ಮುಂಗಾರು ಹಂಗಾಮಿನ ಮೊದಲಾರ್ಧ ಮುಗಿಯುತ್ತಾ ಬಂದರೂ ವಾಡಿಕೆಯಷ್ಟು ಮಳೆ ಬಾರದೇ ಕರ್ನಾಟಕದ 120 ತಾಲ್ಲೂಕುಗಳ ಮೇಲೆ ಬರದ ಕರಿನೆರಳು ಚಾಚಿದೆ. ಇದು ನಾಡಿನ ರೈತ ಸಂಕುಲವನ್ನು ವ್ಯಾಕುಲಕ್ಕೆ ದೂಡಿದೆ. ಮಳೆ ಬೀಳದೇ ಇರುವುದರಿಂದ ಮೊಳಕೆಯೊಡೆದ ಬೀಜಗಳು ಅಲ್ಲೇ ಮುರುಟಿಹೋಗಲಾರಂಭಿಸಿವೆ. ಕೆಲವೆಡೆ ಟ್ಯಾಂಕರ್ ಮೂಲಕ ನೀರು ತರಿಸಿ ಬೆಳೆ ಉಳಿಸಿಕೊಳ್ಳುವ ಯತ್ನವನ್ನು ರೈತರು ಮಾಡುತ್ತಿದ್ದಾರೆ. ಹಿಂದಿನ ಐದು ವರ್ಷಗಳ ಸರಾಸರಿ ಅಂದಾಜಿನಂತೆ 108 ಲಕ್ಷ ಹೆಕ್ಟೇರ್‌ನಷ್ಟು ಜಮೀನು ಕೃಷಿಗೆ ಬಳಕೆಯಾಗುತ್ತಿದೆ. ಹಿಂದಿನ ವರ್ಷ ಮುಂಗಾರು ಹಂಗಾಮಿನಲ್ಲಿ 71.74 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು. ಈ ಸಾಲಿನಲ್ಲಿ 82.35 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಈವರೆಗೆ 64.84 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಲೆಕ್ಕಾಚಾರದಲ್ಲಿ ಶೇಕಡ 79ರಷ್ಟು ಬಿತ್ತನೆಯಾಗಿದೆಯಾದರೂ ಬಿತ್ತಿದ ಬೀಜಗಳಷ್ಟೂ ಚಿಗುರೊಡೆದು ಗಿಡವಾಗುವುದಿಲ್ಲ. ಭತ್ತ, ಗೋಧಿ ಬಿಟ್ಟರೆ ಕರ್ನಾಟಕದ ಏಕದಳ ಮತ್ತು ದ್ವಿದಳ ಧಾನ್ಯದ ಬೆಳೆಗಳೆಲ್ಲವೂ ಮಳೆಯನ್ನೇ ನೆಚ್ಚಿಕೊಂಡಿವೆ. ಸಕಾಲದಲ್ಲಿ ಅವಶ್ಯದಷ್ಟು ಮಳೆ ಹೋಗಲಿ, ಹನಿಗಳ ಸಿಂಚನವಾದರೂ ಆಗದಿದ್ದರೆ ಬೀಜಗಳು ಗಿಡವಾಗುವುದಿಲ್ಲ. ಚಿಗೊರೊಡೆದ ಬೀಜಗಳು ಬಿಸಿಲ ತಾಪಕ್ಕೆ ಅಲ್ಲೇ ಕಮರುವುದು ಸಾಮಾನ್ಯ. ಮಳೆ ಕೊರತೆಯಾದ ಅನೇಕ ಜಿಲ್ಲೆಗಳಲ್ಲಿ ಈ ರೀತಿಯ ಆಘಾತಕಾರಿ ಪ್ರಕರಣಗಳು ವರದಿಯಾಗಿವೆ.
ಮಳೆ ಕೊರತೆಯಾಗಿರುವುದನ್ನು ಗಮನಿಸಿರುವ ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದೆ. ಮಳೆ–ಬೆಳೆ ಪರಿಸ್ಥಿತಿಯನ್ನು ಪರಾಮರ್ಶಿಸಿ ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾದ ಸಚಿವ ಸಂಪುಟ ಉಪಸಮಿತಿ ಈಗಾಗಲೇ ಸಭೆ ಸೇರಿ ಚರ್ಚೆಯನ್ನೂ ನಡೆಸಿದೆ. ‘ಮಳೆ ಕೊರತೆ ಎದುರಿಸುತ್ತಿರುವ 120 ತಾಲ್ಲೂಕುಗಳಲ್ಲಿನ ಪ್ರತಿ 10 ಹಳ್ಳಿಗಳಲ್ಲಿ ಐದು ಪ್ರಮುಖ ಬೆಳೆಗಳ ಪರಿಸ್ಥಿತಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ 10 ದಿನಗಳ ಒಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಮುಂದೆ ಎದುರಾಗಲಿರುವ ಪರಿಸ್ಥಿತಿಯ ತೀವ್ರತೆಯನ್ನೂ ಇದು ತೋರಿಸುತ್ತದೆ. ಮಳೆ ಕೊರತೆಯಿಂದ ಎದುರಾಗಬಹುದಾದ ಸಂಕಷ್ಟಗಳನ್ನು ಮೊದಲೇ ಅಂದಾಜಿಸಿದರಷ್ಟೆ ಸಾಲದು. ಬಂದೆರಗಬಹುದಾದ ಬರಗಾಲ, ಅದು ತಂದೊಡ್ಡಬಹುದಾದ ಆತಂಕ, ಆಹಾರ ಸಮಸ್ಯೆಯನ್ನು ನಿಭಾಯಿಸುವ ಯೋಜನೆಯನ್ನೂ ಸರ್ಕಾರ ರೂಪಿಸಬೇಕಿರುವುದು ಈಗಿನ ತುರ್ತು. ಬರಪೀಡಿತ ಎಂದು ಘೋಷಿಸಬೇಕಾದರೆ ಸೆಪ್ಟೆಂಬರ್ ಅಂತ್ಯದವರೆಗಿನ ಮಳೆ ಕೊರತೆ, ತೇವಾಂಶದ ಪರಿಸ್ಥಿತಿ, ಬೆಳೆ ಹಾನಿಯ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಕೇಂದ್ರದ ಮಾರ್ಗಸೂಚಿ ಅನ್ವಯ ಪರಿಹಾರದ ಮೊತ್ತ ಬಿಡುಗಡೆಯಾಗಬೇಕಾದರೆ ಅಲ್ಲಿಯವರೆಗೆ ಕಾಯಲೇಬೇಕು. ಅದಕ್ಕೆ ಮೊದಲೇ, ಬರದ ಘೋಷಣೆ ಮಾಡಿದರೆ ರಾಜ್ಯವೇ ಬರ ನಿರ್ವಹಣೆಯ ಬಾಬ್ತನ್ನು ಹೊರಬೇಕು. ಅದಕ್ಕಾಗಿಯೇ, ಕೇಂದ್ರದ ಮಾರ್ಗಸೂಚಿ ಬದಲಾವಣೆ ಮಾಡುವಂತೆ ಒಂದು ದಶಕದಿಂದ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮೊರೆಯಿಡುತ್ತಲೇ ಇದೆ. ಆದರೆ, ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ರಾಜ್ಯ ಸರ್ಕಾರವೇ ಜನರ ಕಷ್ಟಕ್ಕೆ ಹೆಗಲಾಗಬೇಕಾದ ಅನಿವಾರ್ಯವಂತೂ ಇದ್ದೇ ಇದೆ.
ಬರಕ್ಕೆ ತುತ್ತಾಗಬಹುದಾದ ಪ್ರದೇಶಗಳ ಮಾಹಿತಿ ಈಗಾಗಲೇ ಸರ್ಕಾರದ ಬಳಿ ಇದೆ. ಆಯಾ ಜಿಲ್ಲಾಡಳಿತವನ್ನು ಚುರುಕುಗೊಳಿಸಿ, ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪರ್ಯಾಯ ಜಲ ಮೂಲಗಳನ್ನು ಗೊತ್ತುಮಾಡಿಕೊಳ್ಳಬೇಕಿದೆ. ಅಣೆಕಟ್ಟು, ಕೆರೆ, ಕೊಳವೆಬಾವಿ, ಖಾಸಗಿ ಕೊಳವೆಬಾವಿಗಳ ಮೇಲೆ ನಿಗಾ ಇಟ್ಟು, ನೀರಿನ ಮಿತ ಬಳಕೆಗೆ ಜಾಗೃತಿ ಮೂಡಿಸಬೇಕಿದೆ. ವಿವಿಧ ಇಲಾಖೆಗಳ ಸಂಯೋಜನೆಯಡಿ ಸಂಕಷ್ಟ ಪರಿಹಾರ ಸೂತ್ರವೊಂದನ್ನು ಸರ್ಕಾರ ಈಗಲೇ ಸಿದ್ಧಪಡಿಸಬೇಕಿದೆ. ನೀರಿನ ವ್ಯವಸ್ಥೆಗೆ ಜಿಲ್ಲಾ ಪಂಚಾಯಿತಿಗಳಿಗೆ ಬೇಕಾದ ಅನುದಾನವನ್ನು ಇಡುಗಂಟಿನ ರೂಪದಲ್ಲಿ ಬಿಡುಗಡೆ ಮಾಡಿ, ಮುಂಜಾಗ್ರತೆ ವಹಿಸಬೇಕಿದೆ. ಬಿತ್ತಿದ ಬೀಜ ಮೊಳಕೆಯೊಡೆಯದೇ, ಭೂಮಿಗೆ ಚೆಲ್ಲಿದ ಗೊಬ್ಬರವೂ ವ್ಯರ್ಥವಾಗಿ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಬಿತ್ತನೆ ಬೀಜದ ನಷ್ಟದಿಂದ ತೊಂದರೆಗೀಡಾದ ರೈತರು ಮತ್ತೊಮ್ಮೆ ಬಿತ್ತನೆಗೆ ಮುಂದಾದರೆ ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ಒದಗಿಸಲು ಸರ್ಕಾರ ಅಣಿಯಾಗಬೇಕು. ಸಾಲ ಮಾಡಿದ ರೈತರು ಆತಂಕಕ್ಕೆ ಈಡಾಗುವುದನ್ನು ತಪ್ಪಿಸಲು, ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡರು, ರೈತರಿಗೆ ಆಪ್ತ ಸಮಾಲೋಚನೆ ಸೌಲಭ್ಯ ಕಲ್ಪಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಮತ್ತೆ ಅದಕ್ಕೆ ಚಾಲನೆ ನೀಡಬೇಕಾಗಿದೆ. ಬರ ಎದುರಿಸಲು ಸರ್ಕಾರವೇ ಸಜ್ಜುಗೊಳ್ಳಬೇಕಿರುವುದು ಈ ಹೊತ್ತಿನ ಅಗತ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.