ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಆರ್ಥಿಕ ಚೇತರಿಕೆಗೆ ಲಕ್ಷ್ಯ ಕೊಡದ ಹೊಂದಾಣಿಕೆಯ ಬಜೆಟ್‌

Last Updated 6 ಮಾರ್ಚ್ 2020, 4:08 IST
ಅಕ್ಷರ ಗಾತ್ರ

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, 2020–21ನೇ ಸಾಲಿಗೆ ಮಂಡಿಸಿರುವ ₹2.37 ಲಕ್ಷ ಕೋಟಿ ಗಾತ್ರದ ಬಜೆಟ್‌, ರಾಜ್ಯದ ಪ್ರಸಕ್ತ ಆರ್ಥಿಕ ಸ್ಥಿತಿಯಂತೆಯೇ ಹಲವು ಗೋಜಲುಗಳಿಂದ ಕೂಡಿದೆ. ಇಲಾಖೆಯ ಅನುಸಾರ ನಿಗದಿಗೊಳಿಸುತ್ತಿದ್ದ ಅನುದಾನವನ್ನು ಆದ್ಯತೆಯ ಆಧಾರದಲ್ಲಿ ಆರು ವಲಯಗಳನ್ನಾಗಿ ವಿಂಗಡಿಸಿ ಹಂಚಿಕೆ ಮಾಡಲಾಗಿದೆ. ಇದರ ಹಿಂದೆ ಆರ್ಥಿಕ ಸುಧಾರಣೆಯಯಾವುದೇ ದೂರದೃಷ್ಟಿ ಗೋಚರಿಸುತ್ತಿಲ್ಲ.

ರಾಜ್ಯ ಮಾತ್ರವಲ್ಲ, ಇಡೀ ದೇಶವೇ ಎದುರಿಸುತ್ತಿರುವ ಕಠಿಣ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಆಡಳಿತ ವೆಚ್ಚದ ಮೇಲೆ ಹಿಡಿತ ಬಿಗಿ ಮಾಡಲು ಶ್ರಮಪಟ್ಟಿರುವುದು ಎದ್ದುಕಾಣುತ್ತಿದೆ. ಆದರೆ, ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯದ ಆರ್ಥಿಕತೆಗೆ ದೊಡ್ಡ ಮಟ್ಟದ ಚಿಮ್ಮುಹಲಗೆಯಾಗಬಲ್ಲ ಯಾವ ಉಪಕ್ರಮವೂ ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ. ಸರ್ಕಾರದ ಕೈಗೆ ಸಿಗುವ ಹಣವನ್ನು ಯಾರಿಗೂ ಬೇಸರವಾಗದ ರೀತಿಯಲ್ಲಿ ಸ್ವಲ್ಪ ಸ್ವಲ್ಪ ಹಂಚುವ ಹೊಂದಾಣಿಕೆಯೊಂದಿಗೆ ಲೆಕ್ಕ ಸರಿದೂಗಿಸುವ ಕೆಲಸಕ್ಕಷ್ಟೇ ಮುಖ್ಯಮಂತ್ರಿ ತೃಪ್ತಿಪಟ್ಟುಕೊಂಡಿರುವಂತಿದೆ. ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ನಿಗದಿಪಡಿಸುವ ಮೂಲಕ ರೈತನಾಯಕ ಎಂಬ ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳಲುಪ್ರಯತ್ನಿಸಿದ್ದಾರೆ. ಉತ್ತರ ಕರ್ನಾಟಕದ ರೈತರ ಬಹುನಿರೀಕ್ಷೆಯ ಕಳಸಾ– ಬಂಡೂರಿ ಯೋಜನೆಗೆ ₹500 ಕೋಟಿ, ಎತ್ತಿನಹೊಳೆ ಯೋಜನೆಗೆ ₹ 1,500 ಕೋಟಿ, ಏತನೀರಾವರಿ ಯೋಜನೆಗಳಿಗೆ ₹ 5,000 ಕೋಟಿ– ಹೀಗೆ ಮುಂಗಡಪತ್ರವನ್ನು ‘ರೈತಪರ’ ಎಂದು ಬಿಂಬಿಸಲು ಯತ್ನಿಸಿದ್ದಾರೆ.

ಕಳಸಾ– ಬಂಡೂರಿ ಯೋಜನೆಯನ್ನು ಆದ್ಯತೆಯ ಮೇಲೆ ಸಮರೋಪಾದಿಯಲ್ಲಿ ಕೈಗೊಳ್ಳುವ ಅಗತ್ಯವಿದೆ. ಆದರೆ, ಅದಕ್ಕೆ ಮೀಸಲಿಟ್ಟಿರುವ ಹಣ ಕಡಿಮೆ. ನಿರ್ದಿಷ್ಟ ಸಮುದಾಯಗಳನ್ನು ಓಲೈಸಲು ಹಲವು ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿರುವ ಅವರು, ಕೈಗಾರಿಕೆ ಮತ್ತು ಸೇವಾ ವಲಯದ ಉತ್ಪಾದಕತೆಯನ್ನು ಹೆಚ್ಚಿಸಲು ಕೈಗೊಂಡಿರುವ ಹೊಸ ಯೋಜನೆಗಳು ಉದ್ಯಮಿಗಳಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದಂತೆ ಕಾಣಿಸುತ್ತಿಲ್ಲ. ನೇರ ತೆರಿಗೆ ಸಂಗ್ರಹದಲ್ಲಿ ಆಗಿರುವ ಖೋತಾವನ್ನು ತುಂಬಿಕೊಳ್ಳಲು ಹೊಸ ಸಂಪನ್ಮೂಲ ರೂಢಿಸುವ ಅನಿವಾರ್ಯ ಎದುರಾಗಿದ್ದು, ಸಹಜವಾಗಿಯೇ ಪೆಟ್ರೋಲ್‌–ಡೀಸೆಲ್‌ ಮೇಲಿನ ತೆರಿಗೆ ಮತ್ತು ಮದ್ಯದ ಮೇಲಿನ ಸುಂಕ ಹೆಚ್ಚಳಕ್ಕೆ ಕೈಹಾಕಿದ್ದಾರೆ. ಆದರೆ, ಇಂಧನ ದರ ಏರಿಕೆಯಿಂದ ಸರಕು ಸಾಗಣೆ ವೆಚ್ಚವೂ ಹೆಚ್ಚಾಗಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಬೀಳುವುದು ನಿಶ್ಚಿತ. ಬಜೆಟ್‌ ಮಂಡನೆಗೆ ಮೊದಲೇ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಬಸ್‌ ಪ್ರಯಾಣ ದರ ಏರಿಸಿದ್ದವು. ಇಂಧನ ದರ ಏರಿಕೆಯಿಂದಾಗಿ ಇನ್ನೊಂದು ಸುತ್ತಿನ ದರ ಏರಿಕೆ ಅನಿವಾರ್ಯ ಆಗಬಹುದು.

ರಾಜ್ಯವು ಪ್ರಕೃತಿ ವಿಕೋಪಕ್ಕೆ ಸಿಲುಕಿ ದೊಡ್ಡ ಆರ್ಥಿಕ ಹೊಡೆತವನ್ನು ಅನುಭವಿಸಿದೆ. ಒಕ್ಕೂಟ ವ್ಯವಸ್ಥೆಯ ತತ್ವಪಾಲನೆ ಮಾಡಬೇಕಿದ್ದ ಕೇಂದ್ರ ಸರ್ಕಾರವು ಸಕಾಲಕ್ಕೆ ರಾಜ್ಯದ ನೆರವಿಗೆ ಬಂದಿಲ್ಲ ಎಂಬ ಆರೋಪ ಇದೆ. ಕೇಂದ್ರವು ತಡವಾಗಿ ಘೋಷಿಸಿದ ಪರಿಹಾರವು ಸಂತ್ರಸ್ತರ ಪುನರ್ವಸತಿಗೆ ಸಾಲದಂತಿತ್ತು. ಈಗ ನೋಡಿದರೆ ಕೇಂದ್ರದಿಂದ ಬರಬೇಕಾದ ಇನ್ನಷ್ಟು ನೆರವು ಕಡಿತಗೊಂಡಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನಲ್ಲಿ ₹ 8,887 ಕೋಟಿ ಖೋತಾ ಆಗಿದ್ದರೆ, ಜಿಎಸ್‌ಟಿಯ ಪರಿಹಾರದ ಪಾಲಿನಲ್ಲಿ ₹ 3,000 ಕೋಟಿ ಕಡಿಮೆ ಆಗಲಿದೆ.

ಮುಂದಿನ ಆರ್ಥಿಕ ವರ್ಷದಲ್ಲಿ ಕೇಂದ್ರದಿಂದ ಬರಬಹುದೆಂದು ಅಂದಾಜಿಸಲಾಗಿದ್ದ ತೆರಿಗೆ ಪಾಲಿನ ಮೊತ್ತದಲ್ಲಿ ₹11,215 ಕೋಟಿ ಕಡಿಮೆ ಆಗಲಿದೆ ಎಂಬ ಅಂಶವು ಬಜೆಟ್‌ನಲ್ಲಿ ಉಲ್ಲೇಖಗೊಂಡಿದೆ. ಈ ಕೊರತೆ ತುಂಬಿಕೊಳ್ಳಲು ಸರ್ಕಾರವು ₹ 52,918 ಕೋಟಿ ಹೊಸ ಸಾಲ ಎತ್ತಲು ನಿರ್ಧರಿಸಿದೆ. ರಾಜ್ಯದ ಒಟ್ಟು ಸಾಲದ ಮೊತ್ತ ಅಂದಾಜು ₹ 3.68 ಲಕ್ಷ ಕೋಟಿಗೆ ತಲುಪಲಿದೆ ಎಂಬುದು ಶುಭಸೂಚನೆಯೇನೂ ಅಲ್ಲ. ಉತ್ಪಾದಕತೆಗೆ ಬಲ ತುಂಬುವ ಮೂಲಕ ಉದ್ಯೋಗಸೃಷ್ಟಿ ಹೆಚ್ಚಿಸುವುದಕ್ಕೆ ಪೂರಕ ವಾತಾವರಣವೂ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT