ಶುಕ್ರವಾರ, ಜೂನ್ 5, 2020
27 °C

ಸಂಪಾದಕೀಯ | ಒಲಿಂಪಿಕ್ಸ್‌ ಮುಂದೂಡಿಕೆ ವಿವೇಕಯುತ ನಿರ್ಧಾರ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

‘ನಾಳೆಯನ್ನು ಅನ್ವೇಷಿಸುತ್ತಾ’ ಎಂಬ ಧ್ಯೇಯವಾಕ್ಯದೊಂದಿಗೆ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಜುಲೈ 24ರಂದು ಆರಂಭವಾಗಬೇಕಿದ್ದ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಕೊರೊನಾ ವೈರಸ್‌ ಮಹಾಮಾರಿಯಿಂದಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೊಂದು ವಿವೇಕಯುತ ನಿರ್ಧಾರ. 1916ರ ಕೂಟವು ಪ್ರಥಮ ವಿಶ್ವಯುದ್ಧದ ಕಾರಣ, 1940 ಹಾಗೂ 1944ರ ಒಲಿಂಪಿಕ್‌ ಕ್ರೀಡಾಕೂಟಗಳು ದ್ವಿತೀಯ ವಿಶ್ವಯುದ್ಧದಿಂದಾಗಿ ರದ್ದಾಗಿದ್ದವು. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾ ಮಹಾಮೇಳಕ್ಕೆ ಇದೇ ಮೊದಲ ಬಾರಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ.

ಈ ಸಲದ ಕೂಟವನ್ನು ಅಭೂತಪೂರ್ವ ರೀತಿಯಲ್ಲಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಜಪಾನ್ ಮಾಡಿಕೊಂಡಿತ್ತು. ಅದಕ್ಕಾಗಿ, ₹ 89 ಸಾವಿರ ಕೋಟಿ ವೆಚ್ಚ ಮಾಡಿತ್ತು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದಾಗಿ ಜಪಾನ್ ಹೇಳಿತ್ತು. ನಿಗದಿತ ವೇಳಾಪಟ್ಟಿಯಂತೆ ಕೂಟ ಆಯೋಜಿಸುವ ಛಲವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಾಲ್ಕು ದಿನಗಳ ಹಿಂದಿನವರೆಗೂ ತೋರಿತ್ತು. ಆದರೆ ಕೊರೊನಾ ವೈರಸ್‌ನ ಉಗ್ರಪ್ರತಾಪ ಮುಂದುವರಿದಿದ್ದರಿಂದ ಪ್ರಮುಖ ದೇಶಗಳು ಕೂಟದಿಂದ ಹಿಂದೆ ಸರಿಯುವ ಬೆದರಿಕೆ ಒಡ್ಡಲು ಆರಂಭಿಸಿದವು.

ಆತಿಥೇಯ ಜಪಾನಿನಲ್ಲಿಯೇ ಕೊರೊನಾ ಪಿಡುಗಿಗೆ 50ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ವಿಶ್ವದಾದ್ಯಂತ ಸಾವು–ನೋವು ಹೆಚ್ಚುತ್ತಲೇ ಇದೆ. ಇದರಿಂದಾಗಿ ಐಒಸಿಗೆ ಕೂಟ ಮುಂದೂಡುವ ಅನಿವಾರ್ಯ ಎದುರಾಯಿತು. ಈ ನಿರ್ಧಾರಕ್ಕೆ ಕ್ರೀಡಾವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆತಿಥೇಯ ದೇಶ, ಪ್ರಾಯೋಜಕರು, ಸ್ಪರ್ಧಿಗಳ ಎದುರು ಹಲವಾರು ಸವಾಲುಗಳು ಇವೆ. ‌

ಈ ಕ್ರೀಡಾಮೇಳವನ್ನು ಮುಂದಿನ ವರ್ಷದ ಬೇಸಿಗೆಯಲ್ಲಿಯೇ ಆಯೋಜಿಸಬೇಕಾಗುತ್ತದೆ. ದಿನಾಂಕ ಹೊಂದಿಸಿಕೊಳ್ಳಲು ಐಒಸಿ ಕಸರತ್ತು ನಡೆಸುತ್ತಿದೆ. ಏಕೆಂದರೆ, 2021ರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌, ಈಜು ಚಾಂಪಿಯನ್‌ಷಿಪ್‌ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳ ವೇಳಾಪಟ್ಟಿ ಈಗಾಗಲೇ ಸಿದ್ಧವಾಗಿದೆ. ಆದ್ದರಿಂದ ಅವುಗಳೆಲ್ಲವನ್ನೂ ಮರುಹೊಂದಾಣಿಕೆ ಮಾಡಿ, ಒಲಿಂಪಿಕ್ಸ್‌ ಆಯೋಜಿಸುವುದು ದೊಡ್ಡ ಸವಾಲಾಗಲಿದೆ. ಏಳು ವರ್ಷಗಳಿಂದ ಸಿದ್ಧಗೊಳಿಸಿರುವ ಕ್ರೀಡಾಗ್ರಾಮ ಮತ್ತು ಮೂಲಸೌಲಭ್ಯಗಳನ್ನು ಇನ್ನೊಂದು ವರ್ಷ ನಿರ್ವಹಿಸುವುದು ಆತಿಥೇಯರಿಗೆ ಆರ್ಥಿಕ ಹೊರೆಯಾಗಲಿದೆ.

ಕೊರೊನಾ ಕೊಟ್ಟ ಪೆಟ್ಟಿನಿಂದ ವಿಶ್ವದ ಬಹಳಷ್ಟು ಉದ್ಯಮಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ಆದ್ದರಿಂದ ಮಾರುಕಟ್ಟೆಯ ಪ್ರಮುಖ ಬ್ರ್ಯಾಂಡ್‌ ಸಂಸ್ಥೆಗಳು ಪ್ರಾಯೋಜಕತ್ವವನ್ನು ಮುಂದುವರಿಸಲಿವೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಒಲಿಂಪಿಕ್ಸ್ ಪದಕ ಗೆಲ್ಲುವ ಛಲದಲ್ಲಿ ನಾಲ್ಕು ವರ್ಷಗಳಿಂದ ಅಭ್ಯಾಸ ಮಾಡಿರುವ ಕ್ರೀಡಾಪಟುಗಳು ಮತ್ತು ದೇಶಗಳು ಕೂಡ ಕಠಿಣ ಸವಾಲುಗಳನ್ನು ಎದುರಿಸಬೇಕಿದೆ. ಈ ಕೂಟದಲ್ಲಿ ಹನ್ನೊಂದು ಸಾವಿರ ಸ್ಪರ್ಧಿಗಳು ಕಣಕ್ಕಿಳಿಯುವ ನಿರೀಕ್ಷೆ ಇತ್ತು. ಅದರಲ್ಲಿ ಅರ್ಧದಷ್ಟು ಆಟಗಾರರು ಈಗಾಗಲೇ ಅರ್ಹತೆ ಪಡೆದಿದ್ದರು.

ಅವರು ಮತ್ತೊಮ್ಮೆ ಅರ್ಹತಾ ಸುತ್ತಿನಲ್ಲಿ ಭಾಗವಹಿಸುವ ಅಗತ್ಯವಿಲ್ಲವೆಂದು ಐಒಸಿ ಸ್ಪಷ್ಟಪಡಿಸಿದೆ. ಇದರಿಂದಾಗಿ ಅವರಿಗೆ ಅಭ್ಯಾಸಕ್ಕೆ ಹೆಚ್ಚು ಸಮಯವೇನೋ ಸಿಕ್ಕಿದೆ. ಆದರೆ, ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಸವಾಲು ಇದೆ. ಈ ವರ್ಷ ಕೊನೆಯ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ವೃತ್ತಿಜೀವನಕ್ಕೆ ವಿದಾಯ ಹೇಳುವ ಯೋಚನೆಯಲ್ಲಿದ್ದ ಹಿರಿಯ ಕ್ರೀಡಾಪಟುಗಳು ಮುಂದಿನ ವರ್ಷದವರೆಗೂ ಕಾಯಬೇಕಿದೆ. ವಯೋಮಿತಿ ನಿರ್ಬಂಧ ಇರುವ ಕೆಲವು ಕ್ರೀಡೆಗಳಲ್ಲಿ ಹಲವು ಸ್ಪರ್ಧಿಗಳು ಮುಂದಿನ ವರ್ಷ ಅರ್ಹತೆ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಆದಕಾರಣ, ವಯೋಮಿತಿ ನಿಯಮವನ್ನು ಪರಿಷ್ಕರಿಸುವಂತೆ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾದ ಫುಟ್‌ಬಾಲ್ ತಂಡಗಳು ಈಗಾಗಲೇ ಐಒಸಿಗೆ ಮನವಿ ಸಲ್ಲಿಸಿವೆ. ಇನ್ನೊಂದೆಡೆ, ಈ ಕ್ರೀಡಾಪಟುಗಳನ್ನು ಪೋಷಿಸಲು ಮತ್ತಷ್ಟು ಸಂಪನ್ಮೂಲವನ್ನು ಹೊಂದಿಸಿಕೊಳ್ಳುವತ್ತ ಆಯಾ ದೇಶ ಸಿದ್ಧವಾಗಬೇಕಿದೆ.

ಪದಕ ಗಳಿಕೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಚೀನಾ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ ದೇಶಗಳು ಕೊರೊನಾ ಹೊಡೆತದಿಂದ ಬಸವಳಿದಿವೆ. ಭಾರತದಲ್ಲಿಯೂ ಈ ವೈರಸ್‌ನ ಉಪಟಳ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿ ರದ್ದಾಗುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸುಮಾರು ₹10 ಸಾವಿರ ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಕೂಡ ರದ್ದುಗೊಳ್ಳಬಹುದು. ಯಾವುದೇ ಕ್ರೀಡಾಕೂಟ ರದ್ದಾಗುವುದು, ಕ್ರೀಡಾ ಅಭಿಮಾನಿಗಳ ಪಾಲಿಗೆ ನೋವಿನ ಸಂಗತಿಯೇ ಸರಿ. ಜಗತ್ತಿನ ಸದ್ಯದ ಸಮಸ್ಯೆಯಾಗಿರುವ ಕೊರೊನಾ ವೈರಸ್‌ ಹಾವಳಿ ನಿವಾರಣೆಯಾಗಿ, ಪ್ರೀತಿ, ಸಹೋದರತ್ವ ಮತ್ತು ಸಮೃದ್ಧಿಯ ದ್ಯೋತಕವಾದ ಒಲಿಂಪಿಕ್ ಕ್ರೀಡಾಮೇಳ ನಡೆಯುವಂತಾಗಬೇಕು ಎಂದು ಕ್ರೀಡಾಪ್ರಪಂಚ ಹಾರೈಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು