ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೈಗಾರಿಕಾ ವಲಯದ ಬೆಳವಣಿಗೆ ವೇಗ ತುಂಬಲು ಬೇಕಿದೆ ನೆರವು

Last Updated 6 ಮಾರ್ಚ್ 2022, 21:30 IST
ಅಕ್ಷರ ಗಾತ್ರ

ರಾಜ್ಯ ಬಜೆಟ್ ಜೊತೆಯಲ್ಲಿಯೇ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡನೆ ಆಗಿರುವ ರಾಜ್ಯದ ಆರ್ಥಿಕ ಸಮೀಕ್ಷೆಯ ವರದಿಯು ಕೈಗಾರಿಕಾ ವಲಯದ ಬೆಳವಣಿಗೆಗೆ ಸಂಬಂಧಿಸಿದಂತೆ ಗಮನಾರ್ಹ ವಿಚಾರಗಳನ್ನು ಹೇಳಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಕೈಗಾರಿಕಾ ವಲಯವು ಹೇಳಿಕೊಳ್ಳುವ ಬೆಳವಣಿಗೆಯನ್ನೇ ಕಂಡಿಲ್ಲ. ರಾಜ್ಯದ ಕೃಷಿ ವಲಯವು ಐದು ವರ್ಷಗಳ ಅವಧಿಯಲ್ಲಿ ವಾರ್ಷಿಕ ಸರಾಸರಿ ಶೇಕಡ 16.6ರಷ್ಟು ಬೆಳವಣಿಗೆ ಸಾಧಿಸಿದೆ. ಇದೇ ಅವಧಿಯಲ್ಲಿ ಸೇವಾ ವಲಯವು ವಾರ್ಷಿಕ ಸರಾಸರಿ 11.6ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ ಕೈಗಾರಿಕಾ ವಲಯದ ಸರಾಸರಿ ವಾರ್ಷಿಕ ಬೆಳವಣಿಗೆ ಪ್ರಮಾಣ ಶೇ 6.1ರಷ್ಟು ಮಾತ್ರ. ಇದು ರಾಜ್ಯದ ಉದ್ಯೋಗ ಬೆಳವಣಿಗೆ ದರದ ಮೇಲೆಯೂ ಕೆಟ್ಟ ಪರಿಣಾಮ ಉಂಟು ಮಾಡಿದೆ ಎಂದು ಆರ್ಥಿಕ ಸಮೀಕ್ಷೆಯ ವರದಿ ಉಲ್ಲೇಖಿಸಿದೆ. ಕೋವಿಡ್‌-ಲಾಕ್‌ಡೌನ್‌ ನಂತರದ ಅವಧಿಯಲ್ಲಿ ರಾಜ್ಯದಲ್ಲಿ ಮಾತ್ರವೇ ಅಲ್ಲದೆ, ದೇಶದ ಬಹುತೇಕ ಕಡೆಗಳಲ್ಲಿ ಕೃಷಿ ವಲಯದ ಚಟುವಟಿಕೆಗಳು ಬೆಳವಣಿಗೆ ದಾಖಲಿಸಿವೆ. ನಗರಗಳಲ್ಲಿ ಉದ್ಯೋಗ ಕಳೆದುಕೊಂಡ ಹಲವರು ತಮ್ಮ ಊರುಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಇದಕ್ಕೆ ಒಂದು ಕಾರಣ ಎಂದು ಹಲವು ವರದಿಗಳು ಹೇಳಿವೆ. ಐ.ಟಿ. ಉದ್ಯಮವು ಇತರ ರಾಜ್ಯಗಳಿಗೆ ಮಾದರಿ ಅನ್ನಿಸುವ ಮಟ್ಟದಲ್ಲಿ ಕರ್ನಾಟಕದಲ್ಲಿ ಬೆಳೆದು ನಿಂತಿದೆ. ಇದು ಇಲ್ಲಿನ ಸೇವಾ ವಲಯದ ಚಟುವಟಿಕೆಗಳ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ಲಾಕ್‌ಡೌನ್ ಅವಧಿಯ ನಂತರದಲ್ಲಿ ಸೇವಾ ವಲಯದಲ್ಲಿ ಕೆಲಸ ನಿರ್ವಹಿಸುವ ಬಗೆಯಲ್ಲಿ ಬದಲಾವಣೆ ಆಯಿತು. ಮನೆಯಿಂದಲೇ ಕೆಲಸ ಮಾಡುವ ಹೊಸ ಸಂಸ್ಕೃತಿಯೊಂದು ಶುರುವಾಯಿತು. ಹಲವು ಮಿತಿಗಳ ನಡುವೆಯೂ ಸೇವಾ ವಲಯವು ದೊಡ್ಡ ಮಟ್ಟದ ಬೆಳವಣಿಗೆ ಕಂಡಿದೆ.

ಆದರೆ, ಕೈಗಾರಿಕಾ ವಲಯದ ಚಟುವಟಿಕೆಗಳು ಮಾತ್ರ ಕಳವಳ ಮೂಡಿಸುವ ಮಟ್ಟದಲ್ಲಿ ಇವೆ. ಲಾಕ್‌ಡೌನ್‌ ಅವಧಿಯು ಕೈಗಾರಿಕೆಗಳಿಗೆ ಭಾರಿ ಏಟು ಕೊಟ್ಟಿದೆ ಎಂಬುದರಲ್ಲಿ ಅನುಮಾನ ಇಲ್ಲ. ಕೋವಿಡ್‌ ನಂತರದಲ್ಲಿ ರಾಜ್ಯದ ಅರ್ಥ ವ್ಯವಸ್ಥೆಗೆ ಕೈಗಾರಿಕಾ ವಲಯದ ಕೊಡುಗೆಯ ಪ್ರಮಾಣದಲ್ಲಿ ಶೇ 1.9ರಷ್ಟು ಇಳಿಕೆ ಆಗಿದೆ. ಇದರ ಜೊತೆಯಲ್ಲಿಯೇ, ಈ ವಲಯವು ಎದುರಿಸುತ್ತಿರುವ ಹಲವು ಸಮಸ್ಯೆ
ಗಳನ್ನು ಆರ್ಥಿಕ ಸಮೀಕ್ಷೆಯು ವಿವರಿಸಿದೆ. ‘ಕೈಗಾರಿಕಾ ವಲಯಕ್ಕೆ ನೀಡಿರುವ ಬೆಂಬಲವು ಅಸಮರ್ಪಕ
ವಾಗಿದೆ’ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕೇಂದ್ರ ಸರ್ಕಾರವು ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಆರಂಭಿಸಿದ ತುರ್ತು ಸಾಲ ಖಾತರಿ ಯೋಜನೆಯ ಅಡಿಯಲ್ಲಿ ರಾಜ್ಯದ ಕೈಗಾರಿಕೆಗಳು ಪಡೆದಿರುವ ಸಾಲದ ಪ್ರಮಾಣ ಕಡಿಮೆ ಇದೆ. ಹೀಗಾಗಿ, ರಾಜ್ಯದ ಕೈಗಾರಿಕೆಗಳಿಗೆ ಸುಲಭದಲ್ಲಿ ಸಾಲ ಸಿಗುವಂತೆ ಆಗಲು ಸರ್ಕಾರದ ಕಡೆಯಿಂದ ಒಂದಿಷ್ಟು ಕ್ರಮಗಳು ಆಗಬೇಕಿವೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಸಾಲ ಸುಲಭವಾಗಿ ಸಿಗುವಂತೆ ಆಗಲು ರಾಜ್ಯ ಸರ್ಕಾರವು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯನ್ನು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕು ಎಂದು ಕೂಡ ಆರ್ಥಿಕ ಸಮೀಕ್ಷೆಯಲ್ಲಿ ಸಲಹೆ ಮಾಡಲಾಗಿದೆ. ಇದು ಆದ್ಯತೆಯ ಮೇರೆಗೆ ಆಗಬೇಕು. ಎಂಎಸ್‌ಎಂಇ ವಲಯದ ಕೈಗಾರಿಕೆಗಳು ಬಂಡವಾಳ ಸಂಗ್ರಹಕ್ಕೆ ಷೇರು ಮಾರುಕಟ್ಟೆಯ ಕಡೆ ಮುಖ ಮಾಡುವ ವಿಚಾರವಾಗಿಯೂ ಸರ್ಕಾರದ ಪ್ರೋತ್ಸಾಹ ಸಿಕ್ಕರೆ ಒಳ್ಳೆಯದು. ಸಣ್ಣ ಉದ್ದಿಮೆಗಳು ಸಾಲ ಪಡೆಯುವುದಕ್ಕೇ ಕಷ್ಟಪಡಬೇಕಾದ ಸಂದರ್ಭ ಇದೆ. ಹೀಗಿರುವಾಗ ಅವು ಷೇರು ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸುವುದು ಸುಲಭದ ಮಾತಲ್ಲ. ಆದರೆ, ‌‌‌‌‌ಈ ದಿಸೆಯಲ್ಲಿ ಪ್ರಯತ್ನವೊಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಕಡೆಯಿಂದ ಈಚೆಗೆ ಆಗಿದೆ. ಇದರಲ್ಲಿ ಸರ್ಕಾರವೂ ಕೈಜೋಡಿಸಬಹುದು. ಇದೊಂದು ಮಾರ್ಗ ಸಾಧ್ಯವಾದರೆ ಎಂಎಸ್‌ಎಂಇ ವಲಯದ ಉದ್ದಿಮೆಗಳು ಇನ್ನಷ್ಟು ಸ್ಪರ್ಧಾತ್ಮಕ ಆಗುತ್ತವೆ.

ಕೃಷಿ ವಲಯದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಕಂಡುಬಂದಿದೆಯಾದರೂ ಅದು ಸರ್ಕಾರವನ್ನು ಸಮಾಧಾನದ ಸ್ಥಿತಿಗೆ ಒಯ್ಯಬಾರದು. ಮೂರೂ ವಲಯಗಳನ್ನು ಹೋಲಿಕೆ ಮಾಡಿ ನೋಡಿದರೆ, ‌‌ಭದ್ರತೆ ಸೇರಿದಂತೆ ವಿವಿಧ ಮಾನದಂಡಗಳ ನೆಲೆಯಲ್ಲಿಕೃಷಿ ವಲಯದ ಉದ್ಯೋಗವು ತೀರಾ ಗುಣಮಟ್ಟದ್ದೇನೂ ಆಗಿರುವುದಿಲ್ಲ. ಈ ಉದ್ಯೋಗಗಳು ಅಸಂಘಟಿತವಾಗಿರುತ್ತವೆ, ಅಲ್ಲಿ ಕೆಲಸ ಮಾಡುವವರಿಗೆ ಆರ್ಥಿಕ ಭದ್ರತೆ ಕಡಿಮೆ. ಕೃಷಿ ವಲಯದಲ್ಲಿ ಹೆಚ್ಚಿನ ಬೆಳವಣಿಗೆ ಕಂಡುಬಂದಿರುವುದನ್ನೂ, ಕೈಗಾರಿಕಾ ವಲಯದಲ್ಲಿ ಕಡಿಮೆ ಬೆಳವಣಿಗೆ ಕಂಡುಬಂದಿರುವುದನ್ನೂ ಈ ಹಿನ್ನೆಲೆಯಲ್ಲಿ ಗ್ರಹಿಸಬೇಕು. ಆಗ, ಕೈಗಾರಿಕಾ ವಲಯದ ಬೆಳವಣಿಗೆಯನ್ನು ಹೆಚ್ಚಿಸಬೇಕಾದ ಅನಿವಾರ್ಯ ಹಾಗೂ ಕೃಷಿ ವಲಯದಲ್ಲಿನ ಉದ್ಯೋಗಗಳ ಗುಣಮಟ್ಟವನ್ನು ಸುಧಾರಿಸುವ ಅಗತ್ಯಗಳು ಏಕಕಾಲದಲ್ಲಿ ಮನವರಿಕೆ ಆಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT