ವರ್ಗಾವಣೆ, ಅಮಾನತು ರೀತಿಯ ಕ್ರಮಗಳಿಂದ ಜೈಲುಗಳ ಸುಧಾರಣೆ ಸಾಧ್ಯವಿಲ್ಲ. ಬೇರುಮಟ್ಟಕ್ಕೆ ಅಂಟಿರುವ ರೋಗವನ್ನು ಗುಣಪಡಿಸಲು ದೊಡ್ಡ ಪ್ರಮಾಣದ ದುರಸ್ತಿ ನಡೆಯಬೇಕಾಗಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಪರಾಧಿಗಳು ಮತ್ತು ಶಂಕಿತ ಭಯೋತ್ಪಾದಕರು ವಿಶೇಷ ಸವಲತ್ತುಗಳನ್ನು ಅನುಭವಿಸುತ್ತಿರುವ ವಿಡಿಯೊಗಳು ಬೆಳಕಿಗೆ ಬಂದಿವೆ. ಇದು ಅನಿರೀಕ್ಷಿತ ಅಥವಾ ಆಕಸ್ಮಿಕ ಘಟನೆಯಾಗಿರದೆ, ಚಿಕಿತ್ಸೆ ದೊರಕದೆ ಉಳಿದಿರುವ ದೀರ್ಘಕಾಲಿಕ ರೋಗದ ಲಕ್ಷಣವಾಗಿದೆ. ದುರ್ಬಲ ಗೋಡೆಗಳು, ರಾಜಿ ಮನೋಧರ್ಮದ ವಾರ್ಡನ್ಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಮರೆಯಲ್ಲಿ ಶಿಕ್ಷೆಯ ಭಯವಿಲ್ಲದೆ ನಡೆಯುತ್ತಿರುವ ಚಟುವಟಿಕೆಗಳಿಂದ ರಾಜ್ಯದ ಜೈಲುಗಳು ಗಳಿಸಿರುವ ಕುಖ್ಯಾತಿಗೆ ದಶಕಗಳ ಇತಿಹಾಸವಿದೆ. ಇತ್ತೀಚೆಗೆ ಹೊರಬಿದ್ದಿರುವ ದೃಶ್ಯಗಳು ಆಘಾತ ಉಂಟು ಮಾಡುವಂತಿದ್ದರೂ, ಅನಿರೀಕ್ಷಿತವೇನೂ ಅಲ್ಲ. ಭಯೋತ್ಪಾದಕ ಸಂಘಟನೆಗಳಿಗೆ ಯುವಜನರನ್ನು ಸೇರಿಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ, ಐಎಸ್ ಸಂಪರ್ಕ ಹೊಂದಿರುವ ಆರೋಪಿ ಜುಹಾದ್ ಹಮೀದ್ ಶಕೀಲ್ ಮನ್ನಾ ತನ್ನ ಸೆಲ್ನಲ್ಲಿ ಸ್ಮಾರ್ಟ್ ಫೋನ್ ಬಳಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಕುಖ್ಯಾತ ರೌಡಿಯೊಬ್ಬ ಕಾರಾಗೃಹದೊಳಗೆ ಹುಟ್ಟುಹಬ್ಬ ಆಚರಿಸಿದ ಮತ್ತೊಂದು ವಿಡಿಯೊ ಇತ್ತೀಚೆಗಷ್ಟೇ ಸಾರ್ವಜನಿಕಗೊಂಡಿತ್ತು.

ಕಾರಾಗೃಹದಲ್ಲಿನ ಕಾನೂನುಬಾಹಿರ ಚಟುವಟಿಕೆಗಳು ಪ್ರತಿ ಸಲ ಬಯಲಾದಾಗಲೂ, ಎದುರಾಗುವ ಪ್ರತಿಕ್ರಿಯೆ ಒಂದೇ ಬಗೆಯದಾಗಿರುತ್ತದೆ: ಘಟನೆಯ ಬಗ್ಗೆ ಆಕ್ರೋಶ, ಕೆಲವು ಅಧಿಕಾರಿಗಳ ಅಮಾನತು ಹಾಗೂ ಸುಧಾರಣೆಯ ಭರವಸೆ. ಈ ಬಾರಿಯೂ ಸರ್ಕಾರದ ಪ್ರತಿಕ್ರಿಯೆ ನಿರೀಕ್ಷಿತವಾದುದೇ ಆಗಿದೆ. ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ಸುರೇಶ್ ಅವರನ್ನು ವರ್ಗಾಯಿಸಲಾಗಿದ್ದರೆ, ಜೈಲಿನ ಸೂಪರಿಂಟೆಂಡೆಂಟ್ ಇಮಾಮ್ಸಾಬ್ ಮ್ಯಾಗೇರಿ ಹಾಗೂ ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ. ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಜಾಗಕ್ಕೆ ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ಅನ್ಶು ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಜ್ಯದ ಎಲ್ಲ ಕಾರಾಗೃಹಗಳ ಬಗ್ಗೆ ಸಮಗ್ರ ವರದಿ ನೀಡುವಂತೆ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆರ್. ಹಿತೇಂದ್ರ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಒಂದು ತಿಂಗಳೊಳಗೆ ವರದಿ ನೀಡುವಂತೆ ಗೃಹ ಸಚಿವ ಜಿ. ಪರಮೇಶ್ವರ ಸೂಚಿಸಿದ್ದಾರೆ. ಎಲ್ಲ ಜೈಲುಗಳಲ್ಲಿನ ಸಿಸಿಟಿವಿ ದೃಶ್ಯಗಳ ಮೇಲ್ವಿಚಾರಣೆಗೆ ಕಮಾಂಡ್ ಸೆಂಟರ್ ಸ್ಥಾಪಿಸುವುದರ ಜೊತೆಗೆ, ಮೊಬೈಲ್ ಜಾಮರ್ಗಳು ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಸುವುದಾಗಿ ಸರ್ಕಾರ ಹೇಳಿದೆ; ಹೊಸತಾಗಿ ಸಿಸಿಟಿವಿಗಳ ಅಳವಡಿಕೆಗೆ ₹2 ಕೋಟಿ ಹಾಗೂ ಸಂವಹನ ಗೋಪುರಗಳಿಗಾಗಿ ₹15 ಕೋಟಿ ನೀಡಲು ಅನುಮೋದನೆ ನೀಡಿದೆ. ಹೊಸ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯೂ ಆರಂಭಗೊಳ್ಳುವ ಸಾಧ್ಯತೆಯಿದೆ.

ಜೈಲುಗಳ ಸುಧಾರಣೆಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಸ್ವಾಗತಾರ್ಹ. ಆದರೆ, ಈ ಪ್ರಯತ್ನ ಸಮಸ್ಯೆಯ ಮೇಲ್ಪದರವನ್ನು ಸ್ಪರ್ಶಿಸುವಂತಿದೆಯೇ ಹೊರತು, ಬೇರುಮಟ್ಟದಲ್ಲಿ ನಿರ್ಮೂಲನಗೊಳಿಸುವಷ್ಟು ಪರಿಣಾಮಕಾರಿ ಆಗಿಲ್ಲ. ಸ್ಮಾರ್ಟ್ ಫೋನ್ಗಳು ಹಾಗೂ ಸಿಮ್ ಕಾರ್ಡ್ಗಳನ್ನು ಕಾರಾಗೃಹದೊಳಗೆ ಸಾಗಿಸಿದ್ದು ಹೇಗೆ? ಜಾಮರ್ಗಳ ಕಾರ್ಯನಿರ್ವಹಣೆಯ ನಡುವೆಯೂ ಫೋನ್ಗಳ ಬಳಕೆ ಸಾಧ್ಯವಾದುದು ಹಾಗೂ ವಿಡಿಯೊ ಚಿತ್ರೀಕರಣ ನಡೆದುದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರವು, ಭ್ರಷ್ಟ ಅಧಿಕಾರಿಗಳು ನೀಡುತ್ತಿರುವ ಕುಮ್ಮಕ್ಕಿಗೆ ಸಂಬಂಧಿಸಿದ್ದಾಗಿದೆ. ಆಳವಾಗಿ ಬೇರುಬಿಟ್ಟಿರುವ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಎಲ್ಲ ಸರ್ಕಾರಗಳೂ ವಿಫಲವಾಗಿವೆ. ತಲೆದಂಡ ಆಗಬೇಕಿದ್ದವರು ಸುರಕ್ಷಿತವಾಗಿ ಉಳಿದು, ಮಧ್ಯಮ ಹಾಗೂ ಕೆಳಹಂತದ ಅಧಿಕಾರಿಗಳಷ್ಟೇ ಶಿಕ್ಷೆಗೆ ಗುರಿಯಾಗುತ್ತಾರೆ. ಶಂಕಿತ ಭಯೋತ್ಪಾದಕರು ಹಾಗೂ ಗಂಭೀರ ಅಪರಾಧ ಕೃತ್ಯಗಳನ್ನು ಎಸಗಿದವರು, ಬಹು ಸುರಕ್ಷಿತ ಕಾರಾಗೃಹ ಪರಿಸರವನ್ನು ತಮ್ಮ ಖಾಸಗಿ ಪಡಸಾಲೆಗಳನ್ನಾಗಿ ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತಿರುವುದು ಕಾನೂನು ಪಾಲನೆಯ ಕೊರತೆಯನ್ನು ಸೂಚಿಸುವುದರ ಬದಲಾಗಿ, ಅಲ್ಲಿ ಕಾನೂನೇ ಇಲ್ಲದಿರುವುದರ ಸಂಕೇತದಂತಿದೆ. ಕಾರಾಗೃಹಗಳ ಸುಧಾರಣೆಯ ಬಗ್ಗೆ ಸರ್ಕಾರ ಗಂಭೀರವಾಗಿದ್ದಲ್ಲಿ, ವರ್ಗಾವಣೆ ಮತ್ತು ಅಮಾನತು ರೀತಿಯ ಕ್ರಮಗಳಾಚೆಗೆ ಕಾರ್ಯಪ್ರವೃತ್ತ ಆಗಬೇಕಿದೆ. ಜೈಲುಗಳನ್ನು ಜೈಲುಗಳನ್ನಾಗಿಯೇ ಉಳಿಸಬೇಕಾದಲ್ಲಿ ಅಲ್ಲಿನ ಆಡಳಿತವನ್ನು ವೃತ್ತಿಪರವನ್ನಾಗಿಸಬೇಕು, ಉತ್ತರದಾಯಿಯನ್ನಾಗಿಸಬೇಕು, ಆ ಮೂಲಕ ವ್ಯವಸ್ಥೆಯಲ್ಲಿನ ಕೊಳಕನ್ನು ತೊಳೆಯಬೇಕಾಗಿದೆ. ಇದನ್ನು ಮಾಡದೆ ಹೋದರೆ, ಮುಂದಿನ ಹಗರಣ ಯಾವಾಗ ಎಂದು ಜನ ನಿರೀಕ್ಷಿಸುವಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.