ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: 2ನೇ ಡೋಸ್‌ ಲಸಿಕೆಗೆ ಉದಾಸೀನ, ಜನ, ಸರ್ಕಾರದ ನಿರ್ಲಕ್ಷ್ಯ ಅಕ್ಷಮ್ಯ

Last Updated 12 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಕೋವಿಡ್‌ ಸಾಂಕ್ರಾಮಿಕವು ಎಷ್ಟೊಂದು ಮಾರಕ ಎಂಬುದು ಅನುಮಾನಕ್ಕೆ ಎಡೆ ಇಲ್ಲದ ರೀತಿಯಲ್ಲಿ ಇಡೀ ಜಗತ್ತಿಗೆ ಅರ್ಥವಾಗಿದೆ. ಇದು ಆರೋಗ್ಯ ಸಮಸ್ಯೆಯಷ್ಟೇ ಅಲ್ಲ; ‌ಅರ್ಥವ್ಯವಸ್ಥೆಯನ್ನು ಕೂಡ ಇನ್ನಿಲ್ಲದಂತೆ ಕಾಡಿದೆ. ಸುಮಾರು ಒಂದೂ ಮುಕ್ಕಾಲು ವರ್ಷ ಜಗತ್ತನ್ನು ಬಹುಪಾಲು ಸ್ಥಗಿತಗೊಳ್ಳುವಂತೆ ಮಾಡಿತ್ತು ಎಂಬುದು ಈಗಲೂ ಜನರ ಮನದಲ್ಲಿ ಹಸಿರಾಗಿರುವ ವಿಚಾರ. ಲಸಿಕೆಯಿಂದ ಮಾತ್ರ ಸಾಂಕ್ರಾಮಿಕವನ್ನು ನಿಯಂತ್ರಣದಲ್ಲಿ ಇರಿಸಬಹುದು ಎಂಬುದು ಸಾಬೀತಾಗಿರುವ ವಿಚಾರ. ಹಾಗಿದ್ದರೂ ಲಸಿಕೆ ಅಭಿಯಾನದವಿಚಾರದಲ್ಲಿ ಭಾರತದಲ್ಲಿ ಉದಾಸೀನ ಮನೆ ಮಾಡಿದೆ ಎಂಬುದಕ್ಕೆ ಮತ್ತೆ ಮತ್ತೆ ಪುರಾವೆಗಳು ಸಿಗುತ್ತಲೇ ಇವೆ. ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡ 12 ಕೋಟಿಗೂ ಹೆಚ್ಚು ಜನರು ನಿಗದಿತ ಅವಧಿಯ ಒಳಗೆ ಎರಡನೇ ಡೋಸ್‌ ಹಾಕಿಸಿಕೊಂಡಿಲ್ಲ ಎಂದು ಕೇಂದ್ರದ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು ಹೇಳಿದ್ದಾರೆ. ನೂರು ಕೋಟಿ ಡೋಸ್‌ ಲಸಿಕೆ ನೀಡಿಕೆಯನ್ನು ನಾವು ಸಂಭ್ರಮಿಸಿ ಬಹಳ ದಿನಗಳೇನೂ ಆಗಿಲ್ಲ. ಸಂಭ್ರಮ ಮರೆಯಾಗುವ ಮುನ್ನವೇ, ನಾವು ಗಂಭೀರವಾಗಿ ಪರಿಗಣಿಸಬೇಕಾದ ಈ ಸುದ್ದಿ ಹೊರಬಿದ್ದಿದೆ. ಲಸಿಕೆ ಅಭಿಯಾನದ ಪ್ರಗತಿ ಪರಿಶೀಲನೆಗಾಗಿ ರಾಜ್ಯ ಆರೋಗ್ಯ ಸಚಿವರ ಜತೆ ನಡೆಸಿದ ಸಭೆಯಲ್ಲಿ ಮಾಂಡವೀಯ ಅವರು 12 ಕೋಟಿ ಜನರು ಲಸಿಕೆಯ ಎರಡನೇ ಡೋಸ್‌ ಹಾಕಿಸಿಕೊಳ್ಳುವು ದರಿಂದ ತಪ್ಪಿಸಿಕೊಂಡಿರುವ ವಿಚಾರ ತಿಳಿಸಿದ್ದಾರೆ. ವಿವಿಧ ಕಾರ್ಯತಂತ್ರಗಳನ್ನು ಹಮ್ಮಿಕೊಂಡು ಈ 12 ಕೋಟಿ ಜನರಿಗೆ ಲಸಿಕೆಯ ಎರಡನೇ ಡೋಸ್‌ ಹಾಕಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಂಡವೀಯ ಸೂಚಿಸಿದ್ದಾರೆ.

12 ಕೋಟಿ ಜನರು ಲಸಿಕೆಯ ಎರಡನೇ ಡೋಸ್‌ ಹಾಕಿಸಿಕೊಂಡಿಲ್ಲ ಎಂದರೆ, ಸರ್ಕಾರವು ಮಾಡಿರುವ ಜನಜಾಗೃತಿ ಕಾರ್ಯಕ್ರಮವು ‍ಪರಿಣಾಮಕಾರಿ ಆಗಿರ ಲಿಲ್ಲ ಎಂದು ಭಾವಿಸಬೇಕಾಗುತ್ತದೆ. ಈ ದಿಸೆಯಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ. ಏಕೆಂದರೆ, ಕೋವಿಡ್‌ ಸಾಂಕ್ರಾಮಿಕವು ಇನ್ನೂ ಮರೆಯಾಗಿಲ್ಲ. ಪ್ರತಿದಿನ ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆಯು ಇಳಿಕೆಯಾಗಿರುವುದು ಜನರು ಅಸಡ್ಡೆ ತೋರಲು ಕಾರಣ ಆಗಿರಬಹುದು. ಆದರೆ, ಸರ್ಕಾರದ ಮಟ್ಟದಲ್ಲಿ ನಿರ್ಲಕ್ಷ್ಯ ಇರಬಾರದು. ಎರಡನೇ ಡೋಸ್‌ ಅನ್ನು ನಿಗದಿತ ಅಂತರದಲ್ಲಿ ಹಾಕಿಸಿಕೊಂಡರೆ ಮಾತ್ರ ಕೋವಿಡ್‌ನಿಂದ ರಕ್ಷಣೆ ಕೊಡುತ್ತದೆ ಎಂಬ ವಿಚಾರವನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕೆಲವು ದೇಶಗಳಲ್ಲಿ ಜನರಿಗೆ ಮೂರನೇ ಡೋಸ್‌ ಅಥವಾ ಬೂಸ್ಟರ್‌ ಡೋಸ್‌ ಹಾಕಿಸುವ ಬಗ್ಗೆ ಚಿಂತನೆಗಳು ನಡೆದಿವೆ. ಹಾಗಿರುವಾಗ ಎರಡನೇ ಡೋಸ್‌ ವಿಚಾರದಲ್ಲಿಯೇ ನಾವು ಎಡವಿದರೆ ಹೇಗೆ? ಜತೆಗೆ, ಶೇ 80ರಷ್ಟಕ್ಕೂ ಹೆಚ್ಚು ಜನರು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿರುವ ಯುರೋಪ್‌ನ ಹಲವು ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿವೆ. ಆಸ್ಟ್ರಿಯಾ, ನೆದರ್‌ಲ್ಯಾಂಡ್ಸ್‌ ದೇಶಗಳು ಮತ್ತೆ ಭಾಗಶಃ ಲಾಕ್‌ಡೌನ್‌ ನಿರ್ಧಾರಕ್ಕೆ ಬಂದಿವೆ. ಭಾರತದಲ್ಲಿ ಸಂಪೂರ್ಣ ಲಸಿಕೆ ಹಾಕಿಸಿಕೊಂಡಿರುವ ಜನರ ಪ್ರಮಾಣ ಶೇ 38ರಷ್ಟು ಮಾತ್ರ ಎಂಬುದೂ ಕಳವಳಪಡಬೇಕಾದ ಅಂಶವೇ ಆಗಿದೆ. ಹೀಗಿರುವಾಗ, ಲಸಿಕೆ ಹಾಕಿಸುವ ವಿಚಾರದಲ್ಲಿನ ನಿರ್ಲಕ್ಷ್ಯಕ್ಕೆ ಭಾರಿ ಬೆಲೆ ತೆರಬೇಕಾದೀತು ಎಂಬ ಎಚ್ಚರ ಆಡಳಿತ ನಡೆಸುವವರು ಮತ್ತು ಜನರಲ್ಲಿ ಇರಬೇಕು.

ಕೋವಿಡ್‌ ಸಾಂಕ್ರಾಮಿಕದಿಂದ ಅನುಭವಿಸಿದ ಕಷ್ಟ ನಷ್ಟಗಳು ಏನು ಎಂಬುದನ್ನು ಜನರು ಮರೆಯಬಾರದು. ಅತ್ಯಂತ ವೇಗವಾಗಿ ಹರಡುವ ಕೊರೊನಾ ಸೋಂಕು, ಜನಸಂಖ್ಯೆ ಮತ್ತು ಜನಸಾಂದ್ರತೆ ಹೆಚ್ಚಾಗಿರುವ ಭಾರತದಲ್ಲಿ ಮತ್ತೊಂದು ಅನಾಹುತ ಸೃಷ್ಟಿಸಲು ಜನರು ಅವಕಾಶ ಕೊಡಬಾರದು. ಮೊದಲ ಡೋಸ್‌ ಹಾಕಿಸಿಕೊಂಡ ಜನರು ಎರಡನೇ ಡೋಸ್‌ ಪಡೆಯುವ ವಿಚಾರದಲ್ಲಿ ಉದಾಸೀನ ತೋರಿಸಬಾರದು. ಲಸಿಕೆಯ ಎರಡೂ ಡೋಸ್‌ ಹಾಕಿಸಿಕೊಂಡು ದೇಶವನ್ನು ಕೋವಿಡ್‌ಮುಕ್ತ ಮಾಡುವುದು ಜನರ ಸಾಮಾಜಿಕ ಹೊಣೆಗಾರಿಕೆಯೂ ಹೌದು. ಸೋಂಕು ಮತ್ತೆ ಹೆಚ್ಚಳವಾಗಿ, ದೊಡ್ಡ ಅನಾಹುತವಾದರೆ ಅದು ಅಕ್ಷ್ಯಮ್ಯ. ಲಸಿಕೆ ಅಭಿಯಾನಕ್ಕೆ ಇನ್ನಷ್ಟು ಕಸುವು ತುಂಬುವುದು ಅಗತ್ಯ.‌ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು 2.5 ಕೋಟಿ ಡೋಸ್‌ ಲಸಿಕೆ ಹಾಕಿಸಲಾಗಿದೆ. ಆ ಬಳಿಕ, ಲಸಿಕೆ ಹಾಕಿಸುವಿಕೆಯು ಜಡಗೊಂಡಿದೆ. ಕೋವಿಡ್‌ನಂತಹ ಸಾಂಕ್ರಾಮಿಕವನ್ನು ತೊಡೆದು ಹಾಕುವಲ್ಲಿ ಸಾಂಕೇತಿಕವಾದ ನಡೆಯು ಉಪಯುಕ್ತ ಎನಿಸದು. 18 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವಿಕೆ ಇನ್ನೂ ಆರಂಭ ಆಗಿಲ್ಲ. ಬ್ರಿಟನ್‌ನಲ್ಲಿ 18ರ ಒಳಗಿನವರಿಗೆ ಲಸಿಕೆ ಪ್ರಮಾಣವು ಕಡಿಮೆ ಇರುವುದೇ ಸಾಂಕ್ರಾಮಿಕವು ಮತ್ತೆ ಸಕ್ರಿಯವಾಗಲು ಕಾರಣ ಎನ್ನಲಾಗುತ್ತಿದೆ. ಅದನ್ನು ದೇಶದಲ್ಲಿ ಶೀಘ್ರವಾಗಿ ಆರಂಭಿಸಬೇಕು. ಕೊರೊನಾ ಸೋಂಕು ನಿರ್ಮೂಲನೆಯಲ್ಲಿ ಸರ್ಕಾರ ಮತ್ತು ಜನರು ಹೆಚ್ಚು ಜವಾಬ್ದಾರಿಯಿಂದ ವರ್ತಿಸುವುದು ಜಗತ್ತಿನ ಒಳಿತಿನ ದೃಷ್ಟಿಯಿಂದ ಮಹತ್ವದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT