ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಿಜೆಐ ಮಾತು ಸಕಾಲಿಕ- ಬೇಕಿದೆ ಸರ್ಕಾರಗಳ ಸ್ಪಂದನ

Last Updated 8 ಮೇ 2022, 21:53 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಕಳೆದ ವಾರ ನಡೆದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯ ಮೂರ್ತಿಗಳ ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ಅವರು ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದರು. ನ್ಯಾಯಾಂಗದ ಚಟುವಟಿಕೆಗಳು, ಶಾಸಕಾಂಗ ಮತ್ತು ಕಾರ್ಯಾಂಗದ ಕೆಲವು ಕೆಲಸಗಳಿಗೆ ಸಂಬಂಧಿಸಿದ ಮಾತುಗಳು ಅವು. ಈ ಮಾತುಗಳ ಮೂಲಕ ನ್ಯಾಯಮೂರ್ತಿ ರಮಣ ಅವರು, ದೇಶದ ಜನರ ಜೀವನದ ಮೇಲೆ ಹಲವು ಬಗೆಗಳಲ್ಲಿ ಪರಿಣಾಮ ಬೀರುತ್ತಿರುವ, ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸಿಜೆಐ ಈ ಮಾತುಗಳನ್ನು ಆಡಿರುವ ಕಾರಣ, ಅವು ಬಹಳ ಪ್ರಮುಖವಾಗುತ್ತವೆ, ಪ್ರಸ್ತುತವಾಗುತ್ತವೆ. ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿಯೇ ಇರುವ ಪ್ರಕರಣಗಳ ಸಂಖ್ಯೆ ಬಹಳ ದೊಡ್ಡದಿರುವುದು, ಸಕಾಲದಲ್ಲಿ ನ್ಯಾಯಾಂಗಕ್ಕೆ ನೇಮಕಾತಿ ನಡೆಸಲು ಆಗದಿರುವುದು, ನ್ಯಾಯಾಲಯಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದು... ಇವೆಲ್ಲ ಬಹುತೇಕರಿಗೆ ಗೊತ್ತಿರುವ ವಿಷಯಗಳು. ನ್ಯಾಯಮೂರ್ತಿ ರಮಣ ಅವರು ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿರುವ ಇತರ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರು.

ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇರುವ ಒಟ್ಟು ಪ್ರಕರಣಗಳ ಪೈಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಾದಿ ಅಥವಾ ಪ್ರತಿವಾದಿ ಆಗಿರುವ ಪ್ರಕರಣಗಳ ಪಾಲು ಶೇಕಡ 50ರಷ್ಟು ಇದೆ ಎಂದು ಸಿಜೆಐ ಹೇಳಿದ್ದಾರೆ. ಸರ್ಕಾರದ ಎಲ್ಲ ಅಂಗಗಳು ತಮ್ಮ ಪಾಲಿನ ಕೆಲಸವನ್ನು ಸರಿಯಾಗಿ ಮಾಡಿದ್ದಿದ್ದರೆ ನ್ಯಾಯಾಲಯಗಳು ವಿಚಾರಣೆ ನಡೆಸಬೇಕಾದ ಪ್ರಕರಣಗಳ ಸಂಖ್ಯೆ ಕಡಿಮೆ ಇರುತ್ತಿತ್ತು. ಅಲ್ಲದೆ, ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರಗಳಲ್ಲಿ ತೀರ್ಮಾನ ನೀಡಬೇಕಾದ ‍ಪ್ರಮೇಯ ಎದುರಾಗುತ್ತಿರ ಲಿಲ್ಲ. ಆಗ, ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡದೇ ಇರುವುದಕ್ಕೆ ನ್ಯಾಯಾಂಗಕ್ಕೆ ಸಾಧ್ಯವಾಗುತ್ತದೆ.

ಜಮೀನು ಮತ್ತು ಕಂದಾಯಕ್ಕೆ ಸಂಬಂಧಿಸಿದ ವ್ಯಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಸಿಜೆಐ ರಮಣ ಉಲ್ಲೇಖಿಸಿದರು. ಸರ್ಕಾರದ ವಿವಿಧ ಇಲಾಖೆಗಳ ನಡುವೆ, ಸರ್ಕಾರದ ಅಧೀನದ ಕಂಪನಿಗಳ ನಡುವಿನ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರುತ್ತಿರುವುದನ್ನು ಕೂಡ ಅವರು ಪ್ರಸ್ತಾಪಿಸಿದರು. ಇದು ಕಾಯಿಲೆಯೊಂದು ಉಲ್ಬಣಗೊಳ್ಳುತ್ತಿರುವುದರ ಸೂಚನೆ ಎಂದರು. ಇಂತಹ ಪ್ರಕರಣಗಳು ಆಡಳಿತ ಹಾಗೂ ವ್ಯವಸ್ಥೆಯಲ್ಲಿ ಎಲ್ಲ ಹಂತಗಳಲ್ಲಿ ಇರುವ ಲೋಪಗಳನ್ನು ತೋರಿಸುತ್ತವೆ. ‘ಅಕ್ರಮ’ ಬಂಧನಗಳು, ಪೊಲೀಸರ ವಶದಲ್ಲಿ ಇದ್ದಾಗ ಆರೋಪಿಗಳಿಗೆ ಹಿಂಸೆ ನೀಡುವುದು, ಪೊಲೀಸರು ಪಕ್ಷಪಾತಿಯಾಗಿ ತನಿಖೆ ನಡೆಸುವುದರ ಬಗ್ಗೆಯೂ ಸಿಜೆಐ ಮಾತನಾಡಿದರು. ಇಂತಹ ಪ್ರಕರಣಗಳಲ್ಲಿ ಕೂಡ ಸಂತ್ರಸ್ತರು ನ್ಯಾಯಾಲಯದ ಬಾಗಿಲು ತಟ್ಟುತ್ತಾರೆ. ಸೇವಾ ಹಿರಿತನ, ಪಿಂಚಣಿ ನೀಡುವುದಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸೇವಾ ನಿಯಮಗಳನ್ನು ಸರಿಯಾಗಿ ಅನ್ವಯ ಮಾಡಿದರೆ ಯಾರೂ ಕೋರ್ಟ್ ಮೆಟ್ಟಿಲೇರ ಬೇಕಾದ ಪರಿಸ್ಥಿತಿಯೇ ಸೃಷ್ಟಿಯಾಗುವುದಿಲ್ಲ ಎಂದು ಅವರು ಹೇಳಿರುವುದು ಸರಿಯಾಗಿದೆ.

ಶಾಸನಗಳನ್ನು ರೂಪಿಸುವಾಗ ಸಂಸತ್ತಿನ ಒಳಗೆ ಮತ್ತು ಹೊರಗೆ ಸಾರ್ವಜನಿಕರ ಜೊತೆ ಚರ್ಚಿಸುವ ಪದ್ಧತಿ ಇಲ್ಲವಾಗಿರುವುದರ ಬಗ್ಗೆಯೂ ಸಿಜೆಐ ಪ್ರಸ್ತಾಪಿಸಿದರು. ಈ ಸಮಾಲೋಚನೆ ಇಲ್ಲವಾಗಿರುವುದು ಕೂಡ ಜನ ನ್ಯಾಯಾಲಯದ ಮೊರೆ ಹೋಗಬೇಕಾದ ಸ್ಥಿತಿಯನ್ನು ನಿರ್ಮಿಸುತ್ತಿದೆ. ಇದನ್ನು ಸಿಜೆಐ ಅವರು ಈ ಹಿಂದೆಯೂ ಹೇಳಿದ್ದಾರೆ. ಹಲವು ಮಸೂದೆಗಳಿಗೆ ಉದ್ದೇಶಪೂರ್ವಕ
ವಾಗಿಯೇ ಹೆಚ್ಚಿನ ಚರ್ಚೆ ಇಲ್ಲದೆ ಶಾಸನಸಭೆಗಳ ಅನುಮೋದನೆ ಪಡೆದುಕೊಳ್ಳಲಾಗುತ್ತದೆ. ಅಂತಹ ಮಸೂದೆಗಳು ಕಾಯ್ದೆಗಳಾಗಿ ಜಾರಿಗೆ ಬಂದಾಗ, ಅವುಗಳಲ್ಲಿ ಒಂದಿಷ್ಟು ಲೋಪಗಳು ಉಳಿದುಕೊಳ್ಳುತ್ತವೆ.

ಅವುಗಳನ್ನು ನ್ಯಾಯಾಲಯಗಳು ವಿಚಾರಣೆಗೆ ಎತ್ತಿಕೊಳ್ಳಬೇಕಾಗುತ್ತದೆ. ಇದನ್ನು ಕಾರ್ಯಾಂಗವು ಸಂಸತ್ತಿನ ಮೇಲೆ ನಡೆಸುವ ಸವಾರಿಯ ರೂಪದಲ್ಲಿಯೂ ಗ್ರಹಿಸಬಹುದು. ಕೋರ್ಟ್‌ ನೀಡಿದ ತೀರ್ಮಾನಗಳನ್ನು ಅನುಷ್ಠಾನಕ್ಕೆ ತರದೆ (ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಅನುಷ್ಠಾನಕ್ಕೆ ತರದೆ), ಅದು ನ್ಯಾಯಾಂಗ ನಿಂದನೆಯ ಪ್ರಕರಣವಾಗಿ ಮತ್ತೆ ಕೋರ್ಟ್ ಮೆಟ್ಟಿಲೇರುವುದು ಕೂಡ ಇದೆ. ಇದು ಹೆಚ್ಚು ಗಂಭೀರವಾದ ವಿಚಾರ. ಸಿಜೆಐ ಪ್ರಸ್ತಾಪಿಸಿರುವ ವಿಷಯಗಳನ್ನು ಅಧಿಕಾರಸ್ಥರು ಗಂಭೀರವಾಗಿ ಪರಿಗಣಿಸಬೇಕು. ನ್ಯಾಯಾಲಯಗಳು ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸುವಂತೆ ಆಗಬೇಕು ಎಂಬ ದೃಷ್ಟಿಯಿಂದ ಮಾತ್ರವೇ ಅಲ್ಲದೆ, ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾದ ಅಗತ್ಯದ ಕಾರಣಕ್ಕಾಗಿಯೂ ಇದು ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT