ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಬ್ಯಾಗಿನ ಭಾರ ನಿಯಂತ್ರಣ ಸುತ್ತೋಲೆಯಷ್ಟೇ ಸಾಲದು

Last Updated 27 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಶಾಲಾ ಮಕ್ಕಳ ಬ್ಯಾಗಿನ ಭಾರವನ್ನು ಕಡಿಮೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊರಡಿಸಿರುವ ಆದೇಶದಂತೆ ಹತ್ತನೇ ತರಗತಿಯ ಮಕ್ಕಳ ಶಾಲಾ ಬ್ಯಾಗ್‌ನ ಭಾರ ಐದು ಕಿಲೋಗ್ರಾಂ ಮೀರುವಂತಿಲ್ಲ. ಪ್ರಾಥಮಿಕ ತರಗತಿಗಳಲ್ಲಿ ಇದು ಗರಿಷ್ಠ ಮೂರು ಕಿಲೋಗ್ರಾಂ ಮೀರಬಾರದು. ಮೊದಲ ಎರಡು ತರಗತಿಗಳಲ್ಲಿ ಭಾರ ಒಂದೂವರೆ ಕಿಲೋಗ್ರಾಂಗಿಂತ ಹೆಚ್ಚಿರಬಾರದು.

ಮಕ್ಕಳು ಶಾಲೆಗೆ ಕೊಂಡೊಯ್ಯುವ ಬ್ಯಾಗಿನ ಭಾರದ ಕುರಿತ ಚರ್ಚೆ ಕನಿಷ್ಠ ಮೂವತ್ತು ವರ್ಷಗಳಷ್ಟು ಹಳೆಯದು. ರಾಜ್ಯಸಭಾ ಸದಸ್ಯರಾಗಿ ನಾಮಕರಣಗೊಂಡಿದ್ದ ಲೇಖಕ ಆರ್.ಕೆ. ನಾರಾಯಣ್ ಅವರು ತಮ್ಮ ಮೊದಲ ಭಾಷಣದಲ್ಲಿಯೇ ಮಕ್ಕಳ ಬ್ಯಾಗಿನ ತೂಕವನ್ನು ಪ್ರಸ್ತಾಪಿಸಿದ್ದರು. ‘ಮಕ್ಕಳ ಬೆನ್ನ ಮೇಲೆ ಕತ್ತೆಯ ಮೇಲೆ ಹೇರಿದಂತೆ ಪುಸ್ತಕಗಳ ಚೀಲವನ್ನು ಹೇರಲಾಗುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಅವರ ಮಾತುಗಳಿಗೆ ಮೂವತ್ತು ವರ್ಷ ತುಂಬುವುದಕ್ಕೆ ಇನ್ನುಳಿದಿರುವುದು ಕೆಲವೇ ತಿಂಗಳುಗಳು ಮಾತ್ರ. ಈ ಹೊತ್ತಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಆದೇಶ ಹೊರಬಿದ್ದಿದೆ. ಅನೇಕ ರಾಜ್ಯ ಸರ್ಕಾರಗಳು ಕಳೆದ ಮೂವತ್ತು ವರ್ಷಗಳಲ್ಲಿ ಇಂಥ ಅನೇಕ ಆದೇಶಗಳನ್ನು ಹೊರಡಿಸಿವೆ ಎಂಬುದನ್ನು ನೆನಪಿಸಿಕೊಂಡರೆ ಈ ಆದೇಶ ಎಷ್ಟು ಮುಖ್ಯ ಅಥವಾ ಅಮುಖ್ಯ ಎಂಬುದು ಅರಿವಾಗುತ್ತದೆ.

ಎರಡು ವರ್ಷಗಳ ಹಿಂದೆ ‘ಅಸೋಚಾಮ್‌’ನ ಆರೋಗ್ಯ ಸಮಿತಿಯ ನೇತೃತ್ವದಲ್ಲಿ ನಡೆದ ಸಮೀಕ್ಷೆಯ ಫಲಿತಾಂಶಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. 7ರಿಂದ 13 ವರ್ಷದ ನಡುವಣ ಮಕ್ಕಳು ದಿನಕ್ಕೆ ಸರಾಸರಿ 20 ಪುಸ್ತಕಗಳನ್ನು ನಿತ್ಯ ಹೊರುತ್ತಾರಂತೆ. ಶೇಕಡ 88ರಷ್ಟು ಮಕ್ಕಳು ತಮ್ಮ ದೇಹದ ತೂಕದ ಶೇಕಡ 45ರಷ್ಟು ಭಾರವಿರುವ ಬ್ಯಾಗುಗಳನ್ನು ನಿತ್ಯ ಹೊರುತ್ತಾರೆ ಎಂಬುದನ್ನೂ ಇದೇ ಸಮೀಕ್ಷೆ ಬಹಿರಂಗಪಡಿಸಿತ್ತು.

ಶಾಲೆಯ ಬ್ಯಾಗಿನ ಭಾರಕ್ಕೆ ಈಗ ಪುಸ್ತಕಗಳ ಜೊತೆಗೆ ಆಟೋಟಕ್ಕೆ ಸಂಬಂಧಿಸಿದ ಪರಿಕರಗಳೂ ಸೇರಿಕೊಂಡಿವೆ. ಯಶ್‌ಪಾಲ್ ಅವರು ಬಹಳ ಹಿಂದೆಯೇ ಗುರುತಿಸಿದ್ದಂತೆ ಇದು ಖಾಸಗಿ ಶಾಲೆಗಳ ಸಮಸ್ಯೆ. ಅಗತ್ಯಕ್ಕಿಂತ ಹೆಚ್ಚು ವಿಷಯಗಳನ್ನೂ ಅಗತ್ಯಕ್ಕೆ ಮೊದಲೇ ಕಲಿಸುವ ಸ್ಪರ್ಧಾತ್ಮಕತೆಯಲ್ಲಿ ಶಾಲಾ ಬ್ಯಾಗಿನ ಭಾರ ಹೆಚ್ಚಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಆದೇಶ ಸಿಬಿಎಸ್‌ಇ ಪಠ್ಯಕ್ರಮ ಅನುಸರಿಸುವ ಶಾಲೆಗಳ ಮೇಲೆ ಸ್ವಲ್ಪ ಮಟ್ಟಿಗಿನ ಪರಿಣಾಮ ಬೀರಬಹುದೇನೋ. ಆದರೆ ಭಾರದ ಬ್ಯಾಗಿನ ಪಿಡುಗನ್ನು ನಿವಾರಿಸುವುದಕ್ಕೆ ಸುತ್ತೋಲೆ ಮತ್ತು ಆದೇಶಗಳಿಂದಷ್ಟೇ ಸಾಧ್ಯವಿಲ್ಲ.

ಮಕ್ಕಳನ್ನು ‘ಸ್ಪರ್ಧೆಗೆ ಸಿದ್ಧಪಡಿಸುತ್ತಿರುವ’ ಮಂದಿ ಅರೆಕ್ಷಣ ಆಲೋಚಿಸಿ ಈ ಸ್ಪರ್ಧೆಯಲ್ಲಿ ಗೆಲ್ಲಲು ಆರೋಗ್ಯವೂ ಅಗತ್ಯ ಎಂಬುದನ್ನು ಮನಗಂಡರೆ ಸಮಸ್ಯೆ ಬಹುಪಾಲು ಪರಿಹಾರವಾಗುತ್ತದೆ. ಬ್ಯಾಗಿನ ಭಾರ ಮತ್ತು ಬೋಧನೆ ಹಾಗೂ ಕಲಿಕೆಗೂ ಸಂಬಂಧವಿದೆ. ಅತಿ ಪ್ರತಿಷ್ಠಿತ ಮತ್ತು ಪ್ರತಿಷ್ಠಿತ ಪಟ್ಟಿಯಲ್ಲಿ ಬರುವ ಖಾಸಗಿ ಶಾಲೆಗಳನ್ನು ಹೊರತುಪಡಿಸಿದರೆ ಉಳಿದೆಡೆ ಬೋಧನೆಯ ತರಬೇತಿ ಪಡೆದ ಅಧ್ಯಾಪಕರೂ ಇರುವುದಿಲ್ಲ. ಮೂಲ ಸೌಕರ್ಯವೂ ಕಳಪೆಯಾಗಿರುತ್ತದೆ.

ಇದನ್ನು ಮುಚ್ಚಿಟ್ಟುಕೊಳ್ಳುವ ತಂತ್ರವಾಗಿಯೂ ಭಾರದ ಬ್ಯಾಗು ಬಳಕೆಯಾಗುತ್ತಿದೆ. ಬ್ಯಾಗಿನ ಭಾರ ನಿಯಂತ್ರಿಸುವುದು ಎಂದರೆ ಪ್ರಾಥಮಿಕ ಶಿಕ್ಷಣ ಕ್ಷೇತ್ರದ ಸುಧಾರಣೆಯೂ ಹೌದು ಎಂಬುದನ್ನು ಮಾನವ ಸಂಪನ್ಮೂಲ ಸಚಿವಾಲಯ ಮನಗಾಣಬೇಕಿದೆ. ಈ ಸುಧಾರಣೆಯ ಪ್ರಕ್ರಿಯೆಯಲ್ಲಿ ಪಾಲಕರಲ್ಲಿ ಜಾಗೃತಿ ಮೂಡಿಸುವ ಕೆಲಸದಿಂದ ಆರಂಭಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಖಾತರಿಪಡಿಸುವ ತನಕದ ಹಲವು ಸಂಗತಿಗಳಿವೆ.

ಇವೆಲ್ಲವನ್ನೂ ಒಟ್ಟಾಗಿ ಗ್ರಹಿಸಿ ಸಮಗ್ರ ಯೋಜನೆ ರೂಪಿಸಿ ಕಾರ್ಯಪ್ರವೃತ್ತವಾಗುವುದು ಇಂದಿನ ಅಗತ್ಯ. ಎಲ್ಲದಕ್ಕಿಂತ ಹೆಚ್ಚಾಗಿ ಶಿಕ್ಷಣವನ್ನು ಜಂಟಿಪಟ್ಟಿಯಿಂದ ಹೊರತಂದು ಅದನ್ನು ರಾಜ್ಯಪಟ್ಟಿಗೆ ಸೀಮಿತಗೊಳಿಸುವುದು ಅತ್ಯಂತ ಅಗತ್ಯ. ರಾಜ್ಯದ ಶಿಕ್ಷಣ ಇಲಾಖೆ ರೂಪಿಸುವ ಕಾನೂನುಗಳನ್ನು ಉಲ್ಲಂಘಿಸುವುದಕ್ಕೆ ಸಿಬಿಎಸ್ಇ ಮಾನ್ಯತೆಯು ಒಂದು ರಹದಾರಿಯಾಗಿಬಿಟ್ಟಿದೆ. ಈ ಬಗೆಯ ಅಸಂಗತಗಳನ್ನು ಸರಿಪಡಿಸುವ ತನಕ ಬ್ಯಾಗಿನ ಭಾರವನ್ನು ಇಳಿಸಲು ಸಾಧ್ಯವಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಖಾತರಿಪಡಿಸಲೂ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT