ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮಣಿಪುರದಲ್ಲಿ ಸೂಕ್ಷ್ಮ ಪರಿಸ್ಥಿತಿ– ಟೊಳ್ಳಾಗಿ ಕಾಣುತ್ತಿರುವ PM ಮಾತು

ಸಂಪಾದಕೀಯ
Published 18 ಏಪ್ರಿಲ್ 2024, 19:28 IST
Last Updated 18 ಏಪ್ರಿಲ್ 2024, 19:28 IST
ಅಕ್ಷರ ಗಾತ್ರ

ಮಣಿಪುರದ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ಅಲ್ಲಿನ ಪರಿಸ್ಥಿತಿಯ ವಿಚಾರವಾಗಿ ತಮ್ಮ ಮಾತು ಅಥವಾ ಮೌನದ ಮೂಲಕ ಸರಿಯಾಗಿ ಸ್ಪಂದಿಸಿಯೂ ಇಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ, ರಾಜ್ಯದಲ್ಲಿ ದಳ್ಳುರಿ ತೀವ್ರವಾಗಿದ್ದಾಗ, ಮೋದಿ ಅವರು ಅದರ ವಿಚಾರದಲ್ಲಿ ಮೌನವಾಗಿ ಇದ್ದರು. ಎರಡು ಸಂದರ್ಭಗಳಲ್ಲಿ ಅದರ ಬಗ್ಗೆ ಮಾತನಾಡಿದಾಗ, ಆ ಮಾತುಗಳು ಸರಿಯಾದ ಬಗೆಯಲ್ಲಿ ಇರಲಿಲ್ಲ. ಮಣಿಪುರದಲ್ಲಿ ಹಿಂಸಾಚಾರ ಶುರುವಾದ ತಿಂಗಳುಗಳ ನಂತರ, ಮೋದಿ ಅವರು ಸಂಸತ್ತಿನಲ್ಲಿ ಆ ಬಗ್ಗೆ ಮಾತನಾಡಲೇಬೇಕಾಯಿತು. ಅಂದರೆ, ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರವಾಗಿ ಅವರು ಮಾತನಾಡಬೇಕಾಯಿತು. ಆಗ ಅವರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಶಾಂತಿಯ ಮರುಸ್ಥಾಪನೆಗೆ ಕೆಲಸ ಮಾಡುತ್ತಿವೆ ಎಂದು ಹೇಳಿದ್ದರು. ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಯ ಕೆಲಸವು ಬಹುಬೇಗ ಆಗುತ್ತದೆ ಎಂದು ಅವರು ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಆಗಿಲ್ಲ. ಹೀಗಿದ್ದರೂ, ಕೇಂದ್ರ ಸರ್ಕಾರವು ಸಕಾಲದಲ್ಲಿ ಮಧ್ಯಪ್ರವೇಶಿಸಿದ್ದರಿಂದಾಗಿ ಹಾಗೂ ರಾಜ್ಯ ಸರ್ಕಾರವು ಕೈಗೊಂಡ ಕ್ರಮಗಳ ಕಾರಣದಿಂದಾಗಿ ರಾಜ್ಯದ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆ ಆಗಿದೆ ಎಂದು ಮೋದಿ ಅವರು ಕಳೆದ ವಾರ ಹೇಳಿದ್ದಾರೆ. ಈ ಎರಡೂ ಸಂದರ್ಭಗಳಲ್ಲಿ ಮೋದಿ ಅವರು ಆಡಿದ ಮಾತುಗಳು ಟೊಳ್ಳಾಗಿದ್ದಂತೆ ಕಾಣುತ್ತಿವೆ.

ಬಿರೇನ್ ಸಿಂಗ್ ನೇತೃತ್ವದ ರಾಜ್ಯ ಸರ್ಕಾರವೇ ಅಲ್ಲಿನ ಸಮಸ್ಯೆಯ ಒಂದು ಭಾಗವಾಗಿರುವಂತಿದೆ.
ಆ ಸರ್ಕಾರವು ಮೈತೇಯಿ ಸಮುದಾಯದ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿರುವಂತಿದೆ. ಸರ್ಕಾರದ ನಿರ್ಧಾರಗಳು ಹಾಗೂ ಕೈಗೊಂಡ ಕ್ರಮಗಳು ಪರಿಸ್ಥಿತಿಯು ಹದಗೆಡುವಂತೆ ಮಾಡುತ್ತಿವೆ. ರಾಜ್ಯವು ಈಗ ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ವಿಭಜನೆಗೊಂಡಿದೆ. ಕುಕಿ ಸಮುದಾಯವು ಸರ್ಕಾರದ ಮೇಲಿನ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಬಿರೇನ್ ಸಿಂಗ್ ಹೇಳಿಕೆಗಳು ಹಲವು ಸಂದರ್ಭಗಳಲ್ಲಿ ರಾಜ್ಯದ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿವೆ. ಹೀಗಾಗಿ, ರಾಜ್ಯ ಸರ್ಕಾರದ ಯತ್ನಗಳು ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ನೆರವಾಗಿವೆ ಎಂದು ಹೇಳುವುದಕ್ಕೆ ಕಾರಣಗಳೇ ಇಲ್ಲ. ಕೇಂದ್ರ ಸರ್ಕಾರವು ಸಕಾಲದಲ್ಲಿ ಮಧ್ಯಪ್ರವೇಶ ಮಾಡಿತು, ಅದರಿಂದಾಗಿ ಪ್ರಯೋಜನ ಆಯಿತು ಎಂದು ಹೇಳುವುದಕ್ಕೂ ಆಧಾರಗಳು ಇಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಮಧ್ಯಪ್ರವೇಶ ಮಾಡಲಿಲ್ಲ, ಸಕಾಲಿಕವಾಗಿ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ ಎಂಬುದೇ ಕೇಂದ್ರದ ವಿರುದ್ಧ ಇರುವ ಪ್ರಮುಖ ಆರೋಪ. ರಾಜ್ಯದಲ್ಲಿ ಧ್ರುವೀಕರಣವು ಹೆಚ್ಚಾಗಬೇಕು ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಯಸಿದ್ದವು ಎಂಬ ಆರೋಪಗಳಿವೆ. ಮಣಿಪುರವು ಈಗ ಇಂತಹ ಧ್ರುವೀಕರಣದ ಪ್ರಯೋಗ ಶಾಲೆಯಂತೆ ಆಗಿರುವುದು ನಿಜವೂ ಹೌದು. ಉದ್ದೇಶಪೂರ್ವಕವೋ ಅಥವಾ ಅಲ್ಲವೋ, ನಿಷ್ಕ್ರಿಯತೆ ಅಥವಾ ತಪ್ಪು ಹೆಜ್ಜೆಗಳು ಈ ರೀತಿಯ ಪರಿಣಾಮವನ್ನು ಉಂಟುಮಾಡಿವೆ, ಅಲ್ಲಿನ ಧ್ರುವೀಕರಣವು ಜಾಸ್ತಿಯಾಗಿದೆ.

ಪ್ರಧಾನಿಯವರು ಈ ರೀತಿಯಲ್ಲಿ ಹೇಳಿದ ಸಂದರ್ಭದಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಿನ್ನವಾದ ಮಾತುಗಳನ್ನು ಆಡಿದ್ದಾರೆ. ಕೇಂದ್ರದಲ್ಲಿ ಮುಂದೆ ರಚನೆ ಆಗುವ ಸರ್ಕಾರದ ‘ಆದ್ಯತೆಯ ಕೆಲಸ’ ಮಣಿಪುರದಲ್ಲಿ ಮಾತುಕತೆ ಮೂಲಕ ಶಾಂತಿಯನ್ನು ಸ್ಥಾಪಿಸುವುದು ಎಂದು ಶಾ ಅವರು ಹೇಳಿದ್ದಾರೆ. ಕೇಂದ್ರದಲ್ಲಿ ಮುಂದೆ ರಚನೆ ಆಗುವುದು ಮೋದಿ ನೇತೃತ್ವದ ಸರ್ಕಾರವೇ ಎಂಬುದು ಶಾ ಅವರ ನಂಬಿಕೆ. ಅಂದರೆ, ರಾಜ್ಯದಲ್ಲಿ ಪರಿಸ್ಥಿತಿಯು ಸಹಜವಾಗಿ ಇಲ್ಲ, ಅಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಅಗತ್ಯ ಇದೆ ಎಂಬುದು ಶಾ ಅವರ ಮಾತಿನಲ್ಲೇ ಗೊತ್ತಾಗುತ್ತಿದೆ. ಇಲ್ಲಿ ಮೂಡುವ ಪ್ರಶ್ನೆಯೊಂದಿದೆ: ಸರ್ಕಾರವು ಮಾತುಕತೆ ಹಾಗೂ ಸಂವಾದಗಳ ಮೂಲಕ ಅಲ್ಲಿ ಶಾಂತಿ ಮರುಸ್ಥಾಪಿಸುವುದನ್ನು ಆದ್ಯತೆಯ ಕೆಲಸವನ್ನಾಗಿ ಇಷ್ಟು ದಿನ ಏಕೆ ಪರಿಗಣಿಸಿರಲಿಲ್ಲ? ರಾಜ್ಯವು ಮೈತೇಯಿ ಸಮುದಾಯದ ಪ್ರಾಬಲ್ಯವಿರುವ ಬಯಲು ಪ್ರದೇಶಗಳು ಹಾಗೂ ಕುಕಿ ಸಮುದಾಯದ ಪ್ರಾಬಲ್ಯವಿರುವ ಗುಡ್ಡಗಾಡು ಪ್ರದೇಶಗಳ ನಡುವೆ ವಿಭಜನೆ ಆಗಿಬಿಟ್ಟಿದೆ. ಸರ್ಕಾರವು ಮೈಮರೆವಿನ ಕಾರಣದಿಂದ ಹಾಗೂ ಕೆಲವು ನಡೆಗಳ ಕಾರಣದಿಂದ ಈ ಪರಿಸ್ಥಿತಿಯನ್ನು ತಂದಿರಿಸಿದೆ. ಅಲ್ಲಿ ಹಿಂಸಾಚಾರ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT