ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಗುಜರಾತ್‌ನಲ್ಲಿ ಮೋದಿ ಛಾಪು ಕಾಂಗ್ರೆಸ್‌ ಕೈಹಿಡಿದ ಹಿಮಾಚಲ

Last Updated 8 ಡಿಸೆಂಬರ್ 2022, 20:15 IST
ಅಕ್ಷರ ಗಾತ್ರ

ಗುಜರಾತ್‌ನಲ್ಲಿ ಬಿಜೆಪಿಯ ಅಭೂತ‍ಪೂರ್ವ ಗೆಲುವು ನಿರೀಕ್ಷಿತವೇ ಆಗಿತ್ತು. ಎಲ್ಲ ಅಂಶಗಳೂ ಬಿಜೆ‍ಪಿಗೆ ಅನುಕೂಲಕರವಾಗಿ ಕೆಲಸ ಮಾಡಿವೆ. ವಿರೋಧ ಪಕ್ಷ ಕಾಂಗ್ರೆಸ್‌ಗೆ ಪೂರಕವಾಗಿ ಯಾವುದೂ ನಡೆಯಲಿಲ್ಲ. ಆದರೆ, ಬಿಜೆಪಿಗೆ ಹಿಮಾಚಲ ಪ್ರದೇಶದಲ್ಲಿ ಹಿನ್ನಡೆ ಆಗಿದೆ. ಆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸರ್ಕಾರ ರಚಿಸಲು ಬೇಕಾದಷ್ಟು ಬಹುಮತ ಬಂದಿದೆ. ಗುಜರಾತ್‌ನಲ್ಲಿ ಮಾಧವಸಿಂಹ ಸೋಲಂಕಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು 1985ರಲ್ಲಿ 182 ಕ್ಷೇತ್ರಗಳ ಪೈಕಿ 149 ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ಬರೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಆ ದಾಖಲೆಯನ್ನು ಬಿಜೆಪಿ ಮುರಿದಿದೆ. ಹಿಮಾಚಲ ಪ್ರದೇಶದ ಮತದಾರರ ಯೋಚನಾ ಕ್ರಮದಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಅದನ್ನು ಈ ಬಾರಿಯೂ
ಮುಂದುವರಿಸಿದ್ದಾರೆ. ಗುಜರಾತ್‌ನ ಅದ್ಭುತವಾದ ಗೆಲುವಿನ ಹೊಳಪಿನಲ್ಲಿ ಹಿಮಾಚಲ ಪ್ರದೇಶದ ಸೋಲಿನ ಕಹಿಯು ಮರೆಯಾಗಿದೆ. ಜೊತೆಗೆ, ಹಿಮಾಚಲ ಪ್ರದೇಶವು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಅಷ್ಟೊಂದು ಮಹತ್ವದ್ದಲ್ಲದ ಸಣ್ಣ ರಾಜ್ಯ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ ಹಿಂದುತ್ವವಾದದ ಪ್ರಯೋಗಶಾಲೆ. ಕಳೆದ 27 ವರ್ಷಗಳಿಂದ ಇಲ್ಲಿನ ಪ್ರಯೋಗವು ಬಿಜೆಪಿಗೆ ಫಲಪ್ರದ ಆಗಿದೆ. ಸತತ ಏಳನೇ ಬಾರಿಗೆ ಬಿಜೆಪಿಗೆ ಗೆಲುವು ಸಾಧ್ಯವಾಗಿದೆ.

ಗುಜರಾತ್‌ನಲ್ಲಿ ಮೋದಿ ಅವರಿಗೆ ಎಷ್ಟೊಂದು ಜನಪ್ರಿಯತೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದಿನಂತೆ, ಈ ಬಾರಿಯೂ ಗೆಲುವಿನ ಶ್ರೇಯ ಮೋದಿ ಅವರಿಗೇ ಸಲ್ಲಬೇಕು. ಮತದಾನಕ್ಕೆ ತಿಂಗಳುಗಳ ಮೊದಲೇ ಮೋದಿ ಅವರು ಗುಜರಾತ್‌ನಲ್ಲಿ ಅಬ್ಬರದ ಪ್ರಚಾರ ಆರಂಭಿಸಿದ್ದರು. ಬಿಜೆಪಿಗೆ ಈ ರಾಜ್ಯದಲ್ಲಿ ಅತ್ಯಂತ ಬಲಯುತವಾದ ತಳಮಟ್ಟದ ಸಂಘಟನಾ ನೆಲೆ ಇದೆ. ಚುನಾವಣೆಗೆ ಒಂದು ವರ್ಷಕ್ಕೆ ಮೊದಲೇ, ಮುಖ್ಯಮಂತ್ರಿ ವಿಜಯ ರೂಪಾಣಿ ಸೇರಿದಂತೆ ಸಂಪೂರ್ಣ ಸಚಿವ ಸಂಪುಟವನ್ನು ಬದಲಾಯಿಸಿ ಆಡಳಿತವಿರೋಧಿ ಅಲೆಯನ್ನು ಸಕಾಲದಲ್ಲಿ ಚಿವುಟಿ ಹಾಕಲಾಗಿದೆ. ಬಿಜೆಪಿಯ ಬಹುದೊಡ್ಡ ಬೆಂಬಲ ನೆಲೆಯಾಗಿದ್ದ ಪಾಟೀದಾರ್‌ ಸಮುದಾಯವು 2017ರ ವಿಧಾನಸಭೆ ಚುನಾವಣೆಗೆ ಮುಂಚೆ ಮೀಸಲಾತಿಗಾಗಿ ಹೋರಾಟ ನಡೆಸಿತ್ತು. ಬಿಜೆಪಿಯೊಂದಿಗೆ ಮುನಿಸಿಕೊಂಡು ಪಕ್ಷದಿಂದ ದೂರ ಸರಿದಿತ್ತು. ಆದರೆ, ಪಕ್ಷದಿಂದ ಹೊರ ಹೋಗಿದ್ದ ಪಾಟೀದಾರ್ ಸಮುದಾಯದ ಮುಖಂಡರಲ್ಲಿ ಹಲವರು ಕಳೆದ ಐದು ವರ್ಷಗಳಲ್ಲಿ ಬಿಜೆಪಿಗೆ ಮರಳಿದ್ದಾರೆ. ಇದು ಬಿಜೆಪಿಯ ಅವಕಾಶಗಳನ್ನು ಹಿಗ್ಗಿಸಿತ್ತು. ಗೆಲುವಿಗಾಗಿ ಮಾಡಬೇಕಿದ್ದ ಏನನ್ನೂ ಆ ‍ಪಕ್ಷವು ನಿರ್ಲಕ್ಷಿಸಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಮುಖಂಡರಲ್ಲಿ ಹಲವರು ಕೋಮುವಾದಿಯಾದ ಹೇಳಿಕೆಗಳನ್ನು ನೀಡಿ ಧ್ರುವೀಕರಣದ ಯತ್ನವನ್ನು ಮಾಡಿದ್ದಾರೆ. ಕಳೆದ ಚುನಾವಣೆಯ ಬಳಿಕ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ ಪಕ್ಷದ ಸ್ಥಿತಿಯು ಇಷ್ಟೊಂದು ಹೀನಾಯವಾಗಬಹುದು
ಎಂದು ಯಾರೂ ಅಂದಾಜಿಸಿರಲಿಲ್ಲ. ಕಳೆದ ಚುನಾವಣೆಗೆ ಹೋಲಿಸಿದರೆ 60ಕ್ಕೂ ಹೆಚ್ಚು ಕ್ಷೇತ್ರಗಳನ್ನು ಕಾಂಗ್ರೆಸ್‌ ಕಳೆದುಕೊಂಡಿದೆ. ಅಧಿಕೃತ ವಿರೋಧ ಪಕ್ಷದ ಸ್ಥಾನ ಪಡೆದುಕೊಳ್ಳಲು ಬೇಕಾದಷ್ಟು
ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆದ್ದಿಲ್ಲ. ಆ ಪಕ್ಷದ ಚುನಾವಣಾ ಪ್ರಚಾರದಲ್ಲಿ ಉತ್ಸಾಹವೇ ಇರಲಿಲ್ಲ ಎಂಬುದು ಬಹಳ ಸ್ಪಷ್ಟವಾಗಿ ಗೋಚರಿಸಿತ್ತು. ಕಾಂಗ್ರೆಸ್‌ನ ವರಿಷ್ಠ ನಾಯಕರು ಅಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಿಲ್ಲ. ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್‌ಗೆ ಆಕರ್ಷಕ ಮತ್ತು ಪ್ರಭಾವಿ ನಾಯಕರು ಇಲ್ಲ. ಆಮ್‌ ಆದ್ಮಿ ಪಕ್ಷವು ಅಬ್ಬರದ ಪ್ರಚಾರ ನಡೆಸಿತ್ತು. ಈ ಪಕ್ಷವು ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಮತಗಳನ್ನು ತನ್ನತ್ತ ಸೆಳೆದುಕೊಂಡಿದೆ. ‘ಗೆದ್ದೇ ತೀರುತ್ತೇವೆ’ ಎಂಬ ರೀತಿಯಲ್ಲಿ ಪ್ರಚಾರ ಮಾಡಿದ್ದ ಎಎಪಿಯ ಸಾಧನೆ ಕಳಪೆ ಏನಲ್ಲ. ಅಸ್ತಿತ್ವವೇ ಇಲ್ಲದಿದ್ದ ರಾಜ್ಯದಲ್ಲಿ ಪಕ್ಷವು ಶೇ 12.9ರಷ್ಟು ಮತಗಳನ್ನು ಪಡೆದುಕೊಂಡು ಐದು ಕ್ಷೇತ್ರಗಳಲ್ಲಿ ಗೆದ್ದಿದೆ. ಇದರಿಂದಾಗಿ ಎಎಪಿಗೆ ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆಯೂ ಸಿಕ್ಕಿದೆ.

ಆಡಳಿತ ವಿರೋಧಿ ಅಲೆಯ ಅತ್ಯುತ್ತಮ ನಿದರ್ಶನವಾಗಿ ಹಿಮಾಚಲ ಪ್ರದೇಶವು ನಿಲ್ಲುತ್ತದೆ. ಕಳೆದ ಕೆಲವು ದಶಕಗಳಿಂದ ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಅಲ್ಲಿನ ಜನರು ಪರ್ಯಾಯವಾಗಿ ಆಯ್ಕೆ ಮಾಡುತ್ತಾ ಬಂದಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳ ಸರ್ಕಾರವು ಅಲ್ಲಿನ ಜನರಿಗೆ ಸಂತೃಪ್ತಿ ನೀಡಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಜನರಲ್ಲಿದ್ದ ಆಡಳಿತವಿರೋಧಿ ಮನೋಭಾವವು ತೀರಾ ಹೀನಾಯ ಸ್ಥಿತಿಯಲ್ಲಿರುವ ಕಾಂಗ್ರೆಸ್‌ಗೆ ಆಶಾಕಿರಣವಾಗಿ ಸಿಕ್ಕಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪ್ರಭಾವಿ ನಾಯಕತ್ವವೇನೂ ಇರಲಿಲ್ಲ. ಆದರೆ, ಕಾಂಗ್ರೆಸ್‌ ನೀಡಿದ್ದ ಹಳೆಯ ಪಿಂಚಣಿ ಯೋಜನೆ ಜಾರಿ ಮತ್ತು ಇತರ ಭರವಸೆಗಳು ಆ ಪ‍ಕ್ಷದ ಗೆಲುವಿಗೆ ನೆರವಾಗಿವೆ. ಸ್ಥಾನಗಳ ಸಂಖ್ಯೆ ಮತ್ತು ಮತ ಪ್ರಮಾಣ ಎರಡರಲ್ಲೂ ಉತ್ತಮ ಸಾಧನೆ ಮಾಡಿದೆ. ಆದರೆ, ಗೆಲ್ಲುವುದಷ್ಟೇ ಮುಖ್ಯವಲ್ಲ ಗೆಲುವನ್ನು ಉಳಿಸಿ
ಕೊಳ್ಳುವುದು ಇನ್ನೂ ಹೆಚ್ಚು ಮುಖ್ಯವಾದುದು ಎಂಬುದು ಕರ್ನಾಟಕ, ಮಧ್ಯಪ್ರದೇಶದಲ್ಲಿ ಸಾಬೀತಾಗಿದೆ. ಇದರಿಂದ ಕಾಂಗ್ರೆಸ್‌ ಪಾಠ ಕಲಿತಿದ್ದರೆ ಹಿಮಾಚಲ ಪ್ರದೇಶದ ಸರ್ಕಾರ ಅವಧಿ
ಪೂರ್ಣಗೊಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT