ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಸ್ತೆಗುಂಡಿಗಳಿಂದ ಆಗುತ್ತಿರುವ ಅಮೂಲ್ಯ ಜೀವಹಾನಿ ತಪ್ಪಿಸಿ

Last Updated 2 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ರಸ್ತೆಗುಂಡಿ ಮುಚ್ಚಲು ಗಡುವು ಮೇಲೆ ಗಡುವು ನೀಡಿದರೂ ಪರಿಸ್ಥಿತಿಯಲ್ಲಿ ಕಿಂಚಿತ್‌ ಬದಲಾವಣೆಯೂ ಇಲ್ಲ

ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿಗೆ ರಸ್ತೆ ಗುಂಡಿಗಳಿಂದ ಮುಕ್ತಿ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ನಗರದ ರಸ್ತೆಗಳಲ್ಲಿನ ಗುಂಡಿಗಳು ಮೂರು ತಿಂಗಳಿನಲ್ಲಿ ಮೂರು ಜೀವಗಳನ್ನು ಬಲಿ ಪಡೆದಿರುವುದು ಅತ್ಯಂತ ನೋವಿನ ಸಂಗತಿ. ಮಂಗನಹಳ್ಳಿ ಮುಖ್ಯರಸ್ತೆಯಲ್ಲಿದ್ದ ಗುಂಡಿಯಿಂದಾಗಿ ದ್ವಿಚಕ್ರ ವಾಹನವೊಂದು ಆಯತಪ್ಪಿ ಉರುಳಿಬಿದ್ದು 65 ವರ್ಷ ವಯಸ್ಸಿನ ಅಂಗವಿಕಲರೊಬ್ಬರು ಸೆಪ್ಟೆಂಬರ್ 7ರಂದು ಮೃತಪಟ್ಟಿದ್ದರು. ಇದಾಗಿ 10 ದಿನಗಳಲ್ಲಿ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಕಾಮಗಾರಿ ಸಲುವಾಗಿ ರಸ್ತೆಯಲ್ಲಿ ಅಗೆದ ಗುಂಡಿಗೆ ಬಿದ್ದು ಮತ್ತೊಬ್ಬ ದ್ವಿಚಕ್ರ ವಾಹನ ಸವಾರ ಜೀವ ಕಳೆದುಕೊಂಡರು. ಎರಡು ಜೀವಗಳನ್ನು ಬಲಿ ಪಡೆದ ಬಳಿಕ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗಡುವುಗಳ ಮೇಲೆ ಗಡುವುಗಳನ್ನು ನಿಗದಿಪಡಿಸಲಾಗಿದೆ. ಗಡುವುಗಳೆಲ್ಲ ಮುಗಿದ ಬಳಿಕವೂ ನಗರದ ಗುಂಡಿಮಯ ರಸ್ತೆಗಳ ಪರಿಸ್ಥಿತಿ ಬದಲಾಗಿಲ್ಲ. ಥಣಿಸಂದ್ರದಲ್ಲಿ ನವೆಂಬರ್‌ 27ರಂದು ರಸ್ತೆಗುಂಡಿಯಿಂದಾಗಿ ಮತ್ತೊಂದು ಅಪಘಾತ ಸಂಭವಿಸಿದೆ. ಇನ್ನೂ ಬಾಳಿ ಬದುಕಬೇಕಾದ 21 ವರ್ಷ ವಯಸ್ಸಿನ ಯುವಕನ ಅಮೂಲ್ಯ ಜೀವವನ್ನೇ ಇದು ಬಲಿ ಪಡೆದಿದೆ. ‘ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚು ಕಾಣಿಸಿಕೊಂಡಿದೆ. ಮಳೆ ಬರುವಾಗ ಗುಂಡಿ ಮುಚ್ಚಿದರೂ ಕೆಲವೇ ದಿನಗಳಲ್ಲಿ ಡಾಂಬರು ಮತ್ತೆ ಕಿತ್ತು ಹೋಗುತ್ತದೆ’ ಎಂಬುದು ಬಿಬಿಎಂಪಿ ಅಧಿಕಾರಿಗಳು ನೀಡುವ ಸಬೂಬು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಹಾನಿ ಪರಿಹಾರ ಕಾರ್ಯಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ‘ರಸ್ತೆ ಗುಂಡಿ ಮುಚ್ಚಲು ತಕ್ಷಣ ಕ್ರಮ ಕೈಗೊಳ್ಳಬೇಕು. ಮಾರಣಾಂತಿಕ ರಸ್ತೆ ಗುಂಡಿಗಳ ಬಳಿ ಬ್ಯಾರಿಕೇಡ್ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಬೇಕು. ಗುಂಡಿಗಳ ದುರಸ್ತಿಗೆ ಕ್ರಮ ವಹಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 10 ದಿನಗಳ ಹಿಂದೆ ನಡೆಸಿದ ಸಭೆಯಲ್ಲಿ ಸೂಚನೆ ನೀಡಿದ್ದರು. ಕನಿಷ್ಠಪಕ್ಷ ಈ ಕೆಲಸವನ್ನು ಮಾಡಿದ್ದರೂ ರಸ್ತೆ ಗುಂಡಿಗೆ ಜೀವ ಬಲಿಯಾಗುವುದು ತಪ್ಪುತ್ತಿತ್ತು. ಬೆಂಗಳೂರು ನಗರದ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿಯವರೇ ಖುದ್ದು ಸೂಚನೆ ನೀಡಿದರೂ ಗುಂಡಿಗಳಿಂದ ಮುಕ್ತಿ ಪಡೆಯುವ ಭಾಗ್ಯ ನಗರದ ರಸ್ತೆಗಳಿಗೆ ಇನ್ನೂ ಸಿಕ್ಕಿಲ್ಲ. ಇದು ರಾಜ್ಯದ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ರಸ್ತೆಗಳನ್ನು ದುರಸ್ತಿಪಡಿಸಿ ಸಾವು–ನೋವು ತಪ್ಪಿಸಲು ಕ್ರಮಗಳನ್ನು ಕೈಗೊಳ್ಳುವ ಬದಲು ಬಿಬಿಎಂಪಿ ಅಧಿಕಾರಿಗಳು, ‘ಜೀವ ಬಲಿಯಾಗಿರುವುದು ರಸ್ತೆ ಗುಂಡಿಯಿಂದಲ್ಲ’ ಎನ್ನುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವುದು ಅಕ್ಷಮ್ಯ.

ರಸ್ತೆಗಳಲ್ಲಿ ಗುಂಡಿ ಬಿದ್ದ ತಕ್ಷಣವೇ ಅವುಗಳನ್ನು ಮುಚ್ಚಿದರೆ ಯಾವುದೇ ಸಮಸ್ಯೆ ಇರದು. ಈ ಉದ್ದೇಶಕ್ಕಾಗಿಯೇ ಬಿಬಿಎಂಪಿಯು ಬೆಂಗಳೂರಿನ ಹೊರವಲಯದ ಕಣ್ಣೂರಿನಲ್ಲಿ ಡಾಂಬರು– ಜಲ್ಲಿ ಮಿಶ್ರಣ ಘಟಕವನ್ನು ₹7.5 ಕೋಟಿ ವೆಚ್ಚದಲ್ಲಿ ಆರಂಭಿಸಿದೆ. ಎರಡು ವರ್ಷಗಳ ಹಿಂದೆಯೇ ಈ ಘಟಕ ಕಾರ್ಯಾರಂಭ ಮಾಡಿದ್ದರೂ ನಗರದ ರಸ್ತೆಗಳ ದುಃಸ್ಥಿತಿ ಮಾತ್ರ ಹಾಗೆಯೇ ಮುಂದುವರಿದಿದೆ. ಈ ಘಟಕವನ್ನು ಸಮರ್ಥವಾಗಿ ಬಳಸಿಕೊಂಡು, ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದೇ ಆದರೆ, ಕೊನೇಪಕ್ಷ ನಗರದ ಮುಖ್ಯ ರಸ್ತೆಗಳಲ್ಲಿರುವ ಗುಂಡಿಗಳನ್ನಾದರೂ ಒಂದೆರಡು ವಾರಗಳಲ್ಲಿ ಮುಚ್ಚಬಹುದು. ಆದರೆ, ಇದನ್ನು ಈಡೇರಿಸುವ ಇಚ್ಛಾಶಕ್ತಿ ಅಧಿಕಾರಿಗಳಿಗೆ ಇದ್ದಂತಿಲ್ಲ. ಅಧಿಕಾರಿಗಳಿಂದ ಕೆಲಸ ಮಾಡಿಸುವ ಛಾತಿ ನಮ್ಮನ್ನಾಳುತ್ತಿರುವ ಜನಪ್ರತಿನಿಧಿಗಳಿಗೂ ಇಲ್ಲ. ಹಾಗಾಗಿ ಎಲ್ಲ ಸೌಕರ್ಯಗಳಿದ್ದರೂ ನಗರದ ರಸ್ತೆ ಗುಂಡಿಗಳ ಸಮಸ್ಯೆಗೆ ಪರಿಹಾರ ಪಡೆಯುವುದು ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತೀ ಕಿಲೊಮೀಟರ್‌ ಉದ್ದದ ರಸ್ತೆ ನಿರ್ವಹಣೆಗೆ ಐದು ವರ್ಷಗಳಲ್ಲಿ ₹ 1.44 ಕೋಟಿ ವೆಚ್ಚ ಮಾಡಲಾಗಿದೆ. ಇಷ್ಟೊಂದು ವೆಚ್ಚ ಮಾಡಿದ ಬಳಿಕವೂ ಗುಂಡಿಗಳಿಲ್ಲದ, ಉಬ್ಬು ಮತ್ತು ತಗ್ಗುಗಳಿಲ್ಲದ ರಸ್ತೆಗಳಿಲ್ಲ. ದ್ವಿಚಕ್ರ ವಾಹನ ಸವಾರರಂತೂ ಇಂತಹ ರಸ್ತೆಗಳಲ್ಲಿ ಸಂಚರಿಸಿ ನಿತ್ಯವೂ ಬೆನ್ನುನೋವು ತರಿಸಿಕೊಳ್ಳುತ್ತಿದ್ದಾರೆ. ರಸ್ತೆಗಳು ಹಾಳಾದರೆ ಅವುಗಳನ್ನು ದುರಸ್ತಿಪಡಿಸಿ ಸುಸ್ಥಿತಿಯಲ್ಲಿಡುವ ಗುತ್ತಿಗೆದಾರರ ಹೊಣೆಗಾರಿಕೆಯ ಅವಧಿ ಪೂರ್ಣಗೊಳ್ಳುವ ಮೊದಲೇ ರಸ್ತೆಗಳು ಹದಗೆಡುತ್ತಿವೆ. ಕೊನೇಪಕ್ಷ ಗುತ್ತಿಗೆದಾರರಿಂದ ಈ ಕಾರ್ಯ ಮಾಡಿಸಿದ್ದರೂ ನಗರದ ರಸ್ತೆಗಳ ಪರಿಸ್ಥಿತಿ ಇಷ್ಟೊಂದು ಅಧ್ವಾನವಾಗುತ್ತಿರಲಿಲ್ಲ. ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ಹೊಣೆಯನ್ನು ಆಯಾ ವಾರ್ಡ್‌ನ ಎಂಜಿನಿಯರ್‌ಗಳಿಗೆ ವಹಿಸಲಾಗಿದೆ. ಆದರೆ ಹೊಣೆ ಮರೆತವರ ಮೇಲೆ ಕ್ರಮ ಜರುಗಿಸಿದ ನಿದರ್ಶನಗಳು ವಿರಳ. ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ವರ್ತಿಸುವ ಅಧಿಕಾರಿಗಳು ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ಭಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ಎಲ್ಲಿಲ್ಲದ ಮುತುವರ್ಜಿ ತೋರಿಸುತ್ತಾರೆ. ಸರ್ಕಾರಕ್ಕೆ, ನಗರವನ್ನು ಪ್ರತಿನಿಧಿಸುವ ಸಚಿವರಿಗೆ, ಶಾಸಕರಿಗೂ ಅಷ್ಟೇ; ಹೆಚ್ಚು ಅನುದಾನ ಬಯಸುವ ದೊಡ್ಡ ಯೋಜನೆಗಳೆಂದರೆ ಅಚ್ಚುಮೆಚ್ಚು! ಒಂದು ಕಿ.ಮೀ. ಉದ್ದದ ರಸ್ತೆಯ ವೈಟ್‌ಟಾಪಿಂಗ್‌ಗೆ ₹ 35 ಕೋಟಿ ವ್ಯಯಿಸುವುದಕ್ಕೂ ಬಿಬಿಎಂಪಿಯಾಗಲೀ ಸರ್ಕಾರವಾಗಲೀ ಹಿಂದೆ ಮುಂದೆ ನೋಡುವುದಿಲ್ಲ. ಇಂತಹದ್ದೇ ಕಾಳಜಿ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಏಕಿಲ್ಲ ಎಂಬುದು ಯಕ್ಷಪ್ರಶ್ನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT