ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ‘ಅಮೃತ ಮಹೋತ್ಸವ’ ಮಂಥನ; ಸಂಭ್ರಮದ ಜೊತೆ ವಿವೇಕವೂ ಅಗತ್ಯ

Last Updated 14 ಆಗಸ್ಟ್ 2022, 20:28 IST
ಅಕ್ಷರ ಗಾತ್ರ

ಸ್ವಾತಂತ್ರ್ಯದ ‘ಅಮೃತ ಮಹೋತ್ಸವ’ ಸಂದರ್ಭವು ದೇಶದ ಉದ್ದಗಲಕ್ಕೂ ಸಂಭ್ರಮದ ತರಂಗಗಳನ್ನು ಎಬ್ಬಿಸಿದೆ. ಪ್ರತಿವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಸಾಮಾನ್ಯವಾಗಿ ಶಾಲೆ, ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಸೀಮಿತವಾಗಿರುತ್ತಿತ್ತು. ಅಮೃತ ಮಹೋತ್ಸವ ಸಂದರ್ಭದಲ್ಲಿ ಅದು ಜನಸಾಮಾನ್ಯರ ಸಂಭ್ರಮವಾಗಿಯೂ ರೂಪುಗೊಂಡಿದೆ;ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರುವ ಮೂಲಕ, ದೇಶಪ್ರೇಮದ ಅಭಿವ್ಯಕ್ತಿ ಹಾಗೂ ದೇಶದ ಸಮಗ್ರತೆಯ ಅನಾವರಣಕ್ಕೆ ಈ ವಿಶೇಷ ಸಂದರ್ಭ ಪ್ರೇರಣೆಯಾಗಿ ಪರಿಣಮಿಸಿದೆ.ಸ್ವಾತಂತ್ರ್ಯದ ಸಿದ್ಧಿಯ ಹಿಂದೆ ಲಕ್ಷಾಂತರ ಜನರ ತ್ಯಾಗ ಮತ್ತು ಬಲಿದಾನವಿದೆ. ಆ ಕಾರಣದಿಂದಾಗಿಯೇ, ಅಮೃತ ಮಹೋತ್ಸವ ಸಂದರ್ಭವನ್ನು ಸಂಭ್ರಮದ ಆಚರಣೆಯ ರೂಪದಲ್ಲಷ್ಟೇ ನೋಡುವುದು ಸಾಧ್ಯವಿಲ್ಲ. ಈ ಸಂದರ್ಭ, ತ್ಯಾಗ ಮತ್ತು ಬಲಿದಾನಗೈದವರ ಸ್ಮರಣೆಗೆ ಅವಕಾಶ ಕಲ್ಪಿಸಬೇಕು ಹಾಗೂ ಆ ಸ್ಮರಣೆ ನಾಗರಿಕರಲ್ಲಿ ಹೊಸ ಸ್ಫೂರ್ತಿಗೆ ಕಾರಣವಾಗಬೇಕು. ಸ್ವತಂತ್ರ ಭಾರತದ ಏಳೂವರೆ ದಶಕಗಳ ಪಯಣದಲ್ಲಿ ದೇಶ ಅಸಾಧಾರಣ ಸವಾಲುಗಳನ್ನು ಎದುರಿಸಿದೆ. ಆ ಸವಾಲುಗಳ ಅವಲೋಕನ ಮತ್ತು ಸಾಧನೆ–ಸಿದ್ಧಿಯ ವಿಶ್ಲೇಷಣೆಯೂ ಅಮೃತ ಮಹೋತ್ಸವ ಸಂದರ್ಭದಲ್ಲಿ ನಡೆಯಬೇಕು.

ಸ್ವಾತಂತ್ರ್ಯ ಸಂಭ್ರಮದ ಬೆನ್ನಿಗೇ ಎದುರಾದ ಭಾರತ ಮತ್ತು ಪಾಕಿಸ್ತಾನದ ವಿಭಜನೆ ಉಂಟುಮಾಡಿದ ಕಠಿಣ ಸವಾಲುಗಳನ್ನು ಎದುರಿಸುವುದರೊಂದಿಗೆ ಭಾರತದಲ್ಲಿ ಪ್ರಜಾಪ್ರಭುತ್ವದ ಶಕೆ ಆರಂಭವಾಯಿತು. ಧರ್ಮಾಧಾರಿತ ವಿಭಜನೆಯಷ್ಟೇ ಅಲ್ಲ; ಸಂಸ್ಕೃತಿ, ಭಾಷೆ ಮತ್ತು ಗಡಿ ಆಧಾರಿತವಾಗಿಯೂ ಸ್ವತಂತ್ರ ಭಾರತ ವಿಭಜಿತವಾಗಿತ್ತು. ಇವುಗಳೊಂದಿಗೆ ದೇಶದುದ್ದಗಲಕ್ಕೂ ಅಸ್ತಿತ್ವದಲ್ಲಿದ್ದ ಐದುನೂರಕ್ಕೂ ಹೆಚ್ಚು ರಾಜರ ಸಂಸ್ಥಾನಗಳನ್ನು ಒಕ್ಕೂಟ ವ್ಯವಸ್ಥೆಯಡಿ ತರುವ ದೊಡ್ಡ ಸವಾಲು ಪ್ರಜಾಪ್ರಭುತ್ವ ಸರ್ಕಾರದ ಎದುರಿಗಿತ್ತು. ಬಹುತ್ವ ಭಾರತದ ಎಲ್ಲ ಸಮುದಾಯದವರನ್ನೂ ಸಮಾನವಾಗಿ ನಡೆಸಿಕೊಳ್ಳುವ ಸಂವಿಧಾನವನ್ನು ರಚಿಸುವುದು ಕೂಡ ಬಹು ದೊಡ್ಡ ಕಸರತ್ತೇ ಆಗಿತ್ತು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಕ್ಷಣದಲ್ಲಾದರೂ ಕುಸಿದುಬೀಳಬಹುದು ಎಂದು ದಿನಗಣನೆ ಮಾಡುತ್ತಿದ್ದ ವಿಶ್ವಸಮುದಾಯದ ಎದುರು ಸ್ವಂತಿಕೆಯಿಂದ ತಲೆಯೆತ್ತಿ ನಿಲ್ಲುವ ಸವಾಲೂ ಸರ್ಕಾರವನ್ನು ನಡೆಸುವವರ ಮುಂದಿತ್ತು. ಈ ಎಲ್ಲ ಆಡಳಿತಾತ್ಮಕ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದರ ಜೊತೆಗೆ, ಏರುತ್ತಿರುವ ಜನಸಂಖ್ಯೆ ಮತ್ತು ಆಹಾರ ಉತ್ಪಾದನೆಯ ಸಮತೋಲನ ಸಾಧಿಸಲು ನಡೆದ ಕೃಷಿಕ್ರಾಂತಿ, ದೇಶದ ಅಭಿವೃದ್ಧಿಯ ಬೆನ್ನೆಲುಬಿನ ರೂಪದಲ್ಲಿ ನಡೆದ ಕೈಗಾರಿಕಾ ಕ್ರಾಂತಿಯನ್ನು ಗಮನಿಸಬೇಕು. ಪ್ರತೀ ಚುನಾವಣೆಯೂ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಪೂರಕವಾಗಿರುವುದು ಕೂಡ ಸ್ವತಂತ್ರ ಭಾರತದ ಗಮನಾರ್ಹ ಸಾಧನೆಗಳಲ್ಲೊಂದು. ಹಲವು ಆತಂಕಗಳ ನಡುವೆಯೂ ಭಾರತದ ಪ್ರಜಾಪ್ರಭುತ್ವದ ಸೌಂದರ್ಯ, ಸ್ಥಿತಿಸ್ಥಾಪಕತ್ವ ಗುಣ ಹಾಗೂ ಪ್ರಬುದ್ಧತೆ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಮತ್ತೆ ಮತ್ತೆ ಸಾಬೀತಾಗಿದೆ. ಸ್ವತಂತ್ರ ಭಾರತದ ಕುರಿತು ಹೆಮ್ಮೆ ಹಾಗೂ ಎಚ್ಚರ ಮೂಡಿಸುವಂತಿರುವ ಈ ಸಾಧನೆಗಳಲ್ಲಿ, ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ವಿವೇಕದ ಪಾಠವೂ ಇರುವುದನ್ನು ಜನ ಮರೆಯಬಾರದು.

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಜೀವನವನ್ನೇ ಮುಡಿಪಾಗಿಟ್ಟಿದ್ದ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳು, ಅವರ ಆಶೋತ್ತರಗಳು ಸ್ವತಂತ್ರ ಭಾರತದಲ್ಲಿ ಎಷ್ಟರಮಟ್ಟಿಗೆ ಸಾಕಾರಗೊಂಡಿವೆ ಎನ್ನುವ ಪ್ರಶ್ನೆಗೆ ದೊರೆಯುವ ಉತ್ತರಗಳು ಆಶಾದಾಯಕವಾಗಿಯೇನೂಇಲ್ಲ. 1947ರ ಬಿಕ್ಕಟ್ಟುಗಳು ಬೇರೆ ಬೇರೆ ರೂಪಗಳಲ್ಲಿ ಅಮೃತ ಮಹೋತ್ಸವ ಸಂದರ್ಭದಲ್ಲೂ ಜೀವಂತವಾಗಿವೆ. ಕೋಮುಸೌಹಾರ್ದದ ನೆಲೆಗಟ್ಟಿನ ಮೇಲೆ ಸ್ವತಂತ್ರ ಭಾರತದ ಅಭಿವೃದ್ಧಿಯ ಸೌಧವನ್ನು ರೂಪಿಸುವ ಪ್ರಯತ್ನ ಮತ್ತೆ ಮತ್ತೆ ಹಿನ್ನಡೆ ಅನುಭವಿಸುತ್ತಿದೆ. ಬಹುತ್ವ ಭಾರತದ ಪರಿಕಲ್ಪನೆಗೆ ಗಾಸಿಯಾಗುತ್ತಿದೆ. ರಾಜಕಾರಣದ ಅಡಿಗಲ್ಲಾಗಬೇಕಿದ್ದಧರ್ಮನಿರಪೇಕ್ಷತೆ ನೇಪಥ್ಯಕ್ಕೆ ಸರಿದು, ಕೋಮುದ್ವೇಷ ಮುನ್ನೆಲೆಗೆ ಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮತ್ತೆ ಮತ್ತೆ ಹಿನ್ನಡೆಯಾಗುತ್ತಿದೆ. ಕೇಂದ್ರ ಸರ್ಕಾರ ‘ಮೇಕ್‌ ಇನ್‌ ಇಂಡಿಯಾ’ ಮಂತ್ರ ಜಪಿಸುತ್ತಿದ್ದರೂ, ಗಾಂಧಿ ಹಂಬಲಿಸಿದ ಸ್ವರಾಜ್ಯ ಪೂರ್ಣ ಪ್ರಮಾಣದಲ್ಲಿ ಸಾಕಾರಗೊಂಡಿಲ್ಲ. ಸಂವಿಧಾನದ ಒತ್ತಾಸೆಯ ನಡುವೆಯೂ ಆರ್ಥಿಕ ಹಾಗೂ ಸಾಮಾಜಿಕ ತರತಮಗಳನ್ನು ಕೊನೆಗೊಳಿಸುವ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಈ ವಿದ್ಯಮಾನಗಳು ‘ಅಮೃತ ಮಹೋತ್ಸವ’ ಸಂದರ್ಭದಲ್ಲಿ ನಮ್ಮನ್ನು ಚಿಂತನೆಗೆ ಹಚ್ಚಬೇಕು. ಸ್ವತಂತ್ರ ಭಾರತಕ್ಕೆ ಎಪ್ಪತ್ತೈದು ವರ್ಷಗಳು ತುಂಬಿದ ಸಂದರ್ಭವು ಕೆಲವು ದಿನಗಳ ಆಚರಣೆಗೆ ಅಥವಾ ಮನೆ ಮನೆಗಳಲ್ಲಿ ಧ್ವಜಾರೋಹಣ ಮಾಡುವುದಕ್ಕೆ ಸೀಮಿತಗೊಳ್ಳಬಾರದು. ‘ಅಮೃತಪ್ರಜ್ಞೆ’ ನಮ್ಮೊಳಗೆ ಜಾಗೃತವಾಗಿರಬೇಕು. ಸ್ವಾತಂತ್ರ್ಯ ಚಳವಳಿಯ ಪ್ರಮುಖ ಫಲಾನುಭವಿಗಳಾದ ರಾಜಕಾರಣಿಗಳಲ್ಲಿ, ತ್ಯಾಗ–ಬಲಿದಾನದ ಪರಂಪರೆ ತಮ್ಮ ಮಾತು–ಕೃತಿಯಲ್ಲಿ ಎಷ್ಟರಮಟ್ಟಿಗೆ ಅನುಷ್ಠಾನದಲ್ಲಿದೆ ಎನ್ನುವ ಆತ್ಮಾವಲೋಕನಕ್ಕೆ ಹಾಗೂ ಜನಸಾಮಾನ್ಯರಲ್ಲಿ ನಾಗರಿಕಪ್ರಜ್ಞೆಯ ಜಾಗೃತಿಗೆ ಪ್ರೇರಣೆ ದೊರೆತಲ್ಲಿ, ‘ಅಮೃತ ಮಹೋತ್ಸವ’ ಆಚರಣೆ ಸಾರ್ಥಕವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT