ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸರ್ಕಾರ ರಚನೆಗೆ ಯತ್ನ ಇಲ್ಲ: ‘ಇಂಡಿಯಾ’ ಕೂಟದ ನಡೆ ಸರಿ

Published 7 ಜೂನ್ 2024, 0:23 IST
Last Updated 7 ಜೂನ್ 2024, 0:23 IST
ಅಕ್ಷರ ಗಾತ್ರ

ಕೇಂದ್ರದಲ್ಲಿ ಸರ್ಕಾರ ರಚಿಸುವ ಪ್ರಯತ್ನಕ್ಕೆ ಈಗ ಮುಂದಾಗದೇ ಇರುವ ಮೂಲಕ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಒಳ್ಳೆಯ ಕೆಲಸವನ್ನೇ ಮಾಡಿದೆ. ಕೇಂದ್ರದಲ್ಲಿ ಸರ್ಕಾರ ರಚಿಸಲು ಇತರ ಕೆಲವು ಪಕ್ಷಗಳ ಬೆಂಬಲವನ್ನು ಈ ಮೈತ್ರಿಕೂಟವು ಯಾಚಿಸುವ ಉದ್ದೇಶ ಹೊಂದಿದೆ ಎಂಬ ವರದಿಗಳು ಇದ್ದವು. ಆದರೆ ಆ ರೀತಿಯ ಯತ್ನಕ್ಕೆ ಮೈತ್ರಿಕೂಟವು ಮುಂದಾಗಿದ್ದರೆ ಅದು ಜನಾದೇಶಕ್ಕೆ ವಿರುದ್ಧವಾದ ನಡೆ ಆಗುತ್ತಿತ್ತು. ಇಂಡಿಯಾ ಮೈತ್ರಿಕೂಟವು ಈಗಿನ ಪರಿಸ್ಥಿತಿಯಲ್ಲಿ ಬಲಿಷ್ಠವಾದ ಹಾಗೂ
ಪರಿಣಾಮಕಾರಿಯಾದ ವಿರೋಧ ಪಕ್ಷವಾಗಿ ಕೆಲಸ ಮಾಡಲಿ ಎಂಬ ಇಂಗಿತವನ್ನು ಮತದಾರರು ವ್ಯಕ್ತ
ಪಡಿಸಿದ್ದಾರೆ. ಸರ್ಕಾರ ರಚಿಸಲು ರಾಷ್ಟ್ರಪತಿಯಿಂದ ಬರುವ ಆಹ್ವಾನವನ್ನು ಬಿಜೆಪಿ ನಿರಾಕರಿಸಿದರೆ,
ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಾಗದೇ ಇದ್ದರೆ ಅಥವಾ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಉರುಳಿದರೆ ಮಾತ್ರ ಇಂಡಿಯಾ ಮೈತ್ರಿಕೂಟವು ಸರ್ಕಾರ ರಚನೆಗೆ ಯತ್ನ ನಡೆಸಬಹುದು. ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಾಗೂ ಚುನಾವಣಾಪೂರ್ವ ರಾಜಕೀಯ ಮೈತ್ರಿಕೂಟದ ನಾಯಕನ ಸ್ಥಾನದಲ್ಲಿರುವ ಬಿಜೆಪಿಯು ಈಗ ಸರ್ಕಾರ ರಚನೆಗೆ ಹಕ್ಕು ಮಂಡಿಸಬಹುದು. ಇಂಡಿಯಾ ಮೈತ್ರಿಕೂಟಕ್ಕಿಂತಲೂ ಎನ್‌ಡಿಎ ಮೈತ್ರಿಕೂಟವು ಹೆಚ್ಚು ಸ್ಥಾನಗಳನ್ನು ಪಡೆದಿದೆ. ಜನಾದೇಶವನ್ನು ಇಂಡಿಯಾ ಮೈತ್ರಿಕೂಟ ಗೌರವಿಸಬೇಕು ಹಾಗೂ ಸರ್ಕಾರ ರಚಿಸುವ ಯತ್ನಗಳಿಗೆ ಮುಂದಾಗಬಾರದು. ಒಂದು ವೇಳೆ ಸರ್ಕಾರ ರಚಿಸಲು ಯತ್ನ ನಡೆಸಿದಲ್ಲಿ ಅದು
ಅಪ್ರಜಾಸತ್ತಾತ್ಮಕ ನಡೆ ಆಗಲಿದೆ.

ಸಂಸತ್ತಿನ ಒಳಗೆ ಮತ್ತು ಹೊರಗೆ ಪರಿಣಾಮಕಾರಿಯಾದ ಹಾಗೂ ವಿಶ್ವಾಸಾರ್ಹವಾದ ವಿರೋಧ ಪಕ್ಷವಾಗಿ ಕೆಲಸ ಮಾಡುವ, ಹೊಸ ಸರ್ಕಾರವನ್ನು ಅದರ ನೀತಿಗಳು ಹಾಗೂ ಕಾರ್ಯಗಳ ವಿಚಾರದಲ್ಲಿ ಉತ್ತರದಾಯಿ ಆಗಿಸುವ ಹೊಣೆ ಈಗ ಇಂಡಿಯಾ ಮೈತ್ರಿಕೂಟದ ಮೇಲೆ ಇದೆ. ಈ ಕೆಲಸ ಮಾಡಲು ಬೇಕಿರುವ ಶಕ್ತಿಯು ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಲೋಕಸಭೆಯಲ್ಲಿ ಸಿಕ್ಕಿದೆ. ಇದನ್ನು ಉಪೇಕ್ಷಿಸಲು ಸರ್ಕಾರಕ್ಕೆ ಇನ್ನು ಮುಂದೆ ಆಗುವುದಿಲ್ಲ. ಹಿಂದಿನ ಲೋಕಸಭೆಯಲ್ಲಿ ಮಾಡಿದಂತೆ, ವಿರೋಧ ಪಕ್ಷಗಳ ಮಾತುಗಳನ್ನು ಸಾರಾಸಗಟಾಗಿ ತಳ್ಳಿಹಾಕಲು ಕೂಡ ಸರ್ಕಾರಕ್ಕೆ ಆಗುವುದಿಲ್ಲ. ವಿರೋಧ ಪಕ್ಷಗಳ ಮೈತ್ರಿಕೂಟವು ಈಗ ಸಂಸತ್ತನ್ನು ಮತ್ತೆ ಹಳೆಯ ಒಳ್ಳೆಯ ದಿನಗಳ ಕಡೆ ಒಯ್ಯುವ, ವಿರೋಧ ಪಕ್ಷಗಳ ಜೊತೆ ಸರ್ಕಾರವು ಸಂವಾದ ನಡೆಸುವಂತೆ ಮಾಡುವ, ಶಾಸನಗಳನ್ನು ರೂಪಿಸುವ ಸಂದರ್ಭದಲ್ಲಿ ವಿಸ್ತೃತ ಚರ್ಚೆಗಳು ಆಗುವಂತೆ ನೋಡಿಕೊಳ್ಳುವ ಕೆಲಸ ಮಾಡಬಹುದು. ಈ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಸಂಸತ್ತನ್ನು ಬಹಳ ಅನಾದರದಿಂದ ಕಂಡಿದೆ. ಸಂಸತ್ತು ಈ ದೇಶದ ಪಾಲಿನ ಹೃದಯವಿದ್ದಂತೆ, ಸಂಸತ್ತಿಗೆ ಕೊಡಬೇಕಾದ ಮಹತ್ವವನ್ನು ಕೊಡದೇ ಇದ್ದುದು ಬಹಳ ಕೆಡುಕನ್ನು ಉಂಟುಮಾಡಿದೆ. ಈಗ ಸಂಸತ್ತಿಗೆ ಮತ್ತೆ ಗೌರವವನ್ನು ತಂದುಕೊಡುವ ಕೆಲಸ ಮಾಡುವ ಅವಕಾಶ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಇದೆ. ಸಂಸತ್ತು ಹಾಗೂ ಇತರ ಸಾಂವಿಧಾನಿಕ ಸಂಸ್ಥೆಗಳಿಗಿಂತ ತಾವು ಮೇಲು ಎಂಬಂತೆ ವರ್ತಿಸಿರುವ ಪ್ರಧಾನಿಯವರು ಸಂಸತ್ತಿನ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು ಸಾಧ್ಯವಾದಲ್ಲಿ, ಅದೊಂದು ದೊಡ್ಡ ಯಶಸ್ಸಾಗಲಿದೆ.

ಸಂಸತ್ತಿನ ಹೊರಗಡೆಯೂ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ದೊಡ್ಡ ಜವಾಬ್ದಾರಿಯೊಂದು ಕಾದಿದೆ. ಆ ಜವಾಬ್ದಾರಿಯನ್ನು ನಿರ್ವಹಿಸಲು ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಜೊತೆಯಾಗಬೇಕಿದೆ. ಇಂಡಿಯಾ ಮೈತ್ರಿಕೂಟವು ಚುನಾವಣಾ ಪೂರ್ವದಲ್ಲಿ ರಚನೆಯಾದ ಒಂದು ಮೈತ್ರಿಕೂಟ. ಅದು ಇನ್ನು ಮುಂದೆ ಬಲಿಷ್ಠವಾದ, ಒಗ್ಗಟ್ಟಿನಿಂದ ಕೆಲಸ ಮಾಡುವ, ಸ್ಪಷ್ಟವಾದ ನೀತಿಗಳು ಹಾಗೂ ಗುರಿಗಳು ಇರುವ ರಾಜಕೀಯ ಮೈತ್ರಿಕೂಟವಾಗಿ ಕೆಲಸ ನಿರ್ವಹಿಸಬೇಕಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹಲವು ನೀತಿಗಳು, ನಿರ್ಧಾರಗಳ ಬಗ್ಗೆ ಸಾರ್ವಜನಿಕರು ಪರಿಶೀಲನೆ ನಡೆಸುವಂತಹ ಸನ್ನಿವೇಶ
ವನ್ನು ಸೃಷ್ಟಿಸುವಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟವು ಯಶಸ್ಸು ಕಂಡಿದೆ. ಅಲ್ಲದೆ, ಚುನಾವಣೆಯಲ್ಲಿ ಚರ್ಚೆಯು ಸಾರ್ವಜನಿಕರ ಬದುಕಿನ ಪ್ರಶ್ನೆಗಳ ಬಗ್ಗೆ ಕೇಂದ್ರೀಕೃತ ಆಗುವಂತೆ ಮಾಡುವಲ್ಲಿಯೂ ಯಶಸ್ಸು ಕಂಡಿದೆ. ಆದರೆ ಹಲವು ಕ್ಷೇತ್ರಗಳಲ್ಲಿ ಈ ಮೈತ್ರಿಕೂಟದ ಅಭ್ಯರ್ಥಿಗಳು ಪಡೆದ ಮತಗಳು ಆಡಳಿತದ ವಿರುದ್ಧದ ಮತಗಳಾಗಿದ್ದವೇ ಹೊರತು, ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಚಲಾವಣೆಯಾದ
ಮತಗಳಾಗಿರಲಿಲ್ಲ. ಕೇಂದ್ರ ಸರ್ಕಾರವು ಜನರ ಮುಂದೆ ಇರಿಸುವ ನೀತಿ, ನಿರ್ಧಾರಗಳನ್ನು ಪ್ರಶ್ನಿಸುವ ಕಾರ್ಯಕ್ರಮಗಳನ್ನು ವಿರೋಧ ಪಕ್ಷಗಳ ಮೈತ್ರಿಕೂಟವು ರೂಪಿಸಬೇಕಿದೆ. ಹೊಸದಾಗಿ ರಚನೆ ಆಗಲಿರುವ ಸರ್ಕಾರವು ಹೊಸ ನೀತಿಗಳನ್ನು ರೂಪಿಸಲಿದೆ, ವಿರೋಧ ಪಕ್ಷಗಳ ಮೈತ್ರಿಕೂಟವು ಅವುಗಳನ್ನು ಪರಿಗಣಿಸಿ ತನ್ನ ಪ್ರತಿಕ್ರಿಯೆಗಳನ್ನು ರೂಪಿಸಬೇಕಿದೆ ಎಂಬುದನ್ನು ಮರೆಯುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT