ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರೈತರಿಗೆ ಸಕಾಲಕ್ಕೆ ರಸಗೊಬ್ಬರ ದೊರೆಯುವಂತೆ ನೋಡಿಕೊಳ್ಳಿ..

Last Updated 1 ನವೆಂಬರ್ 2021, 22:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಚುರುಕಾಗಿರುವ ವರದಿಗಳ ಬೆನ್ನಲ್ಲೇ ಡಿಎಪಿ, ಯೂರಿಯಾ ರಸಗೊಬ್ಬರಗಳ ಕೊರತೆಯೂ ಕಾಣಿಸಿಕೊಂಡಿದೆ. ಮಳೆಯೊಡನೆ ಜೂಜಾಡುತ್ತಾ ಸದಾ ಆತಂಕದಲ್ಲಿರುವ ರೈತರಿಗೆ, ಗೊಬ್ಬರ ಪೂರೈಕೆಗೆ ಸಂಬಂಧಿಸಿದಂತೆಸರ್ಕಾರದ ಅಸಮರ್ಪಕ ನೀತಿಯಿಂದ ಉಂಟಾಗುವ ಕೃತಕ ಅಭಾವವೂ ಸಂಕಟವನ್ನು ಹೆಚ್ಚಿಸುತ್ತಿದೆ. ಕಳೆದ ವರ್ಷವೂ ಹಿಂಗಾರು ಹಂಗಾಮಿನ ಹೊತ್ತಿಗೆ ರಸಗೊಬ್ಬರಕ್ಕಾಗಿ ರೈತರ ಕೂಗು ಮುಗಿಲು ಮುಟ್ಟಿತ್ತು.

ಈಗ ಈ ಹಂಗಾಮಿನಲ್ಲೂ ರಸಗೊಬ್ಬರ ಮಾರಾಟದ ಮಳಿಗೆಗಳ ಮುಂದೆ ರೈತರ ಉದ್ದನೆಯ ಸಾಲು ಕಾಣಿಸಿಕೊಂಡಿದೆ. ಬಾಗಲಕೋಟೆ, ಉತ್ತರ ಕನ್ನಡ, ಚಿಕ್ಕಮಗಳೂರು, ರಾಮನಗರ, ರಾಯಚೂರು, ಚಾಮರಾಜನಗರ, ಮಂಡ್ಯ, ಕಲಬುರಗಿ, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ಬೇಡಿಕೆಗೆ ತಕ್ಕಂತೆ ರಸಗೊಬ್ಬರದ ಪೂರೈಕೆ ನಡೆದಿಲ್ಲ ಎಂದು ರೈತರು ದೂರುತ್ತಿದ್ದಾರೆ. ಡಿಎಪಿ ರಸಗೊಬ್ಬರದ ಕೊರತೆ ತೀವ್ರವಾಗಿರುವ ಕಡೆಗಳಲ್ಲಿ ಪರ್ಯಾಯವಾಗಿ ಕಾಂಪ್ಲೆಕ್ಸ್ ರಸಗೊಬ್ಬರ ಬಳಸುವಂತೆ ಸರ್ಕಾರಿ ಅಧಿಕಾರಿಗಳೇ ರೈತರ ಮನ ಒಲಿಸುತ್ತಿರುವುದು ವರದಿಯಾಗಿದೆ.

ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಳೆದ ತಿಂಗಳು ರಸಗೊಬ್ಬರ ಕೊರತೆಯನ್ನು ಪ್ರತಿಭಟಿಸಿ ರೈತರು ಗೊಬ್ಬರ ಮಳಿಗೆಗಳ ಎದುರು ಜಮಾಯಿಸಿ ಕೂಗಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಆಡಳಿತವನ್ನು ಚುರುಕುಗೊಳಿಸಿ ರೈತರಿಗೆ ಯಾವ ಆತಂಕವೂ ಇಲ್ಲದೆ ಸಕಾಲದಲ್ಲಿ ರಸಗೊಬ್ಬರ ದೊರಕಿಸುವುದು ಸರ್ಕಾರವೊಂದು ಮಾಡಬೇಕಾದ ಪ್ರಾಥಮಿಕ ಕರ್ತವ್ಯ. ಕೃಷಿ ಇಲಾಖೆಗೆ ಇಂತಹ ರೈತನಿಷ್ಠ ಕಾರ್ಯಕ್ರಮಗಳನ್ನು ಬಿಟ್ಟರೆ ಬೇರೆ ಯಾವ ಘನಂದಾರಿ ಕೆಲಸವಿದೆ? ಇಲಾಖೆ ಈ ಕೆಲಸವನ್ನೂ ನೆಟ್ಟಗೆ ನಿರ್ವಹಿಸದೆ ಪ್ರತೀ ಹಂಗಾಮಿನಲ್ಲೂ ಹೀಗೆ ರೈತರ ಆತಂಕವನ್ನು ಹೆಚ್ಚಿಸುವುದು ಎಳ್ಳಷ್ಟೂ ಸರಿಯಲ್ಲ. ಹೊಲ–ಗದ್ದೆಯ ಕೆಲಸಗಳನ್ನು ಬಿಟ್ಟು ರೈತರು ಗೊಬ್ಬರದ ಅಂಗಡಿಯ ಮುಂದೆ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವುದು ಸರ್ಕಾರಕ್ಕೆ ಶೋಭೆ ತರುವ ಸಂಗತಿಯೂ ಅಲ್ಲ.

ಕೇಂದ್ರ ಸರ್ಕಾರದಲ್ಲಿ ಈಗ ರಾಜ್ಯದವರೇ ಆದ ಭಗವಂತ ಖೂಬಾ ಅವರು ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಕೇಂದ್ರ ಸರ್ಕಾರದ ರಸಗೊಬ್ಬರ ಇಲಾಖೆಯ ವೆಬ್‌ಸೈಟ್ ಗಮನಿಸಿದರೆ, ಬೇಡಿಕೆಗಿಂತ ಹೆಚ್ಚು ದಾಸ್ತಾನು ಇದೆ ಎಂಬ ಅಂಕಿ ಅಂಶಗಳು ಕಾಣಸಿಗುತ್ತಿವೆ. ಅಕ್ಟೋಬರ್ ಅಂತ್ಯಕ್ಕೆ ಯೂರಿಯಾದ ಬೇಡಿಕೆ 1.21 ಲಕ್ಷ ಟನ್ ಇದ್ದರೆ, ದಾಸ್ತಾನು 3.69 ಲಕ್ಷ ಟನ್ ಇದೆ. ಡಿಎಪಿ ಕೂಡಾ ಬೇಡಿಕೆಗಿಂತ ಎರಡು ಪಟ್ಟು ಹೆಚ್ಚು ದಾಸ್ತಾನು ಇದೆ. ‘ಕರ್ನಾಟಕದಲ್ಲಿ ರಸಗೊಬ್ಬರದ ಕೊರತೆಯೇ ಇಲ್ಲ. ಬೇಡಿಕೆಗಿಂತ ಹೆಚ್ಚು ದಾಸ್ತಾನು ಇದೆ’ ಎಂದು ಸಚಿವ ಖೂಬಾ ಇತ್ತೀಚೆಗೆ ಹೇಳಿದ್ದಾರೆ. ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರೂ ಇದೇ ಮಾತನ್ನು ಹೇಳಿದ್ದಾರೆ. ಹಾಗಿದ್ದೂ ಈ ದಾಸ್ತಾನು ರೈತರಿಗೆ ಸಕಾಲಕ್ಕೆ ಸುಲಭದಲ್ಲಿ ಏಕೆ ಸಿಗುತ್ತಿಲ್ಲ? ಅವರೇಕೆ ಮಳಿಗೆಗಳ ಮುಂದೆ ಇಡೀ ದಿನ ಕಾದು ನಿಲ್ಲಬೇಕು? ಅಧಿಕಾರಿಗಳೇಕೆ ರೈತರನ್ನು ಕಾಂಪ್ಲೆಕ್ಸ್ ಗೊಬ್ಬರ ಖರೀದಿಸುವಂತೆ ಪುಸಲಾಯಿಸಬೇಕು? ಪೂರೈಕೆಯ ಕೊಂಡಿ ಎಲ್ಲಿ ಏರುಪೇರಾಗುತ್ತಿದೆ?

ರೈತರ ಶೋಷಣೆಗೆ ಹಲವು ಮುಖಗಳಿವೆ. ಕೆಲವು ಕಂಪನಿಗಳು ತಮ್ಮಲ್ಲಿನ ಉಳಿಕೆ ಗೊಬ್ಬರಗಳನ್ನು ‘ಲಿಂಕ್ ಖರೀದಿ’ ವಿಧಾನದಡಿ ಮಾರಾಟ ನಡೆಸಿದ ಬಗ್ಗೆ ಕಳೆದ ಹಂಗಾಮಿನಲ್ಲಿ ಹಾನಗಲ್‌ ಭಾಗದಿಂದ ದೂರು ಕೇಳಿಬಂದಿತ್ತು. ರೈತರು ಒಂದು ಮೂಟೆ ಯೂರಿಯಾ ಬೇಕೆಂದರೆ ಕಡ್ಡಾಯವಾಗಿ ಡಿಎಪಿ ಅಥವಾ ಇತರ ಗೊಬ್ಬರ ಖರೀದಿಸಬೇಕು ಎಂದು ಷರತ್ತು ವಿಧಿಸಲಾಗುತ್ತಿತ್ತು. ಇನ್ನು ಹಲವೆಡೆ, ಆಧಾರ್ ಪರಿಗಣಿಸಿ ಒಬ್ಬರಿಗೆ ಇಂತಿಷ್ಟು ಕೆ.ಜಿ. ಗೊಬ್ಬರ ಎಂಬ ನಿಯಮವನ್ನು ದುರುಪಯೋಗ ಪಡಿಸಿಕೊಂಡು, ರಸಗೊಬ್ಬರ ಬೇಕಾಗಿಲ್ಲದ ರೈತರ ಆಧಾರ್ ಪಡೆದು ಮಧ್ಯವರ್ತಿಗಳು ಖರೀದಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದೂ ನಡೆದಿದೆ. ಅಫಜಲಪುರ ತಾಲ್ಲೂಕಿನಲ್ಲಿ ರಸಗೊಬ್ಬರವನ್ನು ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ದೂರುಗಳಿವೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿರಸಗೊಬ್ಬರ ಸಕಾಲಕ್ಕೆ ಸಿಗದೆ ಸಣ್ಣ ಪ್ರಮಾಣದ ಕಾಫಿ ಬೆಳೆಗಾರರು ಪರದಾಡುತ್ತಿ ದ್ದಾರೆ.

ಸರ್ಕಾರದ ಪೂರೈಕೆ ಜಾಲ ಸರಿಯಾಗಿ ಕಾರ್ಯ ನಿರ್ವಹಿಸಿದರೆ ಈ ರೀತಿಯ ಶೋಷಣೆಗೆ ಅವಕಾಶ ಇರುವುದಿಲ್ಲ. ಈ ಅವ್ಯವಸ್ಥೆಯನ್ನು ಸರಿಪಡಿಸುವತ್ತ ಸರ್ಕಾರ ತುರ್ತು ಗಮನ ಹರಿಸಬೇಕಿದೆ. ಅಧಿಕಾರಿಗಳ ಸಭೆ ಕರೆದು ಆಡಳಿತಕ್ಕೆ ಚುರುಕು ನೀಡಬೇಕಿದೆ. ಮಧ್ಯವರ್ತಿಗಳು ಕೃತಕ ಅಭಾವ ಸೃಷ್ಟಿಸುತ್ತಿದ್ದರೆ ಅಧಿಕಾರಿಗಳು ಅವರನ್ನೂ ಮಟ್ಟ ಹಾಕಿ ರೈತರ ಆತಂಕವನ್ನು ತಗ್ಗಿಸಬೇಕಿದೆ. ಮಳೆ, ಬೆಳೆಯ ಹಂಗಾಮು ಸರ್ಕಾರದ ಸೋಂಬೇರಿತನವನ್ನು ಕಾದು ಕುಳಿತುಕೊಳ್ಳುವುದಿಲ್ಲ. ಗೋದಾಮಿನಲ್ಲಿ ದಾಸ್ತಾನು ಇದ್ದರೆ ಸಾಲದು, ಅಗತ್ಯವಿರುವ ರೈತರಿಗೆ ಅದು ಸಕಾಲದಲ್ಲಿ ದೊರೆತರೆ ಮಾತ್ರ ಕೃಷಿ ಕೈಹಿಡಿಯುತ್ತದೆ. ರಸಗೊಬ್ಬರದ ಬೆಲೆ ಏರುವುದನ್ನಂತೂ ತಡೆಯಲಾಗುತ್ತಿಲ್ಲ. ಕನಿಷ್ಠಪಕ್ಷ ರಸಗೊಬ್ಬರ ಸಕಾಲಕ್ಕೆ ಮತ್ತು ಸುಲಭವಾಗಿ ರೈತರಿಗೆ ತಲುಪುವಂತಾದರೂ ನೋಡಿಕೊಳ್ಳಬೇಕಾದುದು ಸರ್ಕಾರದ ಆದ್ಯ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT