ಶ್ರೀಲಂಕಾ ಮತ್ತು ಬಾಂಗ್ಲಾದೇಶದ ನಂತರ ದಕ್ಷಿಣ ಏಷ್ಯಾದಲ್ಲಿನ ಮತ್ತೊಂದು ದೇಶದ– ನೇಪಾಳದ– ಸರ್ಕಾರ ಸಾರ್ವಜನಿಕರ ಭಾರೀ ಪ್ರತಿಭಟನೆಯ ಆಕ್ರೋಶಕ್ಕೆ ಸಿಲುಕಿ ಪತನಗೊಂಡಿದೆ, ಪ್ರಧಾನಮಂತ್ರಿ ಅಧಿಕಾರದಿಂದ ಕೆಳಗಿಳಿದಿದ್ದಾರೆ. ಡಿಜಿಟಲ್ ತಂತ್ರಜ್ಞಾನವನ್ನು ತೀವ್ರವಾಗಿ ಹಚ್ಚಿಕೊಂಡಿರುವ ‘ಜೆನ್–ಝೀ’ ಯುವಶಕ್ತಿ ಪ್ರತಿಭಟನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಪ್ರತಿಭಟನಕಾರರ ಮೇಲೆ ಪೊಲೀಸರು ಕೈಗೊಂಡ ಕ್ರಮದಿಂದಾಗಿ ಅಪಾರ ಸಾವು–ನೋವು ಸಂಭವಿಸಿದೆ. ಸೆಪ್ಟೆಂಬರ್ 9ರಂದು ಸೇನೆ ಪರಿಸ್ಥಿತಿಯನ್ನು ತನ್ನ ತಹಬಂದಿಗೆ ತೆಗೆದುಕೊಳ್ಳುವ ಮೊದಲು ಕಠ್ಮಂಡು, ಪೊಖಾರ ಸೇರಿದಂತೆ ಹಲವು ಭಾಗಗಳಲ್ಲಿ ಎರಡು ದಿನಗಳ ಕಾಲ ಸಂಭವಿಸಿದ ಹಿಂಸಾಚಾರದಲ್ಲಿ ನೇಪಾಳ ನಲುಗಿದೆ. ಸಂಸತ್ ಭವನ, ಪ್ರಮುಖ ರಾಜಕಾರಣಿಗಳ ಮನೆಗಳು ಹಾಗೂ ರಾಜಕೀಯ ಪಕ್ಷಗಳ ಕಚೇರಿಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ. ಅರಾಜಕ ಪರಿಸ್ಥಿತಿ ತಲೆದೋರಿ, ಸಾರ್ವಜನಿಕ ಆಸ್ತಿ ದೊಡ್ಡಮಟ್ಟದಲ್ಲಿ ಹಾನಿಗೊಂಡಿದೆ. ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವ ವಿವೇಚನಾರಹಿತ ನಿರ್ಧಾರಕ್ಕೆ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಬೆಲೆ ತೆತ್ತಿದ್ದಾರೆ. 2015ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಓಲಿ ಅವರು, ಪ್ರಧಾನಿಯಾಗಿ ತಮ್ಮ ನಾಲ್ಕನೇ ಅವಧಿ ಮುಗಿಸುವ ಮೊದಲೇ ಅಧಿಕಾರ ಸ್ಥಾನದಿಂದ ನಿರ್ಗಮಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೇಲೆ ಹೇರಿದ ನಿರ್ಬಂಧ ಸರ್ಕಾರದ ಪತನಕ್ಕೆ ಮೇಲ್ನೋಟದ ಕಾರಣವಾಗಿದ್ದರೂ, ಜನರ ಮನಸ್ಸಿನಾಳದ ಸಿಟ್ಟು ಮತ್ತು ಹತಾಶೆ ಪ್ರತಿಭಟನೆ ತೀವ್ರಗೊಳ್ಳಲು ಕಿಡಿಗಳಾಗಿ ಪರಿಣಮಿಸಿವೆ. ಭ್ರಷ್ಟ ಹಾಗೂ ಸ್ವಾರ್ಥಿ ಜನಪ್ರತಿನಿಧಿಗಳ ಬಗೆಗಿನ ಜನಾಕ್ರೋಶ ಕಿಚ್ಚಾಗಿ ಪರಿಣಮಿಸಿದೆ. ಸ್ವಹಿತಾಸಕ್ತಿಯಷ್ಟೇ ಮುಖ್ಯವಾದ ನಾಯಕರ ಶ್ರೀಮಂತಿಕೆ ನಿರಂತರವಾಗಿ ಒಂದೆಡೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಅಸಮಾನತೆ, ಬಡತನ ಹಾಗೂ ನಿರುದ್ಯೋಗದಂಥ ಸಮಸ್ಯೆಗಳು ಉಲ್ಬಣಗೊಳ್ಳುತ್ತಿರುವ ವಿರೋಧಾಭಾಸ ನೇಪಾಳದ್ದಾಗಿದೆ. ಸಮಸ್ಯೆಗಳಿಂದ ರೋಸಿಹೋಗಿರುವ ಜನ ಬೀದಿಗಿಳಿಯಲು ಸಾಮಾಜಿಕ ಜಾಲತಾಣಗಳ ನಿರ್ಬಂಧ ನೇರ ಕಾರಣವಾಗಿ ಒದಗಿಬಂದಿದೆ.

ನೇಪಾಳದ ನಾಗರಿಕರ ಪಾಲಿಗೆ ಸಾಮಾಜಿಕ ಮಾಧ್ಯಮ ಬರೀ ಮನರಂಜನೆಗೆ ಸೀಮಿತವಾಗಿ ಉಳಿದಿಲ್ಲ. ಸುದ್ದಿಮೂಲವಾಗಿ, ವಾಣಿಜ್ಯ ವಹಿವಾಟಿನ ವೇದಿಕೆಯಾಗಿ ಹಾಗೂ ಜೀವನೋಪಾಯದ ದಾರಿಯಾಗಿಯೂ ಬಹಳಷ್ಟು ನೇಪಾಳೀಯರಿಗೆ ಅತ್ಯವಶ್ಯವಾದ ಸಂಪರ್ಕ ಕೊಂಡಿಯಾಗಿದೆ. ರಾಜಕಾರಣಿಗಳು ಮತ್ತು ಅವರ ಪ್ರಭಾವದಡಿ ಗುರ್ತಿಸಿಕೊಂಡ ಮಕ್ಕಳ ಭ್ರಷ್ಟಾಚಾರ ಮತ್ತು ಲೋಲುಪ ಜೀವನವನ್ನು ಬಯಲು ಮಾಡುವ ಮಾಹಿತಿ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ಮಾಧ್ಯಮವಾಗಿಯೂ ನೇಪಾಳದ ಜನಸಾಮಾನ್ಯರಿಗೆ ಸಾಮಾಜಿಕ ಜಾಲತಾಣಗಳು ಒದಗಿಬಂದಿವೆ. ಸರ್ಕಾರದ ವೈಫಲ್ಯ, ರಾಜಕಾರಣಿಗಳ ಸಮಯಸಾಧಕತನ, ದೇಶದಲ್ಲಿನ ಆರ್ಥಿಕ ಬಿಕ್ಕಟ್ಟು ಮತ್ತು ಸಮಾಜದಲ್ಲಿನ ಅಸಮಾನತೆಯನ್ನು ಬಯಲು ಮಾಡುವುದರಲ್ಲಿಯೂ ಸಾಮಾಜಿಕ ಮಾಧ್ಯಮಗಳದು ಪ್ರಮುಖ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅನಾವರಣಗೊಂಡ ಸಮಾಜದ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಾಗಿದ್ದ ಓಲಿ ನೇತೃತ್ವದ ಸರ್ಕಾರ, ಮಾಧ್ಯಮ ಹಾಗೂ ಅದರ ಬಳಕೆದಾರರನ್ನು ಹತ್ತಿಕ್ಕಲು ಮುಂದಾಯಿತು. ಸರ್ಕಾರದ ಈ ಕ್ರಮ ಜನಮಾನಸದಲ್ಲಿದ್ದ ದೀರ್ಘಕಾಲದ ಅಸಮಾಧಾನ ಪ್ರತಿಭಟನೆಯ ರೂಪದಲ್ಲಿ ಸ್ಫೋಟಗೊಳ್ಳಲು ಕಾರಣವಾಯಿತು. ಆ ಪ್ರತಿಭಟನೆಗಳನ್ನು ಹತ್ತಿಕ್ಕಲು ಮುಂದಾದ ಸರ್ಕಾರ ಕೊನೆಗೆ ಅಧಿಕಾರದಿಂದ ಕೆಳಗಿಳಿಯುವ ಸ್ಥಿತಿ ತಂದುಕೊಂಡಿದೆ.

ನೇಪಾಳದಲ್ಲಿನ ಚುನಾಯಿತ ಸರ್ಕಾರವು ಯಾವುದೇ ಅನುಕಂಪಕ್ಕೆ ಅರ್ಹವಲ್ಲದ ದುಃಸ್ಥಿತಿಯನ್ನು ತನ್ನಷ್ಟಕ್ಕೆ ಆಹ್ವಾನಿಸಿಕೊಂಡಿದೆ. ಸದ್ಯದ ಬಿಕ್ಕಟ್ಟಿನ ಸಂದರ್ಭ ರಾಜಕೀಯ ಕಿಡಿಗೇಡಿತನದ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವಂತಿದೆ ಹಾಗೂ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದಮನಗೊಳಿಸಲು ರಾಜಪರಿವಾರಕ್ಕೆ ಆಸ್ಪದ ಒದಗಿಸುವಂತಿದೆ. ಇಂತಹ ಪ್ರಯತ್ನಗಳಿಗೆ ವಿದೇಶಿ ಶಕ್ತಿಗಳ ನೆರವು ಕೂಡ ರಾಜಪರಿವಾರಕ್ಕೆ ದೊರೆಯುವ ಸಾಧ್ಯತೆ ಇದ್ದೇ ಇದೆ. ನೇಪಾಳದಲ್ಲಿನ ಅಸ್ಥಿರತೆ ಮತ್ತು ಆಡಳಿತದಲ್ಲಿನ ಬದಲಾವಣೆ, ಭಾರತ ಮತ್ತು ಚೀನಾಗಳ ಮೇಲೆ ಉಂಟು ಮಾಡಬಹುದಾದ ಪರಿಣಾಮ ಗೌಣವಾದುದು. ನೇಪಾಳದಲ್ಲಿನ ಗೊಂದಲದ ಪರಿಸ್ಥಿತಿ ಮತ್ತು ಆಡಳಿತದಲ್ಲಿನ ಬದಲಾವಣೆಯನ್ನು ಭಾರತ ಸಹಾನುಭೂತಿಯಿಂದ ನೋಡಬೇಕಾಗಿದೆ, ಎಚ್ಚರದಿಂದ ಗಮನಿಸಬೇಕಾಗಿದೆ ಹಾಗೂ ರಾಜತಾಂತ್ರಿಕ ಜಾಣ್ಮೆಯಿಂದ ವ್ಯವಹರಿಸಬೇಕಾಗಿದೆ. ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವುದು ಹಾಗೂ ಭ್ರಷ್ಟರನ್ನು ಏಕಾಂಗಿಗಳನ್ನಾಗಿಸುವುದು ಎಲ್ಲರ ಆದ್ಯತೆ ಆಗಬೇಕಾಗಿದೆ. ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಂಬಲಿಸುವುದರ ಜೊತೆಗೆ ನೇಪಾಳದ ಆರ್ಥಿಕ ಸ್ಥಿತಿಯ ಪುನರುಜ್ಜೀವನಕ್ಕೆ ಅಗತ್ಯವಾದ ನೆರವು ನೀಡುವುದು ಹಾಗೂ ದಕ್ಷಿಣ ಏಷ್ಯಾದ ವ್ಯವಹಾರಗಳಲ್ಲಿ ಪಶ್ಚಿಮ ದೇಶಗಳ ಹಸ್ತಕ್ಷೇಪವನ್ನು ತಡೆಯುವುದು ನೆರೆಯ ದೇಶವಾಗಿ ಭಾರತದ ಕರ್ತವ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.