ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಚಿವ ಸೆಂಥಿಲ್‌ ವಜಾ ಆದೇಶ, ರಾಜ್ಯಪಾಲರ ನಡೆ ಆಘಾತಕಾರಿ

Published 2 ಜುಲೈ 2023, 19:35 IST
Last Updated 2 ಜುಲೈ 2023, 19:35 IST
ಅಕ್ಷರ ಗಾತ್ರ

ತಮಿಳುನಾಡಿನ ರಾಜ್ಯಪಾಲ ಆರ್‌.ಎನ್‌. ರವಿ ಅವರು ಸಚಿವ ಸೆಂಥಿಲ್‌ ಬಾಲಾಜಿ ಅವರನ್ನು ವಜಾ ಮಾಡಿರುವ ಆದೇಶವು ಸಂವಿಧಾನದ ಉಲ್ಲಂಘನೆ ಮತ್ತು ಆಘಾತಕಾರಿ. ಗುರುವಾರ ರಾತ್ರಿ ಆದೇಶ ಹೊರಡಿಸಿ ಕೆಲವೇ ತಾಸುಗಳಲ್ಲಿ ಅದನ್ನು ಹಿಂದಕ್ಕೆ ಪಡೆದಿದ್ದರೂ ವಿಷಯದ ಗಾಂಭೀರ್ಯ ಕಡಿಮೆ ಆಗುವುದಿಲ್ಲ. ರಾಜ್ಯಪಾಲರಿಗೆ ಇರುವ ಕಾರ್ಯಕಾರಿ ಅಧಿಕಾರದ ಕುರಿತು ವಿವರಣೆ ನೀಡುವ ಸಂವಿಧಾನದ 153, 163 ಮತ್ತು 164ನೇ ವಿಧಿಗಳನ್ನು ಉಲ್ಲೇಖಿಸಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಜಾರಿ ನಿರ್ದೇಶನಾಲಯದಿಂದ (ಇ.ಡಿ) ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸೆಂಥಿಲ್‌ ಅವರನ್ನು ವಜಾ ಮಾಡಬೇಕು ಎಂದು ಪತ್ರ ಬರೆದು ಈ ಹಿಂದೆ ತಿಳಿಸಲಾಗಿತ್ತು. ಹಾಗಿದ್ದರೂ ಮುಖ್ಯಮಂತ್ರಿ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸ್ವತಃ ತಾವೇ ಸಚಿವರನ್ನು ವಜಾ ಮಾಡಬೇಕಾಯಿತು ಎಂದು ರಾಜ್ಯಪಾಲರು ಪತ್ರದಲ್ಲಿ ಹೇಳಿದ್ದಾರೆ. ಕೇಂದ್ರ ಗೃಹ ಸಚಿವರ ಸಲಹೆಯಂತೆ ಈ ನಿರ್ಧಾರವನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂದು ಕೆಲವೇ ತಾಸುಗಳ ಬಳಿಕ ಬರೆದ ಮತ್ತೊಂದು ಪತ್ರದಲ್ಲಿ ರಾಜ್ಯಪಾಲರು ಹೇಳಿದ್ದಾರೆ. ಅಟಾರ್ನಿ ಜನರಲ್‌ ಅವರೊಂದಿಗೆ ಈ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದೂ ಹೇಳಿದ್ದಾರೆ. 

ಸಚಿವರನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂಬುದನ್ನು ತಿಳಿದುಕೊಳ್ಳಲು ಸಂವಿಧಾನದ ಆಳವಾದ ಜ್ಞಾನವೇನೂ ಬೇಕಾಗಿಲ್ಲ. ಮುಖ್ಯಮಂತ್ರಿಯ ಸಲಹೆಗೆ ಅನುಸಾರವಾಗಿ ರಾಜ್ಯಪಾಲರು ಸಚಿವರನ್ನು ನೇಮಿಸುತ್ತಾರೆ. ಸಚಿವರನ್ನು ವಜಾ ಮಾಡುವುದಕ್ಕೂ ಇದೇ ಮಾರ್ಗವನ್ನು ಅನುಸರಿಬೇಕು. ಪ್ರಜಾಪ್ರಭುತ್ವದ ಪ್ರಾಥಮಿಕ ನಿಯಮವನ್ನೇ ಉಲ್ಲಂಘಿಸಿ, ರಾಜ್ಯಪಾಲರು ಸಚಿವರನ್ನು ವಜಾ ಮಾಡಿದ್ದಾರೆ. ಸಂವಿಧಾನವನ್ನೇ ಬುಡಮೇಲು ಮಾಡಲು ಯತ್ನಿಸುವಂತಹ ನಡವಳಿಕೆ ಇದು. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಆಳ್ವಿಕೆ ನಡೆಸುವ ರಾಜ್ಯಗಳಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಅಸಹನೀಯ ಸಂಘರ್ಷಗಳಲ್ಲಿ ಯಾವ ತಪ್ಪನ್ನೂ ಕಾಣದ ಕೇಂದ್ರ ಗೃಹ ಸಚಿವಾಲಯಕ್ಕೆ ಕೂಡ ರಾಜ್ಯಪಾಲರ ಈ ನಡೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ನಿರ್ಧಾರವನ್ನು ಹಿಂದಕ್ಕೆ ಪಡೆಯದೆ, ಅಮಾನತಿನಲ್ಲಿ ಇರಿಸುವ ಮೂಲಕ ತಮ್ಮ ಮುಖ ಉಳಿಸಿಕೊಳ್ಳುವ ಕೆಲಸವನ್ನು ರಾಜ್ಯಪಾಲರು ಮಾಡಿದ್ದಾರೆ. ಆದರೆ, ತಾವು ಎಸಗಿರುವುದು ಪ್ರಮಾದ ಎಂಬುದರ ಅರಿವು ಅವರಿಗೆ ಆಗಿರುವಂತಿದೆ. ತಮ್ಮ ಆದೇಶವನ್ನು ನ್ಯಾಯಾಲಯವು ರದ್ದು ಮಾಡಬಹುದು ಎಂಬುದೇ ಅವರು ನಿರ್ಧಾರದಿಂದ ಹಿಂದಕ್ಕೆ ಸರಿಯಲು ಕಾರಣ ಆಗಿರಬಹುದು. 

ರಾಜ್ಯಪಾಲ ರವಿ ಅವರು ರಾಜ್ಯ ಸರ್ಕಾರದ ಜೊತೆಗೆ ಹಲವು ವಿಚಾರಗಳಲ್ಲಿ ಸಂಘರ್ಷ ನಡೆಸಿದ್ದಾರೆ. ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ಪ್ರಯತ್ನಿಸಿದ್ದಾರೆ. ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರ ಇಲ್ಲ ಮತ್ತು ಹೆಚ್ಚಿನ ವಿಚಾರಗಳಲ್ಲಿ ವಿವೇಚನಾಧಿಕಾರವೂ ಇಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ನ ಹತ್ತು ಹಲವು ತೀರ್ಪುಗಳಲ್ಲಿ ಹೇಳಲಾಗಿದೆ. ಸಂಶೇರ್‌ ಸಿಂಗ್‌ ಮತ್ತು ಪಂಜಾಬ್‌ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠವು 1974ರಲ್ಲಿ ಹೀಗೆ ಹೇಳಿತ್ತು: ‘ಕೆಲವೇ ಕೆಲವು ಅಸಾಧಾರಣ ಸಂದರ್ಭಗಳನ್ನು ಬಿಟ್ಟರೆ ಎಲ್ಲ ಸಂದರ್ಭಗಳಲ್ಲಿಯೂ ಮಂತ್ರಿ ಪರಿಷತ್‌ನ ಸಲಹೆಗೆ ಅನುಗುಣವಾಗಿಯೇ ರಾಜ್ಯಪಾಲರು ಕಾರ್ಯನಿರ್ವಹಿಸಬೇಕು’. ಸರ್ಕಾರದ ಜೊತೆಗೆ ರಾಜ್ಯಪಾಲರು ನಡೆಸಿದ ಸಂಘರ್ಷ ಮತ್ತು ಆಳ್ವಿಕೆಯಲ್ಲಿನ ಹಸ್ತಕ್ಷೇಪಕ್ಕೆ ಇದು ಇತ್ತೀಚಿನ ಉದಾಹರಣೆ. ಸಂವಿಧಾನವು ಹಾಕಿಕೊಟ್ಟ ಮಿತಿಯನ್ನು ಅವರು ಮೀರಿದ್ದಾರೆ. ಒಕ್ಕೂಟ ವ್ಯವಸ್ಥೆಗೆ ಗಂಭೀರವಾದ ಬೆದರಿಕೆಯಾಗಿದ್ದಾರೆ. ಸಮರ್ಥನೆ ಸಾಧ್ಯವೇ ಇಲ್ಲದ ಸ್ಥಿತಿಯನ್ನು ತಮಗೆ ತಾವೇ ತಂದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT