ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾತಂತ್ರಕ್ಕಾದ ಅಪಚಾರಕ್ಕೆ ಯಾರು ಹೊಣೆ?

Last Updated 12 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಕರ್ನಾಟಕದ ವಿಧಾನಸಭೆಯಲ್ಲಿ ಬಹುಕಾಲದ ನಂತರ ಮಾತು ಗೆಲುವು ಸಾಧಿಸಿತು. ದುರದೃಷ್ಟವಶಾತ್ ಇದು ಜನತಂತ್ರದ ಗೆಲುವಿಗೆ ಕಾರಣವಾಗಲಿಲ್ಲ. ವಿಧಾನಸಭೆಯ ಸದಸ್ಯರು ಗದ್ದಲ ಮಾಡುವುದರ ಬದಲಿಗೆ ಗಂಭೀರವಾಗಿ ಒಂದು ವಿಚಾರದ ಬಗ್ಗೆ ವಾದ, ಪ್ರತಿವಾದಗಳನ್ನು ಮಂಡಿಸುವ ಮೂಲಕ ಚರ್ಚೆ ನಡೆಸಿದರು.

ಇದಕ್ಕೆ ಕಾರಣವಾದದ್ದು ‘ಆಪರೇಷನ್ ಕಮಲ’ ಧ್ವನಿಸುರುಳಿ. ಆದರೆ, ಚರ್ಚೆಯು ಧ್ವನಿಸುರುಳಿಯಲ್ಲಿ ಪ್ರಸ್ತಾಪವಾಗಿರುವ ಒಂದು ಅಂಶಕ್ಕೆ ಸೀಮಿತವಾಗಿತ್ತೇ ಹೊರತು ಅದು ಬಯಲು ಮಾಡಿರುವ ಜನತಂತ್ರವನ್ನೇ ಸೋಲಿಸುವ ವಿಚಾರಗಳಿಗೆ ವಿಸ್ತರಿಸಿಕೊಳ್ಳಲಿಲ್ಲ. ‘ಆಪರೇಷನ್ ಕಮಲ’ಕ್ಕೆ ಸಂಬಂಧಿಸಿದ ಧ್ವನಿಸುರುಳಿಯಲ್ಲಿ ಪ್ರಸ್ತಾಪವಾಗಿರುವ ವಿಚಾರಗಳು ಮೂರು ಅಂಶಗಳನ್ನು ಸ್ಪಷ್ಟಪಡಿಸುತ್ತವೆ.

ಮೊದಲನೆಯದು, ‘ಆಪರೇಷನ್ ಕಮಲ’ದ ಪ್ರಯತ್ನವೊಂದು ಚಾಲ್ತಿಯಲ್ಲಿದೆ ಎಂಬುದು. ಎರಡನೆಯದು, ಹಣದ ಆಮಿಷವೊಡ್ಡಿ ತಥಾಕಥಿತ ‘ಅತೃಪ್ತ ಶಾಸಕ’ರನ್ನು ಹುಟ್ಟುಹಾಕುವ ಕೆಲಸದಲ್ಲಿ ಕೆಲವರು ತೊಡಗಿಕೊಂಡಿದ್ದರು ಎಂಬ ವಿಚಾರ. ಮೂರನೆಯದು, ನೋಟು ರದ್ದತಿಯ ನಂತರವೂ ಕಪ್ಪು ಹಣದ ಪ್ರಮಾಣವೇನೂ ಕಡಿಮೆಯಾಗಿಲ್ಲ ಎಂಬ ವಿಲಕ್ಷಣ ಸತ್ಯ! ಈ ಮೂರೂ ಅಂಶಗಳು ಒಟ್ಟಾಗಿ ಸಾಬೀತುಪಡಿಸುವ ಮತ್ತೊಂದು ವಿಷಯವೆಂದರೆ ಜನತಂತ್ರಕ್ಕೆ ಅಪಚಾರವೆಸಗುವ ಕೆಲಸದಲ್ಲಿ ರಾಜಕೀಯ ಪಕ್ಷಗಳು ಮತ್ತು ಚುನಾಯಿತ ಪ್ರತಿನಿಧಿಗಳೇ ತೊಡಗಿಸಿಕೊಂಡಿದ್ದಾರೆ ಎಂಬುದು.

‘ಆಪರೇಷನ್ ಕಮಲ’ ಧ್ವನಿಸುರುಳಿಯಲ್ಲಿ ಯಾರು ಯಾರು ಮಾತನಾಡಿದ್ದಾರೆ ಎಂಬುದು ಈಗ ತನಿಖೆ ಮಾಡಬೇಕಾದ ವಿಷಯವಾಗಿ ಉಳಿದಿಲ್ಲ. ಅದರ ಪ್ರಧಾನ ಪಾತ್ರಧಾರಿಯೊಬ್ಬರು ಇದು ತನ್ನದೇ ಧ್ವನಿ ಎಂದು ಹೇಳಿದ್ದಾರೆ. ವಿಧಾನಸಭೆಯ ಸದಸ್ಯರ ಮಟ್ಟಿಗೆ ಬಹುಮುಖ್ಯವಾದದ್ದು ಈ ಧ್ವನಿಸುರುಳಿಯಲ್ಲಿ ಸಭಾಧ್ಯಕ್ಷರ ಹೆಸರು ಪ್ರಸ್ತಾಪವಾದದ್ದು ಮಾತ್ರ. ಇದೊಂದು ಮುಖ್ಯವಾದ ವಿಚಾರ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇದೊಂದೇ ಮುಖ್ಯ ವಿಚಾರವಾಗಿ ಉಳಿದೆಲ್ಲವನ್ನೂ ಚರ್ಚಿಸದೆಯೇ ಬಿಟ್ಟುಬಿಡುವುದರ ಅರ್ಥವೇನು? ಶಾಸಕರಿಗೆ ಹಣ ಮತ್ತು ಹುದ್ದೆಗಳ ಆಮಿಷವೊಡ್ಡುವುದು ಅಷ್ಟೇನೂ ಮುಖ್ಯ ವಿಚಾರವಲ್ಲ ಎಂದೇ? ಅಥವಾ ರಾಜಕಾರಣದಲ್ಲಿ ಇದು ನಿತ್ಯದ ವ್ಯವಹಾರ. ಆದರೆ, ಇದರಲ್ಲಿ ಸಭಾಧ್ಯಕ್ಷರನ್ನು ಎಳೆದುತಂದಿರುವುದು ಮಾತ್ರ ಅಪಚಾರ ಎಂದೇ?

‘ಆಪರೇಷನ್ ಕಮಲ’ ಧ್ವನಿಸುರುಳಿಯ ಸುತ್ತ ಈವರೆಗೆ ಅನಾವರಣಗೊಂಡಿರುವ ವಿಚಾರಗಳು ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳ ಆತ್ಮಾವಲೋಕನಕ್ಕೆ ಕಾರಣವಾಗಬೇಕಿತ್ತು. ಆದರೆ ಅದರ ಸುತ್ತ ಈತನಕ ನಡೆದಿರುವ ವಾದ ಮತ್ತು ಪ್ರತಿವಾದಗಳನ್ನು ನೋಡಿದರೆ ಪ್ರತಿಯೊಬ್ಬರೂ ತಮ್ಮ ಅಲ್ಪಕಾಲೀನ ರಾಜಕೀಯ ಲಾಭವನ್ನಷ್ಟೇ ನೋಡುತ್ತಿದ್ದಾರೆಂದು ಯಾರಾದರೂ ಭಾವಿಸಿದರೆ ಅದು ಸಹಜ.

ಧ್ವನಿಸುರುಳಿಯಲ್ಲಿ ಸಭಾಧ್ಯಕ್ಷರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂಬುದಷ್ಟೇ ತಮ್ಮನ್ನು ಕಲಕಿದೆ ಎಂಬಂತೆ ಮಾತನಾಡುತ್ತಿರುವ ಎಲ್ಲರೂ ಬಹುಮುಖ್ಯವಾದ ವಿಚಾರವೊಂದನ್ನು ಪ್ರಸ್ತಾಪಿಸುತ್ತಲೇ ವಿಷಯದ ಗಂಭೀರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸಂಶಯ ಹುಟ್ಟುತ್ತದೆ. ಶಾಸನಸಭೆಯಲ್ಲಿ ಸಭಾಧ್ಯಕ್ಷ ಸ್ಥಾನಕ್ಕೊಂದು ಪಾವಿತ್ರ್ಯವಿದೆ. ಆ ಹುದ್ದೆಗಿರುವ ಪಾವಿತ್ರ್ಯದ ರಕ್ಷಣೆ ಸಾಧ್ಯವಾಗುವುದು ಸದನದ ಪ್ರತಿಯೊಬ್ಬ ಸದಸ್ಯನೂ ತನ್ನ ಸ್ಥಾನದ ನೈತಿಕ ಜವಾಬ್ದಾರಿಯನ್ನು ಅರಿತು ವರ್ತಿಸಿದಾಗ ಮಾತ್ರ.

ಒಂದು ಷಡ್ಯಂತ್ರ ರೂಪಿಸಿ ಈ ಧ್ವನಿಸುರುಳಿಯಲ್ಲಿರುವ ಮಾತುಗಳನ್ನು ಆಡುವಂತೆ ಮಾಡಲಾಗಿದ್ದರೂ ಮಾತನಾಡಿದವರು ತಮ್ಮ ನೈತಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿರ್ದಿಷ್ಟ ಪಕ್ಷದ ಸಿದ್ಧಾಂತ ಅಥವಾ ಕಾರ್ಯಕ್ರಮಗಳನ್ನು ಮತದಾರರ ಮುಂದಿಟ್ಟು ಆಯ್ಕೆಯಾಗುವ ಒಬ್ಬ ಜನಪ್ರತಿನಿಧಿ, ಮತ್ತೊಂದು ಪಕ್ಷ ಅಥವಾ ವ್ಯಕ್ತಿ ಒಡ್ಡುವ ಆಮಿಷವನ್ನು ಒಪ್ಪಿಕೊಂಡು ತನ್ನ ಸ್ಥಾನವನ್ನು ತ್ಯಜಿಸಲು ಮುಂದಾಗುವುದನ್ನು ಯಾವ ವಾದದ ಮೂಲಕವೂ ಸಮರ್ಥಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಎಲ್ಲರೂ ಮನಗಾಣಬೇಕು.

ಈ ದೃಷ್ಟಿಯಲ್ಲಿ ನೋಡಿದಾಗ ಧ್ವನಿಸುರುಳಿಯಲ್ಲಿ ಪ್ರಸ್ತಾಪವಾಗಿರುವ ಎಲ್ಲ ವಿಚಾರಗಳ ಕುರಿತೂ ಸಮಗ್ರ ತನಿಖೆಯಾಗುವುದು ಅತ್ಯಂತ ಅಗತ್ಯ. ಸಭಾಧ್ಯಕ್ಷರ ಹೆಸರನ್ನು ಪ್ರಸ್ತಾಪಿಸಿರುವುದಕ್ಕೆ ಸೀಮಿತವಾದ ತನಿಖೆ ಅಥವಾ ಇತರ ಯಾವುದೇ ಕ್ರಮಗಳು ಪ್ರಜಾತಂತ್ರಕ್ಕೆ ಅಪಚಾರವಾದರೆ ಯಾರೂ ಹೊಣೆಯಲ್ಲ ಎಂಬ ಭಾವವನ್ನು ಹುಟ್ಟಿಸಿಬಿಡುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT