ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ರಾಜಕೀಯ ಬಿಸಿ ಏರಿಸಲಿರುವ ಈಶಾನ್ಯ ರಾಜ್ಯಗಳ ಚುನಾವಣೆ

Last Updated 19 ಜನವರಿ 2023, 19:38 IST
ಅಕ್ಷರ ಗಾತ್ರ

ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ವಿಧಾನಸಭೆಗಳ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗವು ಘೋಷಿಸಿದೆ. ಈ ಮೂಲಕ ಸುದೀರ್ಘ ಚುನಾವಣಾ ಹಂಗಾಮು ದೇಶದಲ್ಲಿ ಶುರುವಾಗಿದೆ. ತ್ರಿಪುರಾದಲ್ಲಿ ಫೆಬ್ರುವರಿ 16, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆಬ್ರುವರಿ 27ರಂದು ಮತದಾನ ನಡೆಯಲಿದೆ. ಈ ವರ್ಷ ಒಂಬತ್ತು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು, ಈ ಮೂರು ರಾಜ್ಯಗಳ ಮೂಲಕ ಪ್ರಕ್ರಿಯೆ ಆರಂಭವಾಗಿದೆ. ಈ ವರ್ಷ ನಡೆಯುವ ಚುನಾವಣೆಗಳು ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಗೆ ವೇದಿಕೆ ಸಿದ್ಧಪಡಿಸಲಿವೆ.

ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸಿದ ಬಿಜೆಪಿ, ಈ ಎಲ್ಲ ರಾಜ್ಯಗಳಲ್ಲಿ ಗೆಲ್ಲುವುದಾಗಿ ಘೋಷಿಸಿದೆ. ಬಿಜೆಪಿ ಸದಾ ತನ್ನ ಗುರಿಯನ್ನು ದೊಡ್ಡದಾಗಿಯೇ ಇರಿಸಿಕೊಳ್ಳುತ್ತದೆ; ಅದನ್ನು ಸಾಧಿಸುವುದಕ್ಕಾಗಿ ತನ್ನಲ್ಲಿರುವ ಎಲ್ಲ ಸಂಪನ್ಮೂಲಗಳನ್ನೂ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುತ್ತದೆ. ಮೊದಲಿಗೆ ಚುನಾವಣೆ ನಡೆಯಲಿರುವ ಮೂರು ಸಣ್ಣ ರಾಜ್ಯಗಳು ಭಾರತದ ರಾಜಕಾರಣದ ಕೇಂದ್ರ ಸ್ಥಾನದಲ್ಲಿಯೇನೂ ಇಲ್ಲ. ಹಾಗಿದ್ದರೂ ಬಿಜೆಪಿ ಈ ರಾಜ್ಯಗಳ ಚುನಾವಣೆಗಳನ್ನೂ ಲಘುವಾಗಿ ಪರಿಗಣಿ ಸುವುದಿಲ್ಲ. ಈಶಾನ್ಯ ಭಾರತದಲ್ಲಿ ಪಕ್ಷದ ಪ್ರಾಬಲ್ಯ ಇದೆ ಮತ್ತು ಅದನ್ನು ಹಾಗೆಯೇ ಉಳಿಸಿಕೊಂಡು ಹೋಗಲು ಬಿಜೆಪಿ ಬಯಸಿದೆ. ಬಿಜೆಪಿಗೆ ಇಲ್ಲಿ ಹಿನ್ನಡೆಯಾದರೆ ಅದು ದೊಡ್ಡ ಹೊಡೆತವಾಗಿಯೇ ಪರಿಣಮಿಸಬಹುದು. ಹಾಗಾಗಿ, ಬಿಜೆಪಿ ಪ್ರಾಬಲ್ಯ ಕುಗ್ಗಿಸಲು ವಿರೋಧ ಪಕ್ಷಗಳು ಎಲ್ಲ ಪ್ರಯತ್ನಗಳನ್ನೂ ನಡೆಸಬಹುದು.

ತ್ರಿಪುರಾದಲ್ಲಿ ಬಿಜೆಪಿಗೆ ಗಂಭೀರವಾದ ಸವಾಲೇ ಇದೆ. ಚುನಾವಣೆ ನಡೆಯಲಿರುವ ಮೂರು ರಾಜ್ಯಗಳಲ್ಲಿ ರಾಜಕೀಯವಾಗಿ ತ್ರಿಪುರಾ ಹೆಚ್ಚು ಮಹತ್ವದ್ದಾಗಿದೆ. ತ್ರಿಪುರಾದಲ್ಲಿ ಬಿಜೆಪಿಯು ಮುಖ್ಯವಾಗಿ ಪಕ್ಷಾಂತರಿಗಳಿಂದಲೇ ರೂಪುಗೊಂಡಿದೆ ಮತ್ತು ಆ ಕಾರಣಕ್ಕಾಗಿಯೇ ಹಲವು ಆಂತರಿಕ ಸಮಸ್ಯೆಗಳು ಇವೆ. ಮುಖ್ಯಮಂತ್ರಿಯಾಗಿದ್ದ ವಿಪ್ಲವ್‌ ದೇವ್‌ ಅವರನ್ನು ಕಳೆದ ವರ್ಷ ಬದಲಾಯಿಸಬೇಕಾಗಿ ಬಂದಿತ್ತು. ಮಿತ್ರ ಪಕ್ಷ ಐಪಿಎಫ್‌ಟಿ ಜೊತೆಗಿನ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ. ಸಿಪಿಎಂ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿ ಏರ್ಪಡಬಹುದು. ಇತ್ತೀಚಿನ ತಿಂಗಳುಗಳಲ್ಲಿ ನೆಲೆ ಕಂಡುಕೊಂಡಿರುವ ಟಿಪ್ರ ಮೊಥಾ ಪಕ್ಷವನ್ನೂ ಜೊತೆಗೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ ಕೂಡ ಸಕ್ರಿಯವಾಗಿದೆ. ಆದರೆ, ಈ ಪಕ್ಷವು ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟವನ್ನು ಸೇರಿಕೊಳ್ಳಲಿಕ್ಕಿಲ್ಲ. ಹಾಗಾಗಿ, ಬಿಜೆಪಿ ವಿರೋಧಿ ಮತಗಳ ವಿಭಜನೆಗೆ ಕಾರಣವಾಗಬಹುದು. ಚುನಾವಣಾಪೂರ್ವದಲ್ಲಿ ಯಾವುದೇ ಹಿಂಸೆ ನಡೆಯದಂತೆ ನೋಡಿಕೊಳ್ಳುವ ಬಹುದೊಡ್ಡ ಹೊಣೆಗಾರಿಕೆ ಚುನಾವಣಾ ಆಯೋಗದ ಮೇಲೆ ಇದೆ.

ಮೇಘಾಲಯದಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ನಡುವೆ ಮೈತ್ರಿ ಇದೆ. ಆದರೆ, ಈ ಎರಡೂ ಪಕ್ಷಗಳ ನಡುವಣ ಸಂಬಂಧ ಚೆನ್ನಾಗಿಲ್ಲ. ಹಾಗಾಗಿ, ಸಂಗ್ಮಾ ಅವರು ಮೈತ್ರಿಯನ್ನು ತೊರೆದು ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚು. ಏಕರೂಪ ನಾಗರಿಕ ಸಂಹಿತೆಯಂತಹ ಬಿಜೆಪಿಯ ಕೆಲವು ನೀತಿಗಳನ್ನು ಒಪ್ಪುವುದಿಲ್ಲ ಎಂದು ಸಂಗ್ಮಾ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಕ್ರೈಸ್ತರೇ ಹೆಚ್ಚಾಗಿರುವ ಈ ರಾಜ್ಯದಲ್ಲಿ ಇದೊಂದು ಚುನಾವಣಾ ತಂತ್ರವಾಗಿ ಕಾಣಬಹುದು. ಮೇಘಾಲಯದ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಲಾಭವೇನೂ ಆಗದು. ಬಿಜೆಪಿ ಆಳ್ವಿಕೆ ಇರುವ ಅಸ್ಸಾಂ ಜೊತೆಗಿನ ಗಡಿ ವಿವಾದವು ಚುನಾವಣೆಯ ಮುಖ್ಯ ವಿಷಯಗಳಲ್ಲಿ ಒಂದಾಗಬಹುದು. ನಾಗಾಲ್ಯಾಂಡ್‌ನಲ್ಲಿಯೂ ಸ್ಥಳೀಯ ಪಕ್ಷಗಳ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಕೂಟವು ಅಧಿಕಾರದಲ್ಲಿಯೂ ಇದೆ. ಆದರೆ, ಈ ಪಕ್ಷಗಳ ಜೊತೆಗೂ ಬಿಜೆಪಿಯ ಸಂಬಂಧ ಅಷ್ಟಕ್ಕಷ್ಟೇ ಆಗಿದೆ. ನಾಗಾ ಬಂಡುಕೋರ ಗುಂಪುಗಳ ಜೊತೆಗೆ ನಡೆದ ಶಾಂತಿ ಮಾತುಕತೆಯು ಫಲಪ್ರದ ಆಗಿಲ್ಲ. ಪೂರ್ವ ಭಾಗದ ಅತಿ ಹಿಂದುಳಿದ ಆರು ಜಿಲ್ಲೆಗಳನ್ನು ಸೇರಿಸಿ ‘ಫ್ರಾಂಟಿಯರ್‌ ನಾಗಾಲ್ಯಾಂಡ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಗಿಸಬೇಕು ಎಂಬ ಬೇಡಿಕೆ ಇದೆ. ಮೂರು ರಾಜ್ಯಗಳ ಚುನಾವಣೆಗಳು ದೇಶದಲ್ಲಿ ಚುನಾವಣಾ ಬಿಸಿ ಏರುವಂತೆ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT