ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೆಪಿಎಸ್‌ಸಿ ಶುದ್ಧೀಕರಣ: ಸರ್ಕಾರದ ನಡೆ ಸ್ವಾಗತಾರ್ಹ

Last Updated 5 ಮಾರ್ಚ್ 2020, 4:30 IST
ಅಕ್ಷರ ಗಾತ್ರ

ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತರಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಮುಖ್ಯ ಪರೀಕ್ಷೆಯಲ್ಲಿ ಇದ್ದ ಎರಡು ಐಚ್ಛಿಕ ವಿಷಯಗಳನ್ನು ಕೈಬಿಡಲು ನಿರ್ಧರಿಸಿರುವುದು ಹಾಗೂ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 200ರಿಂದ 50ಕ್ಕೆ ಇಳಿಸಲು ಬಯಸಿರುವುದು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕೊಳೆಯನ್ನು ತೊಳೆಯುವ ಮೊದಲ ಹೆಜ್ಜೆ ಎಂದು ಭಾವಿಸಬಹುದು. ಈ ಪ್ರಯತ್ನವನ್ನು ಇನ್ನಷ್ಟು ದೃಢವಾಗಿ ಮುಂದಕ್ಕೆ ಒಯ್ಯಬೇಕು. ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಕಡಿಮೆ ಮಾಡಬೇಕು ಎಂದು ಪಿ.ಸಿ.ಹೋಟಾ ಸಮಿತಿ ಶಿಫಾರಸು ಮಾಡಿತ್ತು. ಆದರೆ, ಅದಕ್ಕೆ ಅಂಗೀಕಾರದ ಮುದ್ರೆ ಬಿದ್ದಿರಲಿಲ್ಲ.

ರಾಜ್ಯ ಸರ್ಕಾರ ಈ ಶಿಫಾರಸನ್ನು ತಡವಾಗಿಯಾದರೂ ಅಳವಡಿಸಿಕೊಳ್ಳಲು ಮುಂದಾಗಿರುವುದು ಮೆಚ್ಚುವಂತಹ ವಿಷಯ. ವ್ಯಕ್ತಿತ್ವ ಪರೀಕ್ಷೆಯ ಅಂಕಗಳು 200 ಇದ್ದುದೇ ಭ್ರಷ್ಟಾಚಾರಕ್ಕೆ ರಹದಾರಿಯಾಗಿಪರಿಣಮಿಸಿತ್ತು. 2011ರ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಐಡಿ ತನ್ನ ವರದಿಯಲ್ಲಿಯೂ ಇದನ್ನು ದೃಢಪಡಿಸಿತ್ತು. ಅದೇ ರೀತಿ, ಐಚ್ಛಿಕ ವಿಷಯಗಳ ಆಯ್ಕೆ ವಿಧಾನವೂ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವಂತೆ ಇತ್ತು ಎಂಬ ದೂರುಗಳಿವೆ. ಅಭ್ಯರ್ಥಿಗಳಿಗೆ ಇಂತಹ ವಿಷಯವನ್ನೇ ಐಚ್ಛಿಕವಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರೇ ಸೂಚಿಸುತ್ತಿದ್ದರು ಎಂಬ ಆರೋಪಗಳೂ ಇವೆ.

ಲೋಕಸೇವಾ ಆಯೋಗವು ಕೆಲವು ದಶಕಗಳಿಂದ ಕೆಟ್ಟ ಕಾರಣಗಳಿಂದಾಗಿಯೇ ಸುದ್ದಿಯಾಗುತ್ತಿದೆ. ಆಯೋಗದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಸ್ವಜನ ಪಕ್ಷಪಾತವಿದೆ, ಅದೊಂದು ಮದುವೆ ಪ್ರಸ್ತಾವದ ಕೇಂದ್ರವಾಗಿದೆ ಎಂಬ ಆಪಾದನೆಗಳು ಅದರ ಕೊರಳಿಗೆ ಸುತ್ತಿಕೊಂಡಿವೆ. ಆಯೋಗದ ಸದಸ್ಯರ ನೇಮಕಾತಿಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತದೆ ಎಂಬ ಆರೋಪವೂ ಇದೆ. ಸಾಂವಿಧಾನಿಕ ಸಂಸ್ಥೆಯೊಂದು ಈ ಪರಿ ಕೆಟ್ಟುಹೋಗಿದ್ದನ್ನು ಸ್ವಚ್ಛ ಮಾಡುವುದಕ್ಕಾಗಿಯೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಹೋಟಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಅಧ್ಯಯನ ನಡೆಸಿ 65 ಶಿಫಾರಸುಗಳನ್ನು ಮಾಡಿತ್ತು. ಆದರೆ, ಆಗಿನ ಸರ್ಕಾರ ಕೆಲವು ಶಿಫಾರಸುಗಳನ್ನು ಮಾತ್ರ ಅಂಗೀಕರಿಸಿತು. ಆಯೋಗವನ್ನು ಸ್ವಚ್ಛ ಮಾಡಲು ದೊರೆತ ಅವಕಾಶವೊಂದನ್ನು ಅಂದಿನ ಸರ್ಕಾರ ಬಿಟ್ಟುಕೊಟ್ಟಿತು.

ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗೆ ಆಯ್ಕೆ ಸಮಿತಿ ರಚಿಸಬೇಕು, ವ್ಯಕ್ತಿತ್ವ ಪರೀಕ್ಷೆಗೆ ವಿಷಯ ತಜ್ಞರ ಸಮಿತಿ ಇರಬೇಕು, ಆಯೋಗದ ಸಿಬ್ಬಂದಿಯನ್ನು ಕಾಲಕಾಲಕ್ಕೆ ವರ್ಗಾವಣೆ ಮಾಡಬೇಕು, ಆಯೋಗದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಬೇಕು ಎಂಬಿತ್ಯಾದಿ ಶಿಫಾರಸುಗಳು ಕಸದಬುಟ್ಟಿ ಸೇರಿದವು. ಹಾಗಾಗಿ, ಹೋಟಾ ಸಮಿತಿಯ ವರದಿ ಸಲ್ಲಿಕೆಯಾದ ನಂತರದ ನೇಮಕಾತಿಗಳೂ ಆರೋಪಗಳಿಂದ ಮುಕ್ತ ಆಗಿರಲಿಲ್ಲ.

ಈಗಿನ ಸರ್ಕಾರವು ಕೆಲವು ಸುಧಾರಣೆಗಳಿಗೆ ಮುಂದಾಗಿದೆ. ಆದರೆ, ಈ ಸುಧಾರಣೆ ಪ್ರಕ್ರಿಯೆಯನ್ನು ಅರ್ಧಕ್ಕೇ ಕೈಬಿಡಬಾರದು. ಮುಕ್ತ ಹಾಗೂ ನ್ಯಾಯಯುತ ನೇಮಕಾತಿಗೆ ಆಯೋಗ ಕೆಲವು ಕ್ರಮಗಳನ್ನು ಕೈಗೊಂಡಿದೆಯಾದರೂ ಅವು ಇನ್ನಷ್ಟು ಪಾರದರ್ಶಕವಾಗಿರಬೇಕು. ಕೆಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಕಾಣುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನೂ ಮಾಡಬೇಕು. ಹಲವಾರು ವರ್ಷಗಳಿಂದ ಆಯೋಗದಲ್ಲಿಯೇ ಬೇರೂರಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಯೋಗ ನಡೆಸುವ ನೇಮಕಾತಿಗಳಿಗೆ ಕಾಲಮಿತಿಯನ್ನು ನಿಗದಿ ಮಾಡಬೇಕು. ವಾರ್ಷಿಕ ಕ್ಯಾಲೆಂಡರ್ ಸಿದ್ಧಪಡಿಸಿ ಅದರ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಬೇಕು.

ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆಪ್ರತಿವರ್ಷ ನೇಮಕಾತಿ ನಡೆಯಬೇಕು ಎಂದು ಹೋಟಾ ಸಮಿತಿ ಹೇಳಿದ್ದರೂ ಅದು ಪಾಲನೆ ಆಗುತ್ತಿಲ್ಲ. ನೇಮಕಾತಿ ಅಧಿಸೂಚನೆ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಪ್ರಕಟಣೆಗೆ ಈಗ ನಿರ್ದಿಷ್ಟ ವೇಳಾಪಟ್ಟಿ ಇಲ್ಲ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದೆ. ಈ ವಿಳಂಬಕ್ಕೆ ಕಡಿವಾಣ ಬೇಕು. ಆಯೋಗದ ಶುದ್ಧೀಕರಣಕ್ಕೆ ಇನ್ನಷ್ಟು ಕ್ರಮಗಳನ್ನು ಕೈಗೊಂಡು ಅದರ ವರ್ಚಸ್ಸನ್ನು ಹೆಚ್ಚಿಸಬೇಕು. ಈ ಹಿಂದೆ ನಡೆದ ನೇಮಕಾತಿಗಳಲ್ಲಿ ಆಗಿರುವ ಅಕ್ರಮಗಳಲ್ಲಿ ಭಾಗಿಯಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವ ಕೆಲಸವೂ ಆಗಬೇಕು. ಹಾಗೆ ಮಾಡಿದರೆ ಆಯೋಗದ ಘನತೆಯೂ ಉಳಿಯುತ್ತದೆ. ಕಾಳಜಿ ಇರುವ ದಕ್ಷರು ಅಧಿಕಾರಿಗಳಾಗಿ ನೇಮಕವಾದರೆ ಆಡಳಿತ ತಾನಾಗಿಯೇ ಸುಧಾರಣೆಯಾಗುತ್ತದೆ. ಅದರಿಂದ ಸರ್ಕಾರದ ವಿಶ್ವಾಸಾರ್ಹತೆಯೂ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT