇದು ‘ದೇಶದ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಾದ ಪ್ರಯೋಗಾಲಯಗಳ ಮೇಲೆ ಪ್ರಭಾವ ಬೀರುವ’ ಗುರಿಯನ್ನು ಹೊಂದಿದೆ. ಭಾರತದ ಖಾಸಗಿ ವಲಯವು ಸಂಶೋಧನೆಯ ಕ್ಷೇತ್ರದಲ್ಲಿ ಹೆಚ್ಚು ಉತ್ಸುಕತೆಯನ್ನು ತೋರಿಸುತ್ತಿಲ್ಲ. ಆದರೆ ಬಹುತೇಕ ದೇಶಗಳಲ್ಲಿ ಖಾಸಗಿ ವಲಯವು ಸಂಶೋಧನೆಯ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತಿರುತ್ತದೆ. ಅಲ್ಲದೆ, ಸಂಶೋಧನೆಗೆ ಸಂಬಂಧಿಸಿದಂತೆ ಅಲ್ಲಿ ಉದ್ಯಮಗಳು ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ನಿಕಟವಾದ ಸಂಬಂಧವೊಂದು ಇರುತ್ತದೆ. ಬೋಧನೆ ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ನಿಕಟ ಬಂಧವೊಂದು ನಿರ್ಮಾಣವಾಗುವ ಅಗತ್ಯ ಇದೆ ಎಂಬ ಮಾತು 2020ರ ಹೊಸ ಶಿಕ್ಷಣ ನೀತಿಯಲ್ಲಿ ಇದೆ. ಎನ್‌ಆರ್‌ಎಸ್‌ ಇದನ್ನು ಸಾಕಾರಗೊಳಿಸುವ ನಿರೀಕ್ಷೆ ಇಟ್ಟುಕೊಳ್ಳಬಹುದು. ದೇಶದ ಕೃಷಿ, ಉದ್ಯಮ ವಲಯಗಳಲ್ಲಿ ನಿರ್ದಿಷ್ಟ ಅಗತ್ಯಗಳು ಹಾಗೂ ನಿರ್ದಿಷ್ಟ ಸಮಸ್ಯೆಗಳು ಇವೆ. ಈ ಸಮಸ್ಯೆಗಳಿಗೆ ದೇಶದ ಒಳಗೇ ಪರಿಹಾರಗಳನ್ನು ಕಂಡುಕೊಳ್ಳಬೇಕು.

ಮೇಲಿನ ಹಂತಗಳಲ್ಲಿ ಉತ್ತಮ ಗುಣಮಟ್ಟದ ಸಂಶೋಧನೆಗಳು ಸಾಧ್ಯವಾಗಬೇಕು ಎಂದಾದರೆ ಶಾಲಾ ಶಿಕ್ಷಣದ ಗುಣಮಟ್ಟವು ಸುಧಾರಣೆ ಕಾಣಬೇಕು. ಮೂಲ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ಮತ್ತು ಪ್ರೋತ್ಸಾಹ ಸಿಗಬೇಕು. ಈ ದೃಷ್ಟಿಯಿಂದ ನೋಡುವುದಾದರೆ, ವಿಕಾಸವಾದ ಸಿದ್ಧಾಂತ ಕುರಿತ ಪಾಠಗಳನ್ನು ಪಠ್ಯಕ್ರಮದಿಂದ ಕೈಬಿಡುವುದು ಒಳ್ಳೆಯ ಸಂದೇಶ ರವಾನಿಸುವುದಿಲ್ಲ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಉದ್ದೀಪಿಸಬೇಕು. ಪ್ರಶ್ನಿಸುವ ಮನೋಭಾವ ಮತ್ತು ಸ್ಥಾಪಿತ ನಂಬಿಕೆಗಳನ್ನು ಟೀಕಿಸುವ ಮನೋಭಾವಕ್ಕೆ ಕೂಡ ಪ್ರೋತ್ಸಾಹ ಬೇಕು. ಮುಕ್ತ ವಾತಾವರಣ ಇದ್ದಲ್ಲಿ ಮಾತ್ರ ಹೊಸತನ ಹಾಗೂ ಸೃಜನಶೀಲತೆ ಅರಳುತ್ತದೆ. ಎನ್‌ಆರ್‌ಎಫ್‌ಗೆ ಪ್ರಧಾನಿಯವರು ಪದನಿಮಿತ್ತ ಅಧ್ಯಕ್ಷ ಆಗಿರುತ್ತಾರೆ ಎಂಬುದು ಅದಕ್ಕೆ ಸರ್ಕಾರವು ನೀಡುತ್ತಿರುವ ಮಹತ್ವವನ್ನು ಹೇಳುತ್ತಿದೆ. ಆದರೆ ಇದು ಇನ್ನೊಂದು ಅಧಿಕಾರಶಾಹಿ ವ್ಯವಸ್ಥೆ ಮಾತ್ರವೇ ಆಗಬಾರದು; ಬದಲಿಗೆ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯವಿರುವ ಸ್ವಾಯತ್ತೆ ಇದಕ್ಕೆ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT