ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸರ್ಕಾರಿ ನೌಕರರ ವರ್ಗಾವಣೆ ಸಚಿವರಿಗೆ ಅಧಿಕಾರ ಸೂಕ್ತವಲ್ಲ

Last Updated 9 ಜುಲೈ 2021, 19:31 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಆದೇಶ ಹೊರಬಿದ್ದಿದೆ. ವರ್ಗಾವಣೆ ಅಧಿಕಾರವನ್ನು ಸಂಬಂಧಪಟ್ಟ ಇಲಾಖೆಗಳ ಸಚಿವರಿಗೆ ನೀಡಲಾಗಿದೆ. ಇದೊಂದು ವಿವೇಚನಾರಹಿತ ಕ್ರಮ. 2013ರಲ್ಲಿ ಹೊರಡಿಸಲಾದ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆಯೂ ಹೌದು. ಈ ಮಾರ್ಗಸೂಚಿ ಪ್ರಕಾರ, ನೇಮಕಾತಿ ಪ್ರಾಧಿಕಾರವೇ ವರ್ಗಾವಣೆಯನ್ನು ಮಾಡಬೇಕು. ಆದರೆ ಕಳೆದ ಸಾಲಿನಲ್ಲಿ ಕೋವಿಡ್ ನೆಪವೊಡ್ಡಿ ವರ್ಗಾವಣೆ ಅಧಿಕಾರವನ್ನು ಒಂದು ವರ್ಷದ ಷರತ್ತಿಗೆ ಒಳಪಟ್ಟು ಸಚಿವರಿಗೆ ನೀಡಲಾಗಿತ್ತು. ತಾನೇ ರೂಪಿಸಿದ್ದ ಷರತ್ತನ್ನು ಉಲ್ಲಂಘಿಸಿ ರಾಜ್ಯ ಸರ್ಕಾರ ಈಗ ಮತ್ತೊಂದು ವರ್ಷಕ್ಕೂ ಸರ್ಕಾರಿ ನೌಕರರ ವರ್ಗಾವಣೆಯ ಅಧಿಕಾರವನ್ನು ಸಚಿವರಿಗೆ ನೀಡಿದೆ.

ಮಾರ್ಗಸೂಚಿ ಪ್ರಕಾರ ಮೇ ಮತ್ತು ಜೂನ್ ತಿಂಗಳಿನಲ್ಲಿ ಶೇಕಡ 4ರಿಂದ 5ರಷ್ಟು ಉದ್ಯೋಗಿಗಳನ್ನು ವರ್ಗಾವಣೆ ಮಾಡಲು ಅವಕಾಶವಿತ್ತು. ಕಳೆದ ವರ್ಷ ಅದನ್ನು ಶೇ 6ಕ್ಕೆ ಹೆಚ್ಚಿಸಲಾಗಿತ್ತು. ಈ ಬಾರಿಯೂ ಅದೇ ನೀತಿಯನ್ನು ಮುಂದುವರಿಸಲಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳವರೆಗೂ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಅದನ್ನು ಜುಲೈ 22ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. 2021–22ನೇ ಸಾಲಿಗೆ ಎಲ್ಲ ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಸಿ ವರ್ಗದ ಅಧಿಕಾರಿ, ನೌಕರರನ್ನು ಮಾತ್ರ ವರ್ಗಾವಣೆ ಮಾಡಲು ಅವಕಾಶ ನೀಡಲಾಗಿದೆ.

ವರ್ಗಾವಣೆಯು ಶೇ 6ರಷ್ಟನ್ನು ಮೀರಬಾರದು ಎಂಬ ಷರತ್ತು ವಿಧಿಸಿದ್ದರೂ ವರ್ಗಾವಣೆ ಅಧಿಕಾರವನ್ನು ನೇಮಕಾತಿ ಪ್ರಾಧಿಕಾರದಿಂದ ತೆಗೆದು ಸಚಿವರಿಗೆ ನೀಡಿರುವುದರಿಂದ ವರ್ಗಾವಣೆ ಪ್ರಕ್ರಿಯೆಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನಗಳಿವೆ. ಸಚಿವರು, ಶಾಸಕರು ತಮಗೆ ಬೇಕಾದ ನೌಕರರನ್ನು ತಮಗೆ ಬೇಕಾದ ಸ್ಥಳಕ್ಕೆ ನಿಯುಕ್ತಿ ಮಾಡಿಕೊಳ್ಳಲು ಅವಕಾಶ ಕೊಟ್ಟಂತಾಗಿದೆ. ಇದು ಭ್ರಷ್ಟಾಚಾರಕ್ಕೂ ದಾರಿ ಮಾಡಿಕೊಡಬಹುದು.

2013ರ ಮಾರ್ಗಸೂಚಿ ಇದ್ದರೂ ಶಾಸಕರು ಮತ್ತು ಸಚಿವರು ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ಈಗಂತೂ ವರ್ಗಾವಣೆ ಅಧಿಕಾರವನ್ನೇ ಸಚಿವರ ಕೈಗೆ ಕೊಟ್ಟಿರುವುದರಿಂದ ಅಧಿಕಾರವನ್ನು ಮನಸೋಇಚ್ಛೆ ಬಳಸಲು ಅವಕಾಶ ದೊರೆತಿದೆ. ಮಾರ್ಗಸೂಚಿ ಪ್ರಕಾರ ವರ್ಗಾವಣೆ ತನ್ನ ಹಕ್ಕು ಎಂದುಯಾವುದೇ ನೌಕರ ಪ್ರತಿಪಾದಿಸುವಂತಿಲ್ಲ. ಅಲ್ಲದೆ ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಶಿಫಾರಸು ತರಬಾರದು.

ತನ್ನನ್ನು ನಿರ್ದಿಷ್ಟವಾದ ಹುದ್ದೆಗೆ ವರ್ಗಾವಣೆ ಮಾಡುವಂತೆ ಯಾವುದೇ ನೌಕರ ಅಥವಾ ಅಧಿಕಾರಿ ಶಿಫಾರಸು ತಂದರೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಆತ ಆಯ್ಕೆ ಮಾಡಿಕೊಂಡ ಸ್ಥಳಕ್ಕೆ ನಿಯೋಜನೆ ಮಾಡಬಾರದು ಎಂದು ಮಾರ್ಗಸೂಚಿ ಸ್ಪಷ್ಟವಾಗಿ ಹೇಳುತ್ತದೆ. ಆದರೆ ಈಗ ರಾಜ್ಯ ಸರ್ಕಾರವು ಕೋವಿಡ್ ನೆಪದಲ್ಲಿ ವರ್ಗಾವಣೆ ಅಧಿಕಾರವನ್ನು ಸಚಿವರಿಗೇ ನೀಡಿರುವುದರಿಂದ ಮಾರ್ಗಸೂಚಿ ಉಲ್ಲಂಘನೆಯಾಗುವ ಸಾಧ್ಯತೆಗಳಿವೆ.

ಭ್ರಷ್ಟಾಚಾರಕ್ಕೂ ಅವಕಾಶಗಳು ಹೇರಳವಾಗಿ ತೆರೆದುಕೊಳ್ಳಲಿವೆ. ನೇಮಕಾತಿ ಪ್ರಾಧಿಕಾರಗಳೇ ವರ್ಗಾವಣೆ ಮಾಡುವಾಗಲೂ ಭ್ರಷ್ಟಾಚಾರ ನಡೆಯುತ್ತಿತ್ತು. ರಾಜಕೀಯ ಶಿಫಾರಸುಗಳೂ ಕೆಲಸ ಮಾಡುತ್ತಿದ್ದವು. ಆದರೆ ಅವೆಲ್ಲವೂ ತೆರೆಮರೆಯಲ್ಲಿ ನಡೆಯುತ್ತಿದ್ದವು. ನಿಯಂತ್ರಣಕ್ಕೆ ಕೊಂಚ ಅವಕಾಶ ಇತ್ತು. ಈಗ ಅವೆಲ್ಲವೂ ಲಗಾಮಿಲ್ಲದೆ ನಡೆಯಬಹುದು. ರಾಜಕಾರಣಿಗಳಿಗೆ ಅವಕಾಶಗಳ ಹೆಬ್ಬಾಗಿಲು ತೆರೆದಂತೆ ಆಗಿದೆ.

ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯ ಅಧಿಕಾರವನ್ನು ತಮಗೇ ನೀಡಬೇಕು ಎಂದು ಮುಖ್ಯಮಂತ್ರಿ ಮೇಲೆ ಕೆಲವು ಸಚಿವರು ಒತ್ತಡ ಹೇರಿ ಆ ಅಧಿಕಾರವನ್ನು ಪಡೆಯುವಲ್ಲಿ ಕಳೆದ ವರ್ಷ ಯಶಸ್ವಿಯಾಗಿದ್ದರು. ಕೋವಿಡ್ ಕಾರಣದಿಂದ ಕಳೆದ ವರ್ಷ ಸಾರ್ವತ್ರಿಕ ವರ್ಗಾವಣೆ ಇಲ್ಲ ಎಂದಿದ್ದ ಮುಖ್ಯಮಂತ್ರಿ ಆ ಬಳಿಕ ವರ್ಗಾವಣೆಗೆ ಅವಕಾಶ ನೀಡಿದ್ದರು. ಈ ಬಾರಿ ಕೂಡ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೌಕರರ ವರ್ಗಾವಣೆಗೆ ಅವಕಾಶ ನೀಡುವಂತೆ ಕೆಲವು ಸಚಿವರು ಒತ್ತಾಯಿಸಿದ್ದರು ಎಂದು ವರದಿಯಾಗಿತ್ತು.

ಸಂಪುಟ ಸಭೆಯಲ್ಲಿ ಸಚಿವರ ಒತ್ತಡಕ್ಕೆ ಮಣಿಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಈ ಬಾರಿ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ಇಲ್ಲ. ತುರ್ತು ಪ್ರಕರಣ ಇದ್ದರೆ ನನ್ನ ಗಮನಕ್ಕೆ ತನ್ನಿ. ನಾನೇ ವರ್ಗಾವಣೆ ಮಾಡಿಸುತ್ತೇನೆ’ ಎಂದು ಹೇಳಿದ್ದರು. ಆದರೆ ಸಚಿವರ ನಿರಂತರ ಒತ್ತಡಕ್ಕೆ ಮಣಿದು ಸಾರ್ವತ್ರಿಕ ವರ್ಗಾವಣೆಗೆ ಮುಖ್ಯಮಂತ್ರಿ ಈಗ ಒಪ್ಪಿಗೆ ನೀಡಿದ್ದಾರೆ. ಇದು ಅವರ ದೌರ್ಬಲ್ಯವನ್ನು ತೋರಿಸುತ್ತದೆ. ಆಡಳಿತ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಶುರುವಾಗಿರುವುದರಿಂದ ಮುಖ್ಯಮಂತ್ರಿ ‘ಮೆತ್ತಗಾಗಿದ್ದಾರೆ’ ಎನ್ನುವುದಕ್ಕೂ ಇದೊಂದು ನಿದರ್ಶನವಾಗಿದೆ.

ನೌಕರರ ಸಾರ್ವತ್ರಿಕ ವರ್ಗಾವಣೆಗೆ ಸರ್ಕಾರಿ ನೌಕರರ ಸಂಘ ಕೂಡ ಒತ್ತಾಯಿಸಿತ್ತು ಎನ್ನುವುದು ನಿಜವಾದರೂ ಈ ವಿಚಾರದಲ್ಲಿ ಸ್ಪಷ್ಟ ಮತ್ತು ಗಟ್ಟಿಯಾದ ನಿರ್ಧಾರವನ್ನು ಕೈಗೊಳ್ಳುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ. ಆಡಳಿತಾತ್ಮಕ ದೃಷ್ಟಿಯಿಂದ ನೌಕರರ ವರ್ಗಾವಣೆ ಅನಿವಾರ್ಯ ಮತ್ತು ಅಗತ್ಯ. ಒಂದೇ ಹುದ್ದೆಯಲ್ಲಿ ತಳವೂರಿದ ಅಧಿಕಾರಿ ಅಥವಾ ನೌಕರರನ್ನು ಬದಲಾಯಿಸುವುದು ಸರಿಯಾದ ಕ್ರಮವೂ ಹೌದು. ಆದರೆ ಆ ಅಧಿಕಾರವನ್ನು ಸಚಿವರಿಗೆ ನೀಡುವುದು ಸರ್ವಥಾ ಸಲ್ಲದು. ತಮ್ಮದಲ್ಲದ ಕೆಲಸದಲ್ಲಿ ಮೂಗು ತೂರಿಸುವುದನ್ನು ಸಚಿವರು, ಶಾಸಕರು ಬಿಡಬೇಕು. ಕೊಟ್ಟ ಕುದುರೆಯನ್ನು ಏರಿ ಕೆಲಸ ಸಾಧಿಸಬೇಕೇ ವಿನಾ ತಾವು ಸಾಕಿದ ಕುದುರೆಯೇ ಎಲ್ಲ ಕಡೆಯೂ ಇರಬೇಕು ಎಂದು ಬಯಸುವುದು ತಪ್ಪು. ಇದರಿಂದ ಜನರಿಗಾಗಲೀ ರಾಜ್ಯಕ್ಕಾಗಲೀ ಯಾವುದೇ ಉಪಯೋಗವಿಲ್ಲ. ನೌಕರರ ವರ್ಗಾ ವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಧಾರಗಳು ರಾಜ್ಯದ ಒಟ್ಟಾರೆ ಹಿತವನ್ನು ಕಾಯುವಂತಿರಬೇಕು. ರಾಜ್ಯದಲ್ಲಿ ಹಲವಾರು ವರ್ಷಗಳಿಂದ ವರ್ಗಾವಣೆ ಎನ್ನುವುದು ಒಂದು ದಂಧೆಯೇ ಆಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT