ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪ್ರಾದೇಶಿಕ ಸಹಭಾಗಿತ್ವ ಒಪ್ಪಂದ ಸಾರ್ವಜನಿಕ ಚರ್ಚೆಗೆ ಒಳಪಡಲಿ

Last Updated 29 ಅಕ್ಟೋಬರ್ 2019, 5:12 IST
ಅಕ್ಷರ ಗಾತ್ರ

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ದೇಶದ ವಿವಿಧೆಡೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಒತ್ತಡ ಹೇರುತ್ತಿವೆ. ಆದರೆ, ಕೇಂದ್ರ ಸರ್ಕಾರ ಈ ಒತ್ತಡಕ್ಕೆ ಈವರೆಗೆ ಮಣಿದಂತೆ ಕಾಣುತ್ತಿಲ್ಲ. ‘ಈಗಾಗಲೇ ಜಾಗತೀಕರಣಗೊಂಡಿರುವ ವಾಣಿಜ್ಯ ಕ್ಷೇತ್ರದಲ್ಲಿ ಭಾರತವು ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ.ಪ್ರಾದೇಶಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಆರ್‌ಸಿಇಪಿ ಒಪ್ಪಂದವನ್ನು ಗಮನಿಸಬೇಕಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ನವೆಂಬರ್‌ ಮೊದಲ ವಾರದಲ್ಲಿ ಕೇಂದ್ರ ಸಚಿವ ಸಂಪುಟದ ಮುಂದೆ ಈ ವಿಷಯ ಚರ್ಚೆಗೆ ಬರಲಿದೆ. ಸರ್ಕಾರ ತನ್ನ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ. ಇದು, ಒಮ್ಮಿಂದೊಮ್ಮೆಲೇ ಎದ್ದುಬಂದ ಪ್ರಸ್ತಾವ ಅಲ್ಲ ಎನ್ನುವುದು ನಿಜ.

2012ರಲ್ಲಿ ಕಾಂಬೋಡಿಯಾದಲ್ಲಿ ನಡೆದ ಆಸಿಯಾನ್‌ ಶೃಂಗಸಭೆಯಲ್ಲಿ ಮೊದಲ ಬಾರಿಗೆ ಈ ಬಗ್ಗೆ ಪ್ರಸ್ತಾಪವಾಯಿತು. ಈ ಸಂಬಂಧ, 2013ರಿಂದ ವಿವಿಧ ದೇಶಗಳ ನಡುವೆ 32ಕ್ಕೂ ಹೆಚ್ಚು ಸಭೆಗಳು ನಡೆದಿವೆ. ಹಿಂದಿನ ಯುಪಿಎ ಸರ್ಕಾರವು ಒಪ್ಪಂದಕ್ಕೆ ಸಹಿ ಹಾಕಲು ಹಿಂದೇಟು ಹಾಕಿತ್ತು. ಆದರೆ, ಈಗ ಎನ್‌ಡಿಎ ಸರ್ಕಾರ ಒಪ್ಪಂದದ ಬಗ್ಗೆ ಉತ್ಸುಕತೆ ತೋರುತ್ತಿದೆ. ಈ ಒಪ್ಪಂದದ ಬಗ್ಗೆ ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಅಧಿಕಾರಿಗಳ ಮಟ್ಟದಲ್ಲೇ ಬಹುಪಾಲು ಸಿದ್ಧತೆಗಳು ನಡೆಯುತ್ತಿವೆ. ಭಾರತ, ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಜಪಾನ್‌, ದಕ್ಷಿಣ ಕೊರಿಯಾ,ಇಂಡೊನೇಷ್ಯಾ, ಮಲೇಷ್ಯಾ, ಸಿಂಗಪುರ, ಥಾಯ್ಲೆಂಡ್‌, ವಿಯೆಟ್ನಾಂ ಸೇರಿದಂತೆ ಒಟ್ಟು 16 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲಿವೆ. ಒಪ್ಪಂದ ಜಾರಿಗೆ ಬಂದರೆ, ಯಾವುದೇ ದೇಶವು ಆಮದು ಮಾಡಿಕೊಳ್ಳುವ ಶೇಕಡ 92ರಷ್ಟು ಉತ್ಪನ್ನಗಳಿಗೆ 15 ವರ್ಷಗಳ ಕಾಲ ಸುಂಕವೇ ಇರುವುದಿಲ್ಲ. ಉಳಿದ ಉತ್ಪನ್ನಗಳಿಗೆ ಅತ್ಯಂತ ಕಡಿಮೆ ಆಮದು ಸುಂಕ ವಿಧಿಸಲಾಗುತ್ತದೆ.

ಪಾಶ್ಚಿಮಾತ್ಯ ದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿ, ಪ್ರಾದೇಶಿಕ ಮಾರುಕಟ್ಟೆ ವಲಯವನ್ನು ಸೃಷ್ಟಿಸುವುದು ಮತ್ತು ಹಣದುಬ್ಬರವನ್ನು ತಡೆಯುವುದು ಇದರ ಮುಖ್ಯ ಉದ್ದೇಶ ಎಂದು ಒಪ್ಪಂದವನ್ನು ಸಮರ್ಥಿಸುವವರು ಹೇಳುತ್ತಿದ್ದಾರೆ.ಗ್ರಾಹಕರ ಡೇಟಾ ಪರಭಾರೆ, ದರ ವ್ಯತ್ಯಾಸದ ಕುರಿತು ಹಲವು ಷರತ್ತುಗಳನ್ನು ಒಪ್ಪಂದದಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಉಳಿದ ರಾಷ್ಟ್ರಗಳು ಷರತ್ತುಗಳಿಗೆ ಒಪ್ಪುವ ಸಾಧ್ಯತೆ ಕಡಿಮೆ.2015ರಲ್ಲಿ ಅಮೆರಿಕ, ಕೆನಡಾ, ಚಿಲಿ, ಪೆರು, ಮೆಕ್ಸಿಕೊ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಬ್ರೂನೈ, ಸಿಂಗಪುರ, ಮಲೇಷ್ಯಾ ಮತ್ತು ವಿಯೆಟ್ನಾಂ ರಾಷ್ಟ್ರಗಳು ಸೇರಿ ಟ್ರಾನ್ಸ್‌ ನ್ಯಾಷನಲ್‌ ಪಾರ್ಟನರ್‌ಷಿಪ್‌ ಒಪ್ಪಂದಕ್ಕೆ (ಟಿಟಿಪಿ) ಸಹಿ ಹಾಕಿದ ಬಳಿಕ ಕೈಸುಟ್ಟುಕೊಂಡ ಅಮೆರಿಕ, 2017ರಲ್ಲಿ ಒಪ್ಪಂದದಿಂದ ಹೊರಬಂದ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಮತ್ತು ಜಪಾನಿನ ಕಂಪನಿಗಳ ಜೊತೆಗೆ ಬೆಲೆ ಸಮರ ಬಹಳ ಕಷ್ಟ. ಆರ್‌ಸಿಇಪಿಯಂತಹ ಯಾವುದೇ ಒಪ್ಪಂದ ಇಲ್ಲದೆಯೇ ಈಗ ನಮ್ಮ ದೇಶದಲ್ಲಿ ಚೀನಾ ಮತ್ತು ಜಪಾನಿನ ವಸ್ತುಗಳು ಪಾರಮ್ಯ ಮೆರೆದಿವೆ. ಇನ್ನು ಆಮದು ಸುಂಕ ರದ್ದು ಮಾಡಿದರಂತೂ ಚೀನಾ, ಜಪಾನ್‌, ಸಿಂಗಪುರ, ವಿಯೆಟ್ನಾಂ ಮತ್ತಿತರ ದೇಶಗಳ ವಸ್ತುಗಳು ಇಲ್ಲಿ ದಂಡಿಯಾಗಿ ದೊರಕಲಿವೆ.

ಮುಖ್ಯವಾಗಿ ನಮ್ಮ ಕೃಷಿ, ಹೈನುಗಾರಿಕೆ ಮತ್ತು ಜವಳಿ ಕ್ಷೇತ್ರದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡ ಹೊಡೆತ ಬೀಳಲಿದೆ. ದೇಶದಲ್ಲೇ ಎರಡನೆಯ ಅತಿದೊಡ್ಡ ಹೈನೋದ್ಯಮವನ್ನು ಹೊಂದಿರುವ ರಾಜ್ಯ ನಮ್ಮದು. ನ್ಯೂಜಿಲೆಂಡ್‌, ಆಸ್ಟ್ರೇಲಿಯಾದ ಉತ್ಪನ್ನಗಳು ಇಲ್ಲಿಗೆ ಕಡಿಮೆ ಬೆಲೆಗೆ ಬಂದರೆ, ಹೈನೋದ್ಯಮವನ್ನೇ ನಂಬಿಕೊಂಡಿರುವ ಜನರು ಬೀದಿಗೆ ಬೀಳುವ ಸಾಧ್ಯತೆಯೇ ಹೆಚ್ಚು. ಚೀನಾ, ವಿಯೆಟ್ನಾಂನಿಂದ ಕಡಿಮೆ ಬೆಲೆಯಲ್ಲಿ ಆಮದಾಗಲಿರುವ ರೇಷ್ಮೆ ಉತ್ಪನ್ನಗಳು ಇಲ್ಲಿನ ರೈತರನ್ನು ಕಂಗೆಡಿಸಲಿವೆ. ಟೀ, ಕಾಫಿ, ರಬ್ಬರ್‌, ಕಾಳುಮೆಣಸು, ಅಡಿಕೆ ಎಲ್ಲದರ ಬೆಲೆ ಕುಸಿದು ರೈತರು ತೊಂದರೆಗೆ ಸಿಲುಕಲಿದ್ದಾರೆ. ಇಷ್ಟು ಮಹತ್ವದ ಈ ಪ್ರಸ್ತಾವದ ಪ್ರತಿಯನ್ನು ಜನರ ಮುಂದಿಟ್ಟು, ಸಾರ್ವಜನಿಕ ಚರ್ಚೆ ಆಗುವಂತೆ ನೋಡಿಕೊಳ್ಳಬೇಕು. ಬಹುಜನರ ಬದುಕಿನ ಜೊತೆ ನೇರ ಸಂಬಂಧ ಇರುವ ಪ್ರಸ್ತಾವ ಇದಾಗಿರುವ ಕಾರಣ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಪ್ಪಂದಕ್ಕೆ ಮುಂದಾಗುವುದು ಯುಕ್ತವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT