ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ಮಾತುಕತೆಯ ಸಂದರ್ಭದಲ್ಲಿ ವಿಶ್ವದೆದುರು ತೋರಿಸಲಿಕ್ಕೆ ಉಭಯ ದೇಶಗಳು ನಡೆಸಿದ ಕೆಲವು ಯತ್ನಗಳು ಆ ಮಾತುಕತೆಗಳಿಗೆ ಇರುವ ಮಹತ್ವವನ್ನಾಗಲಿ, ಸಭೆಗಳ ಫಲಿತವನ್ನಾಗಲಿ ಕಡಿಮೆ ಮಾಡಲಿಲ್ಲ. ಜಗತ್ತಿನ ಎದುರು ತೋರಿಸಲಿಕ್ಕಾಗಿ ನಡೆಸಿದ ಯತ್ನಗಳು ಬಹುಶಃ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗಮನದಲ್ಲಿ ಇರಿಸಿಕೊಂಡಿದ್ದವು. ತಮ್ಮ ಸ್ನೇಹಿತ ಯಾರು ಎಂಬುದನ್ನು ತೀರ್ಮಾನಿಸುವ ವಿಚಾರದಲ್ಲಿ ಸ್ವತಂತ್ರವಾಗಿಯೇ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂಬ ಸಂದೇಶವನ್ನು ಟ್ರಂಪ್ ಅವರಿಗೆ ರವಾನಿಸಲು ಭಾರತ ಮತ್ತು ರಷ್ಯಾ ಹೀಗೆ ಮಾಡಿರಬಹುದು. ಉಕ್ರೇನ್ ಜೊತೆಗಿನ ಯುದ್ಧ ಆರಂಭವಾದ ನಂತರದಲ್ಲಿ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ತಮ್ಮನ್ನು ಏಕಾಂಗಿಯಾಗಿಸುವಲ್ಲಿ ಅಮೆರಿಕ ಯಶಸ್ಸು ಕಂಡಿಲ್ಲ ಎಂದು ಪುಟಿನ್ ಹೇಳಿದ್ದಾರೆ. 23ನೇ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆಯ ವೇದಿಕೆಯನ್ನು ಬಳಸಿಕೊಂಡ ಮೋದಿ ಅವರು, ಟ್ರಂಪ್ ಅವರ ನಿರ್ಬಂಧಗಳು ಭಾರತ ಮತ್ತು ರಷ್ಯಾ ನಡುವಿನ ದಶಕಗಳಷ್ಟು ಹಳೆಯದಾದ ಸ್ನೇಹಕ್ಕೆ ಧಕ್ಕೆ ಉಂಟುಮಾಡಿಲ್ಲ ಎಂಬ ಸಂದೇಶ ರವಾನಿಸಿದರು. ಎರಡು ದೇಶಗಳ ನಡುವಿನ ವಿಶೇಷವಾದ ಪಾಲುದಾರಿಕೆಯಿಂದ ಸಿಗುವ ಅನುಕೂಲಗಳು ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಸವಾಲುಗಳನ್ನು ಎದುರಿಸಲು ಇಬ್ಬರಿಗೂ ನೆರವಾಗಬಹುದು ಎಂಬುದನ್ನು ಈ ಶೃಂಗಸಭೆಯು ತೋರಿಸಿದೆ.

ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ತಗ್ಗಿಸಬೇಕು ಎಂದು ಭಾರತದ ಮೇಲೆ ಪಾಶ್ಚಾತ್ಯ ಜಗತ್ತು ಒತ್ತಡ ಹೇರುತ್ತಿದೆ. ಅದರಲ್ಲೂ ಮುಖ್ಯವಾಗಿ ಅಮೆರಿಕವು ತೀವ್ರ ಪ್ರಮಾಣದಲ್ಲಿ ಒತ್ತಡ ತರುತ್ತಿದೆ. ಆದರೆ, ಈ ಒತ್ತಡಗಳ ನಡುವೆಯೂ ಭಾರತಕ್ಕೆ ‘ಇಂಧನ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುತ್ತದೆ’ ಎಂಬ ಭರವಸೆಯನ್ನು ರಷ್ಯಾ ನೀಡಿರುವುದು ಗಮನಾರ್ಹ. ಸ್ವಾಯತ್ತೆಯ ವಿಚಾರದಲ್ಲಿ ನುಡಿದಂತೆ ನಡೆಯುವ ಶಕ್ತಿ ತನಗೆ ಇದೆ ಎಂಬುದನ್ನು ಈ ಮೂಲಕ ಭಾರತ ಕೂಡ ತೋರಿಸಿದೆ. ಕಾಜನ್ನಲ್ಲಿ 2024ರ ಅಕ್ಟೋಬರ್ನಲ್ಲಿ ನಡೆದ ಬ್ರಿಕ್ಸ್ ಶೃಂಗದಲ್ಲಿ ಮಾಡಿಕೊಂಡ ಒಪ್ಪಂದದ ಆಧಾರದಲ್ಲಿ, ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟುಗಳಲ್ಲಿ ಸ್ಥಳೀಯ ಕರೆನ್ಸಿಗಳನ್ನು ಬಳಕೆ ಮಾಡಲು ಒಟ್ಟಾಗಿ ಮುಂದಡಿ ಇರಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎನ್ನುವುದು ಕೂಡ ವ್ಯಾಪಾರ ಸಂಬಂಧವನ್ನು ಸುಧಾರಿಸಿಕೊಳ್ಳುವ ಬದ್ಧತೆ ಎರಡೂ ದೇಶಗಳಿಗೆ ಇದೆ ಎಂಬುದನ್ನು ತೋರಿಸುತ್ತದೆ. ರಕ್ಷಣಾ ವಹಿವಾಟುಗಳು ಮಾತ್ರವಲ್ಲದೆ, ಔಷಧ ಮತ್ತು ರಸಗೊಬ್ಬರ ದಂತಹ ವಲಯಗಳಿಗೆ ಆದ್ಯತೆ ನೀಡಿರುವುದು ವ್ಯಾಪಾರ ವಹಿವಾಟಿನ ಮೊತ್ತವನ್ನು ಹೆಚ್ಚಿಸುವ ಬದ್ಧತೆಯನ್ನು ತೋರಿಸುತ್ತಿದೆ. ರಫ್ತು ಪ್ರಮಾಣವನ್ನು ಹೆಚ್ಚು ಮಾಡಿ ರಷ್ಯಾ ಜೊತೆಗಿನ ವ್ಯಾಪಾರ ಕೊರತೆ ಅಂತರವನ್ನು ತಗ್ಗಿಸುವ ಬಯಕೆಯನ್ನು ಭಾರತ ಹೊಂದಿದೆ.

ರಷ್ಯಾದ ಜೊತೆ ಭಾರತ ಹೊಂದಿರುವ ಸ್ನೇಹ ಇಂದು–ನಿನ್ನೆಯದಲ್ಲ. ದಶಕಗಳ ಹಿಂದಿನ ಈ ನಂಟು ‘ಎಸ್–400’ನಂತಹ ಅತ್ಯಂತ ಮಹತ್ವದ ರಕ್ಷಣಾ ಉಪಕರಣದ ಖರೀದಿಯ ಮೂಲಕ ಇನ್ನಷ್ಟು ಗಾಢವಾಗಿದೆ. ಆದರೆ, ಭಾರತವು ರಷ್ಯಾ ಜೊತೆಗಿನ ಐತಿಹಾಸಿಕ ಸಂಬಂಧವನ್ನು ಬಲಪಡಿಸುತ್ತ, ಅಮೆರಿಕ ಹಾಗೂ ಐರೋಪ್ಯ ಒಕ್ಕೂಟದ ಜೊತೆಗಿನ ಸಂಬಂಧವನ್ನೂ ತೂಗಿಸಿಕೊಂಡು ಮುನ್ನಡೆಯಬೇಕಿದೆ. ರಷ್ಯಾ–ಉಕ್ರೇನ್ ಯುದ್ಧದ ವಿಚಾರದಲ್ಲಿ ತಾನು ಶಾಂತಿಯ ಪರವಾಗಿ ಇದ್ದೇನೆ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಭಾರತವು ಪಾಶ್ಚಿಮಾತ್ಯ ದೇಶಗಳ ಕಳವಳಗಳಿಗೆ ಸ್ಪಂದಿಸುವ ಕೆಲಸ ಮಾಡಿದೆ. ಭಾರತವು ಈಗ ರಷ್ಯಾ–ಚೀನಾ ಸಂಬಂಧದಲ್ಲಿನ ಆತ್ಮೀಯತೆಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.
ಹಾಗೆಯೇ, ಚೀನಾ ಜೊತೆಗಿನ ಸಂಬಂಧದಲ್ಲಿ ಈಚೆಗೆ ಆಗಿರುವ ಸುಧಾರಣೆಗಳನ್ನು ಉಳಿಸಿಕೊಳ್ಳಬೇಕಿದೆ. ಐದು ವರ್ಷಗಳಿಗೂ ಹೆಚ್ಚಿನ ಅವಧಿಯ ನಂತರ ಭಾರತ ಮತ್ತು ಚೀನಾ, ಉನ್ನತ ಮಟ್ಟದ ಅಧಿಕಾರಿಗಳ ನಡುವಿನ ಮಾತುಕತೆಗಳನ್ನು ಈಚೆಗೆ ಪುನರಾರಂಭಿಸಿವೆ. ಎರಡೂ ದೇಶಗಳು, ಪರಸ್ಪರರಿಗೆ ಇರುವ ಪ್ರಯೋಜನವನ್ನು ಅರಿತು ಸಂಬಂಧ ಸುಧಾರಣೆಗೆ ಮುಂದಾಗಿವೆ. ಚೀನಾ ಜೊತೆಗಿನ ಸಂಬಂಧದ ವಿಚಾರವಾಗಿ ಎಚ್ಚರಿಕೆಯೊಂದಿಗೆ ಹೆಜ್ಜೆ ಹಾಕುತ್ತ, ಚೀನಾ–ರಷ್ಯಾ ಸಂಬಂಧವನ್ನು ಎಚ್ಚರಿಕೆಯಿಂದ ಗಮನಿಸುತ್ತ ಭಾರತವು– ಚೀನಾ, ಅಮೆರಿಕ ಮತ್ತು ರಷ್ಯಾ ಜೊತೆಗಿನ ತನ್ನ ಸಂಬಂಧವನ್ನು ಸರಿದೂಗಿಸಿಕೊಂಡು ಮುನ್ನಡೆಯಬೇಕಿದೆ. ಪುಟಿನ್ ಅವರಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರುವ ಮೂಲಕ ಭಾರತವು ತನ್ನ ಹಿತಾಸಕ್ತಿಗಳ ರಕ್ಷಣೆಗಾಗಿ, ಅದರಲ್ಲೂ ಮುಖ್ಯವಾಗಿ ಇಂಧನಕ್ಕೆ ಸಂಬಂಧಿಸಿದ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ರಷ್ಯಾ ಜೊತೆ ಬಲವಾದ ಸಂಬಂಧವನ್ನು ಉಳಿಸಿಕೊಳ್ಳುವ ಬದ್ಧತೆಯನ್ನು ತೋರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.