ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಲಖಿಂಪುರ- ಖೇರಿ ಹಿಂಸಾ ಪ್ರಕರಣ: ಸಮಗ್ರ ತನಿಖೆಯಾಗಲಿ

Last Updated 4 ಅಕ್ಟೋಬರ್ 2021, 20:45 IST
ಅಕ್ಷರ ಗಾತ್ರ

ಉತ್ತರಪ್ರದೇಶದ ಲಖಿಂಪುರ–ಖೇರಿ ಜಿಲ್ಲೆಯಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ಜರುಗಿ ಎಂಟು ಮಂದಿ ಮೃತಪಟ್ಟಿರು ವುದು ಅತ್ಯಂತ ದಾರುಣ ಸಂಗತಿ.ಇವರಲ್ಲಿ ನಾಲ್ವರು ರೈತರು ಎಂದು ವರದಿಯಾಗಿದೆ.ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹಾಗೂ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರು ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಿತ್ತು. ಈ ಉದ್ದೇಶಿತ ಭೇಟಿಯನ್ನು ವಿರೋಧಿಸುವುದು ಕೂಡ ರೈತರ ಪ್ರತಿಭಟನೆಯ ಒಂದು ಭಾಗವಾಗಿತ್ತು ಎಂದು ಹೇಳಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಪಡೆಯ ವಾಹನ ಚಲಿಸಿದ್ದರಿಂದ ನಾಲ್ವರು ರೈತರು ಮೃತಪಟ್ಟಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ. ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ವಾಹನ ಚಾಲಕನನ್ನು ರೈತರು ಥಳಿಸಿ ಕೊಂದಿದ್ದಾರೆ ಎಂದು ಸಚಿವರು ದೂರಿದ್ದಾರೆ. ರೈತರ ಮೇಲೆ ಹರಿದ ಒಂದು ವಾಹನವನ್ನು ಸಚಿವ ಅಜಯ್‌ ಮಿಶ್ರಾ ಅವರ ಮಗನೇ ಚಲಾಯಿಸಿದ್ದ ಎನ್ನುವ ಆರೋಪವೂ ಇದೆ. ಈ ಘಟನೆಯು ಉತ್ತರಪ್ರದೇಶದ ಹಲವೆಡೆ ಉದ್ರಿಕ್ತ ವಾತಾವರಣವನ್ನು ಉಂಟುಮಾಡಿದೆ. ಮೃತ ರೈತರ ಕುಟುಂಬದವರನ್ನು ಭೇಟಿ ಮಾಡಲು ಲಖಿಂಪುರಕ್ಕೆ ಹೊರಟ ವಿರೋಧ ಪಕ್ಷಗಳ ಮುಖಂಡರಾದ ಅಖಿಲೇಶ್ ಯಾದವ್,ಪ್ರಿಯಾಂಕಾ ಗಾಂಧಿ ಮತ್ತಿತರರನ್ನು ಪೊಲೀಸರು ತಡೆದು, ವಶಕ್ಕೆ ಪಡೆದಿದ್ದಾರೆ. ಉತ್ತರಪ್ರದೇಶದಲ್ಲಿ ನಡೆದಿರುವ ಈ ಘಟನೆಯು ಪಂಜಾಬ್ ಮತ್ತು ದೆಹಲಿಯ ಗಡಿಯಲ್ಲಿ ಹತ್ತು ತಿಂಗಳಿಂದ ಕೃಷಿ ಕಾಯ್ದೆಯ ವಿರುದ್ಧ ನಿರಂತರ ನಡೆಯುತ್ತಿರುವ ರೈತರ ಹೋರಾಟವನ್ನು ಇನ್ನಷ್ಟು ಕಾವೇರಿಸಿದೆ.

ಹಿಂಸಾಚಾರವನ್ನು ಯಾರೇ ಮಾಡಿರಲಿ, ಅದನ್ನು ಸಮರ್ಥಿಸಲು ಸಾಧ್ಯವಿಲ್ಲ. ತಾವು ನಡೆಸುತ್ತಿರುವ ಪ್ರತಿಭಟನೆ ಶಾಂತಿಯುತವಾಗಿ ಇರುವಂತೆ ರೈತರೂ ನೋಡಿಕೊಳ್ಳಬೇಕು, ಕಾನೂನು- ಸುವ್ಯವಸ್ಥೆ ಪರಿಸ್ಥಿತಿ ಕೈಮೀರದಂತೆ ಸರ್ಕಾರವೂ ಎಚ್ಚರ ವಹಿಸಬೇಕು. ಲಖಿಂಪುರ–ಖೇರಿ ಜಿಲ್ಲೆಯಲ್ಲಿ ನಡೆದ ದುರ್ಘಟನೆಯಲ್ಲಿ ಎರಡೂ ಕಡೆಯವರು ಆವೇಶ ಮತ್ತು ಎಚ್ಚರಗೇಡಿಗಳಾಗಿ ವರ್ತಿಸಿದಂತೆ ಕಾಣುತ್ತಿದೆ. ಕಪ್ಪುಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮಧ್ಯೆಯೇ ಸಚಿವರ ಬೆಂಗಾವಲಿನ ವಾಹನಗಳು ಅಪಾಯಕಾರಿಯಾಗಿ ಚಲಿಸುತ್ತಿ ರುವುದು ವಿಡಿಯೊ ಚಿತ್ರಗಳಲ್ಲಿ ಸ್ಪಷ್ಟವಾಗಿದೆ. ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಎಚ್ಚರಿಕೆ ಕೊಟ್ಟಿದ್ದುದು ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅಧಿಕಾರದಲ್ಲಿ ಇರುವವರು ನಡೆ–ನುಡಿಯಲ್ಲಿ ಸಂಯಮ ಕಾಯ್ದುಕೊಳ್ಳುವುದು ಅಗತ್ಯ. ಸಚಿವರ ಈ ಹೇಳಿಕೆಯು ರೈತರನ್ನು ಪ್ರಚೋದಿಸಿರಬಹುದು ಎಂಬ ಮಾತಿದೆ. ಹಾಗೆಂದು ಹಿಂಸಾಚಾರ ಮತ್ತು ವಾಹನಕ್ಕೆ ಬೆಂಕಿ ಹಚ್ಚಿ ಜನರ ಕೊಲೆಗೆ ಕಾರಣರಾಗಿರುವ ಕೃತ್ಯವನ್ನು ಸಮರ್ಥಿಸಲು ಸಾಧ್ಯವೇ ಇಲ್ಲ. ಇದು ತೀವ್ರ ಖಂಡನೀಯ. ಘಟನೆಯ ಬಳಿಕ ಪರಿಸ್ಥಿತಿ ಕೈಮೀರದಂತೆ ಶತಪ್ರಯತ್ನ ನಡೆಸಿರುವ ಉತ್ತರಪ್ರದೇಶ ಸರ್ಕಾರವು ಮೃತಪಟ್ಟ ನಾಲ್ವರು ರೈತರ ಕುಟುಂಬಗಳಿಗೆ ತಲಾ ₹ 45 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹ 10 ಲಕ್ಷ ಪರಿಹಾರವನ್ನು ಪ್ರಕಟಿಸಿದೆ. ಘಟನೆಯ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವುದಾಗಿಯೂ ಸರ್ಕಾರ ಭರವಸೆ ನೀಡಿದೆ. ಈ ಹಿಂಸಾಕೃತ್ಯದ ಬಗ್ಗೆ ಸಮಗ್ರ ತನಿಖೆಯಾಗಬೇಕು. ನಿಜಾಂಶ ಆದಷ್ಟು ಬೇಗ ಹೊರಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

ಕೇಂದ್ರ ಸರ್ಕಾರ ಜಾರಿಗೆ ತರಲು ಪ್ರಯತ್ನಿಸಿ, ಸದ್ಯಕ್ಕೆ ತಡೆಹಿಡಿದಿರುವ ಮೂರು ಕೃಷಿ ಕಾಯ್ದೆಗಳನ್ನು ಪೂರ್ಣ ರದ್ದುಪಡಿಸಬೇಕೆಂದು ಒತ್ತಾಯಿಸಿ ಪಂಜಾಬ್– ದೆಹಲಿ ಗಡಿಯಲ್ಲಿ ಸಾವಿರಾರು ರೈತರು ನಡೆಸುತ್ತಿರುವ ಧರಣಿ, ಪ್ರತಿಭಟನೆಯು ಹತ್ತು ತಿಂಗಳನ್ನೂ ದಾಟಿ ಮುಂದುವರಿದಿದೆ. ಈ ಕಾಯ್ದೆಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ರೈತರೇ ಧ್ವನಿ ಎತ್ತಿದ್ದಾರೆ. ಇಂತಹ ಕಾಯ್ದೆಗಳ ಕುರಿತು ಸಂಸತ್ತಿನಲ್ಲಿ ಕೂಲಂಕಷವಾಗಿ ಚರ್ಚಿಸದೆ, ತುರ್ತಾಗಿ ಅಂಗೀಕರಿಸಬೇಕಾದ ಅಗತ್ಯ ಸರ್ಕಾರಕ್ಕಾದರೂ ಏನಿತ್ತು? ತಾತ್ಕಾಲಿಕವಾಗಿ ತಡೆಹಿಡಿದಿರುವ ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಎಂದಾದಲ್ಲಿ, ಆ ಅನಿವಾರ್ಯ ಮತ್ತು ಪ್ರಯೋಜನದ ಕುರಿತು ರೈತರಿಗೆ ಮನದಟ್ಟು ಮಾಡುವ ಹೊಣೆಗಾರಿಕೆಯನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕು. ಈ ದಿಸೆಯಲ್ಲಿ ರೈತರ ಮನವೊಲಿಸಿ ಪ್ರತಿಭಟನೆ ಹಿಂತೆಗೆದುಕೊಳ್ಳಲು ಕೇಂದ್ರ ಸರ್ಕಾರವು ಮಾತುಕತೆಯನ್ನು ಪುನಃ ಆರಂಭಿಸುವ ಅಗತ್ಯವಿದೆ. ಮಾತುಕತೆಯ ಮೂಲಕ ಪರಿಹರಿಸಲಾಗದ ಸಮಸ್ಯೆ ಯಾವುದೂ ಇಲ್ಲ ಎನ್ನುವುದನ್ನು ಸರ್ಕಾರ ಅರಿತು ಕೊಳ್ಳಬೇಕು. ಇದನ್ನು ಪ್ರತಿಷ್ಠೆಯ ವಿಷಯವಾಗಿ ಸರ್ಕಾರವೂ ಪರಿಗಣಿಸಬಾರದು, ಪ್ರತಿಭಟನೆನಿರತ ರೈತರೂ ಪರಿಗಣಿಸಬಾರದು. ಎರಡೂ ಕಡೆಯವರು ಪ್ರತಿಷ್ಠೆ ಬಿಟ್ಟು ಮತ್ತೆ ಪರಸ್ಪರ ಕುಳಿತು ಮಾತನಾಡಿ ಸೌಹಾರ್ದದಿಂದ ಪರಿಹಾರ ಸೂತ್ರವೊಂದನ್ನು ಕಂಡುಕೊಳ್ಳಬೇಕು. ರೈತರ ಮತ್ತು ದೇಶದ ಹಿತಾಸಕ್ತಿರಕ್ಷಣೆಯ ಹಿನ್ನೆಲೆಯಲ್ಲಿ ಇದು ತುರ್ತಾಗಿ ಆಗಬೇಕಾದ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT