ಸೋಮವಾರ, ಜನವರಿ 20, 2020
18 °C

ಉನ್ನಾವ್‌ ಅತ್ಯಾಚಾರ ಪ್ರಕರಣ: ವಿಶ್ವಾಸ ಗಟ್ಟಿಗೊಳಿಸಿದ ತೀರ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉನ್ನಾವ್‌ನಲ್ಲಿ 17 ವರ್ಷದ ಬಾಲಕಿ ಮೇಲೆ 2017ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ, ಉತ್ತರಪ್ರದೇಶದ ಪ್ರಭಾವಿ ರಾಜಕಾರಣಿ ಕುಲದೀಪ್‌ ಸಿಂಗ್‌ ಸೆಂಗರ್‌ಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಮೂಲಕ, ಕಾನೂನಿಗೆ ಯಾರೂ ಅತೀತರಲ್ಲ ಎಂಬ ಸಕಾರಾತ್ಮಕ ಸಂದೇಶವೊಂದು ರವಾನೆಯಾಗಿದೆ. ಇದೇ ಉನ್ನಾವ್‌ನಲ್ಲಿ ಮತ್ತೊಬ್ಬ ಅತ್ಯಾಚಾರ ಸಂತ್ರಸ್ತೆಯನ್ನು ಇತ್ತೀಚೆಗಷ್ಟೇ ಜೀವಂತವಾಗಿ ಸುಟ್ಟು ಕೊಂದು ಹಾಕಲಾಗಿದೆ.

ಹೈದರಾಬಾದ್‌ನಲ್ಲಿ ಪಶುವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಕೊಲೆ, ನಂತರ ನಡೆದ ಈ ಪ್ರಕರಣದ ಆರೋಪಿಗಳ ಎನ್‌ಕೌಂಟರ್‌ನ ಔಚಿತ್ಯದ ಪರ ಮತ್ತು ವಿರೋಧದ ಚರ್ಚೆಯ ಕಾವು ಇನ್ನೂ ಆರಿಲ್ಲ. ವಿಳಂಬ ನ್ಯಾಯದಾನದ ಬಗ್ಗೆ ಜನರಲ್ಲಿ ಒಂದು ಬಗೆಯ ಅಸಹನೆ ಮಡುಗಟ್ಟಿರುವ ಈ ಹೊತ್ತಿನಲ್ಲಿ ಸೆಂಗರ್‌ಗೆ ವಿಧಿಸಲಾಗಿರುವ ಈ ಶಿಕ್ಷೆ, ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಸೆಂಗರ್‌ ನಾಲ್ಕು ಬಾರಿ ಶಾಸಕರಾದ ಪ್ರಭಾವಿ ರಾಜಕಾರಣಿ. ಹೀಗಾಗಿ, ಪ್ರಕರಣ ನಡೆದು ಒಂದು ವರ್ಷದ ಬಳಿಕ ಮತ್ತು ಅದು ಗಂಭೀರ ಸ್ವರೂಪ ಪಡೆದುಕೊಂಡ ನಂತರವಷ್ಟೇ ಬಿಜೆಪಿಯು ಆತನನ್ನು ಪಕ್ಷದಿಂದ ಉಚ್ಚಾಟಿಸಿತು. ಆದರೆ, ಅದರಿಂದ ಸೆಂಗರ್‌ ಪ್ರಭಾವವೇನೂ ಕುಂದಲಿಲ್ಲ ಎಂಬುದಕ್ಕೆ ಸಂತ್ರಸ್ತೆ ಆತನಿಂದ ಎದುರಿಸಿದ ತೀವ್ರ ಕಷ್ಟಕಾರ್ಪಣ್ಯಗಳೇ ಸಾಕ್ಷಿ. ತನ್ನ ಮೇಲಿನ ಅತ್ಯಾಚಾರದ ವಿರುದ್ಧ ಆಕೆ ದೂರು ನೀಡಿದರೂ ಪೊಲೀಸರು ಕ್ರಮಕೈಗೊಳ್ಳುವುದಿರಲಿ, ಆಕೆಯ ತಂದೆ ಮತ್ತು ಚಿಕ್ಕಪ್ಪನನ್ನೇ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿದ ಆರೋಪ ಕೇಳಿಬಂತು. ಅತ್ಯಾಚಾರಕ್ಕೆ ಸಂಬಂಧಿಸಿದ ತನ್ನ ದೂರಿಗೆ ಸ್ಪಂದಿಸದ ಪೊಲೀಸರ ವೈಫಲ್ಯ ಖಂಡಿಸಿ ಸಂತ್ರಸ್ತೆಯು ಮುಖ್ಯಮಂತ್ರಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ ಮರುದಿನವೇ, ಪೊಲೀಸರ ವಶದಲ್ಲಿದ್ದ ಆಕೆಯ ತಂದೆ ಶಂಕಾಸ್ಪದವಾಗಿ ಮೃತಪಟ್ಟರು. ಇದು, ಆಕೆಯ ಕುಟುಂಬಕ್ಕೆ ಬಿದ್ದ ಮತ್ತೊಂದು ಭಾರಿ ಹೊಡೆತವಾಗಿತ್ತು.

ಈ ವರ್ಷದ ಜುಲೈನಲ್ಲಿ ಆಕೆಯ ಕುಟುಂಬದವರು ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರಿಗೆ ಪತ್ರ ಬರೆದು ನೆರವಿಗಾಗಿ ಮನವಿ ಮಾಡಿದ್ದರು. ಇದಾದ ಕೆಲ ದಿನಗಳಲ್ಲೇ, ಸಂತ್ರಸ್ತೆಯು ಕುಟುಂಬದವರೊಟ್ಟಿಗೆ ಚಲಿಸುತ್ತಿದ್ದ ಕಾರಿಗೆ ನಂಬರ್‌ ಪ್ಲೇಟ್‌ ಇಲ್ಲದ ಲಾರಿಯೊಂದು ಗುದ್ದಿ ಭೀಕರ ಅಪಘಾತವಾಗಿತ್ತು. ಇದರಿಂದ, ಸಂತ್ರಸ್ತೆಯ ಇಬ್ಬರು ಚಿಕ್ಕಮ್ಮಂದಿರು ಸಾವಿಗೀಡಾಗಿದ್ದಲ್ಲದೆ ಆಕೆಯೂ ಗಂಭೀರವಾಗಿ ಗಾಯಗೊಂಡಿದ್ದಳು. ಈ ಸಂಬಂಧ ಸೆಂಗರ್‌ ಹಾಗೂ ಇತರ 9 ಮಂದಿಯ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಈ ಘಟನೆ ಬಳಿಕ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದೂರುಗಳ ವಿಚಾರಣೆಯನ್ನು ಉತ್ತರಪ್ರದೇಶದಿಂದ ದೆಹಲಿ ನ್ಯಾಯಾಲಯಕ್ಕೆ ಸ್ಥಳಾಂತರಿಸಿ ತ್ವರಿತ ವಿಚಾರಣೆಗೆ ಸೂಚಿಸಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆಯನ್ನು ಹೆಲಿಕಾಪ್ಟರ್‌ ಮೂಲಕ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಯ ಆವರಣದಲ್ಲೇ ತಾತ್ಕಾಲಿಕ ವಿಶೇಷ ನ್ಯಾಯಾಲಯ ರಚಿಸಿ, ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತಲ್ಲದೆ, ನ್ಯಾಯಾಧೀಶರ ಕೊಠಡಿಯಲ್ಲೇ ಪ್ರತಿನಿತ್ಯವೂ ವಿಚಾರಣೆ ನಡೆಸಲಾಗಿತ್ತು. ಈ ಎಲ್ಲ ಕ್ರಮಗಳ ಬಳಿಕ ಇದೀಗ ತೀರ್ಪು ಹೊರಬಿದ್ದಿದೆ.

ಇಷ್ಟೆಲ್ಲ ನರಕಯಾತನೆ ಅನುಭವಿಸಿದರೂ ಹಟ ಬಿಡದೆ ಪ್ರಕರಣವನ್ನು ದಿಟ್ಟವಾಗಿ ಎದುರಿಸಿದ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರು ಇನ್ನು ಮುಂದೆಯೂ ಅದೇ ಧೈರ್ಯ ತೋರಬೇಕಾಗಿದೆ. ಸೆಂಗರ್‌ನಿಂದ ಇನ್ನೂ ತಮಗೆ ಜೀವಭಯ ಇದೆ ಎಂದು, ತೀರ್ಪು ಬಂದ ಬಳಿಕ ಆಕೆಯ ಕುಟುಂಬದವರು ಹೇಳಿದ್ದಾರೆ. ಹಣಬಲ ಮತ್ತು ನೈತಿಕ ಬಲದ ನಡುವಿನ ಈ ಸಮರ ಇಲ್ಲಿಗೇ ಕೊನೆಗೊಂಡಿಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ. ಸೆಂಗರ್‌ ಕಡೆಯಿಂದ ಸಂತ್ರಸ್ತೆಗಾಗಲೀ ಆಕೆಯ ಕುಟುಂಬದ ಸದಸ್ಯರಿಗಾಗಲೀ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಮಹತ್ವದ ಹೊಣೆಗಾರಿಕೆ ಈಗ ವ್ಯವಸ್ಥೆಯ ಮೇಲಿದೆ. ‘ಸೆಂಗರ್‌ ಸಾಯುವವರೆಗೆ ಜೈಲಿನಲ್ಲೇ ಇರಬೇಕಾಗುತ್ತದೆ’ ಎಂಬ ಆದೇಶ ಮತ್ತು ‘ಜನಪ್ರತಿನಿಧಿಯಾಗಿದ್ದ ಸೆಂಗರ್‌ ಜನರ ನಂಬಿಕೆಗೆ ದ್ರೋಹ ಎಸಗಿದ್ದಾನೆ’ ಎಂಬ ನ್ಯಾಯಾಧೀಶರ ಮಾತು ಜನರಲ್ಲಿ ಆಶಾಭಾವ ಹುಟ್ಟಿಸುವಂತಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು