ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಭಾರತ– ಬಾಂಗ್ಲಾ ಬಾಂಧವ್ಯ ಮತ್ತೊಂದು ಮಹತ್ವದ ಹೆಜ್ಜೆ

Last Updated 9 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ನೆರೆಯ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ನೀರು ಹಂಚಿಕೆ, ವ್ಯಾಪಾರ, ಸಂವಹನ, ಬಾಹ್ಯಾಕಾಶ, ರೈಲು ಮೂಲಸೌಕರ್ಯ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಹಲವು ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಿವೆ. ಹಾಗಾಗಿ, ಹಸೀನಾ ಅವರ ಭೇಟಿಯು ಫಲಪ್ರದ ಎಂದೇ ಹೇಳಬಹುದು. ಕುಶಿಯಾರಾ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಒಪ್ಪಂದವು ಹೆಚ್ಚು ಮಹತ್ವದ್ದಾಗಿದೆ. ಫರಕ್ಕಾ ಅಣೆಕಟ್ಟೆಯ ನೀರು ಹಂಚಿಕೆಗಾಗಿ ಎರಡೂ ದೇಶಗಳ ನಡುವೆ 1996ರಲ್ಲಿ ಒಪ್ಪಂದ ಏರ್ಪಟ್ಟಿತ್ತು. ಅದಾದ ಬಳಿಕ, ಭಾರತ–ಬಾಂಗ್ಲಾ ನಡುವೆ ನೀರು ಹಂಚಿಕೆ ಒಪ್ಪಂದ ಆಗಿರುವುದು ಇದೇ ಮೊದಲು. ಕುಶಿಯಾರಾ ಒಪ್ಪಂದದಿಂದಾಗಿ ದಕ್ಷಿಣ ಅಸ್ಸಾಂ ಮತ್ತು ಬಾಂಗ್ಲಾ ದೇಶದ ಸಿಲ್‌ಹಟ್‌ ಪ್ರದೇಶದ ಜನರಿಗೆ ಅನುಕೂಲ ಆಗಲಿದೆ. ಸಮಗ್ರ ಆರ್ಥಿಕ ಸಹಕಾರ ಒಪ್ಪಂದಕ್ಕೆ (ಸಿಇಪಿಎ) ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ. ಈ ದಿಸೆಯಲ್ಲಿ ಮಾತುಕತೆ ಶೀಘ್ರವೇ ಆರಂಭ ಆಗಲಿದೆ. ದಕ್ಷಿಣ ಏಷ್ಯಾದಲ್ಲಿ ಬಾಂಗ್ಲಾದೇಶವು ಭಾರತದ ಅತ್ಯಂತ ದೊಡ್ಡ ವ್ಯಾಪಾರ ಪಾಲುದಾರ. ಕಳೆದ ಐದು ವರ್ಷಗಳಲ್ಲಿ ವ್ಯಾಪಾರದ ಪ್ರಮಾಣವು ದುಪ್ಪಟ್ಟಾಗಿದೆ. ಬಾಂಗ್ಲಾದೇಶವು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾದ ಆರ್ಥಿಕ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಕನಿಷ್ಠ ಅಭಿವೃದ್ಧಿ ಹೊಂದಿದ ದೇಶ ಎಂಬ ಹಣೆಪಟ್ಟಿ ಯನ್ನು ಬಾಂಗ್ಲಾದೇಶವು 2026ರಲ್ಲಿ ಕಳಚಿ ಕೊಳ್ಳಲಿದೆ. ಆ ಹೊತ್ತಿಗೆ ಸಿಇಪಿಎ ಮಾತುಕತೆಯನ್ನು ಪೂರ್ಣಗೊಳಿಸುವ ಗುರಿಯನ್ನು ಎರಡೂ ದೇಶಗಳು ಹಾಕಿಕೊಂಡಿವೆ.

ಭಾರತ–ಬಾಂಗ್ಲಾ ನಡುವಣ ಸಂಬಂಧವು ಹಿಂದಿನಿಂದಲೂ ಬಲವಾಗಿಯೇ ಇದೆ. ಹಸೀನಾ ಅವರ ಅವಾಮಿ ಲೀಗ್‌ ಪಕ್ಷದ ಅಧಿಕಾರ ಅವಧಿಯಲ್ಲಿ ಸಂಬಂಧವು ಹೆಚ್ಚು ಸೌಹಾರ್ದದಿಂದ ಕೂಡಿದೆ. ಭಾರತದ ಭದ್ರತಾ ಕಳವಳಗಳಿಗೆ ಹಸೀನಾ ಅವರ ಸರ್ಕಾರವು ಸಂವೇದನಾಶೀಲವಾಗಿ ಸ್ಪಂದಿಸಿದೆ. ಇಸ್ಲಾಂ ಮೂಲಭೂತವಾದಿ ಗುಂಪುಗಳು ಮತ್ತು ಬಾಂಗ್ಲಾದಲ್ಲಿ ನೆಲೆಯಾಗಿದ್ದ ಭಾರತ ವಿರೋಧಿ ಉಗ್ರಗಾಮಿ ಗುಂಪುಗಳ ವಿರುದ್ಧ ಹಸೀನಾ ಅವರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಚೀನಾದ ‘ಬೆಲ್ಟ್‌ ಆ್ಯಂಡ್‌ ರೋಡ್‌ ಇನಿಷಿಯೇಟಿವ್‌’ನ ಭಾಗವಾಗಿ ಬಾಂಗ್ಲಾ ಇದೆ; ಹಾಗೆಯೇ ಮೂಲಸೌಕರ್ಯ ನಿರ್ಮಾಣಕ್ಕೆ ಬೇಕಾದ ಪರಿಣತಿ ಹಾಗೂ ಹೂಡಿಕೆಗಾಗಿ ಚೀನಾದ ನೆರವನ್ನು ಬಾಂಗ್ಲಾ ಪಡೆಯುತ್ತಿದೆ. ಆದರೆ, ಇಂತಹ ನೆರವನ್ನು ಭಾರತ, ಜಪಾನ್‌, ದಕ್ಷಿಣ ಕೊರಿಯಾ ಮುಂತಾದ ದೇಶಗಳಿಂದಲೂ ಪಡೆದುಕೊಳ್ಳುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಜಾಣ್ಮೆಯನ್ನು ಮೆರೆದಿದೆ. ಸೊನಾಡಿಯಾ ಆಳ ಸಮುದ್ರ ಬಂದರು ಯೋಜನೆಯಿಂದಲೂ ಚೀನಾವನ್ನು ಬಾಂಗ್ಲಾದೇಶವು ಹೊರಗೆ ಇರಿಸಿತ್ತು. ಭಾರತಕ್ಕೆ ಕಳವಳಕಾರಿಯಾಗಿದ್ದ ಈ ಯೋಜನೆಯನ್ನು ಬಳಿಕ ಕೈಬಿಡಲಾಗಿದೆ. ಭಾರತದ ಬಗ್ಗೆ ಇಷ್ಟೊಂದು ಸಂವೇದನಾಶೀಲವಾಗಿ ಹಸೀನಾ ಅವರು ವರ್ತಿಸುತ್ತಿದ್ದರೂ ಭಾರತ ಅದಕ್ಕೆ ಸಮಾನವಾದ ಸ್ಪಂದನ ತೋರಿಲ್ಲ ಎಂಬ ಕಾರಣಕ್ಕೆ ಬಾಂಗ್ಲಾದಲ್ಲಿ ಭಾರತ ಮತ್ತು ಹಸೀನಾ ಅವರ ಕುರಿತು ಟೀಕೆಯೂ ಇದೆ.

ತೀಸ್ತಾ ನೀರು ಹಂಚಿಕೆ ಒಪ್ಪಂದವು ಮರೀಚಿಕೆಯಾಗಿಯೇ ಉಳಿದಿದೆ. ಒಪ್ಪಂದದ ಪಠ್ಯವು 2011ರಲ್ಲಿಯೇ ಸಿದ್ಧವಾಗಿದೆ. ಆದರೆ, ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಸಂಬಂಧಿಸಿ ಭಾರತದಲ್ಲಿ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದು ಇದಕ್ಕೆ ಕಾರಣ. ದೇಶೀಯ ರಾಜಕಾರಣ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗೆಗಿನ ವಿರೋಧದ ಆಧಾರದಲ್ಲಿ ಒಪ್ಪಂದದ ಕುರಿತ ತಮ್ಮ ನಿಲುವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರೂಪಿಸಿಕೊಂಡಿದ್ದಾರೆ. ಕುಶಿಯಾರಾ ಒಪ್ಪಂದವು ದೆಹಲಿ ಭೇಟಿಯ ತಮ್ಮ ಸಾಧನೆ ಎಂದು ಹಸೀನಾ ಅವರು ಬಿಂಬಿಸಿಕೊಳ್ಳಬಹುದು. ಆದರೆ, ತೀಸ್ತಾ ಒಪ್ಪಂದವು ಸಾಧ್ಯವಾಗದಿರುವುದು ಅವರ ಪಾಲಿಗೆ ದೊಡ್ಡ ಹಿನ್ನಡೆ. ಒಂದು ವರ್ಷದಲ್ಲಿ ಅವರು ಸಾರ್ವತ್ರಿಕ ಚುನಾವಣೆ ಎದುರಿಸಬೇಕಿರುವುದರಿಂದ ಈ ಹಿನ್ನಡೆಯು ಹೆಚ್ಚು ಗಮನಾರ್ಹವಾಗಿದೆ. ಕೇಂದ್ರದ ಕೆಲವು ಸಚಿವರು ಬಾಂಗ್ಲಾದೇಶೀಯರನ್ನು ಅವಮಾನಿಸುವಂತಹ ಹೇಳಿಕೆಗಳನ್ನು ಪದೇ ಪದೇ ನೀಡಿದ್ದಾರೆ. ಬಾಂಗ್ಲಾದವರು ಗೆದ್ದಲುಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಹೇಳಿದ್ದರು. ಹಸೀನಾ ಅವರು ದೆಹಲಿಯಲ್ಲಿ ಮೋದಿ ಅವರ ಕೈಕುಲುಕುತ್ತಿದ್ದ ಅದೇ ಹೊತ್ತಿಗೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಬಾಂಗ್ಲಾ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಖಂಡ ಭಾರತಕ್ಕಾಗಿ ಬಾಂಗ್ಲಾವನ್ನು ಭಾರತದ ಜತೆಗೆ ವಿಲೀನಗೊಳಿಸಬೇಕು ಎಂದು ಅವರು ಹೇಳಿದ್ದಾರೆ. ಅತ್ಯಂತ ಆಪ್ತವಾಗಿರುವ ಮತ್ತು ಸಂವೇದನಾಶೀಲವಾಗಿರುವ ಮಿತ್ರ ರಾಷ್ಟ್ರದ ಜತೆಗೆ ಭಾರತವು ನಡೆದುಕೊಳ್ಳುವ ರೀತಿ ಇನ್ನಷ್ಟು ಚೆನ್ನಾಗಿ ಇರಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT