ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕಾಶ್ಮೀರದಲ್ಲಿ ನಾಗರಿಕರ ಸಾವು: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ

ಈ ಪ್ರಕರಣದ ತನಿಖೆಯು ವಿಶ್ವಾಸಾರ್ಹವಾಗಿ ನಡೆಯಬೇಕು, ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು
Published 26 ಡಿಸೆಂಬರ್ 2023, 23:46 IST
Last Updated 26 ಡಿಸೆಂಬರ್ 2023, 23:46 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿ ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದ ಮೂವರು ವ್ಯಕ್ತಿಗಳು ಮೃತ‍ಪಟ್ಟಿರುವುದು ಗಂಭೀರವಾದ ವಿಚಾರ ಮತ್ತು ಇದು ಇಡೀ ದೇಶದ ಗಮನ ಸೆಳೆದಿದೆ. ಭದ್ರತಾ ಪಡೆಗಳು ನಿರಂಕುಶವಾಗಿ ವರ್ತಿಸುತ್ತಿವೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಪೂಂಛ್‌ ಜಿಲ್ಲೆಯಲ್ಲಿ ಭದ್ರತಾ ಪಡೆಯ ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಕೆಲವರು ಗಾಯಗೊಂಡಿದ್ದರು. ಅದರ ಮರುದಿನ ಭದ್ರತಾ ಪಡೆಯು ತನಿಖೆಯ ಭಾಗವಾಗಿ 13 ಮಂದಿ ನಾಗರಿಕರನ್ನು ವಶಕ್ಕೆ ಪಡೆದಿದೆ. ಅವರಲ್ಲಿ ಮೂವರು ರಾತ್ರಿ ಮೃತಪಟ್ಟಿದ್ದಾರೆ. ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಮೃತಪಡಲು ಮತ್ತು ಇತರರು ಗಾಯಗೊಳ್ಳಲು ಸೈನಿಕರು ನೀಡಿದ ಚಿತ್ರಹಿಂಸೆಯೇ ಕಾರಣ ಎಂದು ಮೃತರ ಸಂಬಂಧಿಕರು ಮತ್ತು ಗಾಯಗೊಂಡವರು ಆರೋ‍ಪಿಸಿದ್ದಾರೆ. ಸೇನೆಯು ಆಂತರಿಕ ತನಿಖೆಗೆ ಆದೇಶಿಸಿದೆ. ಮೂವರು ಅಧಿಕಾರಿಗಳನ್ನು ಕರ್ತವ್ಯದಿಂದ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ಪೂಂಛ್‌ಗೆ ಭೇಟಿ ನೀಡಿದ್ದಾರೆ. ಸೇನೆಯ ಕಾರ್ಯಾಚರಣೆಯು ‘ವೃತ್ತಿಪರ ರೀತಿ’ಯಲ್ಲಿ ಇರಬೇಕು ಎಂದು ಅವರು ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಆಡಳಿತವು ಪರಿಹಾರ ನೀಡಿದೆ ಮತ್ತು ಸಂಬಂಧಿಕರಿಗೆ ಉದ್ಯೋಗ ನೀಡುವುದಾಗಿಯೂ ಹೇಳಿದೆ. ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿದೆ. 

ಜಮ್ಮು–ಕಾಶ್ಮೀರದಲ್ಲಿ, ಅದರಲ್ಲಿಯೂ ವಿಶೇಷವಾಗಿ ಗಡಿ ಜಿಲ್ಲೆಗಳಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಭದ್ರತಾ ಪಡೆಯು ತೀವ್ರಗೊಳಿಸಿದೆ. ಪಾಕಿಸ್ತಾನದಿಂದ ಉಗ್ರರು ಗಡಿಯೊಳಕ್ಕೆ ನುಸುಳುವ ಭೀತಿ ಇತ್ತೀಚಿನ ವಾರಗಳಲ್ಲಿ ಹೆಚ್ಚಾಗಿರುವುದು ಇದಕ್ಕೆ ಕಾರಣ. ಆದರೆ, ಭದ್ರತಾ ಪಡೆಯು ಯಾವುದೇ ಸನ್ನಿವೇಶದಲ್ಲಿಯೂ ತನ್ನ ನಡವಳಿಕೆ ಸಂಹಿತೆಯನ್ನು ಮೀರಿ ವರ್ತಿಸಬಾರದು ಮತ್ತು ಸಾಮಾನ್ಯ ಕಾರ್ಯಾಚರಣೆ ವಿಧಾನಗಳನ್ನು ಉಲ್ಲಂಘಿಸಬಾರದು. ಈ ವಿಚಾರವಾಗಿ ಮತ್ತು ನಾಗರಿಕರ ಸಾವಿಗೆ ಸಂಬಂಧಿಸಿ ಈ ಹಿಂದೆಯೂ ಟೀಕೆಗಳು ಕೇಳಿಬಂದಿದ್ದವು. ಪೂಂಛ್‌ನಲ್ಲಿ ನಾಗರಿಕರು ಭದ್ರತಾ ಪಡೆಗಳ ವಶದಲ್ಲಿದ್ದಾಗ ಮೃತಪಟ್ಟಿರುವುದು ಈ ಟೀಕೆಗಳಿಗೆ ಪುಷ್ಟಿ ನೀಡುತ್ತದೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯು (ಆಫ್‌ಸ್ಪಾ) ಕಾಶ್ಮೀರದಲ್ಲಿ ಜಾರಿಯಲ್ಲಿದೆ. ಭದ್ರತಾ ಪಡೆಗಳಿಗೆ ಈ ಕಾಯ್ದೆಯು ಅಸಾಧಾರಣ ಅಧಿಕಾರಗಳನ್ನು ನೀಡುತ್ತದೆ. ಈ ಕಾಯ್ದೆ ಜಾರಿಯಲ್ಲಿದ್ದರೆ ಭದ್ರತಾ ಪಡೆಗಳಿಗೆ ಸಾಮಾನ್ಯ ಕಾನೂನುಗಳು ಅನ್ವಯವೇ ಆಗುವುದಿಲ್ಲ. ಭದ್ರತಾ ಪಡೆಯ ಯಾವುದೇ ಸಿಬ್ಬಂದಿ ಕಾನೂನುಬಾಹಿರ ಕೃತ್ಯ ಎಸಗಿದ್ದರೆ ಅಂಥವರನ್ನು ಅವರ ಹಿರಿಯ ಅಧಿಕಾರಿಗಳಾಗಲೀ ಆಫ್‌ಸ್ಪಾದಲ್ಲಿ ಇರುವ ಅವಕಾಶಗಳಾಗಲೀ ರಕ್ಷಿಸದಂತೆ ನೋಡಿಕೊಳ್ಳಬೇಕು. ಕಸ್ಟಡಿ ಮರಣ ಪ್ರಕರಣದ ತನಿಖೆಯು ವಿಶ್ವಾಸಾರ್ಹವಾಗಿ ನಡೆಯಬೇಕು. ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. 

ಕಾಶ್ಮೀರವು ಸಹಜ ಸ್ಥಿತಿಗೆ ಮರಳಬೇಕಾದರೆ ಮತ್ತು ಅಲ್ಲಿ ಚುನಾವಣೆ ನಡೆಸಲು ಪೂರಕವಾದ ವಾತಾವರಣ ಸೃಷ್ಟಿಯಾಗಬೇಕಿದ್ದರೆ ಸ್ಥಳೀಯ ಜನರ ಬೆಂಬಲ ಅತ್ಯಗತ್ಯ. ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಯಶಸ್ವಿಯಾಗಬೇಕಿದ್ದರೂ ಜನರ ಬೆಂಬಲ ಬೇಕು. ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಮಾತ್ರವಲ್ಲ, ಸರ್ಕಾರದ ಸಂಸ್ಥೆಗಳಿಂದಲೂ ಬಹಳ ಹಿಂಸಾಚಾರ ನಡೆದಿದೆ. ಕೆಲವು ದಶಕಗಳಲ್ಲಿ ನಡೆದಿರುವ ಕೆಲವು ಘಟನೆಗಳು ಮತ್ತು ಪ್ರಕರಣಗಳಿಗೆ ವಿವರಣೆ ಕೊಡಬೇಕಾದ ಅಗತ್ಯ ಇದೆ. ಇವು ಕಾಶ್ಮೀರದ ಜನರಲ್ಲಿ ಬಹಳ ವೇದನೆ ಸೃಷ್ಟಿಸಿವೆ. ಅವರ ಧೋರಣೆಗಳು ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರಿವೆ. ಅವರಲ್ಲಿ ಆಕ್ರೋಶ, ದ್ವೇಷ, ಸಂದೇಹ, ಭೀತಿ ಮತ್ತು ತಪ್ಪಿತಸ್ಥ ಭಾವನೆಗಳೆಲ್ಲವೂ ಉಂಟಾಗುವಂತೆ ಮಾಡಿವೆ. ಈ ಎಲ್ಲವನ್ನೂ ಸರಿಪಡಿಸಬೇಕಾದ ಅಗತ್ಯ ಇದೆ. ಸತ್ಯಶೋಧನೆ ಮತ್ತು ಸಂಧಾನ ಆಯೋಗವನ್ನು ಸ್ಥಾ‍ಪಿಸಬೇಕು ಎಂದು ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದ ತೀರ್ಪಿನಲ್ಲಿ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಹೇಳಿದ್ದರು. ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ, ಜಾರಿಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT