ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕಾರ್ಯವಿಧಾನ ಸದನದ ಅತ್ಯುತ್ತಮ ಮಾನದಂಡಗಳಿಗೆ ಹಾಗೂ ಸಭಾಧ್ಯಕ್ಷರ ಪ್ರೌಢಿಮೆಯ ಪೂರ್ವ ನಿದರ್ಶನಗಳ ಮೇಲ್ಪಂಕ್ತಿಗೆ ತಕ್ಕನಾಗಿಲ್ಲ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಪ್ರತಿ ಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯು ಸಂಖ್ಯಾಬಲದ ಕೊರತೆಯಿಂದಾಗಿ ಬಿದ್ದುಹೋಗುವುದು ಖಚಿತ. ಆದರೆ, ಆ ನಿರೀಕ್ಷಿತ ಫಲಿತಾಂಶವು ಅವಿಶ್ವಾಸ ನಿರ್ಣಯಕ್ಕೆ ಕಾರಣವಾಗಿರುವ ಮುಖ್ಯ ವಿಷಯದ ಮಹತ್ವ ಕಡಿಮೆ ಆಗಲು ಕಾರಣವಾಗಬಾರದು. ಸ್ಪೀಕರ್ ಅವರ ನಡವಳಿಕೆಯು ಸಭಾಧ್ಯಕ್ಷರು ಎತ್ತಿಹಿಡಿಯಬೇಕಾದ ಅತ್ಯುತ್ತಮ ಮಾನದಂಡಗಳಿಗೆ ಅನುಗುಣವಾಗಿಲ್ಲ; ಹಿಂದಿನ ಕೆಲವು ಸ್ಪೀಕರ್ಗಳು ರೂಪಿಸಿಕೊಟ್ಟ ಅನುಸರಣೀಯ ಪೂರ್ವ ನಿದರ್ಶನಗಳ ಮಾದರಿಗೆ ಅನುಗುಣವಾಗಿಯೂ ಇಲ್ಲ. ಶುಕ್ರವಾರ ಕೊನೆಗೊಂಡ ಬಜೆಟ್ ಅಧಿವೇಶನದ ಮೊದಲ ಹಂತದ ಕಲಾಪದಲ್ಲಿನ ಸ್ಪೀಕರ್ ಅವರ ನಡವಳಿಕೆಯು ಅವಿಶ್ವಾಸ ನಿರ್ಣಯಕ್ಕೆ ತಕ್ಷಣದ ಪ್ರಚೋದನೆ ಒದಗಿಸಿದ್ದರೂ, ಈ ಹಿಂದೆಯೂ ಓಂ ಬಿರ್ಲಾ ಅವರು ಸದನವನ್ನು ನಿರ್ವಹಿಸಿರುವ ರೀತಿಯ ಬಗ್ಗೆ ಪ್ರತಿಪಕ್ಷಗಳು ಆತಂಕ, ಅಸಮಾಧಾನ ವ್ಯಕ್ತಪಡಿಸಿವೆ.

ಕಲಾಪಗಳು ನ್ಯಾಯಯುತವಾಗಿ ಹಾಗೂ ಸಂಸದೀಯ ಪ್ರಜಾಪ್ರಭುತ್ವ ಮಾದರಿಯ ಅತ್ಯುತ್ತಮ ಸಂಪ್ರದಾಯವನ್ನು ಅನುಸರಿಸುವಂತೆ ನೋಡಿಕೊಳ್ಳುವುದು ಸಭಾಧ್ಯಕ್ಷರ ಹೊಣೆಗಾರಿಕೆಯಾಗಿದೆ. ಆದರೆ, ಈ ಬಗ್ಗೆ ಬಿರ್ಲಾ ಅವರಿಗೆ ಯಾವುದೇ ಸ್ಪಷ್ಟತೆ ಇರುವಂತೆ ಕಾಣಿಸುತ್ತಿಲ್ಲ. ಸದನವನ್ನು ಅವರು ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಪ್ರತಿಪಕ್ಷಗಳು ವ್ಯಕ್ತಪಡಿಸಿರುವ ಕಳವಳವನ್ನು ನಿವಾರಿಸುವಲ್ಲಿ ಅವರ ಸ್ಪಂದನ ನಿರಾಶಾದಾಯಕವಾಗಿದೆ.

ಭಾರತದ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ನೆನಪುಗಳ ಅಪ್ರಕಟಿತ ಕೃತಿಯ ಆಯ್ದ ಭಾಗಗಳನ್ನು ಸದನದಲ್ಲಿ ಪ್ರಸ್ತಾಪಿಸುವುದಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಅನುಮತಿ ನಿರಾಕರಿಸಿರುವ ಸ್ಪೀಕರ್ ಅವರ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಸೇನೆಯ ಮಾಜಿ ಮುಖ್ಯಸ್ಥರು ಗಮನಿಸಿರುವ ಅಂಶಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವ ಹಕ್ಕು ರಾಹುಲ್ ಗಾಂಧಿ ಅವರಿಗಿದೆ. ಕಲಾಪಕ್ಕೆ ಸಂಬಂಧಿಸಿಲ್ಲದ ಪಠ್ಯಗಳನ್ನು ಸದನದಲ್ಲಿ ಓದುವುದನ್ನು ನಿಯಮಗಳು ನಿರ್ಬಂಧಿಸುತ್ತವಾದರೂ, ಪಠ್ಯದ ನೈಜತೆಯನ್ನು ಪ್ರಮಾಣೀಕರಿಸುವ ಮೂಲಕ ಸಂಸದರು ಸದನದಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶವಿದೆ. ಹಾಗಾಗಿ, ರಾಹುಲ್ ಅವರಿಗೆ ನರವಣೆ ಅವರ ಪುಸ್ತಕದಲ್ಲಿನ ವಿವರಗಳನ್ನು ಸದನದಲ್ಲಿ ಪ್ರಸ್ತಾಪಿಸುವುದಕ್ಕೆ ಸಭಾಧ್ಯಕ್ಷರು ಅನುಮತಿ ನೀಡಬೇಕಾಗಿತ್ತು.

ಸಂಸತ್ತಿನ ಅತ್ಯುತ್ತಮ ಪರಂಪರೆಯು, ಲೋಕಸಭೆ ವಿರೋಧ ಪಕ್ಷದ ನಾಯಕ ಮಾತನಾಡುವುದನ್ನು ನಿರ್ಬಂಧಿಸಲು ಒಪ್ಪುವುದಿಲ್ಲ. ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪ್ರಧಾನಿ ಅವರು ಮಾತನಾಡಬೇಕಾಗಿತ್ತು. ಆ ಸಂದರ್ಭದಲ್ಲಿ ಸದನಕ್ಕೆ ಗೈರುಹಾಜರಾಗುವಂತೆ ಬಿರ್ಲಾ ಅವರು ನರೇಂದ್ರ ಮೋದಿ ಅವರಿಗೆ ನೀಡಿದ ಸಲಹೆಯೂ ವಿವಾದಾಸ್ಪದವಾಗಿದೆ. ತಮ್ಮ ನಡವಳಿಕೆಗೆ ಸಮರ್ಥನೆಯಾಗಿ, ಮಹಿಳಾ ಸದಸ್ಯರಿಂದ ಪ್ರಧಾನಿ ಮೇಲೆ ದಾಳಿ ನಡೆಸುವುದು ಸೇರಿದಂತೆ ಅಹಿತಕಾರಿಯಾಗಿ ನಡೆದುಕೊಳ್ಳಲು ವಿರೋಧ ಪಕ್ಷಗಳು ಯೋಜಿಸಿರುವುದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂತು ಎಂದು ಸ್ಪೀಕರ್ ಹೇಳಿದ್ದಾರೆ. ಒಂದುವೇಳೆ, ಪ್ರಧಾನಿ ಅವರ ಸುರಕ್ಷತೆಗೆ ಬೆದರಿಕೆ ಇದ್ದಲ್ಲಿ ಪಿತೂರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ಹಾಗೂ ಪ್ರಧಾನಿ ಅವರ ಸುರಕ್ಷತೆಯ ಹೊಣೆ ಹೊತ್ತವರನ್ನು ಎಚ್ಚರಿಸುವುದು ಸಭಾಧ್ಯಕ್ಷರ ಕರ್ತವ್ಯವಾಗಿತ್ತೇ ಹೊರತು, ಪ್ರಧಾನಿ ಅವರನ್ನು ಸದನದಿಂದ ದೂರವಿರಿಸುವುದು ಸಮರ್ಪಕವಾದ ಪ್ರತಿಕ್ರಿಯೆಯಲ್ಲ.

ಸಂಸತ್ನಲ್ಲಿನ ಚರ್ಚೆ, ಸಂವಾದಗಳ ಗುಣಮಟ್ಟ ಮತ್ತು ನಡವಳಿಕೆಯು ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿ ಕುಸಿಯುತ್ತಿದೆ. ಈ ಕುಸಿತದ ಜವಾಬ್ದಾರಿಯನ್ನು ಸರ್ಕಾರದೊಂದಿಗೆ ವಿರೋಧ ಪಕ್ಷಗಳೂ ಹೊರಬೇಕಾಗಿದೆ. ಆದರೆ, ಸಭಾಧ್ಯಕ್ಷರು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲರಾದಾಗ, ನಿಷ್ಪಕ್ಷಪಾತವಾಗಿ ಹಾಗೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸೋತಾಗ, ಕಲಾಪ ಅರ್ಥಪೂರ್ಣವಾಗಿ ಸಾಗುವುದಕ್ಕೆ ಅಗತ್ಯವಾದ ಅತ್ಯುತ್ತಮ ಮಾನದಂಡಗಳು ಹಾಗೂ ಸಂಪ್ರದಾಯಗಳನ್ನು ನಿರ್ಲಜ್ಜೆಯಿಂದ ನಿರ್ಲಕ್ಷಿಸಿದಾಗ, ಈ ಕುಸಿತ ಮತ್ತಷ್ಟು ಆತಂಕ ಹುಟ್ಟಿಸುವಂತಹದ್ದಾಗುತ್ತದೆ. ಅವಿಶ್ವಾಸ ಗೊತ್ತುವಳಿ ಮಂಡನೆಯ ಸಂದರ್ಭವನ್ನು ಬಿರ್ಲಾ ಅವರು ಸ್ವತಃ ಆಹ್ವಾನಿಸಿಕೊಂಡಿದ್ದಾರೆ. ಬಜೆಟ್ ಅಧಿವೇಶನದ ಎರಡನೇ ಹಂತ ಮಾರ್ಚ್ 9ರಿಂದ ಪ್ರಾರಂಭವಾಗಲಿದ್ದು, ಸ್ಪೀಕರ್ ಕಾರ್ಯವಿಧಾನದ ಪರಾಮರ್ಶೆ ಹಾಗೂ ಸದನದ ಘನತೆಯನ್ನು ಸಂರಕ್ಷಿಸುವ ಕುರಿತಾದ ಅರ್ಥಪೂರ್ಣ ಚರ್ಚೆ ನಡೆಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.