ಶನಿವಾರ, ಮಾರ್ಚ್ 25, 2023
29 °C

ಸಂಪಾದಕೀಯ: ಶೈಕ್ಷಣಿಕ ವಲಯದ ನೇಮಕಾತಿಗಳಲ್ಲಿ ‘ರಾಜಕೀಯ’ ಕೊನೆಯಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಜೆಡಿಎಸ್‌– ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಐವರು ಸಿಂಡಿಕೇಟ್‌ ಸದಸ್ಯರು ಮತ್ತು ಇಬ್ಬರು ಸೆನೆಟ್‌ ಸದಸ್ಯರನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ಹೊಸ ಸದಸ್ಯರನ್ನು ನೇಮಿಸಿದ್ದ ಬಿಜೆಪಿ ನೇತೃತ್ವದ ಸರ್ಕಾರದ ಕ್ರಮವನ್ನು ಹೈಕೋರ್ಟ್‌ ಅಸಿಂಧುಗೊಳಿಸಿದೆ.

ಹೊಸ ನೇಮಕಾತಿಯನ್ನು ರದ್ದುಗೊಳಿಸುವುದರ ಜತೆಯಲ್ಲೇ ಹಿಂದಿನ ಸದಸ್ಯರಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕೆಂದು ನಿರ್ದೇಶನ ನೀಡಿರುವ ನ್ಯಾಯಾಲಯವು ಶೈಕ್ಷಣಿಕ ವಲಯದ ಹುದ್ದೆಗಳ ನೇಮಕ ವಿಚಾರವನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದನ್ನು ಕೊನೆಗೊಳಿಸುವಂತೆ ಕಟುವಾದ ಮಾತುಗಳಲ್ಲಿ ಸೂಚಿಸಿದೆ.

ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಕುಲಪತಿ, ಕುಲಸಚಿವ, ಸಿಂಡಿಕೇಟ್‌ ಮತ್ತು ಸೆನೆಟ್‌ ಸದಸ್ಯರು, ಉನ್ನತ ಶಿಕ್ಷಣ ಕ್ಷೇತ್ರದ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರ ನೇಮಕಾತಿ ಸೇರಿದಂತೆ ಶೈಕ್ಷಣಿಕ ಕ್ಷೇತ್ರದ ಮುಂಚೂಣಿ ಹುದ್ದೆಗಳ ಭರ್ತಿಯಲ್ಲಿ ಪಕ್ಷ ರಾಜಕಾರಣ ನುಸುಳಿರುವುದು ಇದು ಮೊದಲೇನೂ ಅಲ್ಲ. ಹಲವು ದಶಕಗಳಿಂದ ಈ ಕೆಟ್ಟ ಚಾಳಿ ಅನೂಚಾನವಾಗಿ ನಡೆದುಕೊಂಡೇ ಬಂದಿದೆ.

ಎಷ್ಟೇ ವಿರೋಧಗಳು ಬಂದರೂ ಶೈಕ್ಷಣಿಕ ಸಂಸ್ಥೆಗಳಲ್ಲಿನ ನೇಮಕಾತಿಯ ಅಧಿಕಾರವನ್ನು ತಮ್ಮ ರಾಜಕೀಯ ಅನುಕೂಲಕ್ಕಾಗಿ ಬಳಸುವುದನ್ನು ಅಧಿಕಾರಕ್ಕೇರಿದ ಯಾವ ರಾಜಕೀಯ ಪಕ್ಷವೂ ನಿಲ್ಲಿಸಿಲ್ಲ. ಜೆಡಿಎಸ್‌– ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರನ್ನಾಗಿ ಡಾ. ದೀಪ್ತಿ ಭಾವಾ, ಡಾ. ಕಿರಣ್‌ ಕಾಳಯ್ಯ, ಡಾ. ಉಮೇಶ್‌, ಡಾ. ವಿ.ಆರ್‌.ಸುಧೀರ್‌ ಮತ್ತು ಡಾ. ಎಚ್‌.ಎನ್‌.ರವೀಂದ್ರ ಅವರನ್ನು ನೇಮಿಸಿ 2018ರ ಅಕ್ಟೋಬರ್‌ 16ರಂದು ಆದೇಶ ಹೊರಡಿಸಲಾಗಿತ್ತು.

ಡಾ. ಚಿಕ್ಕಲಿಂಗಯ್ಯ ಮತ್ತು ಡಾ. ಆನಂದ ಬಸವರಾಜ ಜಾಬಶೆಟ್ಟಿ ಅವರನ್ನು ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯರನ್ನಾಗಿ ಅದೇ ಸಂದರ್ಭದಲ್ಲಿ ನೇಮಿಸಲಾಗಿತ್ತು. ಈ ಎಲ್ಲರಿಗೂ ಮೂರು ವರ್ಷಗಳ ಅಧಿಕಾರದ ಅವಧಿ ಇತ್ತು. ಆದರೆ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಏಳು ಜನರ ನೇಮಕಾತಿಯನ್ನು ಅವಧಿಗೂ ಮೊದಲೇ ರದ್ದು ಗೊಳಿಸಿ, ಹೊಸ ಸದಸ್ಯರನ್ನು ನೇಮಿಸಿ 2020ರ ಅಕ್ಟೋಬರ್‌ 23ರಂದು ಆದೇಶ ಹೊರಡಿಸಲಾಗಿತ್ತು.

ಈ ಕ್ರಮವನ್ನು ಪ್ರಶ್ನಿಸಿ ಡಾ. ದೀಪ್ತಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯವು ‘ರಾಜ್ಯದಲ್ಲಿ ಆಡಳಿತ ಪಕ್ಷ ಬದಲಾಗುತ್ತಿದ್ದಂತೆಯೇ ಸಿಂಡಿಕೇಟ್‌ ಮತ್ತು ಸೆನೆಟ್‌ ಸದಸ್ಯರನ್ನೂ ಬದಲಾವಣೆ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ಪೂರ್ವಗ್ರಹವನ್ನು ಅಲ್ಲಗಳೆಯಲಾಗದು’ ಎಂದು ಹೇಳಿದೆ. ಈ ಏಳು ಸದಸ್ಯರನ್ನು ಯಾವುದೇ ಸಕಾರಣ ನೀಡದೇ ಅಕಾಲಿಕವಾಗಿ ಹುದ್ದೆಯಿಂದ ತೆರವು ಮಾಡಲಾಗಿತ್ತು. 

ಇದೇ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯನ್ನಾಗಿ ಖಾಸಗಿ ದಂತ ವೈದ್ಯಕೀಯ ಕಾಲೇಜೊಂದರ ಪ್ರಾಂಶುಪಾಲರೊಬ್ಬರನ್ನು ನೇಮಿಸಿರುವ ರಾಜ್ಯಪಾಲರ ಕ್ರಮವೂ ವಿವಾದಕ್ಕೆ ಎಡೆಮಾಡಿದೆ. ಆಡಳಿತ ಪಕ್ಷದ ಇಚ್ಛೆ, ಒಲವು– ನಿಲುವುಗಳಿಗೆ ಅನುಸಾರವಾಗಿ ಶೈಕ್ಷಣಿಕ ಕ್ಷೇತ್ರದ ಹುದ್ದೆಗಳಿಗೆ ನೇಮಕಾತಿ ನಡೆಸುವ ಕೆಟ್ಟ ಪ್ರವೃತ್ತಿಯು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಪೈಪೋಟಿಗೆ ಕುಮ್ಮಕ್ಕು ನೀಡುತ್ತಿದೆ. ಹುದ್ದೆಗಳನ್ನು ಪಡೆಯುವುದಕ್ಕಾಗಿಯೇ ಪ್ರಾಧ್ಯಾಪಕರು, ಶಿಕ್ಷಕರು ವಿವಿಧ ರಾಜಕೀಯ ಪಕ್ಷಗಳ ಅಡಿಯಾಳುಗಳಂತೆ ವರ್ತಿಸುತ್ತಿರುವುದು ಹೆಚ್ಚುತ್ತಿದೆ.

ರಾಜಕೀಯ ಪಕ್ಷಗಳ ಜತೆಗಿನ ನಂಟು ಮತ್ತು ಜಾತಿಯ ಆಧಾರದಲ್ಲಿ ವಿಶ್ವವಿದ್ಯಾಲಯಗಳ ಆಯಕಟ್ಟಿನ ಹುದ್ದೆಗಳನ್ನು ತುಂಬುವ ಕ್ರಮವು ಉನ್ನತ ಶಿಕ್ಷಣ ಕ್ಷೇತ್ರವನ್ನು ಅಧಃಪತನಕ್ಕೆ ತಳ್ಳುವ ಅಪಾಯವಿದೆ. ಶಿಕ್ಷಣ ಕ್ಷೇತ್ರವನ್ನು ರಾಜಕೀಯದ ಕಪಿಮುಷ್ಟಿಯಿಂದ ಹೊರತರುವ ದಿಸೆಯಲ್ಲಿ ಈ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿರುವ ಆದೇಶ ಎಲ್ಲರ ಕಣ್ತೆರೆಸುವಂತಿದೆ. ವಿಶ್ವವಿದ್ಯಾಲಯಗಳ ಕುಲಪತಿ, ಸಿಂಡಿಕೇಟ್‌ ಮತ್ತು ಸೆನೆಟ್‌ ಸದಸ್ಯರು ಹಾಗೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ನೇಮಕಾತಿಯನ್ನು ಶೈಕ್ಷಣಿಕ ಅರ್ಹತೆ ಮತ್ತು ಕಾನೂನುಗಳ ಮಿತಿಯಲ್ಲೇ ನಡೆಸುವುದಕ್ಕೆ ಆಡಳಿತದ ಚುಕ್ಕಾಣಿ ಹಿಡಿದವರು ಕಟಿಬದ್ಧರಾಗಬೇಕು.

‘ಅರ್ಹತೆಯ ಆಧಾರದಲ್ಲಿ ಈ ಹುದ್ದೆಗಳಿಗೆ ನೇಮಕಗೊಂಡವರು ರಾಜಕೀಯ ಕಾರಣಕ್ಕಾಗಿ ತಲೆ ತಗ್ಗಿಸಿಕೊಂಡು ಅವಧಿಪೂರ್ವದಲ್ಲೇ ನಿರ್ಗಮಿಸುವ ವಾತಾವರಣ ಇರಕೂಡದು’ ಎಂಬ ಹೈಕೋರ್ಟ್‌ ಮಾತನ್ನು ಎಲ್ಲ ರಾಜಕೀಯ ಪಕ್ಷಗಳು ಚಾಚೂ ತಪ್ಪದೆ ಪಾಲಿಸಬೇಕಿದೆ. ಶೈಕ್ಷಣಿಕ ಕ್ಷೇತ್ರದ ಉನ್ನತ ವ್ಯಕ್ತಿಗಳಿಗೆ ರಾಜಕೀಯ ಪೂರ್ವಗ್ರಹದಿಂದ ಅಗೌರವ ತೋರುವ, ಅಂಥವರನ್ನು ಹುದ್ದೆಯಿಂದ ತೆರವು ಮಾಡುವಂತಹ ಪ್ರವೃತ್ತಿಗೆ ಪೂರ್ಣವಿರಾಮ ಹಾಕಬೇಕು. ವಿಶ್ವವಿದ್ಯಾಲಯಗಳು ರಾಜಕೀಯ ಪಕ್ಷಗಳು ಮತ್ತು ನಾಯಕರ ಕೈಗೊಂಬೆಗಳಾಗದೆ ಕಲಿಕೆಯ ಶ್ರೇಷ್ಠ ತಾಣಗಳಾಗಿಯೇ ಉಳಿಯಬೇಕು. ಹುದ್ದೆಯೊಂದಕ್ಕೆ ನಿಗದಿತ ಅವಧಿಗೆ ನೇಮಕಗೊಂಡ ವ್ಯಕ್ತಿಯನ್ನು ಅವಧಿಪೂರ್ವದಲ್ಲಿ ತೆರವು ಮಾಡುವುದು ಅನಿವಾರ್ಯ ಆದಲ್ಲಿ, ಸಾಕ್ಷ್ಯಾಧಾರಗಳ ಸಹಿತ ಸಕಾರಣ ದಾಖಲಿಸುವುದು ಕಡ್ಡಾಯವಾಗಬೇಕು.

‘ನಿಗದಿತ ಅವಧಿಯನ್ನು ಒಳಗೊಂಡ ಹುದ್ದೆಗೆ ಅರ್ಹತೆಯ ಆಧಾರದ ಮೇಲೆ ನೇಮಕಗೊಂಡವರು ಅವಧಿ ಪೂರ್ಣಗೊಳಿಸಿ ತಲೆ ಎತ್ತಿಕೊಂಡು ಕಚೇರಿಯಿಂದ ನಿರ್ಗಮಿಸುವ ವಾತಾವರಣ ಶಿಕ್ಷಣ ಸಂಸ್ಥೆಗಳಲ್ಲಿ ಇರಬೇಕು’ ಎಂಬ ಹೈಕೋರ್ಟ್‌ ಅಭಿಪ್ರಾಯವು ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಪಾಠವಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು