ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರಧಾನ್ಯಗಳ ಕೊಳೆಯುವಿಕೆ ವ್ಯವಸ್ಥೆಯ ವೈಫಲ್ಯದ ದ್ಯೋತಕ

Last Updated 6 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಗೋದಾಮುಗಳಲ್ಲಿ ಅಪಾರ ಪ್ರಮಾಣದ ಆಹಾರಧಾನ್ಯಗಳು ಕೊಳೆಯುತ್ತಿರುವುದು, ನಮ್ಮ ಪಡಿತರ ವ್ಯವಸ್ಥೆಯಲ್ಲಿನ ಲೋಪಗಳಿಗೆ ಹೊಸ ಉದಾಹರಣೆಯಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸಲು ಈ ಆಹಾರಧಾನ್ಯಗಳನ್ನು ಸಂಗ್ರಹಿಸಲಾಗಿತ್ತು. ಮಕ್ಕಳಿಗೆ ವಿತರಣೆಯಾಗದೆ, ಅಗತ್ಯವಿದ್ದವರಿಗೂ ದೊರೆಯದೆ ಕೊಳೆಯುತ್ತಿರುವ ಧಾನ್ಯಗಳಲ್ಲಿ 43,258 ಟನ್‌ ಅಕ್ಕಿ, 1,716 ಟನ್‌ ಗೋಧಿ ಹಾಗೂ 12,046 ಟನ್ ತೊಗರಿಬೇಳೆ ಸೇರಿವೆ. ವ್ಯತಿರಿಕ್ತ ವಾತಾವರಣದ ಪರಿಣಾಮದಿಂದಾಗಿ ಈ ಆಹಾರಧಾನ್ಯಗಳು ಬಳಸಲು ಯೋಗ್ಯವಿಲ್ಲದಷ್ಟು ಹಾಳಾಗಿವೆ ಎಂದು ವರದಿಯಾಗಿದೆ. ಶಾಲಾಮಕ್ಕಳ ಹೊಟ್ಟೆ ತುಂಬಿಸಬೇಕಿದ್ದ ಆಹಾರಧಾನ್ಯಗಳು, ಅಧಿಕಾರಿಗಳ ನಡುವಿನ ಸಂವಹನದ ಗೊಂದಲದಿಂದಾಗಿ ವ್ಯರ್ಥವಾಗಿವೆ. ಕೊರೊನಾ ಕಾರಣದಿಂದಾಗಿ ಜನಸಾಮಾನ್ಯರ ಬದುಕು ಬಿಕ್ಕಟ್ಟಿನಲ್ಲಿರುವಾಗ ಹಾಗೂ ದಿನಸಿ ವಸ್ತುಗಳ ಬೆಲೆ ಏರಿಕೆಯಾಗಿರುವಾಗ, ಅಪಾರ ಪ್ರಮಾಣದ ಆಹಾರಧಾನ್ಯ ಕೊಳೆಯಲು ಬಿಡುವುದು ಮಾನವೀಯತೆಯ ಅಣಕದಂತಿದೆ. ಒಂದೆಡೆ ಗೋದಾಮುಗಳಲ್ಲಿ ಲಕ್ಷ ಲಕ್ಷ ಟನ್‌ ಆಹಾರ ಧಾನ್ಯಗಳು ಕೊಳೆಯುತ್ತಿದ್ದರೆ, ಇನ್ನೊಂದೆಡೆ ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವುದು ಭಾರತೀಯ ಸಮಾಜದಲ್ಲಿನ ವೈರುಧ್ಯವನ್ನು ಸೂಚಿಸುವಂತಿದೆ. ಕನ್ಸರ್ನ್‌ ವರ್ಲ್ಡ್‌ವೈಡ್ ಮತ್ತು ವೆಲ್ಟ್‌ಹಂಗರ್‌ಹಿಲ್ಫ್‌ ಸಂಸ್ಥೆಗಳು ಸಿದ್ಧಪಡಿಸಿರುವ ಜಾಗತಿಕ ಹಸಿವಿನ ಸೂಚ್ಯಂಕ– 2020ರ ಪಟ್ಟಿಯಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ಶೇ 14ರಷ್ಟು ಭಾರತೀಯರು ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳಿದೆ.

ಆಹಾರಧಾನ್ಯಗಳು ಮಣ್ಣುಪಾಲಾಗುವುದನ್ನು ನೋಡಿದರೆ, ಗೋದಾಮುಗಳಲ್ಲಿನ ಧಾನ್ಯಗಳನ್ನು ಇಲಿ–ಹೆಗ್ಗಣಗಳು ತಿನ್ನಲಾದರೂ ಬಿಟ್ಟೇವು, ಜನರಿಗೆ ವಿತರಿಸುವುದಿಲ್ಲ ಎನ್ನುವ ಮನೋಭಾವವನ್ನು ಅಧಿಕಾರಿವರ್ಗ ರೂಢಿಸಿಕೊಂಡಂತಿದೆ. ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದಾಗ, ಲಕ್ಷಾಂತರ ವಲಸೆ ಕಾರ್ಮಿಕರು ಹಸಿವಿನಿಂದ ಒದ್ದಾಡುತ್ತಿದ್ದ ವರದಿಗಳು ಮಾಧ್ಯಮ
ಗಳಲ್ಲಿ ಪ್ರಕಟವಾಗಿದ್ದವು. ಅದೇ ಸಮಯದಲ್ಲಿ, ಸುಮಾರು 8 ಕೋಟಿ ಟನ್‌ ಆಹಾರಧಾನ್ಯಗಳು ಗೋದಾಮುಗಳಲ್ಲಿ ಕೊಳೆಯುವ ಸ್ಥಿತಿಯಲ್ಲಿದ್ದವು ಹಾಗೂ ಕೊಳೆಯುತ್ತಿದ್ದ ಅಕ್ಕಿಯಿಂದ ಸ್ಯಾನಿಟೈಸರ್‌ ತಯಾರಿಸಬೇಕೆನ್ನುವ ಚಿಂತನೆ ವ್ಯಕ್ತವಾಗಿತ್ತು. ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಪ್ರತಿವರ್ಷ ಸುಮಾರು ಮೂರು ಸಾವಿರ ಟನ್‌ಗೂ ಹೆಚ್ಚಿನ ಆಹಾರಧಾನ್ಯಗಳು ಹಾಳಾಗುತ್ತಿರುವುದನ್ನು
ಕೇಂದ್ರ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಕಳೆದ ಮಾರ್ಚ್‌ನಲ್ಲಿ ಲೋಕಸಭೆಯ ಗಮನಕ್ಕೆ ತಂದಿತ್ತು. ಗೋದಾಮುಗಳು ವೈಜ್ಞಾನಿಕವಾಗಿ ಸಜ್ಜು ಗೊಂಡಿಲ್ಲದಿರುವುದೇ ಆಹಾರಧಾನ್ಯಗಳು ಹಾಳಾಗಲು ಪ್ರಮುಖ ಕಾರಣ. ಕೀಟಗಳ ಬಾಧೆಯ ಜೊತೆಗೆ ಮಳೆ ಹಾಗೂ ತೇವಾಂಶದ ವಾತಾವರಣ ಕೂಡ ಆಹಾರಧಾನ್ಯಗಳ ಮೇಲೆ ಪರಿಣಾಮ ಬೀರುತ್ತಿವೆ. ಕೆಲವು ಗೋದಾಮುಗಳು ಮಳೆ ಬಂದಾಗ ಸೋರುತ್ತವೆ. ಆಹಾರಧಾನ್ಯಗಳ ಅಸಮರ್ಪಕ ಸಂಗ್ರಹದ ಜೊತೆಗೆ ವಿತರಣಾ ವ್ಯವಸ್ಥೆಯಲ್ಲಿನ ದೋಷಗಳೂ ಸೇರಿಕೊಂಡು, ಸಾರ್ವಜನಿಕ ಪಡಿತರ ವ್ಯವಸ್ಥೆಯ ಯೋಜನೆಗಳು ಅರ್ಹರನ್ನು ತಲುಪುವಲ್ಲಿ ವಿಫಲವಾಗಿವೆ. ಶ್ರೀಮಂತವರ್ಗ ಸೇವಿಸುವ ಆಹಾರದಲ್ಲಿ ಐದನೇ ಒಂದು ಪಾಲು ಪೋಲಾಗುತ್ತಿರುವುದು ಕೂಡ ಆಹಾರದ ಬಿಕ್ಕಟ್ಟಿಗೆ ಕಾರಣವಾಗಿದೆ. ಎಲ್ಲರಿಗೂ ಆಹಾರ ಮತ್ತು ಆರೋಗ್ಯ ಖಾತರಿಪಡಿಸುವುದು ಸರ್ಕಾರಗಳ ಆದ್ಯತೆಯಾಗಬೇಕು. ಹಸಿವುಮುಕ್ತ ಭಾರತದ ಘೋಷಣೆ ಮಾತಿನ ರೂಪದಿಂದ ಕಾರ್ಯರೂಪಕ್ಕೆ ಬರಬೇಕು. ಆಹಾರಧಾನ್ಯಗಳ ಸಂಗ್ರಹ ಸಮೃದ್ಧವಾಗಿರುವ ಸಂದರ್ಭದಲ್ಲಿ ಹಸಿವು ಮತ್ತು ಅಪೌಷ್ಟಿಕತೆಯ ಪ್ರಕರಣಗಳು ವರದಿಯಾಗುವುದು ನಾಚಿಕೆಗೇಡು. ಆಹಾರಧಾನ್ಯಗಳ ಸಮರ್ಪಕ ಸಂಗ್ರಹ ಮತ್ತು ವಿತರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನು ಮುಂದಾದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗೋದಾಮುಗಳನ್ನು ಬಲಪಡಿಸುವುದು ಹಾಗೂ ಅವುಗಳನ್ನು ಇಲಿ– ಹೆಗ್ಗಣಗಳಿಂದ ಮುಕ್ತವಾಗಿಡುವುದರ ಜೊತೆಗೆ, ಆಹಾರಧಾನ್ಯಗಳನ್ನು ಕೊಳೆಯಲು ಬಿಡುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT