ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಎಸ್.ಶ್ರೀರಾಮ್ ಅಂಕಣ| ಸಣ್ಣ ರೈತರೂ ಗುತ್ತಿಗೆ ಕೃಷಿಯೂ

ಕೃಷಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುವ ವಿಶಾಲ ದೃಕ್ಪಥವನ್ನು ಸರ್ಕಾರ ಹೊಂದಬೇಕು
Last Updated 20 ಏಪ್ರಿಲ್ 2021, 20:43 IST
ಅಕ್ಷರ ಗಾತ್ರ

ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ಸಂಬಂಧಿಸಿದಂತೆ ರೈತರೊಂದಿಗಿನ ಒಪ್ಪಂದದ ಬಗೆಗಿನ ಕಾನೂನು (The Farmers (Empowerment and Protection) Agreement on Price Assurance and Farm Services Act, 2020) ಅತ್ಯಂತ ಜಟಿಲವಾದ ವಿಷಯವನ್ನು ಒಳಗೊಂಡಿದೆ. ಕೃಷಿಗೆ ಸಂಬಂಧಿಸಿದ ಮಿಕ್ಕೆರಡು ಕಾನೂನುಗಳು ವ್ಯಾಪಾರಕ್ಕೆ ಸಂಬಂಧಿಸಿದವೆಂದೂ ಅವು ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುತ್ತವೆಂದೂ ಹೇಗೋ ವಿತಂಡವಾದ ಮಂಡಿಸಬಹುದಾದರೂ, ಗುತ್ತಿಗೆ ಕೃಷಿಯ ಬಗೆಗಿನ ಈ ಕಾನೂನನ್ನು ಹೊರಡಿಸುವಲ್ಲಿ ಕೇಂದ್ರವು ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಗೆ ಲಗ್ಗೆಯಿಟ್ಟಿದೆ ಎಂದು ಸ್ಪಷ್ಟವಾಗಿ ಹೇಳಬಹುದು. ಈ ಕಾನೂನು ಕೇವಲ ವ್ಯಾಪಾರಕ್ಕೆ ಸಂಬಂಧಿಸಿದ ಕಾನೂನೆಂದು ವಾದಿಸುವುದು ಕಷ್ಟ.

ಎಂ.ಎಸ್‌.ಶ್ರೀರಾಮ್
ಎಂ.ಎಸ್‌.ಶ್ರೀರಾಮ್

‘ರೈತರ ಉತ್ಪತ್ತಿಯ ವ್ಯಾಪಾರ ಮತ್ತು ವ್ಯವಹಾರ (ಸುಗಮಗೊಳಿಸುವ, ಪ್ರೋತ್ಸಾಹಿಸುವ) ಕಾಯ್ದೆ– 2020’ರಂತೆ ಇದರಲ್ಲೂಎರಡು ಭಿನ್ನ ಅಂಶಗಳಿವೆ. ಅವುಗಳಲ್ಲಿ ಮೊದಲನೆಯದು, ರೈತರು ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಡುವೆ ಆಗಬಹುದಾದ ಒಪ್ಪಂದಗಳ ರೂಪುರೇಷೆ. ಎರಡನೆಯದು, ತಗಾದೆ, ತಕರಾರುಗಳನ್ನು ಪರಿಹರಿಸಿಕೊಳ್ಳುವ ವಿಧಿವಿಧಾನದ ಚೌಕಟ್ಟು. ಈ ಚೌಕಟ್ಟನ್ನು ಈಗ ಪ್ರಸ್ತಾಪಿಸಿರುವಂತೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟರ ಕಾರ್ಯವ್ಯಾಪ್ತಿಯಿಂದ ನ್ಯಾಯಾಂಗಕ್ಕೆ ವರ್ಗಾಯಿಸಲು ಸರ್ಕಾರ ತಯಾರಿರುವು ದಾದರೆ, ಆ ವಿಷಯವನ್ನು ಬಿಟ್ಟು ಬರೇ ಕರಾರಿನ ವಿಷಯವನ್ನು ಚರ್ಚಿಸಬಹುದು.

ಕೃಷಿ ಉತ್ಪನ್ನಗಳ ಬೆಲೆ, ಗುಣಮಟ್ಟ, ಪ್ರಮಾಣಗಳನ್ನು ಪೂರ್ವನಿಗದಿತ ಚೌಕಟ್ಟಿನಲ್ಲಿ ಕರಾರು ಮಾಡಿಕೊಳ್ಳುವ ಸರಳ ಒಪ್ಪಂದ ಒಂದು ತುದಿಯಲ್ಲಿದ್ದರೆ, ಇಡೀ ಉತ್ಪಾದನೆ ಪ್ರಕ್ರಿಯೆಯನ್ನೇ ಕಾರ್ಪೊರೇಟು ಸಂಸ್ಥೆಗಳು ನಿಭಾಯಿಸಬಹುದಾದ ಸಾಧ್ಯತೆಗಳು ಮತ್ತೊಂದು ತುದಿಯಲ್ಲಿವೆ. ಈ ಕಾನೂನಿನಲ್ಲಿ ದುಷ್ಟ ಉದ್ದೇಶದ ಪಿತೂರಿ ಇರಬಹುದೇ ಎಂದು ಊಹಿಸುವುದು ಕಷ್ಟದ ಮಾತು. ವಿವಿಧ ರೀತಿಯ ಒಪ್ಪಂದಗಳನ್ನು ವಿಶ್ಲೇಷಿಸಿ ನೋಡದ ಹೊರತು, ಇದರಲ್ಲಿ ಯಾರಿಗೆ ಯಾವುದರಿಂದ ಫಾಯಿದೆಯಾಗಬಹುದು ಎನ್ನುವುದನ್ನು ಸರಳವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಈ ಕಾನೂನನ್ನು ಜಾರಿ ಮಾಡುವಂತಹ ಅತ್ಯವಶ್ಯಕ ಮತ್ತು ತುರ್ತಿನ ಸಂದರ್ಭದಲ್ಲಿ ನಾವು ಖಂಡಿತವಾಗಿಯೂ ಇಲ್ಲ.

ನಮ್ಮ ಕೃಷಿಯು ಕಾಲಾಂತರದಿಂದ ಎರಡು ರೀತಿಯ ಏರ್ಪಾಟುಗಳನ್ನು ಕಂಡಿದೆ. ರೈತರು ತಮ್ಮದೇ ಭೂಮಿಯನ್ನು ಉತ್ತು ನಿಭಾಯಿಸುವುದು. ಇಲ್ಲವೇ ಬೇರೊಬ್ಬರ ಜಮೀನಿನಲ್ಲಿ ಗೇಣಿ ಅಥವಾ ಕೃಷಿ ಭಾಗಸ್ವಾಮ್ಯದ ಏರ್ಪಾಟುಗಳನ್ನು ಮಾಡಿಕೊಳ್ಳುವುದು. ತಮ್ಮ ಭೂಮಿಯಲ್ಲೇ ಕೆಲಸ ಮಾಡಿದಾಗ ಅದರಿಂದ ಉಂಟಾಗುವ ಸಕಲ ಲಾಭನಷ್ಟಗಳೂ ರೈತರಿಗೇ ಸಂದುತ್ತವೆ. ಆದರೆ ಇತರರ ಭೂಮಿಯಲ್ಲಿ ಕೃಷಿ ಮಾಡಿದಾಗ ಆ ಪ್ರಕ್ರಿಯೆಯಲ್ಲಿನ ಅಪಾಯ
ಗಳೆಲ್ಲವೂ ಗುತ್ತಿಗೆದಾರರ ಕತ್ತಿಗೆ ಬಿದ್ದರೆ, ಬಂದ ಲಾಭ ಮತ್ತು ಫಾಯಿದೆಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಕಾರ್ಪೊರೇಟು ಸಂಸ್ಥೆಗಳೊಂದಿಗೆ ಗುತ್ತಿಗೆ ಕೃಷಿ ನಡೆಸಲು ಮಾಡಿಕೊಳ್ಳುವ ಒಪ್ಪಂದಗಳ ಚೌಕಟ್ಟಿನ ಬಗ್ಗೆ ರೈತರಿಗೆ ಆತಂಕ-ಅನುಮಾನಗಳಿರುವುದು ಸಹಜವೇ ಆಗಿದೆ. ಈ ರೀತಿಯ ಕರಾರುಗಳಿಂದ ರೈತರಿಗೆ ಉತ್ತಮ ಬೀಜ, ತಾಂತ್ರಿಕ ಜ್ಞಾನ, ತರಬೇತಿ, ಆಧುನಿಕ ಮತ್ತು ವೈಜ್ಞಾನಿಕ ಕೃಷಿಯು ದಕ್ಕಬಹುದು. ಉತ್ತಮ ಬೆಲೆಯ ನಿರೀಕ್ಷೆಯೂ ಇರಬಹುದು. ಆದರೆ ಕೃಷಿಯಲ್ಲಿನ ಅಪಾಯಗಳು ಮತ್ತು ನೈಸರ್ಗಿಕ ವಿಕೋಪಗಳು ರೈತರ ವಿರುದ್ಧವಾಗಿ ಇರುತ್ತವೆ.

ಗುತ್ತಿಗೆ ಕೃಷಿಯ ಕರಾರಿನಲ್ಲಿ ಇಳುವರಿ, ಗುಣಮಟ್ಟ, ತೇವಾಂಶದಂತಹ ಅನೇಕ ಅಂಶಗಳಿರುತ್ತವೆ. ಗುತ್ತಿಗೆ ಕೃಷಿಯನ್ನು ಕೈಗೊಂಡಾಗ ಹಲವು ಬಾರಿ ಆ ಬೆಳೆ ಅತಿ ವಿಶಿಷ್ಟವಾಗಿರಬಹುದು. ಉದಾಹರಣೆಗೆ, ಪೆಪ್ಸಿ ಕಂಪೆನಿಯ ಲೇಸ್ ಚಿಪ್ಸ್‌ಗಾಗಿ ಉಪಯೋಗಿಸುವ ಆಲೂಗಡ್ಡೆ ಒಂದು ವಿಶಿಷ್ಟ ಬಗೆಯದ್ದಾಗಿದ್ದು, ಅದನ್ನು ಆ ಕಂಪನಿ ಕೊಳ್ಳದಿದ್ದರೆ ಇತರ ಜಾಗದಲ್ಲಿ ಅದರ ಮಾರಾಟದ ಸಾಧ್ಯತೆ ಇಲ್ಲವಾಗಬಹುದು. ಹೀಗಾಗಿ, ಇವು ಒಮ್ಮುಖ ಕರಾರುಗಳಾಗಿದ್ದು, ಏನಾದರೂ ಏರುಪೇರಾದರೆ ರೈತರಿಗೇ ತುಟ್ಟಿಯಾಗುತ್ತವೆ. ಅದೇ ಕಾಲಕ್ಕೆ ಕಾರ್ಪೊರೇಟು ಸಂಸ್ಥೆಗಳು ಕೊಡುವ ಬೀಜ, ಕೀಟನಾಶಕಗಳು ಕೆಲಸ ಮಾಡದಿದ್ದರೆ, ಸರಿಯಾಗಿ ಇಳುವರಿ ಬರದಿದ್ದರೆ ಅದರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ಎನ್ನುವ ಬಗ್ಗೆಯೂ ಸ್ಪಷ್ಟೀಕರಣವಿಲ್ಲ.

ಈ ಕರಾರುಗಳು ಎರಡು ಅಸಮಾನ ಪಾರ್ಟಿಗಳ ನಡುವೆ ಆಗುತ್ತಿವೆ ಎನ್ನುವುದನ್ನು ನಾವು ಗಮನಿಸಬೇಕು. ಒಂದೆಡೆ ಕಾರ್ಪೊರೇಟು ಸಂಸ್ಥೆಗಳು, ಅವುಗಳ ಸಂಪ ನ್ಮೂಲ, ಧನಬಲ ಮತ್ತು ವಶೀಲಿಗಳಿವೆ. ಮತ್ತೊಂದೆಡೆ, ಬಿಕ್ಕಟ್ಟಿನಲ್ಲಿರುವ ರೈತರಿದ್ದಾರೆ. ಎಲ್ಲವೂ ಸರಿಹೊಂದಿದ ಸಮಯಕ್ಕೆ ಈ ಕರಾರು- ಒಪ್ಪಂದಗಳು ಚೆನ್ನಾಗಿಯೇ ನಡೆಯುತ್ತವೆ. ಆದರೆ ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾದರೆ ಅದರ ದುಷ್ಪರಿಣಾಮ ಹೆಚ್ಚಾಗಿ ಆಗುವುದು ರೈತರ ಮೇಲೇ. ಹೀಗಾಗಿ ನಾವು ಕೇಳಬೇಕಾದುದು, ಕಾರ್ಪೊರೇಟ್ ಗುತ್ತಿಗೆಗಳು ರೈತರನ್ನು ಈಗಿರುವ ಸ್ಥಿತಿಗಿಂತ ಹೀನ ಸ್ಥಿತಿಗೆ ಒಯ್ಯುತ್ತವೆಯೇ ಎನ್ನುವ ಪ್ರಶ್ನೆಯನ್ನು. ರೈತರ ಮನದಲ್ಲಿಯೂ ಇದೇ ಪ್ರಶ್ನೆಯಿದೆ.

ಕಾರ್ಪೊರೇಟ್‌ ಗುತ್ತಿಗೆ ಕೃಷಿಯು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಗಳ ಆಧಾರದ ಮೇಲೆ ನಡೆಯುವುದಿಲ್ಲ. ಈ ಏರ್ಪಾಟಿನಲ್ಲಿ ಕಾರ್ಪೊರೇಟು ಸಂಸ್ಥೆಗಳು ಹೆಚ್ಚು ಹೂಡಿಕೆ ಮಾಡಬೇಕಾದರೆ, ಹಲವು ಎಕರೆಗಳ ಒಂದು ದೊಡ್ಡ ಭೂಭಾಗ ಬೇಕಾಗುತ್ತದೆ. ಇದು ಸಣ್ಣ ಹಿಡುವಳಿಗಳ ಕ್ರೋಡೀಕರಣದಿಂದ ಮಾತ್ರ ಸಾಧ್ಯ. ಕ್ರೋಡೀಕರಣ ಅಂದಮಾತ್ರಕ್ಕೆ ಜಮೀನಿನ ಮಾಲೀಕತ್ವ ವನ್ನು ಸಂಸ್ಥೆಗಳಿಗೆ ವರ್ಗಾಯಿಸಿದಂತಲ್ಲ. ಆದರೂ ಜಮೀನುಗಳ ನಡುವಿನ ಅಂತರವನ್ನು ಮುರಿದು, ಒಂದು ದೊಡ್ಡ ಭೂಭಾಗದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಕೃಷಿಯನ್ನು ವೈಜ್ಞಾನಿಕವಾಗಿ ಕೈಗೊಂಡಾಗಲೇ ಸಂಸ್ಥೆಗಳಿಗೆ ಇದು ಗಿಟ್ಟುತ್ತದೆ. ಕ್ರೋಡೀಕರಣ ಪ್ರಕ್ರಿಯೆ, ಎಲ್ಲರಿಗೂ ಸಲ್ಲುವಂತಹ ಕರಾರುಗಳು, ಅವುಗಳ ನಿಗದಿತ ಅವಧಿ, ಸೀಮೆ ಈ ಎಲ್ಲವೂ ಜಟಿಲ ವಿಚಾರಗಳು. ಆದರೆ ಇಷ್ಟು ಮಾತ್ರ ನಿಜ. ಕಾರ್ಪೊರೇಟ್ ಕೃಷಿ ವ್ಯವಸ್ಥೆ ಆಗಬೇಕಾದರೆ, ಕೃಷಿ ಭೂಮಿಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಬೇಕು, ಇಲ್ಲದಿದ್ದರೆ ಅದರಿಂದ ಹೆಚ್ಚು ಗಿಟ್ಟುವುದಿಲ್ಲ. ಹೀಗೆ ಕೃಷಿ ಭೂಮಿಯನ್ನು ಕಾರ್ಪೊರೇಟು ಸಂಸ್ಥೆಗಳಿಗೆ ಬಿಟ್ಟುಕೊಟ್ಟಾಗ ರೈತ ಏನು ಮಾಡಬೇಕು ಎನ್ನುವುದೂ ಪ್ರಶ್ನೆಯೇ. ಆತ ತನ್ನದೇ ಜಮೀನಿನಲ್ಲಿ ಕೂಲಿಯಾಗಿ ಕೆಲಸ ಮಾಡಬೇಕೇ? ಇದು ಕೇವಲ ವ್ಯವಹಾರದ ಪ್ರಶ್ನೆಯಾಗದೆ ಆತ್ಮಸನ್ಮಾನದ ಪ್ರಶ್ನೆಯೂ ಆಗುತ್ತದೆ.

ಗುತ್ತಿಗೆ ಪಡೆದ ಸಂಸ್ಥೆಗಳು ಯಾವುದೇ ಸ್ಥಾಯಿ ಕಟ್ಟಡಗಳನ್ನು ಕೃಷಿ ಭೂಮಿಯ ಮೇಲೆ ಕಟ್ಟಬಾರದು– ಭೂಮಿಯ ಸದರಿ ರೂಪಕ್ಕೆ ಯಾವುದೇ ಮೂಲಭೂತ ಬದಲಾವಣೆಗಳನ್ನು ಮಾಡಬಾರದೆಂದು ಕಾನೂನು ಸೂಚಿಸುತ್ತದೆ. ಹಾಗೇನಾದರೂ ಅವಶ್ಯವಾದ ಬದಲಾವಣೆಗಳನ್ನು ಮಾಡಿದರೆ, ಒಪ್ಪಂದ ಮುಗಿದು ರೈತರಿಗೆ ಭೂಮಿಯನ್ನು ಮರಳಿಸುವ ವೇಳೆಗೆ ಅದು ಹೇಗಿತ್ತೋ ಹಾಗೇ ಮರುಪರಿವರ್ತಿಸಿ ಕೊಡಬೇಕೆಂದು ತಿಳಿಸುತ್ತದೆ. ಕಾನೂನಿನ ಈ ಕಲಮನ್ನು ವಸ್ತುನಿಷ್ಠವಾಗಿ ಜಾರಿ ಮಾಡಲು ಸಾಧ್ಯವೇ ಇಲ್ಲ.

ಈ ಕಾನೂನಿನ ಸಾರಾಂಶವಿಷ್ಟೇ– ಇದರಲ್ಲಿ ಸಣ್ಣ ರೈತರ ಹಿತಾಸಕ್ತಿಗಳನ್ನು ಕಾಪಾಡುವ ಬಲವಾದ ಕಲಮುಗಳು ಕಾಣುತ್ತಿಲ್ಲ. ರೈತರ ಹಿತರಕ್ಷಣೆ ಬಗ್ಗೆ, ಭಿನ್ನ ಪರಿಸ್ಥಿತಿಗಳು ಮತ್ತು ಭಿನ್ನ ಬೆಳೆಗಳಿಗೆ ಬೇಕಾದ ಭಿನ್ನ ಒಪ್ಪಂದಗಳ ಬಗ್ಗೆ ಗಮನವನ್ನು ಹರಿಸಿಲ್ಲ. ತರಕಾರಿಗಳ ಪರಿಸ್ಥಿತಿ ಆಹಾರಧಾನ್ಯಗಳಿಗಿಂತ ಭಿನ್ನವಾಗಿರುತ್ತದೆ. ದಾಸ್ತಾನು ಮಾಡಲು ಸಾಧ್ಯವಾಗುವ ಉತ್ಪನ್ನಗಳಿಗೂ ತಕ್ಷಣ ಸಂಸ್ಕರಣೆಗೆ ಕಳಿಸಬೇಕಾದ ಉತ್ಪನ್ನಗಳಿಗೂ ಮೂಲಭೂತ ಭಿನ್ನತೆಗಳಿರುತ್ತವೆ.

ಯಾವುದೇನೇ ಆದರೂ ಈ ಕಾನೂನನ್ನು ಸ್ಥಳೀಯ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದಾದ ರಾಜ್ಯ ಸರ್ಕಾರಗಳಿಗೆ ಬಿಟ್ಟುಕೊಡುವುದೇ ಒಳಿತು. ಕೇಂದ್ರ ಸರ್ಕಾರದ ಜಿದ್ದೇ ಮುಂದುವರಿಯಬೇಕು ಎನ್ನುವುದಾದರೆ, ಇದನ್ನು ಮಾದರಿ ಕಾನೂನಾಗಿ ಪರಿವರ್ತಿಸಬಹುದು. ಆದರೂ ಈ ಕಾನೂನಿನ ಹಿಂದೆ ನಮಗೆ ಯಾವುದೇ ದೂರದೃಷ್ಟಿ ಕಾಣುವುದಿಲ್ಲವಾದ್ದರಿಂದ, ಇದನ್ನು ಮಾದರಿ ಕಾನೂನು ಎಂದು ಕರೆಯುವುದೂ ತಪ್ಪಾಗುತ್ತದೆ. ಹೀಗಾಗಿಯೇ ಈ ಕಾನೂನನ್ನು ರದ್ದು ಮಾಡಬೇಕೆನ್ನುವ ಬೇಡಿಕೆಯಲ್ಲಿ ಹುರುಳಿದೆ.

ರೈತರ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸುವ ಗಂಭೀರ ಸಾಧ್ಯತೆ ಇಲ್ಲದಂತಹ ಟೊಳ್ಳು ಕಾನೂನುಗಳನ್ನು ಜಾರಿ ಮಾಡುವುದಕ್ಕೆ ಬದಲು, ಸರ್ಕಾರವು ಕೃಷಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡುವ ವಿಶಾಲ ದೃಕ್ಪಥವನ್ನು ಹೊಂದಬೇಕು. ಆದರೆ ಆ ದೃಕ್ಪಥ ನಮಗೆ ಈ ಸರ್ಕಾರದಲ್ಲಿ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT