ಸೋಮವಾರ, ಏಪ್ರಿಲ್ 19, 2021
32 °C

ಷೇರುಪೇಟೆಯ ದಿಗಿಲು ದೂರ ಮಾಡಲು ಕ್ರಮ ಬೇಕಾಗಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೇಂದ್ರ ಬಜೆಟ್‌ನಲ್ಲಿನ ತೆರಿಗೆ ಪ್ರಸ್ತಾವಗಳು ಷೇರುಪೇಟೆಯಲ್ಲಿ ಒಂದು ರೀತಿಯಲ್ಲಿ ದಿಗಿಲು ಮೂಡಿಸಿವೆ. ದೇಶಿ ಮತ್ತು ವಿದೇಶಿ ಹೂಡಿಕೆದಾರರ ಎದೆಗುಂದಿಸಿವೆ. ಪೇಟೆಯ ವಹಿವಾಟಿನ ಅಳತೆಗೋಲು ಆಗಿರುವ ಸಂವೇದಿ ಸೂಚ್ಯಂಕವು ಸತತ ಎರಡು ದಿನ ತೀವ್ರ ಕುಸಿತಕ್ಕೆ ಒಳಗಾಗಿತ್ತು. ಮಂಗಳವಾರ ತುಸು ಚೇತರಿಕೆ ಕಂಡಿದೆ.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ₹ 5.61 ಲಕ್ಷ ಕೋಟಿ ಮೊತ್ತದ ಸಂಪತ್ತು ಎರಡೇ ದಿನಗಳಲ್ಲಿ ಕರಗಿದ್ದು, ಪೇಟೆಯಲ್ಲಿನ ಗಲಿಬಿಲಿಗೆ ಸಾಕ್ಷಿ. ಷೇರು ವಹಿವಾಟುದಾರರು, ಕಾರ್ಪೊರೇಟ್‌ ಸಂಸ್ಥೆಗಳು ಮತ್ತು ವಿದೇಶಿ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ವಿದೇಶಿ ಹೂಡಿಕೆದಾರರನ್ನು ಪ್ರತಿ ನಿಧಿಸುವ ಎರಡು ಸಾವಿರಕ್ಕೂ ಹೆಚ್ಚು ವಿದೇಶಿ ನಿಧಿಗಳು ಗರಿಷ್ಠ ಮಟ್ಟದ ತೆರಿಗೆಗೆ ಒಳಪಡಲಿವೆ. ಇದರಿಂದಾಗಿ, ವಿದೇಶಿ ಹೂಡಿಕೆಯನ್ನು ಹೊಸದಾಗಿ ಆಕರ್ಷಿಸಲು ಭಾರತದ ಷೇರುಪೇಟೆಗಳಿಗೆ ಕಷ್ಟವಾಗಲಿದೆ. ವಿದೇಶಿ ಹೂಡಿಕೆಯ ಹೊರಹರಿವೂ ಹೆಚ್ಚಲಿದೆ. ಬಜೆಟ್‌ ಪ್ರಸ್ತಾವಗಳ ಹಿನ್ನೆಲೆಯಲ್ಲಿ ಉಂಟಾದ ಮಾರಾಟ ಒತ್ತಡದಿಂದಾಗಿ ಬಹುಪಾಲು ಷೇರುಗಳು ನಷ್ಟದ ಹಾದಿ ಹಿಡಿದಿವೆ.

ಮುಂಬರುವ ದಿನಗಳಲ್ಲಿ ಪೇಟೆಯಲ್ಲಿನ ಕುಸಿತವು ಇನ್ನಷ್ಟು ಹೆಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಖರೀದಿ ಉತ್ಸಾಹ ಉಡುಗಿರುವುದಕ್ಕೆ ಹಲವಾರು ಕಾರಣಗಳಿವೆ. ಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳಲ್ಲಿನ ಸಾರ್ವಜನಿಕರ ಪಾಲು ಬಂಡವಾಳವನ್ನು ಶೇ 25ರಿಂದ ಶೇ 35ಕ್ಕೆ ಹೆಚ್ಚಿಸುವುದನ್ನು ಕಡ್ಡಾಯಗೊಳಿಸಿರುವುದು ಕಂಪನಿಗಳ ಪ್ರವರ್ತಕರು ಮತ್ತು ಆಡಳಿತ ಮಂಡಳಿಗಳಿಗೆ ಅಪಥ್ಯವಾಗಿದೆ. ಕಂಪನಿಗಳ ಷೇರು ಮರುಖರೀದಿ ಮೇಲೆ ಶೇ 20ರಷ್ಟು ತೆರಿಗೆ ವಿಧಿಸುವ, ದೇಶಿ ಸಿರಿವಂತರ ಮೇಲೆ ಸರ್ಚಾರ್ಜ್‌ ಹೆಚ್ಚಿಸುವ ಮತ್ತು ವಿದೇಶಿ ಹೂಡಿಕೆದಾರರ (ಎಫ್‌ಪಿಐ) ಮೇಲೆ ಬಂಡವಾಳ ಗಳಿಕೆ ತೆರಿಗೆ ಹೆಚ್ಚಿಸಲು ಬಜೆಟ್‌ನಲ್ಲಿ ಉದ್ದೇಶಿಸಿರುವುದು ಹೂಡಿಕೆದಾರರಲ್ಲಿ ತಲ್ಲಣ ಮೂಡಿಸಿದೆ. ಇವೆಲ್ಲವೂ ಒಟ್ಟಾಗಿ ಪೇಟೆಯ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಕಂಪನಿಗಳ ಪ್ರವರ್ತಕರು ತಮ್ಮ ಪಾಲು ಬಂಡವಾಳವನ್ನು ಕಡಿಮೆ ಮಾಡಲು ಷೇರು ನಿಯಂತ್ರಣ ಮಂಡಳಿಯು ಕಾಲಾವಕಾಶ ನೀಡಲಿದೆಯಾದರೂ ಸದ್ಯಕ್ಕಂತೂ ಹೂಡಿಕೆದಾರರು ಗಲಿಬಿಲಿಗೊಂಡಿದ್ದಾರೆ. ಈ ಪ್ರಸ್ತಾವವು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹೆಚ್ಚಾಗಿ ಅನ್ವಯವಾಗಲಿದೆ ಎಂದು ಹಣಕಾಸು ಸಚಿವಾಲಯ ವಿವರಣೆ ನೀಡಿದೆಯಾದರೂ ವಹಿವಾಟುದಾರರಿಗೆ ಅದು ಇನ್ನೂ ಮನವರಿಕೆ ಆದಂತಿಲ್ಲ.

ಗರಿಷ್ಠ ಸಂಪತ್ತು ಹೊಂದಿದವರ ಮೇಲೆ ಸರ್ಚಾರ್ಜ್‌ ಪ್ರಮಾಣ ಹೆಚ್ಚಿಸಿರುವುದು ವಿದೇಶಿ ಹೂಡಿಕೆದಾರರು ಭಾರತದ ಪೇಟೆಯಿಂದ ವಿಮುಖರಾಗಲು ಕಾರಣವಾಗಲಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆಗಿರುವ ಫೆಡರಲ್‌ ರಿಸರ್ವ್‌, ತನ್ನ ಬಡ್ಡಿ ದರ ಕಡಿತ ಮುಂದೂಡಿರುವುದು ಕೂಡ ಜಾಗತಿಕ ಷೇರುಪೇಟೆಗಳಲ್ಲಿ ನಿರುತ್ಸಾಹ ಮೂಡಿಸಿದೆ. ದೇಶಿ ಷೇರುಪೇಟೆ ಮೇಲೆ ಇದು ಸಹ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜಾಗತಿಕ ಪೇಟೆಗಳಲ್ಲಿನ ಹಲವಾರು ಅನಿಶ್ಚಿತತೆಗಳೂ ದೇಶಿ ಪೇಟೆಯ ಮೇಲೆ ಪ್ರಭಾವ ಬೀರುತ್ತಿವೆ. ಅದರ ಪರಿಣಾಮ ತಗ್ಗಿಸುವಂತಹ ಕ್ರಮಗಳನ್ನು ಕೈಗೊಳ್ಳಬಹುದಾಗಿತ್ತು. ಆದರೆ, ಅದು ಆಗಿಲ್ಲ. ವಿತ್ತೀಯ ಕೊರತೆಗೆ ಕಡಿವಾಣ ಹಾಕುವ ಆರ್ಥಿಕ ಶಿಸ್ತಿನ ಕ್ರಮಗಳು ಷೇರುಪೇಟೆಯ ನಿರೀಕ್ಷೆಗೆ ವ್ಯತಿರಿಕ್ತವಾಗಿವೆ.

ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕ ಚಟುವಟಿಕೆಗಳಿಗೆ ವೇಗ ತುಂಬಲು ಸರ್ಕಾರಿ ವೆಚ್ಚವನ್ನು ಹೆಚ್ಚಿಸಬಹುದು. ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವ ಬಂಡವಾಳ ಪೇಟೆಯ ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ಆರ್ಥಿಕ ಬೆಳವಣಿಗೆಗೆ ವೇಗ ನೀಡುವ, ಹೂಡಿಕೆಗೆ ಪೂರಕ ವಾತಾವರಣ ಕಲ್ಪಿಸುವ ಸುವರ್ಣಾವಕಾಶವನ್ನು ಸರ್ಕಾರ ಕಳೆದುಕೊಂಡಿದೆ. ಪೇಟೆಯ ಈ ಮಹಾಪತನದಲ್ಲಿ ಸಣ್ಣ ಹೂಡಿಕೆದಾರರೂ ನಷ್ಟಕ್ಕೆ ಗುರಿಯಾಗಿದ್ದಾರೆ. ಪೇಟೆಯಲ್ಲಿ ಮೂಡಿರುವ ಈ ಆತಂಕದ ಕಂಪನಗಳಿಗೆ ಕೊನೆ ಹಾಡಲು ಸರ್ಕಾರ ಮುಂದಾಗಬೇಕಾಗಿದೆ. ಷೇರುಪೇಟೆಯ ಪಾಲಿಗೆ ಮಾರಕವಾಗಿ ಪರಿಣಮಿಸಿರುವ ತೆರಿಗೆ ಪ್ರಸ್ತಾವಗಳ ಕಳವಳಕ್ಕೆ ಸೂಕ್ತವಾಗಿ ಸ್ಪಂದಿಸಿ ಹೂಡಿಕೆದಾರರ ಹಿತ ಕಾಯ್ದರೆ ಮಾತ್ರ ಪೇಟೆ ಚೇತರಿಸಿಕೊಂಡೀತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು