ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರದಲ್ಲಿ ಮಾರ್ಗಸೂಚಿ ಪಾಲನೆ ಉದ್ಯಮದ ಹೊಣೆಗಾರಿಕೆ ಹೆಚ್ಚು

Last Updated 4 ಫೆಬ್ರುವರಿ 2021, 20:20 IST
ಅಕ್ಷರ ಗಾತ್ರ

ಕನ್ನಡ ಚಲನಚಿತ್ರ ಉದ್ಯಮದ ಒತ್ತಾಯಕ್ಕೆ ಮಣಿದು ಚಿತ್ರಮಂದಿರಗಳಲ್ಲಿ ಶೇಕಡ 100ರಷ್ಟು ಆಸನಗಳ ಭರ್ತಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಇದು, ಅನಿವಾರ್ಯ ಆಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಜನರ ಸಂಚಾರ ಸಹಜ ಸ್ಥಿತಿಗೆ ಮರಳಿರುವಾಗ, ಚಿತ್ರಮಂದಿರಗಳಿಗೆ ಮಾತ್ರ ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಚಿತ್ರರಂಗದ ಪ್ರಮುಖರು ಹೇರಿದ ಒತ್ತಡ ಫಲ ನೀಡಿದೆ. ಚಿತ್ರಮಂದಿರ
ಗಳಲ್ಲಿ ಅರ್ಧದಷ್ಟು ಆಸನಗಳಿಗಷ್ಟೇ ಅವಕಾಶ ನೀಡಿದ್ದ ತನ್ನ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದ್ದು, ನಿರ್ಬಂಧಗಳು ತೆರವುಗೊಂಡಿರುವ ಬಗ್ಗೆ ಚಿತ್ರೋದ್ಯಮ ಸಂತೋಷ ವ್ಯಕ್ತಪಡಿಸಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಮಾರ್ಚ್‌ನಲ್ಲಿ ಕಾರ್ಯನಿರ್ವಹಣೆ ನಿಲ್ಲಿಸಿದ್ದ ಚಿತ್ರಮಂದಿರಗಳಿಗೆ, ಕಳೆದ ಅ. 15ರಿಂದ ಶೇ 50ರಷ್ಟು ಆಸನಗಳೊಂದಿಗೆ ಸಿನಿಮಾ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸರ್ಕಾರದ ಮಾರ್ಗಸೂಚಿಯೊಂದಿಗೆ ಶೇ 50ರಷ್ಟು ಪ್ರೇಕ್ಷಕರಿಗಷ್ಟೇ ಸಿನಿಮಾ ಪ್ರದರ್ಶಿಸುವುದು ಲಾಭಕರವಲ್ಲ ಎನ್ನುವ ಕಾರಣದಿಂದಾಗಿ ರಾಜ್ಯದಲ್ಲಿನ ಹಲವು ಚಿತ್ರಮಂದಿರಗಳು ಪ್ರದರ್ಶನ ಆರಂಭಿಸಿರಲೇ ಇಲ್ಲ. ದೊಡ್ಡ ಬಜೆಟ್‌ನ ಜನಪ್ರಿಯ ನಟರ ಸಿನಿಮಾಗಳು ಕೂಡ ತೆರೆಕಾಣುವ ದಿನವನ್ನು ಮುಂದೂಡುತ್ತಲೇ ಬಂದಿದ್ದವು. ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ ಮೂಲಕ ಚಿತ್ರೋದ್ಯಮದ ಪುನಶ್ಚೇತನಕ್ಕೆ ಸರ್ಕಾರ ಅನುವು ಮಾಡಿಕೊಡಬೇಕು ಎಂದು ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಒತ್ತಾಯಿಸುತ್ತಲೇ ಇದ್ದರು. ಅವರ ಮನವಿಗೆ ಈಗ ಫಲ ದೊರೆತಿದೆ. ಸಿನಿಮಾ ಪ್ರದರ್ಶನಗಳ ಜೊತೆಗೆ ಚಿತ್ರೋದ್ಯಮದ ಚಟುವಟಿಕೆಗಳೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿರುವುದು ಕಾರ್ಮಿಕರ ಹಿತದೃಷ್ಟಿಯಿಂದ ಅಗತ್ಯವಾಗಿತ್ತು.

ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ದೊರೆತಿರುವುದನ್ನು ಸ್ವಾಗತಿಸಿರುವ ಚಿತ್ರರಂಗವು ತನ್ನ ಬೇಡಿಕೆ ಈಡೇರಿರುವುದನ್ನು ಸಂಭ್ರಮವೆಂದು ತಿಳಿಯದೆ ಜವಾಬ್ದಾರಿಯೆಂದು ಭಾವಿಸಬೇಕಾಗಿದೆ. ಆಸನ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ನಿರ್ಬಂಧ ತೆರವುಗೊಳ್ಳುವ ಮೂಲಕ ಚಿತ್ರೋದ್ಯಮದ ಮೇಲಿನ ಹೊಣೆಗಾರಿಕೆ ಹೆಚ್ಚಾಗಿದೆ. ತಾರಾ ವರ್ಚಸ್ಸಿನ ಜನಪ್ರಿಯ ನಟರ ಸಿನಿಮಾಗಳು ಮಾರ್ಚ್‌ ತಿಂಗಳಲ್ಲಿ ತೆರೆಕಾಣಲು ಸಿದ್ಧತೆ ನಡೆಸಿದ್ದು, ಆ ಚಿತ್ರಗಳು ಪ್ರೇಕ್ಷಕರನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುವ ನಿರೀಕ್ಷೆಯಿದೆ. ಕೊರೊನಾ ಸೋಂಕು ಇನ್ನೂ ಸಕ್ರಿಯವಾಗಿರುವ ಸಂದರ್ಭದಲ್ಲಿ, ಜನಸಮೂಹವನ್ನು ಸಮರ್ಪಕವಾಗಿ ನಿಯಂತ್ರಿಸುವ ಸವಾಲನ್ನು ಚಿತ್ರಮಂದಿರಗಳು ಹಾಗೂ ಚಿತ್ರೋದ್ಯಮ ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಸಾರ್ವಜನಿಕ ಸಾರಿಗೆ, ಪ್ರವಾಸಿ ಸ್ಥಳ, ಮಾರುಕಟ್ಟೆಗಳಲ್ಲಿ ಜನಜಂಗುಳಿ ತುಂಬಿರುವಾಗ ಚಿತ್ರಮಂದಿರಗಳಿಗೆ ಮಾತ್ರ ನಿರ್ಬಂಧವೇಕೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದ ಸಿನಿಮಾ ನಟರು, ಈಗ ತಮ್ಮ ಸಿನಿಮಾಗಳಿಗೆ ಮುಗಿಬೀಳಬಹುದಾದ ಅಭಿಮಾನಿಗಳನ್ನು ನಿಯಂತ್ರಿಸಬೇಕಾದ ನೈತಿಕ ಜವಾಬ್ದಾರಿಯನ್ನು
ಪ್ರದರ್ಶಿಸಬೇಕಾಗಿದೆ. ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಿದ್ದ ಕ್ರಮದಿಂದ ಕೆಲವು ಸಿನಿಮಾಗಳಿಗೆ ತೊಂದರೆಯೇನೂ ಆಗಿರಲಿಲ್ಲ. ಏಕೆಂದರೆ, ತಾರಾ ವರ್ಚಸ್ಸಿನ ನಟರ ಸಿನಿಮಾಗಳ ಹೊರತು ಉಳಿದ ಸಂದರ್ಭಗಳಲ್ಲಿ ಚಿತ್ರಮಂದಿರಗಳು ತುಂಬುವುದು ವಿರಳ. ‘ಹೌಸ್‌ಫುಲ್‌ ಪ್ರದರ್ಶನ’ಗಳ ಹೆಚ್ಚಿನ ಅಗತ್ಯವಿರುವುದು ದೊಡ್ಡ ಬಜೆಟ್‌ನ ಸಿನಿಮಾಗಳ ನಿರ್ಮಾಪಕರು ಮತ್ತು ಕಲಾವಿದರಿಗೆ. ಹಾಗಾಗಿ ಸಿನಿಮಾ ಪ್ರದರ್ಶನ ಸಂದರ್ಭದಲ್ಲಿ ಕೋವಿಡ್‌ ಮಾರ್ಗಸೂಚಿ ಚಾಚೂ ತಪ್ಪದಂತೆ ನೋಡಿಕೊಳ್ಳುವಲ್ಲಿ ಅವರ ಜವಾಬ್ದಾರಿ ಹೆಚ್ಚು. ಗಾಳಿಬೆಳಕಿಗೆ ತೆರೆದುಕೊಂಡಿರುವ ಇತರೆ ಸಾರ್ವಜನಿಕ ಸ್ಥಳಗಳಿಗಿಂತಲೂ ಸುಮಾರು ಮೂರು ತಾಸುಗಳ ಕಾಲ ಹವಾನಿಯಂತ್ರಿತ ವಾತಾವರಣದಲ್ಲಿ ಸಿನಿಮಾ ಪ್ರದರ್ಶಿಸುವ ಚಿತ್ರಮಂದಿರಗಳು ಭಿನ್ನವಾಗಿ ನಿಲ್ಲುತ್ತವೆ.ಕೋವಿಡ್‌ಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯನ್ನು ಯಾವುದೇ ಲೋಪಕ್ಕೆ ಅವಕಾಶವಿಲ್ಲದೆಚಿತ್ರಮಂದಿರಗಳಲ್ಲಿ ಜಾರಿಗೆ ತರಬೇಕಾಗಿದೆ. ಕೊರೊನಾಗೆ ಮುನ್ನ ಕೂಡ ಚಿತ್ರಮಂದಿರಗಳಲ್ಲಿನ ಸ್ವಚ್ಛತೆ–ಅವ್ಯವಸ್ಥೆಯ ಬಗ್ಗೆ ದೂರುಗಳಿದ್ದವು. ಅಂಥ ನಿರ್ಲಕ್ಷ್ಯಕ್ಕೆ ಈಗ ಅವಕಾಶವಿಲ್ಲ. ಶೇ 100ರಷ್ಟು ಆಸನಗಳ ಭರ್ತಿಗೆ ನೀಡಿರುವ ಅನುಮತಿ ಸದ್ಯಕ್ಕೆ ನಾಲ್ಕು ವಾರಗಳವರೆಗೆ ಮಾತ್ರ ಜಾರಿಯಲ್ಲಿರಲಿದೆ. ಆ ಅವಕಾಶ ಮುಂದುವರಿಯುವಂತೆ ನೋಡಿಕೊಳ್ಳುವುದು ಚಿತ್ರೋದ್ಯಮದ ಕೈಯಲ್ಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT