ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪಿಎಂಎಲ್‌ಎ ದುರ್ಬಳಕೆಗೆ ಕಡಿವಾಣ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ

Published 19 ಮೇ 2024, 23:30 IST
Last Updated 19 ಮೇ 2024, 23:30 IST
ಅಕ್ಷರ ಗಾತ್ರ

ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯನ್ನು ಅಸ್ತ್ರ ಮಾಡಿಕೊಂಡು ಜನರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ತಡೆಹಾಕಲಿದೆ.

ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಬಂಧಿಸುವ ವಿಚಾರದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಕ್ಕೆ ಮಿತಿ ಹೇರಿ ಸುಪ್ರೀಂ ಕೋರ್ಟ್‌ ಕಳೆದ ವಾರ ತೀರ್ಪು ನೀಡಿದೆ. ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳ ಸಾಲಿಗೆ ಪಿಎಂಎಲ್‌ಎ ಪ್ರಕರಣದ ಈ ತೀರ್ಪು ಕೂಡ ಸೇರುತ್ತದೆ. ಗಂಭೀರ ಸ್ವರೂಪದ ಅಪರಾಧಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ ಅಡಿಯಲ್ಲಿ ದಾಖಲಾಗುವ ದೂರನ್ನು ವಿಶೇಷ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದ ಬಳಿಕ ಆರೋಪಿಯನ್ನು ಇ.ಡಿ. ಬಂಧಿಸುವಂತಿಲ್ಲ, ಆರೋಪ ಎದುರಿಸುತ್ತಿರುವ ವ್ಯಕ್ತಿಯು ವಿಚಾರಣೆಗಾಗಿ ತನ್ನ ವಶಕ್ಕೆ ಬೇಕಿದ್ದರೆ ತನಿಖಾ ಸಂಸ್ಥೆಯು (ಇ.ಡಿ) ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಸಮನ್ಸ್‌ ಜಾರಿಗೊಳಿಸಿದ ಬಳಿಕ ಆರೋಪಿಯು ವಿಶೇಷ ನ್ಯಾಯಾಲಯದ ಎದುರು ಹಾಜರಾದರೆ ಆರೋಪಿಯು ವಶದಲ್ಲಿದ್ದಾನೆ ಎಂದು ಪರಿಗಣಿಸುವಂತಿಲ್ಲ ಹಾಗೂ ಆತನು ಜಾಮೀನು ಮಂಜೂರು ಮಾಡುವಂತೆ ಕೋರಿ ಅರ್ಜಿ ಸಲ್ಲಿಸುವ ಅಗತ್ಯವೂ ಇರುವುದಿಲ್ಲ. ವಿಚಾರಣೆಗಾಗಿ
ಆರೋಪಿಯು ತನ್ನ ವಶಕ್ಕೆ ಬೇಕಿದ್ದರೆ, ಇ.ಡಿ. ನಿರ್ದಿಷ್ಟವಾದ ಕಾರಣಗಳನ್ನು ಮುಂದಿಟ್ಟು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಮ್ಮೆ ವಿಚಾರಣೆಗೆ ಹಾಜರಾದ ಆರೋಪಿಗೆ ಮುಂದಿನ ದಿನಗಳಲ್ಲಿ ವಿಚಾರಣೆಗೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡುವ ಅಧಿಕಾರವೂ ವಿಶೇಷ ನ್ಯಾಯಾಲಯಕ್ಕೆ ಇದೆ ಎಂದೂ ಸುಪ್ರೀಂ ಕೋರ್ಟ್‌ ತಿಳಿಸಿದೆ.

ಜಾರಿ ನಿರ್ದೇಶನಾಲಯವು ಕಠಿಣವಾದ ಪಿಎಂಎಲ್‌ಎ ಬಳಸಿಕೊಂಡು ಜನರನ್ನು ಬಂಧಿಸಿ ದೀರ್ಘಕಾಲದವರೆಗೆ ಬಂಧನದಲ್ಲಿ ಇಡುವಂತಹ ಸ್ವೇಚ್ಛಾಚಾರದ ನಡೆಯನ್ನು ಅನುಸರಿಸುತ್ತಿರುವ ಕಾಲಘಟ್ಟದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಮಹತ್ವದ್ದಾಗಿದೆ. ಪಿಎಂಎಲ್‌ಎ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಬೇಕಾದರೆ ತಾನು ನಿರಪರಾಧಿ ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕು ಮತ್ತು ಜಾಮೀನಿನ ಮೇಲೆ ಹೊರಗಿರುವ ಅವಧಿಯಲ್ಲಿ ಪುನಃ ಅಂತಹ ಅಪರಾಧ ಕೃತ್ಯ ಎಸಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಈ ಎರಡು ಕಠಿಣ ಷರತ್ತುಗಳಿಂದಾಗಿ ಪಿಎಂಎಲ್‌ಎ ಪ್ರಕರಣಗಳಲ್ಲಿ ಆರೋಪಿಗಳು ಜಾಮೀನು ಪಡೆಯುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಪಿಎಂಎಲ್‌ಎ ಅಡಿಯಲ್ಲಿ ದಾಖಲಾಗುವ ಪ್ರಕರಣದಲ್ಲಿ ಆರೋಪಿಗಳು ಅಪರಾಧಿಗಳೆಂದು ಸಾಬೀತಾಗಿ, ಶಿಕ್ಷೆಯಾಗುವ ಪ್ರಮಾಣ ತೀರಾ ಕಡಿಮೆ ಇದೆ. ಈ ದೃಷ್ಟಿಯಿಂದ ಪಿಎಂಎಲ್‌ಎ ಬಳಸಿಕೊಂಡು ವ್ಯಕ್ತಿಗಳನ್ನು ಬಂಧಿಸುವುದು ಮತ್ತು
ವರ್ಷಗಟ್ಟಲೆ ಜಾಮೀನು ದೊರಕದಂತೆ ಮಾಡಿ, ಕಾರಾಗೃಹದಲ್ಲಿ ಇರಿಸುವುದು ಸರಿಯಲ್ಲ. ಇಂತಹ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಹಲವು ವ್ಯಕ್ತಿಗಳು ತಮ್ಮ ಜೀವನದ ಕೆಲವು ವರ್ಷಗಳನ್ನು ಜೈಲು ವಾಸದಲ್ಲೇ ವ್ಯರ್ಥ ಮಾಡಿಕೊಂಡಿದ್ದಾರೆ. ಈ ಐದು ವರ್ಷಗಳಲ್ಲಿ ತನ್ನ ಅಧಿಕಾರವನ್ನು ಎಗ್ಗಿಲ್ಲದೇ ಬಳಸಿರುವ ಇ.ಡಿ., ಬಂಧಿಸುವುದರಲ್ಲೇ ಖುಷಿ ಕಾಣುವ ಪ್ರವೃತ್ತಿಯನ್ನು ಪ್ರದರ್ಶಿಸಿದೆ. ದೆಹಲಿ ಮುಖ್ಯಮಂತ್ರಿಯಾಗಿರುವ ಎಎಪಿ ನಾಯಕ ಅರವಿಂದ ಕೇಜ್ರಿವಾಲ್‌ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಇ.ಡಿ. ನಡೆಸಿದ ಇಂತಹ ಕಾರ್ಯಾಚರಣೆಗಳ ಬಲಿಪಶುಗಳಾಗಿದ್ದಾರೆ. ಕೇಜ್ರಿವಾಲ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರೆ, ಇನ್ನೂ ಹಲವರು ಜೈಲುಗಳಲ್ಲೇ ಬಂದಿಯಾಗಿದ್ದಾರೆ. ನಿರಂತರವಾಗಿ ಜಾಮೀನು ನಿರಾಕರಿಸುತ್ತಿರುವುದರಿಂದ ಜೈಲಿನಿಂದ ಹೊರಬರಲು ಅವರಿಗೆ ಸಾಧ್ಯವಾಗುತ್ತಿಲ್ಲ.

ಆರೋಪಿಗಳನ್ನು ಬಂಧಿಸುವ ವಿಚಾರದಲ್ಲಿ ಇ.ಡಿ. ಹೊಂದಿದ್ದ ಅಧಿಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ಬಂಧ ವಿಧಿಸಿರುವುದು ಸ್ವಾಗತಾರ್ಹ. ನಾಗರಿಕನೊಬ್ಬನ ಬಂಧನವು ಆತನು ಸಂವಿಧಾನಾತ್ಮಕವಾಗಿ ಹೊಂದಿರುವ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಜತೆ ನಂಟು ಹೊಂದಿರುತ್ತದೆ. ಆದ್ದರಿಂದ ತನಿಖಾ ಸಂಸ್ಥೆಗಳು ಬಂಧನದ ಅಧಿಕಾರವನ್ನು ನ್ಯಾಯೋಚಿತವಾಗಿ ಬಳಸಬೇಕಾಗುತ್ತದೆ. ಯಾವುದೇ ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಸಕಾರಣವಿಲ್ಲದೆ ಒಂದು ದಿನದ ಮಟ್ಟಿಗೆ ನಿರ್ಬಂಧ ಹೇರುವುದು ಕೂಡ ತಪ್ಪು ಎಂದು ಬೇರೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆಗೆ ಕೈಗೆತ್ತಿಕೊಂಡ ನಂತರವೂ ಆ ಪ್ರಕರಣದ ಆರೋಪಿಯು ಜಾಮೀನು ಪಡೆಯಲು ಎರಡು ಕಠಿಣ ಷರತ್ತುಗಳನ್ನು ಪೂರೈಸಲೇಬೇಕೆ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್‌ ಈ ಪ್ರಕರಣದಲ್ಲಿ ಸ್ಪಷ್ಟ ಉತ್ತರ ನೀಡಿದೆ. ನ್ಯಾಯಾಲಯದಲ್ಲಿ ಪ್ರಕರಣವು ವಿಚಾರಣೆಗೆ ಅಂಗೀಕೃತವಾದ ಬಳಿಕ ಇ.ಡಿ. ಸ್ವೇಚ್ಛಾಚಾರದಿಂದ ಬಂಧಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಹಲವರನ್ನು ಬಂಧನದಿಂದ ಪಾರು ಮಾಡಲಿದೆ ಮತ್ತು ನಾಗರಿಕರ ಜೀವಿಸುವ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ರಕ್ಷಣೆ ಒದಗಿಸಲಿದೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯನ್ನು ಅಸ್ತ್ರ ಮಾಡಿಕೊಂಡು ಜನರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ತಡೆಹಾಕಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT